ಸಂಸ್ಕೃತ ಕಲಿತು ಭಾರತೀಯ ಸಂಸ್ಕೃತಿ ಮೈಗೂಡಿಸಿಕೊಳ್ಳಿ- ಶ್ರೀ ರಮೇಶ ಆಚಾರ್ಯ
ಪುತ್ತೂರು: ದಕ್ಷಿಣಕನ್ನಡ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ವತಿಯಿಂದ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮಭಾಷೆ ಸಂಸ್ಕೃತದಲ್ಲಿ 125 ,124 ತೃತೀಯ ಭಾಷೆಯಲ್ಲಿ 100, 99 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂಧಿಸುವ ಕಾರ್ಯಕ್ರಮ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದ ” ಸರ್ವಮಂಗಳ ಸಭಾಭವನ” ದಲ್ಲಿ ನಡೆಯಿತು.

ದೇವಸ್ಥಾನದ ಆನುವಂಶಿಕ ಮೊಕ್ತೇಸರ ವೇದಮೂರ್ತಿ ಮಾಧವ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮಂಗಳೂರಿನ ಶಾರದಾ ವಿದ್ಯಾಲಯದ ಉಪನ್ಯಾಸಕ ರಮೇಶ ಅಚಾರ್ಯರು, ಸಂಸ್ಕೃತ ಕಲಿತು ಭಾರತೀಯತೆ ಮೈಗೂಡಿಸಿಕೊಳ್ಳಿ. ಎಲ್ಲರಿಗೂ ಅರಿವಿನ ದೀವಿಗೆಯಾಗಿ ಎಂದು ಹೇಳಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು.ಕೃಷಿ ಪತ್ತಿನ ಸಂಘದ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾವಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲೆಯ 39 ಶಾಲೆಗಳ 310 ವಿದ್ಯಾರ್ಥಿಗಳಿಗೆ ಶಾಲು, ಪ್ರಮಾಣಪತ್ರ, ಪುಸ್ತಕ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ರಘು ಬೀಜೂರು, ಸೂರ್ಯ ಪ್ರಕಾಶ ಉಡುಪ ಹಾಗೂ ಶಿವರಾಮ ಭಟ್ ಇವರನ್ನು ಗೌರವಿಸಲಾಯಿತು. ವೆಂಕಟೇಶ್ ಪ್ರಸಾದ್ ಪುರಸ್ಕೃತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ರಘು ಬಿಜೂರು ಇವರ ಪ್ರಾರ್ಥಿಸಿದರು. ಜಿಲ್ಲಾ ಸಂಸ್ಕ್ರತ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ ಭಟ್ ಕಲ್ಲಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವೆಂಕಟ್ರಮಣ ಕೆರೆಗದ್ದೆ ವಂದಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ವಿದ್ವಾನ್ ಅನಂತರಾಮ್ ಐತಾಳರು ಕಾರ್ಯಕ್ರಮ ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲದೇ ಸುಮಾರು 300ಕ್ಕೂ ಅಧಿಕ ಸಂಸ್ಕೃತಾಭಿಮಾನಿ ಪೋಷಕ ಬಂಧುಗಳು ಭಾಗವಹಿಸಿದ್ದರು.