ನಮ್ಮದು ಸನಾತನ ಸಂಸ್ಕೃತಿಯನ್ನು ಹೊಂದಿದ ದೇಶವಾಗಿದೆ. ಇಂತಹ ಒಂದು ಪುಣ್ಯಭೂಮಿಯಲ್ಲಿ ಜನ್ಮ ತಳೆದ ನಾವೆಲ್ಲರೂ ಭಾರತಾಂಬೆಯ ಮಕ್ಕಳು. ನಮ್ಮೆಲ್ಲರಲ್ಲೂ ’ಸಹೋದರ-ಸಹೋದರಿ’ ಎನ್ನುವಂತಹ ಭಾವನೆಯನ್ನು ಹುಟ್ಟಿಸುವಂತಹ ಹಬ್ಬವೇ ’ರಕ್ಷಾಬಂಧನ ಹಬ್ಬ’.
ನಮ್ಮ ಭಾರತ ದೇಶದಲ್ಲಿ ಪುರಾಣ ಕಾಲದಿಂದಲೂ ಪ್ರತಿಯೊಬ್ಬರಲ್ಲೂ ಅಣ್ಣ-ತಂಗಿ ಎಂಬ ಭಾವನೆಯನ್ನು ಬೆಸೆದಿರುವುದೇ ಈ ರಕ್ಷಾಬಂಧನವೆಂಬ ರಕ್ಷೆ. ಮಹಾಭಾರತದಲ್ಲಿ ದುಶ್ಯಾಸನನು ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಗಯ್ಯುವಾಗ ದ್ರೌಪದಿಯ ’ಕೃಷ್ಣಾ ಕೃಷ್ಣಾ, ಎಲ್ಲಿದ್ದಿ ಬಾರೋ ರಕ್ಷಿಸು ಎನ್ನನು’ ಎಂಬ ವ್ಯಥೆಯ ಕೂಗಿಗೆ ಓಗೊಟ್ಟು ಬಂದು ವಸನಧಾರೆಯನ್ನೇ ಎರೆದ ಶ್ರೀ ಕೃಷ್ಣ ಪರಮಾತ್ಮನ ಲೀಲೆಯನ್ನು ನಾವು ಕೇಳಿದ್ದೇವೆ. ದ್ರೌಪದಿ ಹಾಗೂ ಶ್ರೀ ಕೃಷ್ಣ ಪರಮಾತ್ಮನ ನಡುವೆ ಬೆಸದಿರುವುದೇ ಈ ಅಣ್ಣ-ತಂಗಿ ಎಂಬಂತಹ ಪವಿತ್ರ ಬಂಧ.
ನಮ್ಮ ಪುಣ್ಯಭೂಮಿ ಭಾರತದಲ್ಲಿ ನಾವೆಲ್ಲರೂ ಸಹೋದರ-ಸಹೋದರಿಯರು ಎಂಬ ಭಾವನೆಯಿಂದ ಇದುವರೆಗೂ ಜೀವನ ನಡೆಸಿಕೊಂಡು ಬಂದಿದ್ದೇವೆ. ರಕ್ಷಾಬಂಧನವು ಸಂತೋಷದ ಮತ್ತು ಭಾವನಾತ್ಮಕ ಹಬ್ಬವಾಗಿದೆ. ರಕ್ಷಾಬಂಧನವು ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರನ ಕೈಗೆ ಪವಿತ್ರ ದಾರವನ್ನು ಕಟ್ಟಿ ಅವರ ದೀರ್ಘಾಯುಷ್ಯ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತಾರೆ. ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯರನ್ನು ಎಲ್ಲ ತೊಂದರೆಗಳಿಂದ ರಕ್ಷಿಸುವ ಭರವಸೆಯನ್ನು ನೀಡುತ್ತಾರೆ. ರಕ್ಷಾಬಂಧನವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ.
ರಕ್ಷಾಬಂಧನ ಹಬ್ಬವು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಹಬ್ಬವಾಗಿದೆ. ಇಂತಹ ಪವಿತ್ರವಾದ ಹಬ್ಬವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಯವರು ಭವಿಷ್ಯದಲ್ಲಿ ಮುಂದುವರಿಸಿಕೊಂಡು ಹೋದರೆ ಭಾರತವು ಪ್ರಪಂಚದಲ್ಲಿ ವಿಶ್ವಗುರು ಆಗುವುದರಲ್ಲಿ ಸಂಶಯವಿಲ್ಲ. ಎಲ್ಲರಿಗೂ ರಕ್ಷಾಬಂಧನ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಎಲ್ಲರೂ ಪರಸ್ಪರ ಸಹಕಾರ, ಸಹೋದರತ್ವದ ಭಾವನೆಯಿಂದ ಬದುಕನ್ನು ನಡೆಸೋಣ ಎನ್ನುವುದು ನನ್ನ ಹಾರೈಕೆ.
ಜೈ ಭಾರತ್ ಮಾತಾ
ಲೇಖನ: ಅಶ್ವಿನಿ ರಾಘವೇಂದ್ರ ಶೆಣೈ