ನೆಲ್ಯಾಡಿ; ಭಾರೀ ಗಾಳಿಗೆ ಮನೆ ಮೇಲೆ ಮರಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದ್ದು ಮನೆಯೊಳಗೆ ಗಾಢ ನಿದ್ರೆಯಲ್ಲಿದ್ದ ತಂದೆ ಹಾಗೂ ಮಗು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ಜು.26ರಂದು ತಡರಾತ್ರಿ ನಡೆದಿದೆ.
ಶಿರಾಡಿ ಗ್ರಾಮದ ಕಜೆತಕೋಡಿ ನಿವಾಸಿ ಹರೀಶ ಮುಗೇರ(36ವ.)ಹಾಗೂ ಅವರ ಮಗು ಪ್ರತೀಕ್ಷಾ(2ವ.)ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹರೀಶ ಮುಗೇರ ಅವರ ಪತ್ನಿ ಭಾಗೀರಥಿ ಹಾಗೂ ತಾಯಿ ಅಪ್ಪಿ ಅಪಾಯದಿಂದ ಪಾರಾಗಿದ್ದಾರೆ. ಶಿರಾಡಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಹರೀಶ ಮುಗೇರ ಅವರ ಮನೆಯಿದ್ದು ಅರಣ್ಯ ಜಾಗದಲ್ಲಿದ್ದ ಬೃಹತ್ ಗಾತ್ರದ ಬನ್ಪು ಜಾತಿಯ ಮರ ಇವರ ಮನೆ ಮೇಲೆ ಬಿದ್ದಿದೆ. ಪರಿಣಾಮ ಹರೀಶ ಮುಗೇರ ಅವರ ಸಿಮೆಂಟ್ ಹಾಗೂ ಮಣ್ಣಿನ ಇಟ್ಟಿಗೆ ಗೋಡೆ, ಮೇಲ್ಛಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್ ಹಾನಿಗೊಂಡಿದೆ.
ಈ ವೇಳೆ ಮನೆಯ ಒಂದು ಕೋಣೆಯಲ್ಲಿ ಹರೀಶ ಮುಗೇರ, ಅವರ ಪತ್ನಿ ಭಾಗೀರಥಿ ಹಾಗೂ ಮಗು ಪ್ರತೀಕ್ಷಾ ಮಲಗಿದ್ದು ಇನ್ನೊಂದು ಕೋಣೆಯಲ್ಲಿ ತಾಯಿ ಅಪ್ಪಿ ಮಲಗಿದ್ದರು. ಹರೀಶ್ ಮುಗೇರ ಹಾಗೂ ಅವರ ಪತ್ನಿ, ಮಗು ಮಲಗಿದ್ದ ಕೋಣೆಯ ಮೇಲೆಯೇ ಮರಬಿದ್ದ ಪರಿಣಾಮ ಇಟ್ಟಿಗೆ ತುಂಡು ಹಾಗೂ ಮರ ಬಿದ್ದ ಪರಿಣಾಮ ಹರೀಶ ಮುಗೇರ ಅವರ ಸೊಂಟಕ್ಕೆ ಗುದ್ದಿದ ಗಾಯವಾಗಿದೆ.

ಮಗು ಪ್ರತೀಕ್ಷಾರ ಹಣೆಗೆ ಗಾಯವಾಗಿದೆ. ಭಾಗೀರಥಿ ಹಾಗೂ ಅಪ್ಪಿ ಅವರು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಹರೀಶ ಅವರ ಕುಟುಂಬ ಪಕ್ಕದಲ್ಲೇ ಇರುವ ಮಾವ ಚಂರ್ಬ ಅವರ ಮನೆಗೆ ತೆರಳಿ ರಾತ್ರಿ ಕಳೆದಿದ್ದಾರೆ. ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಮನೆಯ ಹೊರಗಡೆ ಟರ್ಪಾಲ್ ಹಾಕಿ ನಿಲ್ಲಿಸಿದ್ದ ಹರೀಶ ಮುಗೇರ ಅವರ ದ್ವಿಚಕ್ರ ವಾಹನವೂ ಜಖಂಗೊಂಡಿದೆ.
ಹರೀಶ ಮುಗೇರ ಅವರ ಮನೆ ಅರಣ್ಯ ಇಲಾಖೆ ಜಾಗಕ್ಕೆ ಹೊಂದಿಕೊಂಡು ಇದೆ. ಅರಣ್ಯ ಇಲಾಖೆ ಜಾಗ ಹಾಗೂ ಹರೀಶ್ ಮುಗೇರ ಅವರ ಮನೆಯ ಮಧ್ಯೆ ರಸ್ತೆ ಹಾದುಹೋಗಿದೆ. ರಸ್ತೆಯ ಒಂದು ಬದಿಯಲ್ಲಿದ್ದ ಮರ ಇನ್ನೊಂದು ಬದಿಯಲ್ಲಿದ್ದ ಹರೀಶ ಮುಗೇರ ಅವರ ಮನೆ ಮೇಲೆ ಬಿದ್ದಿದೆ. ಇಲ್ಲಿ ಅರಣ್ಯ ಇಲಾಖೆಯವರು ಸುತ್ತಲೂ ದೊಡ್ಡ ಅಗಲು ತೆಗೆದಿದ್ದಾರೆ.
ಮರದ ಬುಡದ ಪಕ್ಕದಲ್ಲೇ ಮಣ್ಣು ತೆಗೆದು ಅಗಲು ನಿರ್ಮಿಸಿರುವುದರಿಂದ ಮಣ್ಣು ಮತ್ತಷ್ಟೂ ಸಡಿಲಗೊಂಡು ಗಾಳಿ ಮಳೆಗೆ ಮರ ಮನೆಯ ಮೇಲೆಯೇ ಬಿದ್ದಿದೆ ಎಂದು ಹರೀಶ ಮುಗೇರ ಅವರು ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಹಾಗೂ ಪೊಲೀಸ್ ಇಲಾಖೆಯವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.