ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನೈತಿಕ ಶಿಕ್ಷಣ ತರಗತಿ

0

ತಪ್ಪುಗಳ ಜವಾಬ್ದಾರಿಯನ್ನು ಹೊರುವ ಮನಃಸ್ಥಿತಿ ಬೇಕು : ಬಿ.ವಿ.ಸೂರ್ಯನಾರಾಯಣ


ಪುತ್ತೂರು: ವಿದ್ಯಾರ್ಥಿಗಳು ಕೃತಜ್ಞತೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ. ಅದಾದಾಗ ಮಾತ್ರ ವ್ಯಕ್ತಿತ್ವ ಬೆಳಗಬಹುದು. ವೈಫಲ್ಯಗಳು ಅಥವಾ ತಪ್ಪುಗಳು ಸಂಭವಿಸಿದಾಗ, ಇತರರನ್ನು ದೂಷಿಸುವ ಬದಲು, ಸ್ವತಃ ಹೊಣೆ ಹೊತ್ತುಕೊಳ್ಳುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನೈತಿಕ ಶಿಕ್ಷಣ ತರಗತಿಯಲ್ಲಿ ಬುಧವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಜೀವನದಲ್ಲಿ ಸವಾಲುಗಳು ಅನಿವಾರ್ಯವಾದವುಗಳೇ ಆಗಿವೆ. ಎಲ್ಲವೂ ನಿರೀಕ್ಷೆಯಂತೆ ನಡೆಯುವುದಿಲ್ಲ ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಇರಬೇಕು. ವೈಫಲ್ಯತೆ ಅಂತ್ಯವಲ್ಲ; ಅದು ನವೀನ ಪಾಠಗಳನ್ನು ಕಲಿಯುವ ಅವಕಾಶ. ಹಿಂದಿನ ತಪ್ಪುಗಳಿಂದ ಪಾಠವನ್ನು ಕಲಿತು, ದೃಢ ಚಿತ್ತದಿಂದ ಮುಂದುವರಿಯುವ ಶಕ್ತಿ ವಿದ್ಯಾರ್ಥಿಯ ಜೀವನದಲ್ಲಿ ಅತ್ಯಂತ ಅಗತ್ಯ. ಈ ರೀತಿಯ ಧನಾತ್ಮಕ ಮನೋಭಾವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲದೆ ಇಡೀ ಜೀವನದಲ್ಲಿ ಯಶಸ್ಸು ಪಡೆಯಲು ಸಹಾಯಕವಾಗುತ್ತವೆ ಎಂದು ನುಡಿದರು.


ಗುರಿಯನ್ನು ಸಾಧಿಸಲು ಸೂಕ್ತವಾದ ಕಾರ್ಯಯೋಜನೆ ಮಾಡುವುದು ಅಗತ್ಯ. ಜೊತೆಗೆ, ತಮ್ಮ ಪ್ರಗತಿಯನ್ನು ಸ್ವಪರಿಶೀಲನೆ ಮಾಡುತ್ತಿರಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಏಕಾಗ್ರತೆ ಅತೀವ ಅಗತ್ಯ. ಯೋಗ ಮತ್ತು ಪ್ರಾಣಾಯಾಮದಂತಹ ವಿಧಾನಗಳು ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿ. ಇಂದ್ರಿಯಗಳನ್ನು ನಿಯಂತ್ರಣದಲ್ಲಿರಿಸಿ, ಮನಸ್ಸನ್ನು ಗುರಿಯತ್ತ ಕೇಂದ್ರೀಕರಿಸಬೇಕು. ಶಿಕ್ಷಕರ ಮಾರ್ಗದರ್ಶನದ ಮೇಲೆ ನಂಬಿಕೆ ಇಡುವುದು ವಿದ್ಯಾರ್ಥಿಗೆ ಸದಾ ಬೆಳವಣಿಗೆಯ ದಾರಿಯಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯ ಬಪ್ಪಳಿಗೆಯ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ಹಾಗೂ ಉಪ ಪ್ರಾಂಶುಪಾಲ ಪ್ರದೀಪ್ ಕೆ.ವೈ. ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಅಕ್ಷತಾ ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here