ಉಪ್ಪಿನಂಗಡಿ: ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ಸಂಶೋಧನಾತ್ಮಕ ಮನೋಭಾವವನ್ನು ಬೆಳೆಸುವ ದೃಷ್ಟಿಯಿಂದ ‘ಸ್ಪೆಕ್ಟ್ರಂ-2025’ ಎಂಬ ಶೀರ್ಷಿಕೆಯೊಂದಿಗೆ ಗಣಿತ ಮತ್ತು ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸುವ ಸ್ಪರ್ಧೆಯು ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಇಂದ್ರಪ್ರಭಾ ಸಭಾಭವನದಲ್ಲಿ ನಡೆಯಿತು.
ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯಿನಿ ಜಯಶ್ರೀ ಹಾಗೂ ಕರಾಯ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಮಂಗಳಾ ಎಂ. ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಪ್ರತ್ಯೇಕ ವಿಭಾಗಗಳಲ್ಲಿ ಭಾಗವಹಿಸಿದ್ದು, ಪ್ರತೀ ವಿಭಾಗದಲ್ಲೂ ವಿವಿಧ ಉಪ ವಿಷಯಗಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು 152 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ರಚನಾ ಕೌಶಲ್ಯವನ್ನು ಪ್ರದರ್ಶಿಸಿದರು. ಮಕ್ಕಳಿಂದ ತಯಾರಿಸಿದ ಸಂಶೋಧನಾತ್ಮಕ ಮಾದರಿಗಳಾದ ಪರಿಷ್ಕೃತ ಇಂಟರ್‌ಲಾಕ್ ಲೇಯಿಂಗ್ ಮಷಿನ್, ಗಣಿತದ ಎಲ್ಲಾ ಪ್ರಮೇಯಗಳನ್ನು ವಿನೂತನ ರೀತಿಯಲ್ಲಿ ವಿವರಿಸಿದ ಮಾದರಿಗಳು ತೀರ್ಪುಗಾರರ ಮೆಚ್ಚುಗೆ ಪಡೆದವು. ಕೃತಕ ಉಪಗ್ರಹಗಳಲ್ಲಿ ಜೋಡಿಸಬಹುದಾದ ನವೀಕೃತ ಸೆನ್ಸರ್‌ಗಳನ್ನು ಬಳಸಿದ ಮಾದರಿಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕರುಣಾಕರ ಸುವರ್ಣ, ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಶಿಕ್ಷಕಿ ವೀಣಾ ಆರ್. ಪ್ರಸಾದ್ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಸಂಸ್ಥೆಯ ಸಹ ಶಿಕ್ಷಕಿಯಾದ ನಿಶಿತಾ ಕೆ.ಕೆ. ಈ ಕಾರ್ಯಕ್ರಮದ ಮುಖ್ಯ ಆಯೋಜಕರಾಗಿದ್ದು, ಸಹಶಿಕ್ಷಕಿ ಜ್ಯೋತಿ ಕಿರಣ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.