ಉಪ್ಪಿನಂಗಡಿ ಯುವಕ ನಾಪತ್ತೆ, ವಾರಣಾಸಿಯಲ್ಲಿ ಪತ್ತೆ ; ಪ್ರಕರಣವನ್ನು ಮೂರೇ ದಿನಗಳಲ್ಲಿ ಪತ್ತೆ ಹಚ್ಚಿ ಪ್ರಶಂಸೆಗೆ ಪಾತ್ರರಾದ ಉಪ್ಪಿನಂಗಡಿ ಪೊಲೀಸರು 

0

ಪುತ್ತೂರು: ಆನ್ಲೈನ್ ಗೇಮ್ ಮೂಲಕ ಪರಿಚಯವಾದ ವಾರಣಾಸಿಯ ಯುವತಿಯ ಕರೆಯ ಮೇರೆಗೆ ಭೇಟಿಯಾಗಲು ಮನೆಯಿಂದ ನಾಪತ್ತೆಯಾದ ಉಪ್ಪಿನಂಗಡಿಯ ಯುವಕನೋರ್ವನನ್ನು  ವಾರಣಾಸಿಗೆ ಹೋಗಿ ಉಪ್ಪಿನಂಗಡಿ ಪೊಲೀಸರು ಮೂರೇ ದಿನಗಳಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಯುಸಿ ಬಳಿಕ ಮನೆಯಲ್ಲಿಯೇ ವಿಡಿಯೋ ಎಡಿಟಿಂಗ್ ಮಾಡುತ್ತಿದ್ದ ಯುವಕ ಫೇಸ್ ಬುಕ್ ನಲ್ಲಿ ಪರಿಚಯವಾದ ವಾರಣಾಸಿ ಯುವತಿಯೊಂದಿಗೆ ಚಾಟಿಂಗ್ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಜು.27 ರಂದು ಉಪ್ಪಿನಂಗಡಿಗೆ ಹೋದ ಮಗ ಯಾಕೆ ಮನೆಗೆ ಬಂದಿಲ್ಲವೆಂದು ಹೆತ್ತವರು ಗಾಬರಿಯಾಗಿ ಸ್ಥಳೀಯ ಪೊಲೀಸ್ ಸ್ಟೇಷನ್ನಿಗೆ ವಿಷಯ ಮುಟ್ಟಿಸಿದ್ದರು. ಆದರೆ ಪರಾರಿಯಾದ ಯುವಕ ಮೊದಲ ಮೊಬೈಲ್ ನಂಬರನ್ನು ಸ್ವಿಚ್ ಆಫ್ ಮಾಡಿ ತಾನು ಎಲ್ಲಿದ್ದೇನೆ ಎಂದು ತಿಳಿಯದಂತೆ ಮಾಡಿದ್ದ. ಮನೆಯವರು ಒಂದು ದಿನ ಮಂಗಳೂರಿನಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಯುವಕನ ಯಾವುದೇ ಸುಳಿವು ಸಿಗಲಿಲ್ಲ 

ನವೀನ್ ಬ್ರ್ಯಾಗ್ಸ್, ಹಾಗೂ ಆಲ್ವಿನ್ ಪಾಯ್ಸ್ ರವರ ನಿರಂತರ ಶ್ರಮ:

ವಿಷಯದ ಗಂಭೀರತೆಯನ್ನು ಅರಿತ ಉಪ್ಪಿನಂಗಡಿ ರೋಟರಿ ಕ್ಲಬ್  ನಿಕಟಪೂರ್ವ ಅಧ್ಯಕ್ಷ ನವೀನ್ ಬ್ರ್ಯಾಗ್ಸ್ ಹಾಗೂ ಮಾಂಡೋವಿ ಮೋಟಾರ್ಸ್ ನಲ್ಲಿ ಉದ್ಯೋಗದಲ್ಲಿರುವ ಆಲ್ವಿನ್ ಪಾಯಿಸ್ ರವರು ಉಪ್ಪಿನಂಗಡಿ ಪೊಲೀಸ್ ಸ್ಟೇಷನ್ನಿಗೆ ಸಂಪರ್ಕಿಸಿ ತ್ವರಿತವಾಗಿ ಪತ್ತೆ ಹಚ್ಚಲು ವಿನಂತಿ ಸಲ್ಲಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಉಪ್ಪಿನಂಗಡಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ರವರ ಮಾರ್ಗದರ್ಶನದಂತೆ ಎಸ್.ಐ ಅವಿನಾಶ್ ರವರು ಈ ಯುವಕನನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತಂಡ ರಚಿಸಿ ಕಾರ್ಯ ಪ್ರವೃತ್ತರಾದರು. ಮಧ್ಯಪ್ರದೇಶ ಮೂಲಕ ವಾರಣಾಸಿಗೆ ರೈಲಿನಲ್ಲಿ  ಹೋಗುತ್ತಿರುವುದು ಪೊಲೀಸ್ ತನಿಖೆಯಿಂದ ತಿಳಿದು ಕೂಡಲೇ ಎಸ್.ಐ ಅವಿನಾಶ್ ತಂಡ ಬೆಂಗಳೂರಿಗೆ ತೆರಳಿ ಅಲ್ಲಿಂದ ವಿಮಾನದ ಮೂಲಕ ವಾರಣಾಸಿಗೆ ತಲುಪಿ ಅಲ್ಲಿನ ಪೊಲೀಸ್ ಸ್ಟೇಷನ್ ಅನ್ನು ಸಂಪರ್ಕಿಸಿ ಘಟನೆಯ ವಿವರವನ್ನು ತಿಳಿಸಿ ಅಲ್ಲಿನ ಪೊಲೀಸರ ಸಹಕಾರದಿಂದ ಯುವಕ ಹಾಗೂ ವಾರಣಾಸಿಯ ಯುವತಿ ಜೊತೆಯಾಗಿ ಇರುವುದನ್ನು ಪತ್ತೆ ಹಚ್ಚಿ ಯುವಕನನ್ನು ವಾರಣಾಸಿಯಿಂದ ಉಪ್ಪಿನಂಗಡಿಗೆ ಕರೆತಂದು ಯುವಕನ ವಾರೀಸುದಾರರಿಗೆ ಒಪ್ಪಿಸಿರುತ್ತಾರೆ ಎಂದು ತಿಳಿದು ಬಂದಿದೆ.

ಮೂರೇ ದಿನಗಳಲ್ಲಿ ಪತ್ತೆ ಹಚ್ಚಿದ ಪೊಲೀಸರಿಗೆ ಪ್ರಶಂಸೆ

ಉಪ್ಪಿನಂಗಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ. ಎಸ್ ಹಾಗೂ ಎಸ್.ಐ ಅವಿನಾಶ್ ಎಚ್. ತಂಡಕ್ಕೆ ನವೀನ್ ಬ್ರ್ಯಾಗ್ಸ್ ಹಾಗೂ ಆಲ್ವಿನ್ ಪಾಯ್ಸ್ ಜೊತೆಗೆ ಯುವಕನ‌ ಮನೆಯವರು ಜೊತೆಗೂಡಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್ ಹಾಗೂ ಎಸ್.ಐ ಅವಿನಾಶ್ ರವರನ್ನು ಶಾಲು ಹೊದಿಸಿ ಅಭಿನಂದಿಸಲಾಗಿದ್ದು, ಅಲ್ಲದೆ ಸ್ಥಳೀಯರು ಕೂಡ ಪೊಲೀಸರ ಕರ್ತವ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here