ಪುತ್ತೂರು:ಪುತ್ತಿಲ ಪರಿವಾರ ಆಯೋಜಿಸಿದ್ದ ‘ಕೆಸರ್ದ ಗೊಬ್ಬು’ ಕಾರ್ಯಕ್ರಮದಲ್ಲಿ ದ.ಕ.ಸಂಸದ, ಜಿಲ್ಲಾಧ್ಯಕ್ಷ ಸೇರಿದಂತೆ ಬಿಜೆಪಿ ಪ್ರಮುಖರು ಪಾಲ್ಗೊಂಡು ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವ ವಿಚಾರದಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿದೆ.
ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರದ ಆಶ್ರಯದಲ್ಲಿ ಕಾರ್ಜಾಲು ಗದ್ದೆಯಲ್ಲಿ ಆ.3ರಂದು ‘ಕೆಸರ್ದ ಗೊಬ್ಬು’ ಕಾರ್ಯಕ್ರಮ ಆಯೋಜಿಸಲಾಗಿತ್ತು.ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು,ಸಂಜೀವ ನಾಯಕ್ ಕಲ್ಲೇಗ, ಭಾಸ್ಕರ ಆಚಾರ್ ಹಿಂದಾರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.ಇವರೆಲ್ಲರೂ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಮತ್ತು ಪರಿವಾರದ ಪ್ರಮುಖರೊಂದಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ವಿಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ನಾನಾ ರೀತಿಯ ವಿಶ್ಲೇಷಣೆ ನಡೆಯುತ್ತಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶದ ನಿರೀಕ್ಷೆಯಲ್ಲಿದ್ದು ಅವಕಾಶ ವಂಚಿತರಾಗಿದ್ದರಿಂದ ಅರುಣ್ ಕುಮಾರ್ ಪುತ್ತಿಲ ಅವರು ಕಾರ್ಯಕರ್ತರ ಒತ್ತಡದ ಪರಿಣಾಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರನ್ನು ಮೂರನೇ ಸ್ಥಾನಕ್ಕೆ ತಳ್ಳಿ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರಿಗೆ ಪ್ರಬಲ ಪೈಪೋಟಿ ನೀಡಿ ಮತಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ವಿರೋಚಿತ ಸೋಲು ಕಂಡಿದ್ದ ಅರುಣ್ ಕುಮಾರ್ ಪುತ್ತಿಲ ಅವರು, ತನಗೆ ಅವಕಾಶ ನೀಡದೇ ಇದ್ದುದಕ್ಕೆ ಬೇಸರಗೊಂಡು ಬಿಜೆಪಿಯಿಂದ ದೂರ ಉಳಿದಿದ್ದರು.ಆ ಬಳಿಕ ಅವರ ನೇತೃತ್ವದ ಪುತ್ತಿಲ ಪರಿವಾರ ಸಂಘಟನೆ ರಚನೆಯಾಗಿ ಹತ್ತಾರು ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿರುವುದಲ್ಲದೆ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ವಾಪಸ್ ಕರೆ ತರುವ ಪ್ರಯತ್ನ ನಿರಂತರ ಮುಂದುವರಿದಿತ್ತಾದರೂ ಏನಾದರೊಂದು ಕಾರಣಕ್ಕಾಗಿ ಅದು ವಿಫಲವಾಗುತ್ತಿತ್ತು.ಕೊನೆಗೂ 2024ರ ಲೋಕಸಭಾ ಚುನಾವಣೆ ಸಂದರ್ಭ, ಪಕ್ಷಕ್ಕೆ ಯಾವುದೇ ಹಾನಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಸಂಧಾನದ ಫಲವಾಗಿ ಪುತ್ತಿಲ ಪರಿವಾರವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಾಯಿತು.ರಾಜಕೀಯವಾಗಿ ಈ ವಿಲೀನ ಪ್ರಕ್ರಿಯೆ ನಡೆಯಿತಾದರೂ ಪುತ್ತಿಲ ಪರಿವಾರದ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವ ಕುರಿತು ಮಾತುಕತೆ ಸಂದರ್ಭ ತೀರ್ಮಾನಿಸಿದ್ದರು.
ಪುತ್ತಿಲರಿಗೆ ದೊರೆಯದ ಹುದ್ದೆ:
ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷದಲ್ಲಿ ಪ್ರಮುಖವಾದ ಹುದ್ದೆ ನೀಡಲಾಗುವುದು ಎಂಬ ಮಾತುಕೇಳಿ ಬರುತ್ತಿತ್ತಾದರೂ ಈ ತನಕ ಅವರಿಗೆ ಯಾವುದೇ ಪ್ರಮುಖ ಹುದ್ದೆ ನೀಡಲಾಗಿಲ್ಲ.ಬದಲಿಗೆ ಪುತ್ತಿಲ ಪರಿವಾರದ ಆಗಿನ ಅಧ್ಯಕ್ಷರಾಗಿದ್ದ ಪ್ರಸನ್ನ ಕುಮಾರ್ ಮಾರ್ತ ಅವರಿಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುದ್ದೆ ಮತ್ತು ಪುತ್ತಿಲ ಪರಿವಾರದ ಪ್ರಮುಖರಾಗಿದ್ದ ಉಮೇಶ್ ಕೋಡಿಬೈಲು ಹಾಗೂ ಅನಿಲ್ ತೆಂಕಿಲ ಅವರಿಗೆ ಕ್ರಮವಾಗಿ ಗ್ರಾಮಾಂತರ ಮತ್ತು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು.
ಪುತ್ತಿಲ ಬಂದರೂ ಮುಖಂಡರು ಬರುತ್ತಿರಲಿಲ್ಲ:
ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾದ ಬಳಿಕ ಪ್ರತಿಭಟನೆ ಸಹಿತ ಬಿಜೆಪಿಯ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ಬೆಂಬಲಿಗ ಪ್ರಮುಖರು ಭಾಗವಹಿಸುತ್ತಿದ್ದರು.ಆದರೆ ಪುತ್ತಿಲ ಅವರ ಕಾರ್ಯಕ್ರಮಗಳಲ್ಲಿ ಬಿಜೆಪಿಯ ಪ್ರಮುಖ ನಾಯಕರು ಪಾಲ್ಗೊಳ್ಳುತ್ತಿರಲಿಲ್ಲ.ಜೊತೆಗೆ ಸ್ಥಳೀಯ ಕಾರ್ಯಕರ್ತರೂ ಪಾಲ್ಗೊಳ್ಳುತ್ತಿರುವುದು ವಿರಳವಾಗಿತ್ತು.ಪುತ್ತಿಲ ಪರಿವಾರ ಆಯೋಜಿಸಿದ್ದ ‘ಶ್ರೀನಿವಾಸ ಕಲ್ಯಾಣೋತ್ಸವ’ದಂತಹ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಬಿಜೆಪಿಯ ಪ್ರಮುಖ ನಾಯಕರು ಪಾಲ್ಗೊಂಡಿರಲಿಲ್ಲ.ಅರುಣ್ ಕುಮಾರ್ ಪುತ್ತಿಲ ಮತ್ತವರ ಬೆಂಬಲಿಗೂ ಪಕ್ಷದ ಕೆಲವೊಂದು ಕಾರ್ಯಕ್ರಮಗಳಿಂದ ದೂರ ಉಳಿಯುವ ಮೂಲಕ, ಪುತ್ತಿಲ ಪರಿವಾರ ರಾಜ್ಯಮಟ್ಟದಲ್ಲಿ ಬಿಜೆಪಿಯೊಂದಿಗೆ ವಿಲೀನವಾದರೂ ಸ್ಥಳೀಯವಾಗಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಕಾರ್ಯಕರ್ತರು, ನಾಯಕರ ನಡುವಿನ ಮುನಿಸು ಮುಂದುವರಿದಿತ್ತು.ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇದೀಗ ಪುತ್ತಿಲ ಪರಿವಾರ ಆಯೋಜಿಸಿದ್ದ ಕೆಸರ್ದ ಗೊಬ್ಬು ಕಾರ್ಯಕ್ರಮದಲ್ಲಿ ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಗ್ರಾಮಂತರ ಮಂಡಲಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಂಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ನಾವೆಲ್ಲರೂ ಬಿಜೆಪಿ.ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಬಿಜೆಪಿ ಮತ್ತು ಪುತ್ತಿಲ ಪರಿವಾರದ ಪ್ರಮುಖರು ಪ್ರತಿಕ್ರಿಯೆ ನೀಡಿದ್ದಾರಾದರೂ, ಮುಂಬರುವ ಜಿ.ಪಂ.,ತಾ.ಪಂ. ಮತ್ತು ನಗರಸಭೆ ಚುನಾವಣೆ ಸಂದರ್ಭ ತಳಮಟ್ಟದಿಂದಲೇ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಅಗತ್ಯವಿರುವುದರಿಂದ, ಮತ್ತು ಪುತ್ತಿಲ ಪರಿವಾರವನ್ನು ಸೇರಿಸಿಕೊಳ್ಳದೇ ಇದ್ದರೆ ಚುನಾವಣೆಯಲ್ಲಿ ಪಕ್ಷಕ್ಕೆ ಸಮಸ್ಯೆಯಾಗುವುದು ನಿಶ್ಚಿತ ಎಂದು ಅರಿತು ಪಕ್ಷದ ನಾಯಕರು ಪುತ್ತಿಲ ಪರಿವಾರದ ‘ಕೆಸರ್ದ ಗೊಬ್ಬು’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಒಗ್ಗಟ್ಟು ತೋರಿಸಿಕೊಳ್ಳುವ ಪ್ರಯತ್ನವಾಗಿದೆ. ಕಾರ್ಜಾಲು ಗದ್ದೆಯಲ್ಲಿ ನಡೆದಿರುವುದು ‘ಕೆಸರ್ದ ಗೊಬ್ಬು’ ಅಲ್ಲ ಎರಡು ವರ್ಷಗಳ ರಾಜಕೀಯ ಕೆಸರೆರಚಾಟಕ್ಕೆ ಅಂತ್ಯ ಹಾಡುವ ಒಂದು ಮಹತ್ವದ ರಾಜಕೀಯ ನಡೆ ಎಂಬ ರೀತಿಯ ವಿಶ್ಲೇಷಣೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.