ಪುತ್ತೂರು: ಉಪ್ಪಿನಂಗಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ- ಶಿಕ್ಷಕ ಸಂಘದ ಮಹಾಸಭೆ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಲಿಯೋ ನೊರೊನ್ಹಾ ಮಾತನಾಡಿ, ಶಿಕ್ಷಣದಲ್ಲಿ ಪ್ರಮುಖವಾದ ನಾಲ್ಕು ಆಯಾಮಗಳಾದ ವಿದ್ಯಾರ್ಥಿ, ಶಿಕ್ಷಕರು, ಪೋಷಕರು ಮತ್ತು ಶಿಕ್ಷಣ ಇಲಾಖೆ ಬಹು ಮುಖ್ಯ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತವಾದ ಸಲಹೆ, ಮಾರ್ಗದರ್ಶನ ನೀಡಿ ಅವರಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹುರಿದುಂಬಿಸಿ, ಪ್ರೋತ್ಸಾಹಿಸಿದಾಗ ಒಬ್ಬ ಸತ್ಪ್ರಜೆಯನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ವಂ|ಜೆರಾಲ್ಡ್ ಡಿ’ ಸೋಜ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕುಟುಂಬ ಮತ್ತು ಶಿಕ್ಷಣ ಸಂಸ್ಥೆಯ ನಂಟು ಬಹಳ ಅಮೂಲ್ಯವಾದುದು. ವಿದ್ಯಾರ್ಥಿಗಳನ್ನು ದ್ವೇಷಿಸದೆ ಅವರನ್ನು ಪ್ರೀತಿಯಿಂದ ತಿದ್ದಬೇಕು. ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸಲು ಪೋಷಕರ ಸಹಕಾರ ಅಗತ್ಯ. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾದ ಆಹಾರ ಪದ್ಧತಿಯೂ ಅಗತ್ಯ ಎಂದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮ್ಯಾಕ್ಸಿಮ್ ಲೋಬೋ, ನಿಕಟಪೂರ್ವ ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀಧರ್ ಮಠಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು. ಶಿಕ್ಷಕಿಯರು ಪ್ರಾರ್ಥಿಸಿದರು. ಶಾಲಾ ಮುಖ್ಯ ಗುರು ಮೀರಾ ಮರ್ಲಿನ್ ರೊಡ್ರಿಗಸ್ ವರದಿ ಮಂಡಿಸಿದರು. ಶಾಲಾ ಶಿಕ್ಷಕಿಯರಾದ ನಮಿತಾ ಪಿಂಟೊ ಸ್ವಾಗತಿಸಿ, ಶ್ವೇತಾ ವಂದಿಸಿದರು. ಕವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ವರ್ಗದವರು ಸಹಕರಿಸಿದರು.
ನೂತನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಮನೋಜ್ ಡಾಯಸ್..
ರಕ್ಷಕ- ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಗೆ ಹೊಸ ಸದಸ್ಯರುಗಳ ನೇಮಕವನ್ನು ಮಾಡಲಾಯಿತು. ಸಂಘದ ನೂತನ ಉಪಾಧ್ಯಕ್ಷರಾಗಿ ಮನೋಜ್ ಡಾಯಸ್ ಇವರು ಆಯ್ಕೆಯಾದರು.