ಬರಹಗಾರ ಮೊದಲು ಓದುಗನಾಗಬೇಕು: ಆಮಿರ್ ಅಶ್ಅರೀ
ಪುತ್ತೂರು: ಉರುಮಾಲ್ ಮಾಸ ಪತ್ರಿಕೆಯು ಹಮ್ಮಿಕೊಂಡ `ಉರುಮಾಲ್ ಅಕ್ಷರ ಯಾನ’ ಮಿತ್ತೂರಿನ ದಾರುಲ್ ಇರ್ಷಾದ್ ವಿದ್ಯಾಸಂಸ್ಥೆಯಲ್ಲಿ ಸಮಾರೋಪಗೊಂಡಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಉಪ ಸಂಪಾದಕ ಆಮಿರ್ ಅಶ್ಅರೀ ಬನ್ನೂರು “ಬರಹಗಾರನಾಗಲು ಮೊದಲು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು, ಪ್ರವಾದಿಯವರಿಗೆ ಅಲ್ಲಾಹನು ಕೊಟ್ಟ ಮೊದಲ ಸಂದೇಶ ಓದಿರಿ ಎಂದಾಗಿತ್ತು, ಓದಿಗೆ ಇಸ್ಲಾಮಿನಲ್ಲಿ ಅಪಾರ ಮಹತ್ವವಿದೆ, ಇತ್ತೀಚೆಗೆ ಈ ದೇಶದ ನೈಜ ಇತಿಹಾಸಗಳನ್ನು ತಿರುಚುವ ಕಾರ್ಯಗಳು ನಡೆಯುತ್ತಿದೆ. ಅದಕ್ಕಿರುವ ಮುಖ್ಯ ಕಾರಣ ಈ ಸಮಾಜಕ್ಕೆ ಇತಿಹಾಸದ ಮೇಲಿನ ಅರಿವು ಇಲ್ಲದಿರುವುದು. ನಾಗರಿಕ ಸಮಾಜದ ನಿರ್ಲಕ್ಷಣೆಯಿಂದ ಅದೆಷ್ಟೋ ಈ ನಾಡಿನ ಮೂಲ ಇತಿಹಾಸಗಳು ಮಣ್ಣು ಸೇರಿದೆ. ಇನ್ನು ಅದಕ್ಕೆ ಅವಕಾಶವನ್ನು ಕಲ್ಪಿಸಿಕೊಡದೆ ಹೆಚ್ಚು ಹೆಚ್ಚು ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳ ಮೇಲಿನ ಅಧ್ಯಯನ ವಿದ್ಯಾರ್ಥಿ ಸಮೂಹದಿಂದ ಆಗಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ದಾರುಲ್ ಇರ್ಷಾದ್ ಪ್ರಿನ್ಸಿಪಾಲ್ ಹುಸೈನ್ ಅಹ್ಸನಿ ಮಾರ್ನಾಡ್, ಉರುಮಾಲ್ ವ್ಯವಸ್ಥಾಪಕ ಸರ್ಫ್ರಾಝ್ ಎಂ. ನವಾಝ್, ಉರುಮಾಲ್ ಸಿಬ್ಬಂದಿಗಳಾದ ತೌಶೀರ್ ಹಾಗೂ ಹಫೀಝ್ ಉಪಸ್ಥಿತರಿದ್ದರು.