ನೆಲ್ಯಾಡಿ: ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ತಾ.ಪಂ.ಮಾಜಿ ಸದಸ್ಯೆ, ಪ್ರಸ್ತುತ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ನೆಲ್ಯಾಡಿಯ ಉಷಾ ಅಂಚನ್‌ರವರು ನೇಮಕಗೊಂಡಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಉಸ್ತುವಾರಿಯೂ ಆಗಿರುವ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರ ಸೂಚನೆಯಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೌಮ್ಯ ರೆಡ್ಡಿಯವರ ಶಿಫಾರಸಿನ ಮೇರೆಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರು ಈ ನೇಮಕ ಮಾಡಿದ್ದಾರೆ. ನೆಲ್ಯಾಡಿ ಸಮೀಪದ ಕುಂಡಡ್ಕ ನಿವಾಸಿಯಾಗಿರುವ ಉಷಾ ಅಂಚನ್ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು ಜೊತೆಗೆ ಸಹಕಾರಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಉಷಾ ಅಂಚನ್ ವಿಟ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆಯೇ ಎನ್‌ಎಸ್‌ಯುಐನ ವಿಟ್ಲ ಘಟಕದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪದವಿ ಶಿಕ್ಷಣದ ಬಳಿಕ ಕೊಣಾಲು ಸರಕಾರಿ ಹೈಸ್ಕೂಲ್‌ನಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಆರಂಭಿಸಿದ್ದರು. ಆ ಬಳಿಕ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಗೆ ಜ್ಞಾನದೀಪ ಶಿಕ್ಷಕಿಯಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. 2005ರಲ್ಲಿ ಪ್ರಥಮ ಬಾರಿಗೆ ತಾ.ಪಂ. ಹಾಗೂ ಎಪಿಎಂಸಿ ಚುನಾವಣೆಗೆ ಸ್ಪರ್ಧಿಸಿ ಪರಾಜಿತರಾಗಿದ್ದರು. ಆ ಬಳಿಕ 2010 ಹಾಗೂ 2015ರಲ್ಲಿ ತಾ.ಪಂ.ಚುನಾವಣೆಗೆ ಸ್ಪಽಸಿ ಎರಡು ಬಾರಿಯೂ ಜಯಗಳಿಸಿ ಒಟ್ಟು 10 ವರ್ಷ ತಾ.ಪಂ.ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು. 10 ವರ್ಷ ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆಯಾಗಿ, 3 ವರ್ಷ ಸುಳ್ಯ ವಿಧಾನಸಭಾ ಕ್ಷೇತ್ರ ಆರಾಧನಾ ಸಮಿತಿ ಸದಸ್ಯೆಯಾಗಿ, ರಾಜ್ಯ ಒಬಿಸಿ ಘಟಕದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಉಷಾ ಅಂಚನ್ ಅವರು ಪ್ರಸ್ತುತ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ, ದ.ಕ.ಜಿಲ್ಲಾ ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯೆಯಾಗಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಗ್ರಾ.ಪಂ., ತಾ.ಪಂ.,ಜಿ.ಪಂ.,ಹಾಗೂ ಎಂಎಲ್‌ಎ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿವಿಧ ಜವಾಬ್ದಾರಿ ವಹಿಸಿಕೊಂಡು ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಸಹಕಾರಿ ಕ್ಷೇತ್ರದಲ್ಲೂ ಸೇವೆ:
ಉಷಾ ಅಂಚನ್ ಅವರು ರಾಜಕೀಯದ ಜೊತೆಗೆ ಸಹಕಾರಿ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಪುತ್ತೂರು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 2 ಸಲ ನಿರ್ದೇಶಕರಾಗಿ, ಪುತ್ತೂರು ಪ್ರಿಯದರ್ಶಿನಿ ಮಹಿಳಾ ಸಹಕಾರಿ ಸಂಘದಲ್ಲಿ 2 ಸಲ ನಿರ್ದೇಶಕರಾಗಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2 ಸಲ ನಿರ್ದೇಶಕರಾಗಿ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ 1 ಅವಧಿ ನಿರ್ದೇಶಕರಾಗಿ, ಇನ್ನೊಂದು ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೂರ್ತೆದಾರರ ಮಹಾಮಂಡಲ ಬಿ.ಸಿ.ರೋಡ್ ಇದರಲ್ಲಿ 2 ಬಾರಿ ನಿರ್ದೇಶಕರಾಗಿ, ಕಾಮಧೇನು ಮಹಿಳಾ ಸಹಕಾರ ಸಂಘದ ಸ್ಥಾಪಕಾಧ್ಯಕ್ಷೆಯಾಗಿ ಕಳೆದ ಮೂರು ವರ್ಷಗಳಿಂದ, ಕೊಣಾಲು-ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ಥಾಪಕಾಧ್ಯಕ್ಷೆಯಾಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶೈಕ್ಷಣಿಕ ಕ್ಷೇತ್ರ;
ಶೈಕ್ಷಣಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಉಷಾ ಅಂಚನ್ ಅವರು, ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆಯಾಗಿ, ಪುತ್ತೂರು ಸೈಂಟ್ ವಿಕ್ಟರ್ ಆಂಗ್ಲಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ, ಪುತ್ತೂರು ಸಂತಫಿಲೋಮಿನಾ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನ ಅನುಷ್ಠಾನ ಸಮಿತಿಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿವಿಧ ಸಂಘಟನೆಯಲ್ಲೂ ಸೇವೆ:
ನೆಲ್ಯಾಡಿ ಜೇಸಿರೆಟ್ ಅಧ್ಯಕ್ಷೆಯಾಗಿ, ನೆಲ್ಯಾಡಿ ಗೆಳತಿ ಯುವತಿ ಮಂಡಲದ ಸ್ಥಾಪಕಾಧ್ಯಕ್ಷೆಯಾಗಿ, ನೆಲ್ಯಾಡಿಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಯುವಜನ ಮೇಳದ ಅಧ್ಯಕ್ಷೆಯಾಗಿ, ಪುತ್ತೂರು ತಾಲೂಕು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆಯಾಗಿ 2 ಬಾರಿ, ಪುತ್ತೂರು ತಾಲೂಕು ಬಿಲ್ಲವ ಸಂಘದ ಸಂಚಾಲಕರಾಗಿ, ನೆಲ್ಯಾಡಿ ಗ್ರಾಮ ಸಮಿತಿ ಅಧ್ಯಕ್ಷೆಯಾಗಿ, ಗೆಜ್ಜೆಗಿರಿ ಜಾತ್ರೋತ್ಸವ ಮಹಿಳಾ ಸಮಿತಿಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ತಾಲೂಕು ಬಿಲ್ಲವ ಮಹಿಳಾ ವೇದಿಕೆ ಸಂಚಾಲಕರಾಗಿ, ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಜೊತೆ ಕಾರ್ಯದರ್ಶಿಯಾಗಿ, ಬಲ್ಯ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದಿಂದ ಪ್ರಥಮ
ದ.ಕ.ಜಿಲ್ಲಾ ಕಾಂಗ್ರೆಸ್ ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಗ್ರಾಮೀಣ ಪ್ರದೇಶದಿಂದ ಇದೇ ಮೊದಲ ಬಾರಿಗೆ ಉಷಾ ಅಂಚನ್ ಅವರು ನೇಮಕಗೊಂಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.