ಆ.1,2: ‘ಆಳ್ವಾಸ್ ಪ್ರಗತಿ-2025’-ಬೃಹತ್ ಉದ್ಯೋಗ ಮೇಳ

0

*ಆಳ್ವಾಸ್ ಪ್ರಗತಿ 2025 ವಿಶೇಷತೆಗಳು
*285 ಕಂಪೆನಿಗಳಿಂದ ನೋಂದಾವಣೆ
*15930+ ಉದ್ಯೋಗ ಅವಕಾಶಗಳು

ಪುತ್ತೂರು: ಆಳ್ವಾಸ್ ಪ್ರಗತಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿಕೊಂಡು ಬರುತ್ತಿರುವ ಬೃಹತ್ ಉದ್ಯೋಗಮೇಳ ‘ಆಳ್ವಾಸ್ ಪ್ರಗತಿ’ 2025ರ 15ನೇ ಆವೃತ್ತಿ ಆ.01 ಮತ್ತು 02 ರಂದು ವಿದ್ಯಾಗಿರಿಯಲ್ಲಿ ನಡೆಯಲಿದೆ.

ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡು ರಾವ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮಂಗಳೂರು ವಿವಿಯ ಕುಲಪತಿ ಡಾ ಪಿ. ಎಲ್. ಧರ್ಮ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಮೂಲ್ಕಿ-ಮೂಡುಬಿದಿರೆ ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಹಾಗೂ ವಿಧಾನ ಪರಿಷತ್ತಿನ ಚುನಾಯಿತ ಜನಪ್ರತಿನಿಧಿಗಳ ಗೌರವ ಉಪಸ್ಥಿತಿ ಇರಲಿದೆ.


ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಇಎಸ್, ಹೆಲ್ತ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಹಾಸ್ಪಿಟ್ಯಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ನೇಮಕಾತಿ ನಡೆಸಲಿವೆ.


ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ. ಯಾವುದೇ ಕೋರ್ಸಗಳನ್ನು 2025ರ ಶೈಕ್ಷಣಿಕ ವರ್ಷದ ಮುಂಚೆ ಅಥವಾ ಒಳಗೆ ಪೂರ್ಣಗೊಳಿಸುವವರು ಹಾಗೂ ಅನುಭವವಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಮುಕ್ತವಾಗಿ ಭಾಗವಹಿಸಬಹುದು.


ಉದ್ಯೋಗಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್ಸೈಟ್ www.alvaspragati.com ನಲ್ಲಿ ಪ್ರಕಟಿಸಲಾಗಿದೆ. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ http://alvaspragati.com/CandidateRegistration ವೆಬ್ಸೈಟ್‌ನಲ್ಲಿ ಉಚಿತವಾಗಿ ನೋಂದಾವಣೆ ಮಾಡಬಹುದಾಗಿದೆ.

ಭಾಗವಹಿಸಲಿರುವ ಕಂಪೆನಿಗಳು ವಲಯವಾರು
ಮ್ಯಾನು ಫ್ಯಾಕ್ಚರಿಂಗ್ ವಲಯ :
70 ಕಂಪನಿಗಳು, 200 ಉದ್ಯೋಗಾವಕಾಶ
ಲಾಜಿಸ್ಟಿಕ್ಸ ವಲಯ: ಶಿಪ್ಪಿಂಗ್ ಕಂಪೆನಿಗಳು, ಫ್ಲಿಪ್‌ಕಾರ್ಟ್
ಐಟಿ ವಲಯ: 10 ಕಂಪನಿಗಳು, 125 ಉದ್ಯೋಗಾವಕಾಶ
ಐಟಿಇಎಸ್ ವಲಯ: 24 ಕಂಪನಿಗಳು, 3000 ಕ್ಕೂ ಹೆಚ್ಚು ಉದ್ಯೋಗಾವಕಾಶ
ಬ್ಯಾಂಕಿಂಗ್ ಮತ್ತು ಹಣಕಾಸು ವಲಯ : 30 ಕಂಪೆನಿಗಳು, 2500ಕ್ಕೂ ಹೆಚ್ಚು ಉದ್ಯೋಗಾವಕಾಶ
ಹೆಲ್ತ್‌ಕೇರ್ ವಲಯ: 25ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳು, 2000ಕ್ಕೂ ಹೆಚ್ಚು ಉದ್ಯೋಗಾವಕಾಶ
ಫಾರ್ಮಾವಲಯ: 5 ಪ್ರಮುಖ ಕಂಪನಿಗಳು, 250ಕ್ಕೂ ಹೆಚ್ಚು ಉದ್ಯೋಗಾವಕಾಶ
ಮಾಧ್ಯಮ ವಲಯ: 10ಕ್ಕೂ ಹೆಚ್ಚು ಮೀಡಿಯಾ ಕಂಪನಿಗಳು, 180ಕ್ಕೂ ಹೆಚ್ಚು ಉದ್ಯೋಗಾವಕಾಶ
ಮಾರಾಟ ಮತ್ತು ಚಿಲ್ಲರೆ ವಲಯ: 59 ಕಂಪನಿಗಳು, 4,500 ಉದ್ಯೋಗಾವಕಾಶ
ಕನ್ಸ್ಟ್ರಕ್ಷನ್ ವಲಯ : 8 ಕಂಪೆನಿಗಳು, 400ಕ್ಕೂ ಹೆಚ್ಚು ಉದ್ಯೋಗಾವಕಾಶ
ಹಾಸ್ಪಿಟಾಲಿಟಿ ವಲಯ: 10 ಕಂಪನಿಗಳು

2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ ಉದ್ಯೋಗಮೇಳವು ವೃತ್ತಿ ಆಕಾಂಕ್ಷಿಗಳಿಗೆ ಸದಾ ಉದ್ಯೋಗಾವಕಾಶಗಳನ್ನು ನೀಡುತ್ತಾ ಬಂದಿದೆ. ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಉದ್ಯೋಗ ಅವಕಾಶಕೊಡಿಸುವ ಮಹತ್ಕಾರ‍್ಯವನ್ನು ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದೆ. ಇಲ್ಲಿವರೆಗೆ ಆಳ್ವಾಸ್ ಉದ್ಯೋಗ ಮೇಳಗಳ ಮೂಲಕ ಒಟ್ಟು 36,151 ಉದ್ಯೋಗಗಳನ್ನು ನೀಡಲಾಗಿದೆ ಹಾಗೂ 61,517 ಅಭ್ಯರ್ಥಿಗಳನ್ನು ವಿವಿಧ ಕಂಪೆನಿಗಳು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ.

LEAVE A REPLY

Please enter your comment!
Please enter your name here