ಪುಣಚ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಪುಣಚ ಹಾಗೂ ಶ್ರೀ ದೇವಿ ಮಹಿಳಾ ಮಂಡಳಿ ದೇವಿನಗರ ಪುಣಚ ಇವರ ಸಹಭಾಗಿತ್ವದಲ್ಲಿ ನಡೆಯುವ 23ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು ಆ.8ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು.

ಬೆಳಿಗ್ಗೆ ವೇದಮೂರ್ತಿ ಸುಬ್ರಾಯ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡು ದೇವಿನಗರ ಶ್ರೀದೇವಿ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಬಳಿಕ ಪೂಜಾರಂಭಗೊಂಡಿತು.
ಧಾರ್ಮಿಕ ಸಭೆ:
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮಲ್ಲಿ ಮುಖ್ಯ ಅತಿಥಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ಕೆ,ಮಾತನಾಡಿ ಭಕ್ತಿ, ನಿಷ್ಠೆಯಿಂದ ದೇವರನ್ನು ಆರಾಧನೆ ಮಾಡಿದರೆ ನಾವು ಖಂಡಿತವಾಗಿಯೂ ಯಶಸ್ಸನ್ನು ಗಳಿಸಬಹುದು. ನಮ್ಮ ಜೀವನ ಶೈಲಿಯಲ್ಲಿ ನಾವು ಪರಿವರ್ತನೆಯಾಗಬೇಕು. ಪ್ರತಿ ದಿನ ದೇವರ ಜ್ಞಾನದೊಂದಿಗೆ ಪ್ರಾಣಾಯಾಮ ಮಾಡುವುದರಿಂದ ನಮ್ಮ ಆರೋಗ್ಯ ಆಯುಷ್ಯವನ್ನು ವೃದ್ಧಿಪಡಿಸಬಹುದು. ಕಾಯಿಲೆಗಳನ್ನು ದೂರ ಮಾಡಬಹುದು. ನಾವು ನಮ್ಮ ಮಕ್ಕಳಿಗೆ ಸಂಸ್ಕಾರಯುತ ಜೀವನವನ್ನು ಕಲಿಸಿ ಉತ್ತಮವಾಗಿ ಬೆಳೆಸುವಲ್ಲಿ ತಾಯಂದಿರು ಪ್ರಮುಖ ಪಾತ್ರ ವಹಿಸಬೇಕು. ಮುಂದಿನ ದಿನಗಳಲ್ಲಿ ನಮ್ಮೆಲ್ಲರ ಜೀವನ ಬೆಳಗುವಂತಾಗಲಿ ಎಂದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಪುಣಚ ತೋರಣಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ದಿವ್ಯವಾಣಿ ಕಜೆ ಹಬ್ಬದ ಮಹತ್ವದ ಬಗ್ಗೆ ಮಾಹಿತಿ ನೀಡಿ ಶುಭ ಮಾತುಗಳನ್ನಾಡಿದರು. ಶ್ರೀದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಯಮುನಾ ಆಜೇರುಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಆಶಾ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನದಲ್ಲಿರುವ ಕಾವೇರಿ ಅಜ್ಜಿನಡ್ಕ ಹಾಗೂ ನಳಿನಾಕ್ಷಿ ಆಜೇರುಮಜಲು ಅವರನ್ನು ಶಾಲು ಹೊದಿಸಿ ದೀಪ, ಸೀರೆ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಸಹಾಯಧನ:
ಶ್ರೀದೇವಿ ಮಹಿಳಾ ಮಂಡಳಿಯ ಸದಸ್ಯರಾದ ಸವಿತ ಅಗ್ರಾಳ ಹಾಗೂ ಸುಂದರಿ ಕೊಚ್ಚಿ ಅವರಿಗೆ ಆರ್ಥಿಕ ಸಹಾಯದ ಮೊತ್ತ ವಿತರಿಸಿ ಸನ್ಮಾನಿಸಲಾಯಿತು.
ಸುಮಿತ್ರ ಗರಡಿ ಪ್ರಾರ್ಥಿಸಿದರು. ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕಾರ್ಯದರ್ಶಿ ವಿನಯಕುಮಾರಿ ಸ್ವಾಗತಿಸಿ, ಕೋಶಾಧಿಕಾರಿ ರಜನಿ ಅಗ್ರಾಳ ವಂದಿಸಿದರು. ಸಹಶಿಕ್ಷಕಿ ದೀಕ್ಷಾ ರೈ ಸನ್ಮಾನಿತರನ್ನು ಪರಿಚಯಿಸಿದರು. ಸಹಶಿಕ್ಷಕಿ ತಾರಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ವರಮಹಾಲಕ್ಷ್ಮಿ ಪೂಜಾ ಸಮಿತಿ ವತಿಯಿಂದ ಪ್ರಸಾದ ರೂಪದಲ್ಲಿ ಪ್ರಸಾದ,ಬಳೆ, ಕುಂಕುಮ,ನೂಲುಗಳನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ದೇವಸ್ಥಾನದ ಆಡಳಿತ ಸಮಿತಿ, ವರಮಹಾಲಕ್ಷ್ಮಿ ಪೂಜಾ ಸಮಿತಿ, ಶ್ರೀದೇವಿ ಮಹಿಳಾ ಮಂಡಳಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.