ಪುತ್ತೂರು: ಕುಮಾರಧಾರ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಇದರ 2024-25 ಸಾಲಿನ ವಾರ್ಷಿಕ ಮಹಾಸಭೆ ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕುಮಾರಧಾರ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷೆ ಚೇತನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಒಕ್ಕೂಟದ ಕಾರ್ಯದರ್ಶಿ ಶ್ವೇತಾ ಮಂಡಿಸಿದರು. 2024-25 ಸಾಲಿನ ವಾರ್ಷಿಕ ಲೆಕ್ಕಪತ್ರ ವರದಿಯನ್ನು ಕೋಶಾಧಿಕಾರಿ ಶ್ರೀಮತಿ ದೀಪ್ತಿ ಮಂಡಿಸಿದರು.

2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಸಿದ್ದಪಡಿಸಿ ಸಭೆಯಲ್ಲಿ ಮಂಡಿಸಲಾಯಿತು. ಕ್ರೀಯಾಯೋಜನೆಯಲ್ಲಿ ಕಡಬ ತಾಲೂಕಿನ ಪೇಟೆಯಲ್ಲಿ ಮಾದಕ ವ್ಯಸನದ ಬೀದಿ ನಾಟಕ ಪ್ರಹಸನ,ಆ್ಯರಿ ವರ್ಕ್ ತರಬೇತಿ,ಕೃಷಿ ಜೀವನೋಪಾಯ ಚಟುವಟಿಕೆಗಳ ಬಗ್ಗೆ ಕೃಷಿ ಮಹಿಳಾ ಕುಟುಂಬಗಳಿಗೆ ತರಬೇತಿ,ತಾಲೂಕು ಪಂಚಾಯತ್ ವ್ಯಾಪ್ತಿ ಯಲ್ಲಿ ಪಂಚಾಯತ್ ರಾಜ್ ಸಂಸ್ಥೆ ಮತ್ತು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಹಭಾಗಿತ್ವದಲ್ಲಿ ಸಂಜೀವಿನಿ ಸಂತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ,ಶಿರಾಡಿ ಗ್ರಾಮ ಪಂಚಾಯತ್ ನ ಗುಂಡ್ಯ ಎಂಬಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ,ಓಣಂ ಆಚರಣೆ,ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸ್ಪರ್ದೆಗಳ ಆಯೋಜನೆ,ತಾಲೂಕು ಪಂಚಾಯತ್ ಕಡಬ ಮತ್ತು ತಾಲೂಕು ಮಟ್ಟದ ಒಕ್ಕೂಟ ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರ,ಘನತ್ಯಾಜ್ಯ ಘಟಕ ಸಿಬ್ಬಂದಿಗಳಿಗೆ ತಾಲೂಕು ಮಟ್ಟದಲ್ಲಿ ತರಬೇತಿಯನ್ನು ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.
ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಾರ್ಷಿಕ ಮಹಾಸಭೆಯ ಬಗ್ಗೆ ಮಾತಾನಾಡಿ, ಮಹಿಳೆಯರು ಕೆಲವೊಂದು ಸ್ವ ಉದ್ಯೋಗ ಚಟುವಟಿಕೆಗಳಿಗೆ ತರಬೇತಿಗೆ ಸೀಮಿತವಾಗಿರದೇ, ಉದ್ಯಮವನ್ನು ಪ್ರಾರಂಭಿಸಬೇಕು, ತಾವು ಮಾಡುವ ಆಹಾರ ಉತ್ಪನ್ನಗಳಿಗೆ ಎಫ್.ಎಸ್.ಎಸ್.ಎ.ಐ ಯನ್ನು ತಾಲೂಕಿನ ಮೂಲಕ ಮಾಡಿಸುವುದು. ಆದರೆ ತಾವೇ ಸ್ವಯಂ ಆಗಿ ಮಾಡಿದ್ದಲ್ಲಿ ಹೆಚ್ಚು ಖರ್ಚು ವೆಚ್ಚವನ್ನು ಭರಿಸಬೇಕಾಗುತ್ತದೆ. ಉತ್ಪನ್ನಗಳಿಗೆ ಪ್ಯಾಕಿಂಗ್ ಮತ್ತು ಲೇಬಲ್ ಮಾಡಿದ್ದಲ್ಲಿ ಮಾರುಕಟ್ಟೆ ಸಾದ್ಯ, ಮಾಧ್ಯಮದ ಮೂಲಕ ಉತ್ಪನ್ನಗಳ ಮಾರುಕಟ್ಟೆ ಮಾಡಲು ಪ್ರಚಾರ ಮಾಡುತ್ತಾರೆ. ಅದೇ ರೀತಿ ನಾವು ಕೂಡ ಮಾದ್ಯಮದ ಮೂಲಕ ಪ್ರಚಾರ ಮಾಡಬೇಕು. ಇದರಿಂದ ಬೇಡಿಕೆ ಹೆಚ್ಚಾಗಿ ಆದಾಯ ಗಳಿಸಬಹುದು. ಸ್ಥಳೀಯ ಉತ್ಪನ್ನಗಳನ್ನು ವಿನೂತನವಾಗಿ ಮಾಡಬೇಕು ಎಂದು ತಿಳಿಸಿದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಕೆ ಡೇ-ಎನ್.ಆರ್.ಎಲ್.ಎಂ ಯೋಜನೆಯ ಅನುಷ್ಠಾನ ಬಗ್ಗೆ, ಮಹಿಳೆಯರಿಗೆ ನೀಡಲಾಗುವ ತರಬೇತಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮೂಲಕ ಸ್ವ ಸಹಾಯ ಸಂಘ ರಚನೆ, ಸಾಮಾರ್ಥ್ಯ ಬಲವರ್ಧನೆ, ನಾಯಕತ್ವ ಗುಣಗಳ ಬಗ್ಗೆ, ಜೀವನೋಪಾಯ ಮತ್ತು ಉಪಸಮಿತಿಗಳ ಮಹತ್ವ ಇದರ ಅಗತ್ಯತೆಯ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರು, ತಾಲೂಕು ಪಂಚಾಯತ್, ಕಡಬ ಹಾಗೂ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಒಕ್ಕೂಟದ ಸದಸ್ಯೆ ಕಮಲ ಪ್ರಾರ್ಥಿಸಿ, ಒಕ್ಕೂಟದ ಅಧ್ಯಕ್ಷೆ ಚೇತನಾ ಸ್ವಾಗತಿಸಿದರು.ಒಕ್ಕೂಟದ ಉಪಾಧ್ಯಕ್ಷೆ ವಿಜಯ ವಂದಿಸಿದರು. ಕಡಬ ಡೇ-ಎನ್ ಆರ್ ಎಲ್ ಎಮ್ ಯೋಜನೆಯ ವಲಯ ಮೇಲ್ವಿಚಾರಕಿ ನಮಿತಾ ನಿರೂಪಿಸಿದರು.