1158.60 ಕೋಟಿ ರೂ.ವ್ಯವಹಾರ-ರೂ.2,07,93,834.76 ನಿವ್ವಳ ಲಾಭ-7ಶೇ.ಡಿವಿಡೆಂಡ್ ಘೋಷಣೆ
ಆಲಂಕಾರು:ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಒಟ್ಟು 1158.60 ಕೋಟಿ ರೂ.ವಾರ್ಷಿಕ ವ್ಯವಹಾರ ಮಾಡಿದ್ದು 2,07,93,834.76 ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ರಮೇಶ ಉಪ್ಪಂಗಳ ತಿಳಿಸಿದರು.
ಜು.26ರಂದು ಸಂಘದ ದೀನ ದಯಾಳ್ ರೈತ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಘವು 101.24 ಕೋಟಿ ರೂ.ಠೇವಣಿ ಹೊಂದಿದ್ದು 156.13 ಕೋಟಿ ರೂ.ಸಾಲ ವಿತರಿಸಲಾಗಿದೆ.ವಿತರಿಸಿದ ಸಾಲದ ಹೊರಬಾಕಿ 159.09 ಕೋಟಿ ರೂ.ಇದೆ.ವಿತರಿಸಿದ ಸಾಲದ ಪೈಕಿ ಶೇ.98.57 ವಸೂಲಾಗಿರುತ್ತದೆ ಎಂದವರು ವಿವರಿಸಿದರು.
7ಶೇ.ಡಿವಿಡೆಂಡ್ ಘೋಷಣೆ:
2024-25ನೇ ಸಾಲಿನ ಸಂಕ್ಷಿಪ್ತ ವರದಿ ಮತ್ತು ಅಂಕಿ ಅಂಶ ಪುಸ್ತಕದಲ್ಲಿ 10 ಶೇ.ಡಿವಿಡೆಂಡ್ ನೀಡುವ ಬಗ್ಗೆ ವಾರ್ಷಿಕ ವರದಿ ಪುಸ್ತಕದಲ್ಲಿ ನಮೂದಿಸಲಾಗಿತ್ತು.ಆದರೆ ಹಳೆನೇರೆಂಕಿಯಲ್ಲಿ ಜಾಗ ಖರೀದಿ ಮಾಡಿ ನಿರ್ಮಾಣ ಮಾಡಲಾದ ಸಂಘದ ಕಟ್ಟಡಕ್ಕೆ ಅಂದಾಜು 4.40 ಕೋಟಿ ರೂ.ಹಣದ ಅವಶ್ಯಕತೆ ಇದ್ದು ಈಗಾಗಲೇ ರೂ.3 ಕೋಟಿಗೆ ಆಡಳಿತಾತ್ಮಕವಾಗಿ ಮಂಜೂರಾತಿ ಸಿಕ್ಕಿದೆ.ಉಳಿದ ಪೂರಕ ಕಾಮಗಾರಿಗಳಿಗೆ 1.40 ಕೋಟಿ ರೂ.ಹಣಕಾಸಿನ ವ್ಯವಸ್ಥೆ ಇಲ್ಲ.ಈ ಬಗ್ಗೆ ಏನು ಮಾಡಬೇಕೆಂದು ಸದಸ್ಯರು ತಿಳಿಸಬೇಕು ಎಂದು ಅಧ್ಯಕ್ಷರು ಪ್ರಸ್ತಾಪಿಸಿದರು.ಹಳೆನೇರೆಂಕಿಯಲ್ಲಿ ಇಷ್ಟು ದೊಡ್ಡ ಮೊತ್ತದ ಕಟ್ಟಡದ ಅವಶ್ಯಕತೆ ಇತ್ತೇ ಎಂದು ಕೆಲ ಸದಸ್ಯರು ಕೇಳಿದಾಗ, ಈ ವಿಚಾರದಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಯಿತು.
ಹಳೇನೆರೆಂಕಿ ಗ್ರಾಮದ ಸದಸ್ಯರ ಬಹುವರ್ಷಗಳ ಆಗ್ರಹದ ಬೇಡಿಕೆಯ ಮೇರೆಗೆ ಹಳೇನೆರೆಂಕಿ ಮತ್ತು ಸುತ್ತಮುತ್ತದ ಗ್ರಾಮಗಳನ್ನು ಕೇಂದ್ರಿಕರಿಸಿ ಒಂದೇ ಸೂರಿನಡಿಯಲ್ಲಿ ಎಲ್ಲಾ ಸವಲತ್ತುಗಳನ್ನು ಜನರಿಗೆ ನೀಡುವ ಉದ್ದೇಶದಿಂದ ಜಾಗ ಖರೀದಿ ಮಾಡಿ ಕಟ್ಟಡ ನಿರ್ಮಾಣ ಮಾಡಿರುವುದಾಗಿ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ತಿಳಿಸಿದರು.ಸಂಘದ ಆಲಂಕಾರು ಮುಖ್ಯ ಕಛೇರಿಯಲ್ಲಿರುವ ಸಭಾಭವನಕ್ಕೆ 2.18 ಕೋಟಿ ರೂ.ಖರ್ಚಾಗಿದೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ.ಇದರಿಂದ ಬಂದ ಆದಾಯ ಪರಿಗಣನೆ ಮಾಡಿದರೆ ಎಷ್ಟಾಗಿರಬಹುದು ಎಂದು ಯೋಚಿಸಿ ಎಂದು ಹೇಳಿದ ಧರ್ಮಪಾಲ ರಾವ್,ನಮ್ಮ ಆಡಳಿತದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಕಾರ್ಯವನ್ನು ನಿರ್ವಹಿಸಿದ್ದೇವೆ ಎಂದರು.
ಉದ್ಯೋಗಕ್ಕಾಗಿ ರೂ.10 ಲಕ್ಷದ ಆಮಿಷ ನೀಡಿದ್ದರು:
ಸಂಘದ ಸಿಬ್ಬಂದಿ ನೇಮಕಾತಿ ಸಂದರ್ಭ, ನನ್ನ ಮನೆಯವರಿಗೆ ಉದ್ಯೋಗ ಮಾಡಿಕೊಡಬೇಕೆಂದು ಕೆಲವರು ನನಗೆ ರೂ.10 ಲಕ್ಷದ ಆಮಿಷ ನೀಡಿದ್ದರು.ಆದರೆ ನಾನು ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕ ಕೆಲಸ ಮಾಡಿದ್ದೇನೆ.ಇಂದು ಅವರೇ ನನಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ ಧರ್ಮಪಾಲ ರಾವ್ ಕಜೆ,ನನಗೆ ಬರುವ ಎಲ್ಲಾ ಡಿವಿಡೆಂಡ್‌ನ್ನು ಹಳೆನೇರೆಂಕಿ ಕಟ್ಟಡಕ್ಕೆ ಬಿಟ್ಟು ಕೊಡುವುದಾಗಿ ತಿಳಿಸಿ,ಹಳೆನೇರೆಂಕಿ ಕಟ್ಟಡದ ಪೂರ್ಣ ಕಾಮಗಾರಿಗೆ ಸದಸ್ಯರು ಡಿವಿಡೆಂಡ್ ನೀಡಿ ಸಹಕರಿಸಬೇಕೆಂದು ವಿನಂತಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉಪ್ಪಂಗಳರವರು,ಸಂಘದಲ್ಲಿ ಉದ್ಯೋಗಕ್ಕೆ ಆಮಿಷ ನೀಡಿದ್ದ ವ್ಯಕ್ತಿಗಳ ಹೆಸರನ್ನು ನಮಗೆ ತಿಳಿಸುವಂತೆ ಹೇಳಿ,ಅಂಥವರನ್ನು ನಮ್ಮ ಹತ್ತಿರವೂ ಸುಳಿಯಲು ಬಿಡುವುದಿಲ್ಲ ಎಂದು ತಿಳಿಸಿದರು.
ನಂತರ ಡಿವಿಡೆಂಡ್‌ನ ಬಗ್ಗೆ ಸಂಘದ ಸದಸ್ಯರಾದ ಜನಾರ್ದನ ಬಿ.ಎಲ್.,ಉದಯ ಕಶ್ಯಪ್, ಈಶ್ವರ ಗೌಡ ಪಜ್ಜಡ್ಕ,ಚಂದ್ರಹಾಸ ರೈ ಬುಡಲೂರು,ಶಿವಣ್ಣ ಗೌಡ ಕಕ್ವೆ, ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಸುಬ್ರಹ್ಮಣ್ಯ ಭಟ್,ಜನಾರ್ದನ ಕದ್ರ, ತಿಮ್ಮಪ್ಪ ಗೌಡ ಕುಂಡಡ್ಕ, ಫಲೂಲ್‌ದ್ದೀನ್,ಯದುಶ್ರೀ ಆನೆಗುಂಡಿ, ಗೋಪಾಲಕೃಷ್ಣ ಭಟ್ ನೈಮಿಷ, ಗುರುರಾಜ್ ರೈ ಕೇವಳ, ಮಹೇಶ ಹಳೆನೇರೆಂಕಿ, ನಾಗಪ್ಪ ಗೌಡ ಮರುವಂತಿಲ ಮತ್ತಿತರರು ಡಿವಿಡೆಂಡ್,ಇನ್ನಿತರ ವಿಚಾರದ ಅಭಿಪ್ರಾಯಗಳನ್ನು ತಿಳಿಸಿದರು.ಹಳೆನೇರೆಂಕಿ ಕಟ್ಟಡ ನಿರ್ಮಾಣದ ಬಾಬ್ತು ಡಿವಿಡೆಂಡ್‌ನಲ್ಲಿ ೩ಶೇ.ಕಡಿತ ಗೊಳಿಸಿ 7ಶೇ.ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರು ಘೋಷಣೆ ಮಾಡಿದರು.ಇದಕ್ಕೆ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ದಿನಸಿ ವಿಭಾಗ ಬಂದ್:
ಸಂಘದ ಮುಖ್ಯ ಕಛೇರಿ ಮತ್ತು ಶಾಖಾ ಕಛೇರಿಯಲ್ಲಿ ನಡೆಸುತ್ತಿದ್ದ ದಿನಸಿ ವ್ಯಾಪಾರದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವುದರಿಂದ ಮುಂದಕ್ಕೆ ಇದನ್ನು ಬಂದ್ ಮಾಡುವುದಾಗಿ ಅಧ್ಯಕ್ಷರು ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ನಿವೃತ್ತ ಮುಖ್ಯಕಾರ್ಯನಿರ್ವಹಣಾಽಕಾರಿ ಪ್ರಶಾಂತ ರೈ ಮನವಳಿಕೆಯವರು, ಕೋವಿಡ್ ಸಂದರ್ಭದಲ್ಲಿ ದಿನಸಿ ವ್ಯಾಪಾರವನ್ನು ಪ್ರಾರಂಭಿಸಿದ್ದು ಈ ಸಂದರ್ಭದಲ್ಲಿ ಲಾಭದಾಯಕವಾಗಿತ್ತು ಎಂದರು.ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಮಾತನಾಡಿ, ಪ್ರತಿ ಬಾರಿ ಲಾಭ ಇದೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ವರದಿ ನೀಡುತ್ತಿದ್ದರು.ಇದೀಗ ಹಠಾತ್ತನೆ ನಷ್ಟ ಎಂದು ವರದಿ ನೀಡುತ್ತಿದ್ದೀರಿ ಎಂದು ಅಧ್ಯಕ್ಷರಲ್ಲಿ ತಿಳಿಸಿದಾಗ,ಈ ಬಗ್ಗೆ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರಪ್ರಕಾಶ್‌ರವರು ಉತ್ತರಿಸ ಬೇಕು ಎಂದು ಮಾಜಿ ನಿರ್ದೇಶಕಿ ಆಶಾತಿಮ್ಮಪ್ಪ ಗೌಡ ಒತ್ತಾಯಿಸಿದರು.ಉತ್ತರಿಸಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರಪ್ರಕಾಶ್,ನೀವು ಮಾರಾಟ ಶಾಖೆಯಲ್ಲಿ ಆಗುತ್ತಿರುವ ಒಟ್ಟು ವ್ಯವಹಾರದ ಲಾಭದ ವರದಿಯನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಕೇಳುತ್ತಿದ್ದೀರಿ.ಆವಾಗ ಮಾರಾಟ ಶಾಖೆಯಲ್ಲಿ ಬಂದ ಒಟ್ಟು ಲಾಭದ ವರದಿಯನ್ನು ನೀಡುತ್ತಿದ್ದೆ.ಅಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈಯವರು ದಿನಸಿ ವ್ಯಾಪಾರದಲ್ಲಿ ಕುಸಿತದ ಬಗ್ಗೆ ಉಲ್ಲೇಖ ಮಾಡಿದ್ದರು ಎಂದು ತಿಳಿಸಿ,ಸಿಬ್ಬಂದಿಯ ವೇತನವನ್ನು ಸೇರಿಸಿದರೆ ದಿನಸಿ ಮಾರಾಟ ವಿಭಾಗದಲ್ಲಿ ನಮಗೆ ನಷ್ಟ ಎಂದು ಹೇಳಿದರು.ದಿನಸಿ ವ್ಯಾಪಾರಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿಲ್ಲ.ಇದ್ದ ಸಿಬ್ಬಂದಿಯನ್ನೇ ಬಳಸಿಕೊಂಡಿದ್ದೇವೆ ಎಂದು ಹೇಳಿದ ಧರ್ಮಪಾಲ ರಾವ್, ದಿನಸಿ ವಿಭಾಗವನ್ನು ಮುಚ್ಚುವುದಕ್ಕೆ ನನ್ನ ಅಭ್ಯಂತರ ಇಲ್ಲ ಎಂದು ತಿಳಿಸಿದರು.ಸದಸ್ಯರಿಂದ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಯಿತು.ದಿನಸಿ ಮಾರಾಟ ವಿಭಾಗವನ್ನು ಬಂದ್ ಮಾಡುವುದಾಗಿ ಅಧ್ಯಕ್ಷರು ಪ್ರಕಟಿಸಿದರು.
ಕೋರ್ಟ್ ದಾವೆ ಬಳಿಕ ಸಿಬ್ಬಂದಿ ನೇಮಕಾತಿ:
ಸಿಬ್ಬಂದಿ ನೇಮಕಾತಿ ವಿಚಾರ ಹೈಕೋರ್ಟ್‌ನಲ್ಲಿದೆ.ಹೈಕೋರ್ಟ್‌ಗೆ ಹೋದ ನಂತರ ಕೇಸು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ಹಳೆನೇರೆಂಕಿಯಲ್ಲಿ ಸಂಘದ ದೊಡ್ಡ ಮಟ್ಟದ ಕಟ್ಟಡ ನಿರ್ಮಾಣ ಮಾಡಿ ಹಣಕಾಸಿನ ಸಮಸ್ಯೆಯಾಗಿದೆ.ಸಂಘದ ಆರ್ಥಿಕ ದೃಷ್ಠಿಯಿಂದ ಅಲ್ಲಿಗೆ ಆರ್ಥಿಕ ಕ್ರೋಢೀಕರಣ ಮಾಡಿಕೊಂಡು ಕಟ್ಟಡ ಕಾಮಗಾರಿಯನ್ನು ಪೂರ್ತಿಗೊಳಿಸಲಾಗುವುದು ಎಂದು ತಿಳಿಸಿದ ಅಧ್ಯಕ್ಷರು,ಕೋರ್ಟ್‌ನಲ್ಲಿರುವ ದಾವೆ ಮುಗಿದ ಬಳಿಕ ಸಿಬ್ಬಂದಿ ನೇಮಕ ಮಾಡಿ ಹಳೆನೇರೆಂಕಿಯಲ್ಲಿ ವ್ಯವಹಾರ ಪ್ರಾರಂಭಿಸುವುದಾಗಿ ತಿಳಿಸಿದರು.
ನೀರಾವರಿ ಪೈಪ್ ದಾಸ್ತಾನಿನಲ್ಲಿ ನಷ್ಟ:
ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ದಾಸ್ತಾನು ಕೊಠಡಿಯಲ್ಲಿ ನೀರಾವರಿ ಪೈಪ್ ಖರೀದಿಸಿ ದಾಸ್ತಾನು ಮಾಡಿದ್ದು ಪೈಪು ಖರೀದಿಸುವ ಸಂದರ್ಭದಲ್ಲಿ ನೀರಾವರಿ ಪೈಪ್‌ನ ದರ ಹೆಚ್ಚಾಗಿದ್ದು ಪ್ರಸಕ್ತ ಪೈಪ್‌ಗಳ ದರ ಮಾರುಕಟ್ಟೆಯಲ್ಲಿ ಕಡಿಮೆಯಾಗಿದೆ.ಇದರಿಂದ ಸಂಘಕ್ಕೆ ನಷ್ಟ ಉಂಟಾಗಿದೆ ಎಂದು ತಿಳಿಸಿದ ಅಧ್ಯಕ್ಷರು,ಇದನ್ನು ವಿಲೇವಾರಿ ಮಾಡುವ ಕುರಿತು ಕ್ರಮ ಚರ್ಚೆ ನಡೆಯಿತು.
ಕಾಮನ್ ಸರ್ವಿಸ್ ಸೆಂಟರ್ ಸ್ಥಾಪನೆ:
ಸಂಘದಲ್ಲಿ ಕಾಮನ್ ಸರ್ವಿಸ್ ಸೆಂಟರ್ ತೆರೆಯವ ಬಗ್ಗೆ ಚಿಂತನೆ ಇದೆ ಎಂದು ಅಧ್ಯಕ್ಷರು ಮಹಾಸಭೆಯಲ್ಲಿ ತಿಳಿಸಿದರು.ಸಭೆಯಲ್ಲಿ ೨೦೨೫-೨೬ನೇ ಸಾಲಿನ ಲೆಕ್ಕಪರಿಶೋಧಕರಾಗಿ ಅರವಿಂದಕೃಷ್ಣರವರನ್ನು ನೇಮಕ ಮಾಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.ಆಡಳಿತ ಮಂಡಳಿಯವರು ಲಾಭ ಮಾತ್ರ ನೋಡದೇ ರೈತರೊಂದಿಗೆ ಸಮಾಲೋಚಿಸಿ ಉತ್ತಮ ಗುಣಮಟ್ಟದ ರಸಗೊಬ್ಬರವನ್ನು ರೈತರಿಗೆ ನೀಡಬೇಕೆಂದು ಸಂಘದ ಸದಸ್ಯ ಕಿರಣ್ ಕುಮಾರ್ ನಡ್ಜೀರು ಸಭೆಯಲ್ಲಿ ತಿಳಿಸಿದರು.
ಸಂಘದ ರೈತಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮಾಂಸಾಹಾರ ಊಟಕ್ಕೆ ಅವಕಾಶ ಕಲ್ಪಿಸಲಾಗಿದೆ.ಆರಂಭದಲ್ಲಿ ಸಸ್ಯಹಾರಿ ಊಟಕ್ಕೆ ಮಾತ್ರ ಅವಕಾಶವಿತ್ತು.ಆದರೆ ಈ ಹಿಂದಿನ ಆಡಳಿತ ಮಂಡಳಿ ಮಾಂಸಾಹಾರಕ್ಕೂ ಅವಕಾಶ ಕಲ್ಪಿಸಿದೆ.ಎಲ್ಲಾ ವರ್ಗದವರೂ ಸಭಾಭವನವನ್ನು ಉಪಯೋಗಿಸುವುದರಿಂದ ಸಸ್ಯಾಹಾರಕ್ಕೆ ಮಾತ್ರ ಅವಕಾಶ ನೀಡಬೇಕೆಂದು ಸದಸ್ಯ ಕಿರಣ್ ಪಾದೆ ಲಿಖಿತವಾಗಿ ಮತ್ತು ಶೇಖರ ಕಟ್ಟಪುಣಿ ಮೌಖಿಕವಾಗಿ ತಿಳಿಸಿದರು.ಇದಕ್ಕೆ ಉತ್ತರಿಸಿದ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಅವರು,ಮಾಂಸಾಹಾರ ಊಟಕ್ಕೆ ಪ್ರತ್ಯೇಕ ಅಡುಗೆ ಪಾತ್ರೆಗಳ ಬಳಕೆಯಾಗುತ್ತಿತ್ತು.ಮಾಂಸಾಹಾರ ಊಟದ ಅಡುಗೆಗೆ ಇಲ್ಲಿ ಅವಕಾಶ ನೀಡಿಲ್ಲ,ಹೊರಗಡೆಯಿಂದ ತರಲು ಸೂಚಿಸಲಾಗುತ್ತಿತ್ತು ಎಂದರು.ಯಾವುದೇ ವರ್ಗದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿದ್ದರೆ ಮಾಂಸಾಹಾರ ಊಟಕ್ಕೆ ಸಭಾಂಗಣದ ಒಳಗಡೆ ಅವಕಾಶವಿಲ್ಲ,ಸಭಾಂಗಣದ ಹೊರಗಡೆ ಆವಕಾಶ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.ಸದಸ್ಯ ಹೇಮಂತ್ ರೈ ಮನವಳಿಕೆರವರು ಮಾತನಾಡಿ,ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೃಷಿಗೆ ಸಂಬಂಧಪಟ್ಟ ಸಹಕಾರಿ ಕ್ಷೇತ್ರವಾಗಿರುವುದರಿಂದ ಕೃಷಿಗೆ ಸಂಬಂಧಪಟ್ಟ ವಿಚಾರದಲ್ಲಿ ಮುಂದುವರಿಯಬೇಕು.ಕೆಲವು ವಿಷಯಗಳಲ್ಲಿ ಅಧ್ಯಕ್ಷರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.ಸಂಘದಲ್ಲಿ ಎಲ್ಲಾ ಜಾತಿಯವರು ಇರುವ ಕಾರಣ ಸಭಾಭವನದಲ್ಲಿ ಸಸ್ಯಹಾರಿಗೂ ಮತ್ತು ಮಾಂಸಹಾರಿಗೂ ಅವಕಾಶ ಕಲ್ಪಿಸಿಕೊಡಬೇಕೆಂದು ತಿಳಿಸಿದರು.ಈ ಬಗ್ಗೆ ಮುಂದಕ್ಕೆ ತೀರ್ಮಾನಿಸುವ ಎಂದು ತಿಳಿಸಿದ ಅಧ್ಯಕ್ಷರು, ಸಂಘದ ಸದಸ್ಯರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸದಸ್ಯ ಸ್ನೇಹಿ ಇನ್ಶೂರೆನ್ಸ್ ಒಂದನ್ನು ಜಾರಿಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಕ್ಯಾಂಪ್ಕೋ ಸ್ಥಳಾಂತರವಾಗದಂತೆ ಪ್ರಯತ್ನ:
ಸಂಘದ ಮುಖ್ಯ ಕಟ್ಟಡದಲ್ಲಿರುವ ಕ್ಯಾಂಪ್ಕೋ ಸ್ಥಳಾಂತರವಾಗದಂತೆ ಪ್ರಯತ್ನಿಸಲಾಗುವುದು,ಈ ಬಗ್ಗೆ ನಿರ್ಣಯಿಸಿ ಕ್ಯಾಂಪ್ಕೋಗೆ ಕಳಿಸಲಾಗುವುದು.ಸಂಘದ ಎಲ್ಲಾ ಸದಸ್ಯರು ಒಮ್ಮತದಿಂದ ಸಂಘದ ಅಭಿವೃದ್ದಿಯಲ್ಲಿ ಕೈಜೋಡಿಸಬೇಕು ಎಂದು ಅಧ್ಯಕ್ಷರು ವಿನಂತಿಸಿದರು.ಸಂಘದ ಸದಸ್ಯ ಲಕ್ಷ್ಮೀನಾರಾಯಣ ರಾವ್ ಮಾತನಾಡಿ,ಈ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಧರ್ಮಪಾಲ ರಾವ್‌ರವರ ನೇತೃತ್ವದಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯ ಮಾಡಿದ್ದಾರೆ.ಆದರೆ ಮುಂದಿನ ಅಽಕಾರ ನನಗೆ ಸಿಗಬೇಕೆಂಬ ಹಂಬಲ ವ್ಯಕ್ತಪಡಿಸಿಲ್ಲ ಎಂದರು.ಇದಕ್ಕೆ ಮತ್ತೆ ಉತ್ತರಿಸುವೆ ಎಂದು ಅಧ್ಯಕ್ಷರು ಹೇಳಿದರಾದರೂ ಸದಸ್ಯ ಲಕ್ಷ್ಮೀನಾರಾಯಣ ರಾವ್‌ರವರು ಹೊರಡಲು ಮುಂದಾದರು.ಉತ್ತರ ನೀಡುವವರೆಗೆ ನಿಲ್ಲುವಂತೆ ಅಧ್ಯಕ್ಷರು ವಿನಂತಿಸಿದರೂ ಉತ್ತರಕ್ಕೆ ಕಾಯದೆ ಅವರು ಹೊರಟು ಹೋದರು.ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಮೇಶ ಉಪ್ಪಂಗಳರವರು,ನಾವೇನು ಉದ್ದೇಶವಿಟ್ಟುಕೊಂಡು ಅಽಕಾರಕ್ಕೆ ಬಂದಿಲ್ಲ,ಹಿರಿಯರ ಅಪೇಕ್ಷೆಯಂತೆ ಸ್ಪಽಸಿದಾಗ ಸದಸ್ಯರು ಚುನಾಯಿಸಿದ ಕಾರಣ ಅಧಿಕಾರದಲ್ಲಿ ಮುಂದುವರಿಯುತ್ತಿದ್ದೇವೆ ಎಂದು ತಿಳಿಸಿದರು.
ಸಂಘದ ಅಭಿವೃದ್ಧಿ ದೃಷ್ಟಿಯಿಂದ,ಸದಸ್ಯರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಸರಕಾರದಿಂದ ಸಿಗುವ ಸವಲತ್ತು ಪಡೆದುಕೊಳ್ಳಬೇಕು ಎಂದು ಹೇಳಿದ ಅಧ್ಯಕ್ಷರು,ಸಂಘವು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕೆಂದು ತಿಳಿಸಿ ಮಹಾಸಭೆಯಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಂಘದ ಸದಸ್ಯರಾದ ಜನಾರ್ದನ ಕಯ್ಯಪೆ, ಅಜಿತ್ ರೈ ಮನವಳಿಕೆ, ತಿಮ್ಮಪ್ಪ ಗೌಡ ಕುಂಡಡ್ಕ, ಸುಧಾಕರ ರೈ ಮನವಳಿಕೆ,ಉಮೇಶ ರೈ ಬಲೆಂಪೋಡಿ,ಲಕ್ಷ್ಮೀನಾರಾಯಣ ಆಲೆಪ್ಪಾಡಿ,ಮೋನಪ್ಪ ಗೌಡ ಪೆರಾಬೆ,ಮೋಹನದಾಸ ಶೆಟ್ಟಿ ಕೆಮ್ಮಾರ,ಪದ್ಮನಾಭ ಗೌಡ ಎರ್ಮಲ ಸೇರಿದಂತೆ ಹಲವು ಮಂದಿ ಸದಸ್ಯರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.ವೇದಿಕೆಯಲ್ಲಿ ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಕೇಶವ ಗೌಡ ಎ.,ಉದಯ ಎಸ್.ಸಾಲಿಯಾನ್, ಆಶೋಕ ಕೆ.,ಗಾಯತ್ರಿ, ರತ್ನ ಬಿ.ಕೆ.,ವಿಜಯ ಎಸ್, ಪದ್ಮಪ್ಪ ಗೌಡ ಕೆ.,ಕುಂಞ ಮುಗೇರ, ಅಶೋಕ ಹೆಚ್, ಲೋಕೇಶ,ಎಸ್‌ಸಿಡಿಸಿಸಿ ಬ್ಯಾಂಕಿನ ವಲಯ ಮೇಲ್ವಿಚಾರಕ ಶರತ್ ಡಿ ಉಪಸ್ಥಿತರಿದ್ದರು.ಸಿಬ್ಬಂದಿಗಳಾದ ರವಿರಾಜ್ ಜಿ.ಪಿ., ಆನಂದ ಗೌಡ,ರಾಧಾಕೃಷ್ಣ, ಆಶಾಲತಾ, ಮಂಗಳಾ ಪೈಯವರು ವಿವಿಧ ವರದಿಗಳನ್ನು ಸಭೆಗೆ ಮಂಡಿಸಿದರು.ಮುಖ್ಯ ಕಾರ್ಯನಿರ್ವಹಣಾಽಕಾರಿ ಮನೋಹರ್‌ಪ್ರಕಾಶ್ ವಾರ್ಷಿಕ ವರದಿ ಮಂಡಿಸಿದರು.ಸಂಘದ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆ ವಂದಿಸಿದರು.ದುರ್ಗಾಂಬಾ ವಿದ್ಯಾಸಂಸ್ಥೆಯ ವಿಧ್ಯಾರ್ಥಿಗಳು ಪ್ರಾರ್ಥಿಸಿದರು.ಸಿಬ್ಬಂದಿ ಲೋಕನಾಥ ರೈ ಕಾರ್ಯಕ್ರಮ ನಿರೂಪಿಸಿದರು.ಸಂಘದ ಸಿಬ್ಬಂದಿಗಳಾದ ಮಹೇಶ ಕೆ.,ಸಂತೋಷ್ ಬಿ.,ಯಶಸ್ವಿ ಕೆ, ಕೃಷ್ಣಪ್ಪ ಎ, ಅಶ್ವಥ್ ಎಸ್, ಕವನ್ ಕುಮಾರ್,ಸತೀಶ,ಚಂದ್ರಹಾಸ್,ರವಿಕಿರಣ,ಕುಕ್ಕ, ಆನಂದ, ಬಾಲಕೃಷ್ಣ, ಪ್ರಸಾದ್, ಸತೀಶ,ಸೀತಾರಾಮ,ಕೇಶವ ಗೌಡ,ಸುಂದರ,ವಸಂತ ಶೆಟ್ಟಿ,ಮೋಹನ ಗೌಡರವರು ಮಹಾಸಭೆಯಲ್ಲಿ ಸಹಕರಿಸಿದರು.ರಾಷ್ಟ್ರಗೀತೆಯೊಂದಿಗೆ ಮಹಾಸಭೆಯು ಮುಕ್ತಾಯಗೊಂಡಿತು.ಅಗಮಿಸಿದ ಎಲ್ಲಾ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಸಿಹಿಭೋಜನ ಸವಿದರು.
ಹೆಚ್ಚುವರಿ ಸಭಾಭತ್ಯೆ ಪಡೆದ ವಿಚಾರ-ಆಡಿಟ್ ವರದಿಯಲ್ಲಿ ಆಕ್ಷೇಪ:ಚರ್ಚೆ
ಹಿಂದಿನ ಆಡಳಿತ ಮಂಡಳಿ ಸದಸ್ಯರು ಹೆಚ್ಚುವರಿ ಸಭಾಭತ್ಯೆಯನ್ನು ಪಡೆದಿದ್ದು ಅದರ ವಸೂಲಾತಿಗೆ ಆಡಿಟ್ ವರದಿಯಲ್ಲಿ ತಿಳಿಸಿದ್ದಾರೆ ಎಂದು ಅಧ್ಯಕ್ಷ ರಮೇಶ ಉಪ್ಪಂಗಳರವರು ತಿಳಿಸಿದರು. ಇದಕ್ಕೆ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಆಕ್ಷೇಪ ವ್ಯಕ್ತಪಡಿಸಿ, ನಾವು ಕಾನೂನು ಬಾಹಿರವಾಗಿ ಪಡೆದಿಲ್ಲ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರ ನಿರ್ದೇಶನದ ಮೇರೆಗೆ ನಾವು ಭತ್ಯೆಯನ್ನು ಪಡೆದಿದ್ದೇವೆ.ನಮ್ಮ ಆಡಳಿತ ಅವಧಿ ಇರುವಾಗ ಆಡಿಟರ್ ಈ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದರು.ಇದಕ್ಕೆ ಧ್ವನಿಗೂಡಿಸಿದ ಸಂಘದ ಸದಸ್ಯ ರಾಯ್ ಅಬ್ರಾಹಂರವರು,ಆಡಳಿತ ಮಂಡಳಿಯವರು ಗೌರವಧನ ಪಡೆಯಬೇಕು.ಮೊದಲಿನ ಆಡಳಿತ ಮಂಡಳಿ ಅಲಂಕಾರದಲ್ಲಿ ಇರುವ ಸಂದರ್ಭದಲ್ಲಿ ಈ ವಿಚಾರವನ್ನು ತಿಳಿಸಬೇಕಿತ್ತು.ಆದರೆ ಈ ನ್ಯೂನತೆಯನ್ನು ಆಡಳಿತ ಮಂಡಳಿ ಬದಲಾದ ಸಂದರ್ಭದಲ್ಲಿ ಈಗ ತಿಳಿಸಿದ್ದಾರೆ.ಇಂಥವರನ್ನು ಮುಂದಕ್ಕೆ ಆಲಂಕಾರು ಸಿ.ಎ.ಬ್ಯಾಂಕ್‌ಗೆ ಆಡಿಟರ್ ಆಗಿ ನೇಮಕ ಮಾಡಬಾರದು ಎಂದು ತಿಳಿಸಿದರು.ಇದಕ್ಕೆ ನಮ್ಮ ಆಕ್ಷೇಪ ಇದೆ ಎಂದು ಸಂಘದ ಮಾಜಿ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ನಿರ್ದೇಶಕರಾದ ರಾಮಚಂದ್ರ ನಾಯ್ಕ,ಆಶಾ ತಿಮ್ಮಪ್ಪ ಗೌಡ, ಶೇಷಪತಿ ರೈ,ಸಂತೋಷ್‌ರವರು ತಿಳಿಸಿದರು.ಸಹಕಾರಿ ಕಾನೂನಿನ ಅಡಿಯಲ್ಲಿ ಎಷ್ಟು ಭತ್ಯೆ ತೆಗೆದುಕೊಳ್ಳಬೇಕು ಮತ್ತು ಯಾವುದಕ್ಕೆಲ್ಲಾ ಭತ್ಯೆ ತೆಗೆದುಕೊಳ್ಳಬೇಕು ಎಂದು ಸಹಕಾರಿ ಪುಸ್ತಕ ತೋರಿಸಿ ವಿವರಿಸಿದ ಅಧ್ಯಕ್ಷ ಉಪ್ಪಂಗಳ,ಕಾನೂನು ಪ್ರಕಾರ ಹೆಚ್ಚುವರಿಯಾಗಿ ಪಡೆದಿರುವ ಸಭಾ ಭತ್ಯೆಯನ್ನು ಆಡಿಟ್ ವರದಿ ಪ್ರಕಾರ ಸಂಘಕ್ಕೆ ಮರುಪಾವತಿಸಬೇಕೆಂದರು.ನನ್ನ ಆಡಳಿತಾವಽಯಲ್ಲಿ ಸಂಘದ ಕೆಲಸ ಕಾರ್ಯಗಳಿಗೆ ಅದೆಷ್ಟೋ ಹಣವನ್ನು, ರಿಕ್ಷಾ,ಇನ್ನಿತರ ವಾಹನಗಳಿಗೆ ನನ್ನ ಸ್ವಂತ ಕೈಯಿಂದ ಹಣ ನೀಡಿದ್ದೇನೆ.ಅನುಭವದ ಕೊರತೆಯಿಂದಾಗಿ ತಾನು ಪಡೆದ ಹೆಚ್ಚುವರಿ ಭತ್ಯೆಯನ್ನು ಆಕ್ಷೇಪಣೆಯೊಂದಿಗೆ ಹಿಂತಿರುಗಿಸುವುದಾಗಿ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ತಿಳಿಸಿ ಚರ್ಚೆಗೆ ತೆರೆ ಎಳೆದರು.