ಕದ್ದ ಮತಗಳಿಂದ ಗೆದ್ದು ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರು ರಾಜೀನಾಮೆ ನೀಡಿ ಹೊಸ ಚುನಾವಣೆ ಎದುರಿಸಲಿ – ಅಮಳ ರಾಮಚಂದ್ರ

0

ಪುತ್ತೂರು: ಮತದಾರರ ಪಟ್ಟಿಯನ್ನು ತಿರುಚಿ, ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿ, ಕಳೆದ ಲೋಕಸಭಾ ಚುನಾವಣೆಯನ್ನು ಗೆದ್ದ ಬಿಜೆಪಿಯವರ ಹಗರಣವನ್ನು ಕಾಂಗ್ರೆಸ್ ಬಯಲಿಗೆಳೆದಿದೆ. ಹಾಗಾಗಿ ಕದ್ದ ಮತಗಳಿಂದ ಗೆದ್ದು ದೇಶದ ಪ್ರಧಾನಿಯಾದ ಮಾನ್ಯ ನರೇಂದ್ರ ಮೋದಿಯವರು ಒಂದು ಕ್ಷಣವು ಆ ಪದವಿಯಲ್ಲಿ ಇರುವುದಕ್ಕೆ ಅನರ್ಹರಾಗಿದ್ದು ಅವರು ತಕ್ಷಣ ರಾಜೀನಾಮೆಯನ್ನು ನೀಡಿ ಹೊಸದಾಗಿ ಚುನಾವಣೆಯನ್ನು ಎದುರಿಸಬೇಕೆಂದು ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮೊನ್ನೆ ಪತ್ರಿಕಾಗೋಷ್ಠಿ ನಡೆಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಐದು ವಿಧದಲ್ಲಿ ಓಟುಗಳ ಕಳ್ಳತನ ನಡೆದಿದೆ, ಚುನಾವಣಾ ಆಯೋಗವು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸುವ ಉದ್ದೇಶದಿಂದ ಈ ಕಳ್ಳತನವನ್ನು ಮಾಡಿದೆ. ಈ ಮತ ಕಳ್ಳತನದಲ್ಲಿ ಚುನಾವಣಾ ಆಯೋಗ ಮತ್ತು ಬಿಜೆಪಿ ಕೈಜೋಡಿಸಿ ಈ ದೇಶಕ್ಕೆ ಮತ್ತು ದೇಶದ ಪ್ರಜಾಪ್ರಭುತ್ವಕ್ಕೆ ದ್ರೋಹವನ್ನು ಎಸೆಗಿದೆ ಎಂದು ಆರೋಪಿಸಿದ್ದಾರೆ.

ಹತ್ತು ಹದಿನೈದು ಸೀಟುಗಳು ಕಡಿಮೆ ಬರುತ್ತಿದ್ದರೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಪುನರಾಯ್ಕೆಗೊಳ್ಳುತ್ತಿರಲಿಲ್ಲ, ಈ ಬಾರಿ ನರೇಂದ್ರ ಮೋದಿಯವರು ಓಟು ಕಳ್ಳತನವನ್ನು ನಡೆಸಿ ಪ್ರಧಾನಮಂತ್ರಿಯಾಗಿದ್ದಾರೆ ಎಂದು ದಾಖಲೆ ಸಮೇತ ಆರೋಪಿಸಿದ್ದಾರೆ. ರಾಹುಲ್ ಗಾಂಧಿಯವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಸಮೇತವಾಗಿ ಚುನಾವಣಾ ಆಯೋಗ ಮತ್ತು ಬಿಜೆಪಿಯ ಮೇಲೆ ಅತ್ಯಂತ ಗಂಭೀರವಾದ ಆರೋಪಗಳನ್ನು ಮಾಡಿದ ನಂತರ ಚುನಾವಣಾ ಆಯೋಗ ಮತ್ತು ಬಿಜೆಪಿ ನಡೆದುಕೊಳ್ಳುತ್ತಿರುವ ರೀತಿ ರಾಹುಲ್ ಗಾಂಧಿಯವರ ಆರೋಪವನ್ನು ಪುಷ್ಠೀಕರಿಸುತ್ತಿದೆ. ಇವತ್ತು ರಾಹುಲ್ ಗಾಂಧಿಯವರು ಚುನಾವಣಾ ಆಯೋಗದ ಮೇಲೆ ಈ ಗುರುತರ ಆರೋಪಗಳನ್ನು ಮಾಡಿದ ನಂತರ ಚುನಾವಣಾ ಆಯೋಗ ಮತ್ತು ಬಿಜೆಪಿ ಅತ್ಯಂತ ಅಸಂಬದ್ಧವಾಗಿ ಮತ್ತು ವಿಚಿತ್ರವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗ ಜಂಟಿಯಾಗಿ ನಡೆಸಿದ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಜನರ ಮುಂದಿಟ್ಟಿದ್ದಾರೆ. ವಿಶೇಷವೆಂದರೆ, ಬಿಜೆಪಿಯಾಗಲೀ ಚುನಾವಣಾ ಆಯೋಗವಾಗಲೀ , ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ ದಾಖಲೆಗಳು ನಕಲಿ ಎಂದು ಎಲ್ಲೂ ಹೇಳಿಲ್ಲ, ಆದರೆ ದಾಖಲೆ ಕೊಡಿ ಎಂದು ಮತ್ತೆ ಮತ್ತೆ ಕೇಳುತ್ತಿರುವುದು ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವಾಗಿದೆ. ರಾಹುಲ್ ಗಾಂಧಿಯವರ ಅರೋಪದ ನಂತರ ಇದೀಗ ಚುನಾವಣಾ ಆಯೋಗ ತನ್ನ ವೆಬ್‌ಸೈಟನ್ನು ಬಂದ್ ಮಾಡಿದ್ದು ಇದು ಇನ್ನಷ್ಟು ಓಟು ಕಳವಿನ ಮಾಹಿತಿ ಹೊರಬರದಂತೆ ತಡೆಯುವ ಪ್ರಯತ್ನವಾಗಿದೆ ಎಂದು ಅಮಳ ರಾಮಚಂದ್ರ ಹೇಳಿದರು.


ಪುರಾವೆ ನೀಡಿದರೂ ಜನರ ದಾರಿ ತಪ್ಪಿಸುವ ಯತ್ನ:
ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತಿಕ್ರಿಸಿದ ಚುನಾವಣಾ ಆಯೋಗ ಇದು ಆಧಾರರಹಿತ, ಬೇಜವಾಬ್ದಾರಿ ಹಾಗೂ ಅಸಂಬದ್ಧ ಎಂದು ಪ್ರತಿಕ್ರಿಯಿಸಿದೆ. ಇದರ ಜೊತೆಗೆ ಚುನಾವಣಾ ಆಯೋಗವು ರಾಹುಲ್ ಗಾಂಧಿಯವರಿಗೆ ತಾವು ಮಾಡಿದ ಈ ಆರೋಪಕ್ಕೆ ಪುರಾವೆಯನ್ನು ಒದಗಿಸಬೇಕು ಅಥವಾ ದೇಶದ ಮುಂದೆ ಕ್ಷಮೆಯನ್ನು ಯಾಚಿಸಬೇಕು ಎಂದು ಹೇಳಿರುವುದು ಮತ್ತು ರಾಹುಲ್ ಗಾಂಧಿಯವರು ಈ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಹೇಳಿರುವುದು ಕೂಡ ಅತ್ಯಂತ ಹಾಸ್ಯಾಸ್ಪದವಾದ ವಿಚಾರವಾಗಿದೆ. ಆದರೆ ಚುನಾವಣಾ ಆಯೋಗವೇ ನೀಡಿದ ಕಂತೆ ಕಂತೆ ಮತದಾರರ ಪಟ್ಟಿಯ ಪುರಾವೆಗಳನ್ನು ಪ್ರದರ್ಶಿಸಿದ ನಂತರ ಬೇರೆ ಇನ್ನಾವ ಪುರಾವೆಯನ್ನು ರಾಹುಲ್ ಗಾಂಧಿಯವರು ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ ಎಂದು ಹೇಳಿದ ಅಮಳ ರಾಮಚಂದ್ರ ಅವರು ರಾಹುಲ್ ಗಾಂಧಿಯವರ ಬಗ್ಗೆ ಅಸಂಬದ್ಧವಾಗಿ , ಹಗುರವಾಗಿ ಮತ್ತು ದೇಶದ ಜನರ ದಾರಿತಪ್ಪಿಸುವ ರೀತಿಯಲ್ಲಿ ಮಾತನಾಡಿರುವುದು ಅತ್ಯಂತ ನಾಚಿಕೆಗೇಡಿನ ಅಪರಾಧಿ ಕೃತ್ಯವಾಗಿದೆ ಎಂದು ಹೇಳಿದರು.


ಬಿಜೆಪಿ, ಚುನಾವಣಾ ಆಯೋಗದಿಂದ ದೇಶಕ್ಕೆ ದ್ರೋಹ:
ಬಿಜೆಪಿ ಮತ್ತು ಚುನಾವಣಾ ಆಯೋಗ ಪರಸ್ಪರ ಕೈಜೋಡಿಸಿ ದೇಶಕ್ಕೆ ದ್ರೋಹವನ್ನು ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಮತದಾರರ ಪಟ್ಟಿಯನ್ನು ತಿರುಚಿ, ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿ, ಕಳೆದ ಲೋಕಸಭಾ ಚುನಾವಣೆಯನ್ನು ಗೆದ್ದ ಬಿಜೆಪಿಯವರು ತದನಂತರ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಇದನ್ನು ಮುಂದುವರಿಸಿ ಮಹಾರಾಷ್ಟ್ರ ಚುನಾವಣೆಯನ್ನು ಗೆದ್ದಿದ್ದಾರೆ. ಇಡೀ ದೇಶದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈ ರೀತಿಯ ಚುನಾವಣಾ ಅಕ್ರಮ ನಡಿದಿರಬಹುದೆಂದು ಅಂದಾಜಿಸಲಾಗಿದ್ದು, ಕಾಂಗ್ರೆಸ್ ಪಕ್ಷ ಕೇಳಿದ ಡಿಜಿಟಲ್ ಮತದಾರರ ಪಟ್ಟಿಯನ್ನು ನೀಡದೆ ಚುನಾವಣಾ ಆಯೋಗವು ಕಾಗದ ಪತ್ರಗಳ ಮತದಾರರ ಪಟ್ಟಿಯನ್ನು ನೀಡಿ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದೆ. ಆದರೆ ಸುಮಾರು ಆರು ತಿಂಗಳಗಳುಗಳಿಗೂ ಹೆಚ್ಚು ಕಾಲ ಕರ್ನಾಟಕದ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ಪ್ರತಿ ಅಂಶಗಳನ್ನು ಗಮನಿಸಿ ಪರಿಶೀಲಿಸಿದ ಕಾಂಗ್ರೆಸ್ ಪಕ್ಷ ಈ ಹಗರಣವನ್ನು ಬಯಲಿಗೆಳೆದಿದೆ. ಕದ್ದ ಮತಗಳಿಂದ ಗೆದ್ದು ದೇಶದ ಪ್ರಧಾನಿಯಾದ ಮಾನ್ಯ ನರೇಂದ್ರ ಮೋದಿಯವರು ಒಂದು ಕ್ಷಣವು ಆ ಪದವಿಯಲ್ಲಿ ಇರುವುದಕ್ಕೆ ಅನರ್ಹರಾಗಿದ್ದು ಅವರು ತಕ್ಷಣ ರಾಜೀನಾಮೆಯನ್ನು ನೀಡಿ ಹೊಸದಾಗಿ ಚುನಾವಣೆಯನ್ನು ಎದುರಿಸಬೇಕೆಂದು ಆಗ್ರಹಿಸುತ್ತೇವೆ. ಈ ಚುನಾವಣೆಯ ಮತಗಳ ಪ್ರಕರಣದಲ್ಲಿ ಆಡಳಿತ ಪಕ್ಷದೊಂದಿಗೆ ಶಾಮೀಲಾಗಿ ದೇಶದ ಚುನಾವಣಾ ವ್ಯವಸ್ಥೆಯನ್ನೇ ಹಾಳುಗೆಡಹಿದ ಚುನಾವಣಾ ಆಯೋಗದ ಮುಖ್ಯಸ್ಥರು ರಾಜೀನಾಮೆಯನ್ನು ನೀಡಿ ಮನೆಗೆ ತೆರಳಿ ಸೂಕ್ತ ತನಿಖೆಯನ್ನು ಎದುರಿಸಬೇಕೆಂದು ಅಮಳ ರಾಮಚಂದ್ರ ತಿಳಿಸಿದರು.


ಜನರ ಹಕ್ಕನ್ನು ಕಸಿಯುವ ಪ್ರಯತ್ನ:
ಬ್ಲಾಕ್ ಕಾಂಗ್ರೆಸ್ ವಕ್ತಾರ ರವೀಂದ್ರ ನೆಕ್ಕಿಲು ಅವರು ಮಾತನಾಡಿ, ಕೇಂದ್ರ ಸರಕಾರ ಚುನಾವಣ ಆಯೋಗವನ್ನು ದುರುಪಯೋಗ ಪಡಿಸಿಕೊಂಡಿದೆ. ಆದರೆ ಸುಪ್ರೀಂ ಕೋರ್ಟ್ ಇದಕ್ಕೊಂದು ತಾರ್ಕಿಕವಾದ ಅಂತ್ಯ ನೀಡುತ್ತದೆ ಎಂಬ ನಂಬಿಕೆ ನಮಗಿದೆ. ಒಟ್ಟಿನಲ್ಲಿ ಜನರ ಹಕ್ಕನ್ನು ಕಸಿಯುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರೆ ಚಂದ್ರಪ್ರಭಾ, ನಿಹಾಲ್ ಪಿ ಶೆಟ್ಟಿ, ಪ್ರಧಾನಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here