ಆಪರೇಶನ್ ವಿಜಯ್‌ಯಂತೆ ಆಪರೇಶನ್ ಸಿಂಧೂರ ಯಶಸ್ವಿ-ಎ.ವೆಂಕಪ್ಪ ಗೌಡ
ಪುತ್ತೂರು:1999ರಲ್ಲಿ ಭಾರತೀಯ ಸೈನಿಕರು ಆಪರೇಶನ್ ವಿಜಯ್ ಮೂಲಕ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ದಿನವನ್ನು ಹೇಗೆ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತಿದ್ದೇವೆಯೋ ಹಾಗೆಯೇ ಇತ್ತೀಚೆಗೆ ಜಮ್ಮು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಉಗ್ರರಿಂದ ನಮ್ಮ ಮಹಿಳೆಯರ ಸಿಂಧೂರವನ್ನು ಅಳಿಸಿ ಹಾಕಿದ ಉಗ್ರಗಾಮಿಗಳನ್ನು ಸದೆ ಬಡಿಯಲು ಭಾರತವು ಆಪರೇಶನ್ ಸಿಂಧೂರ ಮೂಲಕ ಉಗ್ರಗಾಮಿಗಳ ಮಟ್ಟ ಹಾಕುವುದೇ ಸೈನ್ಯದ ಉದ್ಧೇಶವಾಗಿದೆ ಎಂದು ನಿವೃತ್ತ ಸುಬೇದಾರ್ ಎ.ವೆಂಕಪ್ಪ ಗೌಡರವರು ಹೇಳಿದರು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲು ದೇಶವು ಪ್ರತಿ ವರ್ಷ ಜು.26ರಂದು ಕಾರ್ಗಿಲ್ ವಿಜಯಿ ದಿವಸ್ ಎಂದು ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಆಶ್ರಯದಲ್ಲಿ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್, ಇನ್ನರ್‌ವ್ಹೀಲ್ ಕ್ಲಬ್ ಪುತ್ತೂರು, ಮಾಜಿ ಸೈನಿಕರ ಸಂಘ ಪುತ್ತೂರು, ಕೆ.ಎಸ್.ಆರ್.ಟಿ.ಸಿ ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಜು.26ರಂದು ಕೆ.ಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ನಡೆದ ೨೬ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿತಾಗಿ ಮಾತನಾಡಿದರು.
ದೇಶವು ಸೈನಿಕರನ್ನು ಗೌರವದ ಭಾವನೆಯಂತೆ ನೋಡುತ್ತಿದೆ-ಎಂ.ಕೆ.ಎನ್ ಭಟ್:
ಮುಖ್ಯ ಅತಿಥಿ, ಇಂಡಿಯನ್ ನೇವಿಯ ನಿವೃತ್ತ ಪೆಟ್ಟಿ ಆಫೀಸರ್ ಹಾಗೂ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ ನಾರಾಯಣ ಭಟ್ ಮಾತನಾಡಿ, ಕಾರ್ಗಿಲ್ ವಿಜಯೋತ್ಸವವನ್ನು ನಾವು ಒಂದೆಡೆ ಆಚರಿಸುತ್ತಿದ್ದೇವೆ ಮತ್ತೊಂದೆಡೆ ನಾವು ನಮ್ಮ ಆತ್ಮೀಯರನ್ನು ಯುದ್ಧದಲ್ಲಿ ವೀರ ಮರಣವನ್ನಪ್ಪಿ ಕಳೆದುಕೊಂಡಿರುವ ದುಃಖ ಬೇರೊಂದೆಡೆ. ಈ ಯುದ್ಧದಲ್ಲಿ ಹಲವಾರು ಸೇನಾಧಿಕಾರಿಗಳು, ಸೈನಿಕರು ಗಾಯಗೊಂಡು ಪವಾಡಸದೃಶ್ಯದಂತೆ ಬದುಕುಳಿದಿದ್ದಾರೆ. ಪ್ರಸ್ತುತ ದೇಶವು ಸೈನಿಕರನ್ನು ಬಹಳ ಗೌರವದ ಭಾವನೆಯೊಂದಿಗೆ ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ. ರೋಟರಿ ಸಂಸ್ಥೆಯು ೨೦೦೭ರಿಂದ ಪ್ರತಿ ವರ್ಷ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಪ್ರತಿಯೋರ್ವರಲ್ಲೂ ದೇಶಪ್ರೇಮ ಮೂಡಲಿ-ಡಾ.ಶ್ರೀಪ್ರಕಾಶ್ ಬಿ:
ಅಧ್ಯಕ್ಷತೆ ವಹಿಸಿದ ಜಿಲ್ಲೆಯ ಹಿರಿಯ ಕ್ಲಬ್ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಮಾತನಾಡಿ, ಭಾರತ ದೇಶದ ಚರಿತ್ರೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ನಮ್ಮ ವೀರ ಯೋಧರನ್ನು ನಾವು ಸ್ಮರಿಸಬೇಕಾಗಿದೆ. ದೇಶ ಸೇವೆಗೆ ನಮ್ಮಲ್ಲಿ ಒಬ್ಬರನ್ನಾದರೂ ಕಳುಹಿಸಿ ಕೃತಾರ್ಥರಾಗುವುದು ನಮ್ಮ ಕರ್ತವ್ಯವಾಗಿದೆ. ದೈನಂದಿನ ಜೀವನದಲ್ಲಿ ಶಿಸ್ತು, ಬದ್ಧತೆಯನ್ನು ಸೈನಿಕರಲ್ಲಿ ನಾವು ಕಾಣಬಹುದಾಗಿದ್ದು ದೇಶಪ್ರೇಮ ಎಲ್ಲರಲ್ಲೂ ಮೂಡುವಂತಾಗಲಿ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಚಂದ್ರಹಾಸ ರೈ ಬಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್ ರಾಜ್, ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಇನ್ನರ್‌ವೀಲ್ ಕ್ಲಬ್ ಪರವಾಗಿ ಮನೋರಮಾ ಹೆಜಮಾಡಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈರವರು ಕಾರ್ಗಿಲ್ ಯುದ್ಧದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳ ಪರಿಚಯವನ್ನು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸದಸ್ಯ ಡಾ|ರಾಮಚಂದ್ರ ಕೆ. ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟಿ ಸದಸ್ಯ, ನಿವೃತ್ತ ಮಾಜಿ ಸೈನಿಕ ಜ್ಯೋ ಡಿ’ಸೋಜರವರು ನೀಡಿದರು.
ಆರುಂಧತಿ ಆಚಾರ್ಯ ಹಾಗೂ ಶ್ರೀರಾಂ ಆಚಾರ್ಯ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್‌ರಾಜ್ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಸದಸ್ಯ ಪ್ರೇಮ್ ಕುಮಾರ್ ದೇಶಭಕ್ತಿ ಗೀತೆ ಹಾಡಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸದಸ್ಯ ಶರತ್ ಕುಮಾರ್ ರೈ ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟಿ ಸದಸ್ಯೆ ಶ್ಯಾಮಲಾ ಪಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಹುತಾತ್ಮ ಸೈನಿಕರಿಗೆ ಗೌರವ..
ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡು ಹುತಾತ್ಮರಾದ ಯೋಧರಿಗೆ ಯುದ್ಧ ಬಂದೂಕನ್ನು ಉಲ್ಟಾ ಇಡುವುದರೊಂದಿಗೆ ಬಂದೂಕಿನ ಕೆಳಗೆ ಹೂಗುಚ್ಛದ ರೀದ್ ಇಟ್ಟು, ಬಳಿಕ ಬಂದೂಕಿನ ಮೇಲೆ ಇಡಲಾದ ಸೈನಿಕರ ಕ್ಯಾಪ್‌ನ ಮೇಲೆ ಅತಿಥಿ ಗಣ್ಯರು ಪುಷ್ಪಾರ್ಚನೆಗೈಯುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು. ಜೊತೆಗೆ ಸಭೆಯಲ್ಲಿ ಹಾಜರಿದ್ದ 34 ಮಂದಿ ಮಾಜಿ ಸೈನಿಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. 34 ಮಂದಿ ನಿವೃತ್ತ ಯೋಧರ ಪರಿಚಯವನ್ನು ನಿವೃತ್ತ ಯೋಧ ಜಗನ್ನಾಥ್ ರೈರವರು ನೀಡಿದರು.
ಮೌನ ಪ್ರಾರ್ಥನೆ..
ಈ ಸಂದರ್ಭದಲ್ಲಿ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಹಸ್ತಾಂತರ..
ಮುಂದಿನ ವರ್ಷ 27ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರಿಗೆ ಯುದ್ಧ ಬಂದೂಕನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
