ಪುತ್ತೂರು: ಪುತ್ತೂರು ನಗರಸಭೆ ಬೈಲಾ ಪ್ರಕಾರ ಯಾವುದೆ ಉದ್ದಿಮೆ ಪರವಾನಿಗೆಯ ಊರ್ಜಿತ ಅವಧಿಯು ಪ್ರತೀ ವರ್ಷದ ಮಾರ್ಚ್ ಅಂತ್ಯದವರೆಗೆ ಇರುತ್ತದೆ. ಆ ನಂತರ ನವೀಕರಣ ಮಾಡದೇ ಇದ್ದಲ್ಲಿ ಅಂತಹ ಉದ್ದಿಮೆ ಪರವಾನಿಗೆ ರದ್ದಾಗುವುದು ಎಂಬ ಉಲ್ಲೇಖವಿದೆ. ಆದರೆ ನಗರಸಭೆ ಅಧಿಕಾರಿಗಳು ಉದ್ಯಮ ಸ್ಥಗಿತಗೊಳಿಸಿದವರಿಗೂ ಪರವಾನಿಗೆ ಶುಲ್ಕ ಕಟ್ಟಬೇಕೆಂಬ ನೋಟೀಸ್ ನೀಡಿರುವುದು ಕಾನೂನು ಬಾಹಿರವಾಗಿದೆ. ಹಾಗಾಗಿ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮಕೈಗೊಂಡು ನಗರಸಭೆಯಿಂದ ನೀಡಿರುವ ಶುಲ್ಕದ ನೋಟೀಸ್ ಅನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ ಅವರ ನೇತೃತ್ವದ ನಿಯೋಗ ನಗರಸಭೆ ಅಧ್ಯಕ್ಷರಿಗೆ ಮತ್ತು ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಜನರು ಹಲವಾರು ಉದ್ಯಮಗಳನ್ನು ನಗರಸಭೆಯ ಪರವಾನಿಗೆ ಪಡೆದುಕೊಂಡು ನಡೆಸಿಕೊಂಡು ಬರುತ್ತಿದ್ದಾರೆ. ಕೆಲವು ಉದ್ದಿಮೆದಾರರು ಒಂದೆರಡು ವರ್ಷ ಉದ್ಯಮ ನಡೆಸಿ ನಷ್ಟದ ಕಾರಣದಿಂದಲೋ ಇನ್ನೂ ಬೇರೆ ಬೇರೆ ಕಾರಣದಿಂದಲೋ ಸದರಿ ಉದ್ಯಮವನ್ನು ಸ್ಥಗಿತಗೊಳಿಸಿರುತ್ತಾರೆ. ಆದರೆ ಸ್ಥಗಿತಗೊಳಿಸಿದ ಕೆಲವು ವರ್ಷಗಳ ಬಳಿಕ ಹಿಂದೆ ಉದ್ಯಮ ನಡೆಸುತ್ತಿದ್ದ ಉದ್ದಿಮೆದಾರರಿಗೆ ಅಷ್ಟು ವರ್ಷಗಳ ಕಾಲದ ಪರವಾನಿಗೆ ಶುಲ್ಕ ಮತ್ತು ದಂಡನೆಯನ್ನು ಕಟ್ಟಲು ನಗರಸಭೆಯಿಂದ ನೋಟೀಸ್ ಹೋಗಿರುವ ಕುರಿತು ಮತ್ತು ಸದರಿ ಅಂಗಡಿಗಳಲ್ಲಿ ಬೇರೆಯವರು ಹೊಸದಾಗಿ ಉದ್ಯಮ ಪರವಾನಿಗೆ ಪಡಕೊಳ್ಳಲು ನಗರಸಭೆಗೆ ಅರ್ಜಿ ನೀಡಿದಾಗ ಹಿಂದಿನ ಉದ್ಯಮ ಶುಲ್ಕ ಬಾಕಿ ಇದೆ ಎಂದು ಸಾವಿರಾರು ರೂಪಾಯಿ ಉದ್ಯಮ ಪರವನಿಗೆ ಶುಲ್ಕ ಮತ್ತು ದಂಡನೆ ಶುಲ್ಕವನ್ನು ಕಟ್ಟಬೇಕೆಂದು ನಗರಸಭೆಯ ಸಿಬ್ಬಂದಿಗಳು ತಾಕೀತು ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಹಿಂದಿನ ಉದ್ದಿಮೆದಾರರು ಉದ್ಯಮ ಸ್ಥಗಿತಗೊಳಿಸಿರುವ ಬಗ್ಗೆ ಲಿಖಿತವಾಗಿ ನಗರಸಭೆಗೆ ಅರ್ಜಿ ನೀಡಬೇಕಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಿರುವ ಕುರಿತು ಹಲವಾರು ಉದ್ದಿಮೆದಾರರು ದೂರು ನೀಡಿದ್ದಾರೆ.
ಉದ್ದಿಮೆ ಪರವಾನಿಗೆಯನ್ನು ಪರಿಶೀಲಿಸಿ ಉದ್ಯಮ ಪರವಾನಿಗೆಯನ್ನು ನವೀಕರಿಸದವರಿಗೆ ನೋಟೀಸ್ ನೀಡಿ ಉದ್ಯಮ ಪರವಾನಿಗೆಯನ್ನು ಪಡಕೊಳ್ಳುವಂತೆ ಕ್ರಮ ವಹಿಸುವ ಜವಾಬ್ದಾರಿ ನಗರಸಭೆಯ ವಿಷಯ ನಿರ್ವಾಹಕ ಮತ್ತು ಆರೋಗ್ಯ ನಿರೀಕ್ಷಕರ ಹೊಣೆಯಾಗಿದೆ. ಆದರೆ ನಗರಸಭೆಯಲ್ಲಿ ಸರಿಯಾದ ಉದ್ಯಮೆದಾರರ ಪಟ್ಟಿಯೇ ಇಲ್ಲ. ಹಾಗಾಗಿ ಯಾರು ಉದ್ಯಮ ಪರವಾನಿಗೆ ಪಡೆದುಕೊಂಡಿದ್ದಾರೆ. ಯಾರು ಪಡಕೊಂಡಿಲ್ಲ ಎಂಬ ಕುರಿತು ಕಚೇರಿಯಲ್ಲಿ ಮಾಹಿತಿಯಿಲ್ಲ. ಪುತ್ತೂರು ನಗರಸಭೆ ಬೈಲಾ ಪ್ರಕಾರ ಯಾವುದೆ ಉದ್ದಿಮೆ ಪರವಾನಿಗೆಯ ಊರ್ಜಿತ ಅವಧಿಯು ಪ್ರತೀ ವರ್ಷದ ಮಾರ್ಚ್ ಅಂತ್ಯದವರೆಗೆ ಇರುತ್ತದೆ. ಆ ನಂತರ ನವೀಕರಣ ಮಾಡದೇ ಇದ್ದಲ್ಲಿ ಅಂತಹ ಉದ್ದಿಮೆ ಪರವಾನಿಗೆ ರದ್ದಾಗುವುದು ಎಂಬ ಉಲ್ಲೇಖವಿದೆ. ಆದರೆ ನಗರಸಭೆ ಅಧಿಕಾರಿಗಳು ಉದ್ಯಮ ಸ್ಥಗಿತಗೊಳಿಸಿದವರಿಗೂ ಪರವಾನಿಗೆ ಶುಲ್ಕ ಕಟ್ಟಬೇಕೆಂಬ ನೋಟೀಸ್ ನೀಡಿರುವುದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಬಾಹಿರವಾಗಿ ಪರವಾನಿಗೆ ಶುಲ್ಕವನ್ನು ವಸೂಲಿ ಬಾಕಿ ಎಂದು ಹಿಂದಿನ ಬಾಕಿಯ ಲೀಸ್ಟ್‌ನಲ್ಲಿ ಸೇರಿಸಿರುವ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗು ಈ ಕುರಿತು ನಗರಸಭೆಯಿಂದ ನೀಡಿರುವ ಶುಲ್ಕದ ನೋಟೀಸ್ ಅನ್ನು ವಾಪಾಸು ಪಡೆಯಬೇಕು. ನಮ್ಮ ಮನವಿಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪ್ರತಿಭಟನೆ ಅಥವಾ ಕಾನೂನು ರೀತಿಯ ಹೋರಾಟ ಮಾಡಲಾಗುವುದೆಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತೆ ವಿದ್ಯಾ ಕಾಳೆ ಅವರು ಮನವಿ ಸ್ವೀಕರಿಸಿದರು. ನಿಯೋಗದಲ್ಲಿ ಕಾಂಗ್ರೆಸ್ ಮುಖಂಡ ಮೌರೀಸ್ ಮಸ್ಕರನೇಸ್, ನಗರಸಭೆ ಸದಸ್ಯರಾದ ರಿಯಾಜ್ ಪರ್ಲಡ್ಕ, ಶೈಲಾ ಪೈ, ರಾಬಿನ್ ತಾವ್ರೋ, ದಿನೇಶ್ ಶೇವಿರೆ, ನಾಮನಿರ್ದೇಶಿ ಸದಸ್ಯ ರೋಶನ್ ರೈ ಬನ್ನೂರು, ಶರೀಪ್ ಬಲ್ನಾಡು, ನಗರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪೂಜಾರಿ ಮೊಟ್ಟೆತ್ತಡ್ಕ, ಪದಾಧಿಕಾರಿಗಳಾದ ಇಸ್ಮಾಯಿಲ್ ಬೊಳುವಾರು, ವಿಲ್ಫ್ರೆಡ್ ಫೆರ್ನಾಂಡಿಸ್ ಉರ್ಲಾಂಡಿ, ಬೆಳ್ಯಪ್ಪ ಪೂಜಾರಿ ಸೂತ್ರಬೆಟ್ಟು, ವಿಕ್ಟರ್ ಪಾಯ್ಸ್, ಸಾಹಿರಬಾನು ಬನ್ನೂರು, ಹರೀಶ್ ಆಚಾರ್ಯಕೃಷ್ಣನಗರ, ಮುಕೇಶ್ ಕೆಮ್ಮಿಂಜೆ, ಸೂಫಿ ಬಪ್ಪಳಿಗೆ, ಲೀನಾ ರೇಗೋ ಉಪಸ್ಥಿತರಿದ್ದರು.