ಪುತ್ತೂರು: ಅರಿವು ಕೇಂದ್ರದಲ್ಲಿ ಸಿಗುವ ಸೌಲಭ್ಯಗಳ ಕುರಿತಾಗಿ ಕೆಯ್ಯೂರು ಅರಿವು ಕೇಂದ್ರದ ಗ್ರಂಥಪಾಲಕಿ ಅನುಷಾ ಕೆ.ರವರು ಮೂವರು ವಿದ್ಯಾರ್ಥಿಗಳ ಮೂಲಕ ತಮ್ಮದೇ ಶೈಲಿಯಲ್ಲಿ ವೀಡಿಯೋವೊಂದನ್ನು ಮಾಡಿದ್ದು ಅದನ್ನು ಅವರು ತಮ್ಮ ಟೆಲಿಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋ ಅಧಿಕಾರಿ ವರ್ಗದವರಿಂದ ಮೆಚ್ಚುಗೆ ಗಳಿಸಿದ್ದು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಎಕ್ಸ್ ಖಾತೆಯಲ್ಲೂ ಅಪ್ಲೋಡ್ ಆಗಿತ್ತು.
ಇದೀಗ ಈ ವೀಡಿಯೋವನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆಯವರು ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು ಕೆಯ್ಯೂರು ಅರಿವು ಕೇಂದ್ರದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕ್ ಖರ್ಗೆಯವರು ವೀಡಿಯೋವನ್ನು ಅಲ್ಲಮಪ್ರಭುಗಳ ವಚನದೊಂದಿಗೆ ಈ ರೀತಿಯಾಗಿ ಹಂಚಿಕೊಂಡಿದ್ದಾರೆ. “ಅರಿದೆನೆಂಬುದು ತಾ ಬಯಲು. ಅರಿದೆವರಿದೆವೆಂಬಿರಿ ಅರಿದ ಪರಿಯಂತು ಹೇಳಿರೆ..ಅರಿದವರು ಅರಿದೆವೆಂಬರೆ? ಅರಿಯಬಾರದ ಘನವನರಿದವರು ಅರಿಯದಂತಿಪ್ಪರು ಗುಹೇಶ್ವರಾ. ಅಲ್ಲಮಪ್ರಭುಗಳ ಈ ವಚನವು ಅರಿವೆಂಬುದು ನಿರಂತರ ಪ್ರಕ್ರಿಯೆ, ಜ್ಞಾನ ಸಂಪನ್ನನಾಗುವುದರ ಮಹತ್ವವನ್ನು ಸಾರುತ್ತದೆ. ಶರಣರ ಅರಿವಿನ ತಾತ್ವಿಕತೆಯನ್ನು ಅಳವಡಿಸಿಕೊಂಡು ರೂಪಿಸಿರುವ ಅರಿವು ಕೇಂದ್ರಗಳು ಗ್ರಾಮೀಣ ಜನರಿಗೆ ಆಪ್ತ ಸ್ಥಳವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿದ್ಯಾರ್ಥಿನಿಯರಾದ ಕು. ಶಾರ್ವಿ ಎ ರೈ, ಕು.ಲಹರಿ ಹಾಗೂ ಕು. ಸೀಮಾರವರು ದೇಶದ ಅರಿವು ಕೇಂದ್ರದ ಸೌಲಭ್ಯಗಳ ಕುರಿತು ವಿಶಿಷ್ಟವಾಗಿ ಪರಿಚಯಿಸಿದ್ದಾರೆ” ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮೂವರು ವಿದ್ಯಾರ್ಥಿಗಳ ಮೂಲಕ ವೀಡಿಯೋ
ಕೆಯ್ಯೂರು ಗ್ರಾಮ ಪಂಚಾಯತ್ ಗ್ರಂಥಾಲಯ ಅರಿವು ಕೇಂದ್ರದ ಗ್ರಂಥಪಾಲಕಿಯಾಗಿರುವ ಅನುಷಾರವರು ಅರಿವು ಕೇಂದ್ರದ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮಾಹಿತಿ ದೊರೆಯಬೇಕು ಎಂಬ ಉದ್ದೇಶದಿಂದ ತನ್ನದೇ ಕಲ್ಪನೆಯಲ್ಲಿ ವಿದ್ಯಾರ್ಥಿನಿಯರಾದ ಶಾರ್ವಿ ಎ ರೈ, ಲಹರಿ ಹಾಗೂ ಸೀಮಾರವರನ್ನು ಕಲಾವಿದರನ್ನಾಗಿ ಬಳಸಿಕೊಂಡು ಒಂದು ವೀಡಿಯೋ ಮಾಡಿದ್ದರು. ಈ ವೀಡಿಯೋವನ್ನು ಮೊದಲಿಗೆ ತನ್ನ ಟೆಲಿಗ್ರಾಂನಲ್ಲಿ ಹಂಚಿಕೊಂಡಿದ್ದರು ಇದನ್ನು ಗಮನಿಸಿದ ಐಪಿಎಸ್ ಅಧಿಕಾರಿ ಉಮಾ ಮಹಾದೇವನ್ ಸಹಿತ ಹಲವು ಮಂದಿ ಅಧಿಕಾರಿಗಳು ವೀಡಿಯೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅನುಷಾರವರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಪಂಚಾಯತ್‌ರಾಜ್ ಆಯುಕ್ತಾಲಯದ ಎಕ್ಸ್ ನಲ್ಲೂ ಈ ವೀಡಿಯೋ ಹರಿದಾಡಿತ್ತು. ಇದೀಗ ಸಚಿವರಾದ ಪ್ರಿಯಾಂಕ್ ಖರ್ಗೆಯವರು ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
` ನನ್ನದೇ ಸ್ವಂತ ಕಲ್ಪನೆಯಲ್ಲಿ ವಿದ್ಯಾರ್ಥಿಗಳ ಮೂಲಕ ಈ ವೀಡಿಯೋ ಮಾಡಿದ್ದೇನೆ. ಇದರಲ್ಲಿ ಅರಿವು ಕೇಂದ್ರದ ಸೌಲಭ್ಯಗಳ ಮಾಹಿತಿ ಹಂಚಿಕೊಂಡಿದ್ದೇವೆ. ಮೊದಲಿಗೆ ಟೆಲಿಗ್ರಾಂನಲ್ಲಿ ಹಂಚಿಕೊಂಡಿದ್ದೆ ಆ ಬಳಿಕ ಹಲವು ಮಂದಿ ಅಧಿಕಾರಿಗಳು ಇದನ್ನು ನೋಡಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಇದೀಗ ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಇದು ನನಗೆ ತುಂಬಾ ಖುಷಿ ತಂದಿದೆ. ಕೆಯ್ಯೂರು ಗ್ರಾಪಂಗೆ ಹಾಗೂ ಅಧಿಕಾರಿ ವರ್ಗಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
– ಅನುಷಾ ಕೆಯ್ಯೂರು, ಗ್ರಂಥಪಾಲಕಿ ಅರಿವು ಕೇಂದ್ರ ಕೆಯ್ಯೂರು ಗ್ರಾಪಂ
` ನಮ್ಮ ಕೆಯ್ಯೂರು ಗ್ರಾಮ ಪಂಚಾಯತ್‌ನ ಗ್ರಂಥಾಲಯದ ಅರಿವು ಕೇಂದ್ರದ ಗ್ರಂಥಪಾಲಕಿ ಅನುಷಾರವರು ಮಾಡಿರುವ ವೀಡಿಯೊ ನಿಜಕ್ಕೂ ತುಂಬಾ ಅರ್ಥವತ್ತಾಗಿದೆ. ಅರಿವು ಕೇಂದ್ರದ ಮಹತ್ವವನ್ನು ವಿದ್ಯಾರ್ಥಿಗಳೇ ತಿಳಿಸಿದ್ದಾರೆ. ಕೆಯ್ಯೂರು ಅರಿವು ಕೇಂದ್ರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ತಂದಿದೆ.’
– ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ