ಪುತ್ತೂರು: ಮೊಬೈಲ್ ಕರೆ ಮಾಡಿ ಬ್ಯಾಂಕ್ ಖಾತೆ ತಡೆಹಿಡಿದಿರುವುದನ್ನು ಸರಿಮಾಡಲಿಕ್ಕಿದೆ ಎಂದು 73 ವರ್ಷದ ಮಹಿಳೆಯನ್ನು ನಂಬಿಸಿದ ಸೈಬರ್ ವಂಚಕರು ಒಟಿಪಿ ಪಡೆದು ಲಕ್ಷಾಂತರ ರೂಪಾಯಿಯನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡ ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮುಡ್ನೂರು ಗ್ರಾಮದ ಊರಮಾಲು ನಿವಾಸಿ ಸುಮಾರು 73 ವರ್ಷದ ಮಹಿಳೆಯೋರ್ವರು ಜು.22ರಂದು ಪುತ್ತೂರು ಕೆನರಾ ಬ್ಯಾಂಕ್‌ಗೆ ಹೋಗಿ ತನ್ನ ಖಾತೆಯಿಂದ ರೂ. 15ಸಾವಿರವನ್ನು ನಗದೀಕರಿಸಿ ಮನೆಗೆ ಬಂದಿದ್ದರು. ಈ ವೇಳೆ ಅವರ ಮೊಬೈಲ್‌ಗೆ ಕೆನರಾ ಬ್ಯಾಂಕ್‌ನಿಂದ ಮಾತನಾಡುತ್ತಿದ್ದೇವೆಂಬ ಕರೆಯೊಂದು ಬಂದಿದ್ದು, ನಿಮ್ಮ ಖಾತೆಯನ್ನು ತಡೆಹಿಡಿಯಲಾಗಿದೆ. ಅದನ್ನು ಸರಿಪಡಿಸಲು ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ತಿಳಿಸುವಂತೆ ಮಹಿಳೆಯನ್ನು ನಂಬಿಸಿ 7 ಬಾರಿ ಒಟಿಪಿ ಪಡೆದು ಮಹಿಳೆಯ ಖಾತೆಯಲ್ಲಿದ್ದ ರೂ.1,36,257 ಹಣವನ್ನು ಅರೋಪಿಗಳ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಘಟನೆ ಕುರಿತು ಮಹಿಳೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.