ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆ

0

ಪುತ್ತೂರು: ವಿನ್ಯಾಸ ನಕ್ಷೆ ಹಾಗೇ ಕಟ್ಟಡ ನಕ್ಷೆಗೆ ಅನುಮೋದನೆ ಕೊಡುವ ಅಧಿಕಾರವನ್ನು ಮತ್ತೆ ಗ್ರಾಮ ಪಂಚಾಯತ್‌ಗೆ ಕೊಡಬೇಕು ಹಾಗೂ ಮರಳು, ಕೆಂಪು ಕಲ್ಲು ಕೋರೆ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಸದಸ್ಯರುಗಳು ಸರಕಾರಕ್ಕೆ ಆಗ್ರಹಿಸುವ ಮೂಲಕ ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಜು.9 ರಂದು ಗ್ರಾಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು. ಸದಸ್ಯ ಮಹೇಶ್ ರೈ ಕೇರಿಯವರು ವಿಷಯ ಪ್ರಸ್ತಾಪಿಸಿ, ಈ ಹಿಂದೆ 0.25 ಸೆಂಟ್ಸ್ ವಿಸ್ತೀರ್ಣದ ವರೆಗಿನ ನಿವೇಶನಗಳ ವಿನ್ಯಾಸ ಅನುಮೋದನೆಯನ್ನು ಗ್ರಾ.ಪಂ ನಲ್ಲಿ 1.0 ಎಕರೆ ವಿಸ್ತೀರ್ಣದ ವರೆಗಿನ ನಿವೇಶನಗಳ ವಿನ್ಯಾಸ ಅನುಮೋದನೆಯನ್ನು ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು, ನಗರಾಭಿವೃದ್ಧಿ ಮತ್ತು ಯೋಜನಾ ಪ್ರಾಧಿಕಾರದ ನಿಯಮಾವಳಿ ಪ್ರಕಾರ ಅನುಮೋದನೆಯನ್ನು ನೀಡಲಾಗುತ್ತಿತ್ತು ಮತ್ತು ಕಟ್ಟಡ ನಕ್ಷೆಗೆ ಅನುಮೋದನೆಯನ್ನು ಗ್ರಾಮ ಪಂಚಾಯಿತಿಯಿಂದ ನೀಡಲಾಗುತ್ತಿತ್ತು ಮತ್ತು ಈ ನಿಯಮಾವಳಿ ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ಅನುಕೂಲಕರವಾಗಿತ್ತು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯ ಈ ಎರಡು ನಿಯಮಾವಳಿಗೆ ತಿದ್ದುಪಡಿ ತಂದು ವಿನ್ಯಾಸ ಅನುಮೋದನೆಯನ್ನು ನಗರಾಭಿವೃದ್ಧಿ ಮತ್ತು ಯೋಜನಾ ಪ್ರಾಧಿಕಾರದಿಂದಲೇ ಅನುಮೋದನೆ ಪಡೆಯಬೇಕು ಮತ್ತು ಕಟ್ಟಡ ನಕ್ಷೆಯನ್ನು ರೇರಾ ದಲ್ಲಿ ನೋಂದಾಯಿಸಿ ಅನುಮೋದನೆ ಪಡೆಯಬೇಕು ಎಂಬ ಪರಿಷ್ಕೃತ ನಿಯಮಾವಳಿ ಜಾರಿಗೆ ತರಲು ಮುಂದಾಗಿದೆ ಇದು ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ವಿರುದ್ಧವಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಸಮಸ್ಯೆಯಾಗಿದೆ ಮತ್ತು ಭ್ರಷ್ಟಾಚಾರಕ್ಕೆ ವೇದಿಕೆ ನಿರ್ಮಾಣ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ಹಿಂದಿನ ನಿಯಮದಂತೆ ಈ ಅಧಿಕಾರವನ್ನು ಪಂಚಾಯತ್ ಗೆ ನೀಡಬೇಕು. ಇಲ್ಲವೇ ೨ ಅಥವಾ ೩ ಪಂಚಾಯತ್ ಗೆ ಒಬ್ಬ ಸಕ್ಷಮ ಪ್ರಾಧಿಕಾರದ ಅಧಿಕಾರಿಯನ್ನು ನಿಯೋಜನೆಗೊಳಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರಕ್ಕೆ ಈ ಬಗ್ಗೆ ಬರೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.


ಮರಳು, ಕೆಂಪು ಕಲ್ಲು ಕೋರೆ ನಿಯಮ ಸರಳೀಕರಣಗೊಳಿಸಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ಕೃತಕ ಅಭಾವ ತಲೆದೋರಿದೆ ಇದರಿಂದಾಗಿ ನಿರ್ಮಾಣ ಕಾರ್ಯಗಳು ಮೊಟಕುಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆ ಕುಸಿದಿದೆ ಎಂದು ಹೇಳಿದ ಸದಸ್ಯ ಮಹೇಶ್ ರೈ ಕೇರಿಯವರು, ಕೆಂಪು ಕಲ್ಲು ಮತ್ತು ಮರಳು ನೈಸರ್ಗಿಕವಾಗಿ ಸಿಗುವ ಸಂಪನ್ಮೂಲವಾಗಿದ್ದು ನದಿ , ಹೊಳೆಯಿಂದ ಮರಳು ತೆಗೆಯದಿದ್ದರೆ ಮಳೆಗಾಲದಲ್ಲಿ ಪ್ರವಾಹ ಸಮಸ್ಯೆ ಉಂಟಾಗುತ್ತದೆ , ಈ ಭಾಗದಲ್ಲಿ ಮರಳು ಮತ್ತು ಕೆಂಪು ಕಲ್ಲನ್ನು ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಮಾತ್ರ ಬಳಕೆ ಮಾಡುವಂತದು. ಹಾಗಾಗಿ ಮರಳು ಮತ್ತು ಕೆಂಪು ಕಲ್ಲನ್ನು ಗಣಿ ಇಲಾಖೆಯಿಂದ ವಿರಹಿತಗೊಳಿಸಿ ಪರವಾನಿಗೆ ನೀಡುವ ಅಧಿಕಾರವನ್ನು ಸರಳೀಕರಣಗೊಳಿಸಿ ಸ್ಥಳೀಯ ಪ್ರಾಧಿಕಾರಕ್ಕೆ ನೀಡುವಂತಾಗಬೇಕು ಎಂದು ಅವರು ಆಗ್ರಹಿಸಿದರು. ಇತರ ಸದಸ್ಯರೂ ಕೂಡ ಧ್ವನಿಗೂಡಿಸಿದರು. ಈ ಬಗ್ಗೆಯೂ ಜಿಲ್ಲಾಡಳಿತಕ್ಕೆ ಬರೆದುಕೊಳ್ಳುವುದೆಂದು ನಿರ್ಣಯ ಕೈಗೊಳ್ಳಲಾಯಿತು.


ಪಿಡಬ್ಲ್ಯೂಡಿ ರಸ್ತೆ ಚರಂಡಿ ದುರಸ್ತಿಯಾಗಿಲ್ಲ..?
ದೇವಸ್ಯ-ಅಜ್ಜಿಕಲ್ಲು ಹಾಗೇ ಶೇಖಮಲೆ-ಅಜಲಡ್ಕ ಪಿಡಬ್ಲ್ಯೂಡಿ ರಸ್ತೆಯಲ್ಲಿ ಬರುವ ಚರಂಡಿಗಳನ್ನು ಮಳೆಗಾಲ ಪೂರ್ವದಲ್ಲಿ ದುರಸ್ತಿ ಕಾರ್ಯ ಮಾಡಬೇಕಿತ್ತು ಆದರೆ ಯಾವುದೇ ಚರಂಡಿ ದುರಸ್ತಿ ಆಗದೇ ಇರುವುದರಿಂದ ಮಳೆಗಾಲದಲ್ಲಿ ಮಳೆ ನೀರು ರಸ್ತೆಮೇಲೆಯೇ ಹರಿದು ಹೋಗಿ ರಸ್ತೆ ಹಾಳಾಗುತ್ತಿದೆ ಎಂದು ಮಹೇಶ್ ರೈ ಕೇರಿಯವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕರವರು ಧ್ವನಿಗೂಡಿಸಿ ಚರಂಡಿ ದುರಸ್ತಿ ಇಲ್ಲದೆ ರಸ್ತೆ ಹಾಳಾಗುವಂತಾಗಿದೆ ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಗೆ ಬರೆದುಕೊಳ್ಳಬೇಕು ಎಂದು ತಿಳಿಸಿದರು.


ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಸಂಜೀವಿನಿ ಸದಸ್ಯರುಗಳು ಮನೆ ಭೇಟಿ ಕೆಲಸ ಮಾಡಿದ್ದು ಈ ಬಗ್ಗೆ ಅವರಿಗೆ ಸಂಭಾವನೆ ನೀಡಿಲ್ಲ ಎಂಬ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಈ ಬಗ್ಗೆ ಸರಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ತಿಳಿಸಿದರು. ಕುಡಿಯುವ ನೀರಿನ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಯಿತು.


ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ಲತೀಫ್ ಕುಂಬ್ರ, ಮಹೇಶ್ ರೈ ಕೇರಿ, ಪ್ರದೀಪ್ ಸೇರ್ತಾಜೆ, ಸಿರಾಜುದ್ದೀನ್, ಸುಂದರಿ ಪರ್ಪುಂಜ, ನಳಿನಾಕ್ಷಿ, ರೇಖಾ ಯತೀಶ್ ಬಿಜತ್ರೆ, ವನಿತಾ ಕುಮಾರಿ, ಬಿ.ಸಿ ಚಿತ್ರಾ, ಶಾರದಾ ಆಚಾರ್ಯರವರುಗಳು ಚರ್ಚೆಯಲ್ಲಿ ಪಾಲ್ಗೊಂಡರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸಾರ್ವಜನಿಕ ಅರ್ಜಿ ಹಾಗೂ ಸರಕಾರದ ಸುತ್ತೋಲೆಗಳನ್ನು ಓದಿದರು. ಕಾರ್ಯದರ್ಶಿ ಜಯಂತಿ ಸ್ವಾಗತಿಸಿ,ನಿರ್ಣಯಗಳನ್ನು ದಾಖಲಿಸಿಕೊಂಡು ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿಗಳಾದ ಜಾನಕಿ, ಗುಲಾಬಿ, ಕೇಶವ, ಲೋಕನಾಥ್,ಮೋಹನ್ ಕೆ.ಪಿ, ಸಿರಿನಾ ಸಹಕರಿಸಿದ್ದರು.

ಆ.20: ಗ್ರಾಮಸಭೆ
2025-26 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯನ್ನು ಆ.20 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಸುವುದು ಎಂದು ನಿರ್ಣಯಿಸಲಾಯಿತು. ವಾರ್ಡ್ ಸಭೆಗಳನ್ನು ಆ.11 ಮತ್ತು 14 ರಂದು ನಡೆಸುವುದು ಎಂದು ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here