ಪುತ್ತೂರು: ಹಂಟ್ಯಾರು (ಸಂಟ್ಯಾರ್) ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಆಂಗ್ಲ ಮಾಧ್ಯಮ ತರಗತಿಗಳು ಪ್ರಾರಂಭಿಸಬೇಕು ಹಾಗೂ ಶಾಲೆಯನ್ನು ಅಭಿವೃದ್ದಿಪಡಿಸಬೇಕೆಂದು ಎಂದು ಆಗ್ರಹಿಸಿ ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ನೀಡಲಾಯಿತು.
ಹಂಟ್ಯಾರು ಶಾಲಾ ವ್ಯಾಪ್ತಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ವಾಸಿಸುತ್ತಿದ್ದು ಅಲ್ಲದೇ ಬಹುತೇಕ ಮಕ್ಕಳು ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಪ್ರಭಾವದಿಂದಾಗಿ ಹೆತ್ತವರು ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಪುತ್ತೂರು ಆಸುಪಾಸಿನಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಪ್ರಾರಂಭಿಸಿದ್ದರಿಂದ ಹಂಟ್ಯಾರು ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಗಣನೀಯ ಇಳಿಮುಖವಾಗಿ ಶಾಲೆ ಮುಚ್ಚುವ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಬರೀ 5 ಮಂದಿ ವಿದ್ಯಾರ್ಥಿಗಳು ಮಾತ್ರ ದಾಖಲಾತಿಗೊಂಡಿದ್ದು ಒಟ್ಟಾರೆಯಾಗಿ 8ನೇ ತರಗತಿಯವರೆಗೆ 64 ವಿದ್ಯಾರ್ಥಿಗಳಿರುತ್ತಾರೆ. ಅಲ್ಲದೇ ಪ್ರಸ್ತುತ ವರ್ಷದಲ್ಲಿ, ಶಾಲೆಯಿಂದ ೫೦೦ ಮೀಟರ್ ವ್ಯಾಪ್ತಿಯೊಳಗೆ ಖಾಸಗಿಯವರು ಎಲ್ಕೆಜಿ-ಯುಕೆಜಿ ತರಗತಿಗಳನ್ನು ಪ್ರಾರಂಭಿಸಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಶಾಲೆಯ ದಾಖಲಾತಿಯಲ್ಲಿ ಮತ್ತಷ್ಟು ಕಡಿತಗೊಳ್ಳುವ ಸಂಭವವಿದೆ ಮತ್ತು ಮುಚ್ಚುವ ಭೀತಿಯನ್ನು ಎದುರಿಸುತ್ತಿದೆ. ನಮ್ಮದು ಸುಮಾರು 120 ವರುಷ ಹಳೆಯ ಇತಿಹಾಸ ಹೊಂದಿರುವ ಬ್ರೀಟಿಷರ ಕಾಲದ ಶಾಲೆಯಾಗಿದ್ದು, ಸುತ್ತಮುತ್ತಲ ಊರಿನ ಹಲವಾರು ಮಂದಿ ವ್ಯಾಸಂಗ ಮಾಡಿ ಉನ್ನತ ಸ್ಥಾನವನ್ನು ತಲುಪಿಸಿದ ಕೀರ್ತಿಯು ಹಂಟ್ಯಾರು ಹಿರಿಯ ಪ್ರಾಥಮಿಕ ಶಾಲೆಗೆ ಸಲ್ಲುತ್ತದೆ, ಆದ್ದರಿಂದ ಇಂತಹ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಆಂಗ್ಲ ಮಾಧ್ಯಮ ಎಲ್ಕೆಜಿ-ಯುಕೆಜಿ ತರಗತಿಯನ್ನು ಪ್ರಾರಂಭಿಸಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಮೂಲ ಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಿ, ಆಂಗ್ಲ ಮಾಧ್ಯಮ ವಿದ್ಯಾಭ್ಯಾಸ ನೀಡಿ ಸೂಕ್ತ ಅಧ್ಯಾಪಕರನ್ನು ನೇಮಕಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಮನವಿ ಮಾಡಲಾಯಿತು. ನಿಯೋಗದಲ್ಲಿ ಎಸ್.ಡಿ.ಪಿ.ಐ ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಬಳಕ್ಕ, ಆರ್ಯಾಪು ಗ್ರಾಮ ಸಮಿತಿ ಉಪಾಧ್ಯಕ್ಷರಾದ ರಫೀಕ್ ಎಚ್.ಇ, ಗ್ರಾಮ ಸಮಿತಿ ಕಾರ್ಯದರ್ಶಿ ಮಸೂದ್ ಸಂಟ್ಯಾರ್, ಸಂಟ್ಯಾರ್ ಬ್ರಾಂಚ್ ಅಧ್ಯಕ್ಷ ಝಖರಿಯಾ ಸಂಟ್ಯಾರ್, ಕಾರ್ಯದರ್ಶಿ ಶಾಫಿ ಮರಿಕೆ ಹಾಗೂ ಸದಸ್ಯರಾದ ಸಮದ್ ಝೆನಿತ್, ಅಝೀಝ್ ಕಲ್ಲರ್ಪೆ, ಸಬೀರ್ ಮರಿಕೆ ಉಪಸ್ಥಿತರಿದ್ದರು.