ನೆಲ್ಯಾಡಿ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಂಭೀರ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯ ಗ್ರಾಮದ ಪರ್ಕಳ ಎಂಬಲ್ಲಿ ಆ.5ರಂದು ಸಂಜೆ ನಡೆದಿದೆ.
ಗಾಯಗೊಂಡವರನ್ನು ಕಾರು ಚಾಲಕ ವಿಟ್ಲ ಮೂಲದ ಸಾದಿಕ್(36ವ.) ಎಂದು ಗುರುತಿಸಲಾಗಿದೆ. ಸಾದಿಕ್ ಅವರು ಕಾರಿನಲ್ಲಿ ಬೆಂಗಳೂರಿನಿಂದ ವಿಟ್ಲಕ್ಕೆ ಬರುತ್ತಿದ್ದು ಬಸ್ಸು ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿತ್ತು. ಅಪಘಾತದಲ್ಲಿ ಎರಡು ವಾಹನಗಳು ಜಖಂಗೊಂಡಿದ್ದು ಗಾಯಗೊಂಡ ಕಾರು ಚಾಲಕ ಸಾದಿಕ್‌ರವರಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಮಗಾರಿ ವಿರುದ್ಧ ಆಕ್ರೋಶ:
ಅಪಘಾತ ನಡೆದ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಸ್ತೆ ತಿರುವಿನಿಂದ ಕೂಡಿದ್ದು ಹಾಗೂ ಕಾಮಗಾರಿ ವೇಳೆ ಯಾವುದೇ ಸೂಚನಾ ಫಲಕವನ್ನೂ ಹಾಕದೆ ಏಕಮುಖ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದೇ ಈ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಈ ಪ್ರದೇಶದಲ್ಲಿ ಆಗಾಗ ಅಪಘಾತಗಳು ನಡೆಯುತ್ತಲೇ ಇದೆ. ಇದಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಆಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.