ಮುಂಡೂರು ಗ್ರಾ.ಪಂ ಗ್ರಾಮ ಸಭೆ – ಗ್ರಾಮದಲ್ಲಿ ನಿವೇಶನ ರಹಿತರಿಗೆ ಜಾಗ ಕಾಯ್ದಿರಿಸಲು ಆಗ್ರಹ- ಎಲ್ಲ ಇಲಾಖಾಧಿಖಾರಿಗಳು ಸಭೆಗೆ ಬರಬೇಕು-ಗ್ರಾಮಸ್ಥರ ಒತ್ತಾಯ

0

ಪುತ್ತೂರು: ಮುಂಡೂರು ಗ್ರಾ.ಪಂ ಗ್ರಾಮ ಸಭೆ ಆ.11ರಂದು ಮುಂಡೂರು ಪ್ರಾ.ಕೃ.ಪ.ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹ ಕೇಂದ್ರದ ಮೇಲ್ವಿಚಾರಕ ವಿಷ್ಣುಪ್ರಸಾದ್ ಚರ್ಚಾನಿಯಂತ್ರಣಾಧಿಕಾರಿಯಾಗಿದ್ದರು.


ಮುಂಡೂರಿನಲ್ಲಿರುವ ಹಿಂದೂ ರುದ್ರಭೂಮಿಗೆ ಸಂಬಂಧಿಸಿದ ಕಾಮಗಾರಿಗಳು ಹಿಂದೆಯೇ ಆಗಿದ್ದರೂ ಕೂಡಾ ಅಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡದಿರುವ ಬಗ್ಗೆ ಗ್ರಾಮಸ್ಥ ರಮೇಶ್ ಗೌಡ ಪಜಿಮಣ್ಣು ವಿಷಯ ಪ್ರಸ್ತಾಪಿಸಿದರು. ರುದ್ರಭೂಮಿ ವಿಚಾರ ಕೋರ್ಟ್‌ನಲ್ಲಿದೆ ಎಂದು ಪಿಡಿಓ ಮನ್ಮಥ ಅಜಿರಂಗಳ ಹೇಳಿದರು. ರುದ್ರಭೂಮಿ ವಿಚಾರದಲ್ಲಿ ಕೋರ್ಟ್‌ಗೆ ಹೋದರೆ ಹಿಂದೂಗಳಿಗೆ ಅಂತ್ಯ ಸಂಸ್ಕಾರಕ್ಕೆ ರುದ್ರ ಭೂಮಿ ಬೇಡವೇ ಎಂದು ಎಂದು ರಮೇಶ್ ಗೌಡ ಪಜಿಮಣ್ಣು ಪ್ರಶ್ನಿಸಿದರು. ಗ್ರಾಮಸ್ಥ ಪ್ರಸಾದ್ ಕಣ್ಮಣಿ ಧ್ವನಿಗೂಡಿಸಿ ಮಾತನಾಡಿ ರುದ್ರಭೂಮಿ ಅವಶ್ಯಕವಾಗಿ ಬೇಕು, ಯಾವ ಧರ್ಮದವರಿಗಾದರೂ ಅವರವರ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡಲು ಸ್ಥಳ ಬೇಕು, ಅದರ ವಿರುದ್ಧ ಕೋರ್ಟ್‌ಗೆ ಹೋಗುವುದು ಸರಿಯಲ್ಲ ಎಂದರು.

ಪ್ರತೀ ಮನೆಯಿಂದಲೂ ತ್ಯಾಜ್ಯ ಶುಲ್ಕ ಪಡೆಯಬೇಕು:
ಪ್ರತೀ ಮನೆಯಿಂದಲೂ ತ್ಯಾಜ್ಯ ಸಂಗ್ರಹ ಮಾಡಬೇಕು. ಮತ್ತು ಒಂದೇ ರೀತಿಯ ಶುಲ್ಕ ನಿಗದಿ ಮಾಡಬೇಕು ಎಂದು ಗ್ರಾಮಸ್ಥ ಧನಂಜಯ ಕುಲಾಲ್ ಹೇಳಿದರು. ಗ್ರಾಮಸ್ಥ ಸುಪ್ರೀತ್ ಕಣ್ಣಾರಾಯ ಧ್ವನಿಗೂಡಿಸಿದರು. ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಉತ್ತರಿಸಿ ಮನೆ ತೆರಿಗೆ ಸಂಗ್ರಹಿಸುವ ಸಂದರ್ಭದಲ್ಲಿ ತ್ಯಾಜ್ಯ ಸಂಗ್ರಹದ ಹಣ ಪಡೆದುಕೊಳ್ಳುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ಕಲ್ಲು, ಹೊಯ್ಗೆ ಸಮಸ್ಯೆ ಬಿಗಡಾಯಿಸಿದೆ:
ಗ್ರಾಮಸ್ಥ ರಾಧಾಕೃಷ್ಣ ರೈ ರೆಂಜಲಾಡಿ ಮಾತನಾಡಿ ಕೆಂಪು ಕಲ್ಲು, ಹೊಯ್ಗೆ ಸಿಗದೇ ಜನರು ಕಂಗಾಲಾಗಿದ್ದಾರೆ, ಕಠಿಣ ಕ್ರಮದಿಂದ ಜನರಿಗೆ ಕೆಲಸ ಇಲ್ಲದಾಗಿ ಸಾಲ ಕಟ್ಟುವುದು ಹೇಗೆ ಎಂದು ಚಿಂತೆಯಲ್ಲಿದ್ದಾರೆ, ಕೆಂಪು ಕಲ್ಲು, ಹೊಯ್ಗೆಗೆ ದುಬಾರಿ ದರ ಆದರೆ ಖರೀದಿ ಮಾಡುವುದಾದರೂ ಹೇಗೆ ಎಂದು ಕೇಳಿದರು. ಸರ್ವೆ ಗ್ರಾಮದಲ್ಲೂ ಒಂದು ಬಾರಿ ಗ್ರಾಮ ಸಭೆ ಆಯೋಜನೆ ಮಾಡುವಂತೆ ಇದೇ ಸಂದರ್ಭದಲ್ಲಿ ರಾಧಾಕೃಷ್ಣ ರೈ ಮನವಿ ಮಾಡಿದರು.

ಕೆಂಪು ಕಲ್ಲನ್ನು ಗಣಿ ಇಲಾಖೆಗೆ ಸೇರಿಸಬೇಡಿ:
ಕೆಂಪು ಕಲ್ಲನ್ನು ಗಣಿ ಇಲಾಖೆ ಅಧಿನಕ್ಕೆ ಸೇರಿಸಿದ್ದು ಯಾಕೆ ಎಂದು ಗ್ರಾಮಸ್ಥ ಸ್ವಸ್ತಿಕ್ ಕೇಳಿದರು. ಕೆಂಪು ಕಲ್ಲು ದರ ಈಗಾಗಲೇ 52 ರೂ. ಆಗಿದ್ದು ಖರೀದಿಸಲು ಸಾಧ್ಯವೇ ಎಂದು ಕೇಳಿದರು. ಪ್ರಸಾದ್ ಕಣ್ಮನಿ ಹಾಗೂ ಧನಂಜಯ ಕುಲಾಲ್ ಧ್ವನಿಗೂಡಿಸಿದರು. ಗ್ರಾಮಸ್ಥ ಶಿವನಾಥ ರೈ ಮೇಗಿನಗುತ್ತು ಮಾತನಾಡಿ ಗಣಿ ಇಲಾಖೆಯ ವಿಚಾರ ತಾಲೂಕು, ಜಿಲ್ಲಾ ಮಟ್ಟದಲ್ಲಿ ಮಾತನಾಡಬೇಕೇ ವಿನಃ ಇಲ್ಲಿ ಮಾತನಾಡಿ ಪ್ರಯೋಜವಿಲ್ಲ ಎಂದು ಹೇಳಿದರು. ಪಿಡಿಓ ಮನ್ಮಥ ಉತ್ತರಿಸಿ ಈ ಬಗ್ಗೆ ನಿರ್ಣಯ ಮಾಡುವುದಾಗಿ ಹೇಳಿದರು.

ಸರ್ವೆ ಗ್ರಾಮದಲ್ಲಿ ಬಡವರಿಗೆ 10 ಎಕ್ರೆ ಜಾಗ ಕಾಯ್ದಿರಿಸಿ:
ನಿವೇಶನ ರಹಿತ ಬಡವರಿಗೆ ಸರ್ವೆ ಗ್ರಾಮದಲ್ಲಿ 10 ಎಕ್ರೆ ಜಾಗವನ್ನು ಕಾಯ್ದಿರಿಸಬೇಕು ಎಂದು ಶಿವನಾಥ ರೈ ಮೇಗಿನಗುತ್ತು ಆಗ್ರಹಿಸಿದರು. ಕೆಸಿಡಿಸಿಯವರು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಜಾಗ ಬಿಟ್ಟುಕೊಡುತ್ತಾರೆ, ಬಡವರಿಗೆ ನಿವೇಶನ ನೀಡಲು ಕೇಳಿದರೆ ಅವರಲ್ಲಿ ಜಾಗ ಇರುವುದಿಲ್ಲ, ಇನ್ನು ಗ್ರಾಮಸ್ಥರಾದ ನಾವೇ ಸೇರಿಕೊಂಡು ಜಾಗಕ್ಕೆ ಬೇಲಿ ಹಾಕಿ ಬಡವರಿಗೆ ಹಂಚಿಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಶಿವನಾಥ ರೈ ಹೇಳಿದರು. ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಉತ್ತರಿಸಿ ಬಡವರಿಗೆ ನಿವೇಶ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು. ಮುಂಡೂರು ಗ್ರಾಮದಲ್ಲೂ ನಿವೇಶನ ರಹಿತರಿಗೆ ಜಾಗ ಕಾಯ್ದಿರಿಸಲು ಕೆಲವರು ಆಗ್ರಹಿಸಿದರು. ನಂತರ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಸರಕಾರಿ ಜಾಗ ಅತಿಕ್ರಮಣ ಆರೋಪ:
ಸೊರಕೆಯಲ್ಲಿ ವ್ಯಕ್ತಿಯೋರ್ವರು ಸರಕಾರಿ ಜಾಗವನ್ನು ಕಬಳಿಸಿದ್ದಾರೆ ಎಂದು ಗ್ರಾಮಸ್ಥರಾದ ಸವಿತಾ ಆರೋಪಿಸಿದರು. ನಾವು ನಿವೇಶನಕ್ಕೆ 5 ಸೆಂಟ್ಸ್ ಜಾಗ ಕೇಳಿದರೆ ಸಿಗುವುದಿಲ್ಲ, ಉಳ್ಳವರು ಎಷ್ಟು ಜಾಗ ಕಬಳಿಕೆ ಮಾಡಿದರೂ ನೀವು ಮಾತನಾಡುವುದಿಲ್ಲ, ಅಲ್ಲಿ ನೆಟ್ಟ ಗಿಡಗಳನ್ನು ನೀವು ತೆಗೆಯದಿದ್ದರೆ ನಾವೂ ಅಲ್ಲಿ ಗಿಡ ನೆಡುತ್ತೇವೆ ಎಂದು ಅವರು ಹೇಳಿದರು. ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಉತ್ತರಿಸಿ ನಾವು ಅಲ್ಲಿ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯ ಮಾಡಿದ್ದೇವೆ ಎಂದು ಹೇಳಿದರು.

ಮುಂಡೂರಿನಲ್ಲಿ ಪ್ರೌಢ ಶಾಲೆ ಪ್ರಾರಂಭಿಸಿ:
ಮುಂಡೂರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಈಗ 8ನೇ ವರೆಗೆ ತರಗತಿಯಿದ್ದು ಅಲ್ಲಿ ಪ್ರೌಢ ಶಾಲೆಯನ್ನು ಆರಂಭಿಸಬೇಕು ಎಂದು ಪ್ರಸಾದ್ ಕಣ್ಮನಿ ಆಗ್ರಹಿಸಿದರು.

ಅರಣ್ಯದೊಳಗೆ ಹಣ್ಣು ಹಂಪಲು ಗಿಡ ನಡಬೇಕು:
ಅರಣ್ಯದೊಳಗೆ ಹಣ್ಣು ಹಂಪಲು ಗಿಡಗಳನ್ನು ನೆಡುವ ಯೋಜನೆ ಮಾಡಬೇಕೆಂದು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಅರಣ್ಯ ಇಲಾಖಾಧಿಕಾರಿಗೆ ಸಲಹೆ ನೀಡಿದರು. ಹಲಸು, ಮಾವು, ನೆಲ್ಲಿಕಾಯಿ ಮತ್ತಿತರ ಹಣ್ಣು ಹಂಪು ಗಿಡಗಳನ್ನು ಅರಣ್ಯದಲ್ಲಿ ನೆಡಬೇಕು, ಆಗ ಪ್ರಾಣಿಗಳಿಗೆ ಕಾಡಿನಲ್ಲಿ ಆಹಾರ ಸಿಗುತ್ತದೆ ಮತ್ತು ಮತ್ತು ಅವುಗಳು ನಾಡಿಗೆ ಬರುವುದು ಕೂಡಾ ತಪ್ಪುತ್ತದೆ ಎಂದು ಅವರು ಹೇಳಿದರು.

ಇಲಾಖಾಧಿಕಾರಿಗಳೆಲ್ಲ ಸಭೆಗೆ ಬರಬೇಕು:
ಗ್ರಾಮ ಸಭೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಬರುವುದಿಲ್ಲ ಎಂದಾದರೆ ಕಾಟಾಚಾರಕ್ಕೆ ಗ್ರಾಮ ಸಭೆ ಮಾಡುವ ಉದ್ದೇಶವೇನು ಎಂದು ರಾಧಾಕೃಷ್ಣ ರೈ ಪ್ರಶ್ನಿಸಿದರು. ಮುಂದಿನ ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಬರಬೇಕು ಎಂದು ಅವರು ಹೇಳಿದರು. ಗ್ರಾಮಸ್ಥರು ಧ್ವನಿಗೂಡಿಸಿದರು.

ಬೀದಿ ನಾಯಿ ಪ್ರಾಬ್ಲಂ:
ಗ್ರಾಮದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು ಏನಾದರೊಂದು ಕಡಿವಾಣ ಹಾಕಬೇಕಾದ ಅವಶ್ಯಕತೆಯಿದೆ ಎಂದು ರಾಧಾಕೃಷ್ಣ ರೈ ರೆಂಜಲಾಡಿ ಹಾಗೂ ಧನಂಜಯ ಕುಲಾಲ್ ಹೇಳಿದರು.
ಗ್ರಾಮಸ್ಥರಾದ ಅನಿಲ್ ಕಣ್ಣಾರ್ನೂಜಿ, ಬಾಲಚಂದ್ರ ಗೌಡ ಕಡ್ಯ, ಗೌತಮ್ ಸರ್ವೆ ಮತ್ತಿತರರು ಬೇರೆ ಬೇರೆ ಚರ್ಚೆಯಲ್ಲಿ ಭಾಗಿಯಾದರು.

ಅರ್ಧದಲ್ಲಿ ಮೊಟಕುಗೊಂಡ ಗ್ರಾಮ ಸಭೆಯ ಬಗ್ಗೆ ಮಾತಿನ ಚಕಮಕಿ:
ಕಳೆದ ಬಾರಿ ಅರ್ಧದಲ್ಲಿ ಮೊಟಕುಗೊಂಡ ಗ್ರಾಮ ಸಭೆಯನ್ನು ವಾಪಸ್ ಯಾಕೆ ನಡೆಸಿಲ್ಲ ಎಂದು ಸುಪ್ರೀತ್ ಕಣ್ಣಾರಾಯ ಪ್ರಶ್ನಿಸಿದರು. ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಉತ್ತರಿಸಿ ಮೂರು-ನಾಲ್ಕು ಮಂದಿಗೆ ಬೇಕಾಗಿ ಗ್ರಾಮ ಸಭೆಯನ್ನು ಬೇಕಾದ ಹಾಗೆ ಮಾಡಲು ಆಗುವುದಿಲ್ಲ, ನೀವು ಶ್ರದ್ಧಾಂಜಲಿ ಸಲ್ಲಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದೀರಿ ಅಲ್ವಾ? ಮತ್ತೆ ನಿಮಗೆ ಗ್ರಾಮ ಸಭೆ ಯಾಕೆ ಎಂದು ಕೇಳಿದರು. ಸದಸ್ಯ ಕಮಲೇಶ್ ಮಾತನಾಡಿ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಬಗ್ಗೆಯೂ ಅಪಪ್ರಚಾರ ಮಾಡ್ತಾರೆ ಅದನ್ನು ಇಲ್ಲಿ ಹೇಳುವುದು ಸರಿಯಲ್ಲ ಎಂದರು. ಸುಪ್ರೀತ್ ಕಣ್ಣಾರಾಯ ಮಾತನಾಡಿ ಜವಾಬ್ದಾರಿ ಸ್ಥಾನದಲ್ಲಿರುವ ಅಧ್ಯಕ್ಷರು ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ, ಅಧ್ಯಕ್ಷರು ಉಡಾಫೆ ಉತ್ತರ ನೀಡುವುದು ಬಿಟ್ಟು ಸಮರ್ಪಕ ಉತ್ತರ ನೀಡಿ, ನಿಮಗೆ ತೋಚಿದ ಹಾಗೆ ಮಾಡಲು ನೀವೇನು ಹಿಟ್ಲರಾ ಎಂದು ಕೇಳಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷರು ನಾನು ಯಾರೆಂದು ಗ್ರಾಮದ ಜನರಿಗೆ ಗೊತ್ತಿದೆ, ಅನಗತ್ಯವಾಗಿ ಇಲ್ಲಿ ಮಾತನಾಡಬೇಡಿ, ಸಭೆಯನ್ನು ಹಾಳು ಮಾಡುವುದೇ ನಿಮ್ಮ ಉದ್ದೇಶ, ಹಿಂದೆಯೂ ಅದನ್ನೇ ಮಾಡಿದ್ದೀರಿ, ನಿಮ್ಮ ಎಲ್ಲಾ ಪ್ರಶ್ನೆಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ ಮತ್ತು ಸುಪ್ರೀತ್ ಕಣ್ಣಾರಾಯ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಣ-ಚಂದ್ರಶೇಖರ ಎನ್‌ಎಸ್‌ಡಿ
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಮಾತನಾಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಪ್ರಯತ್ನಿಸುತ್ತಿದ್ದು ಗ್ರಾಮದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ, ಸ್ವಚ್ಛತೆ, ಮನೆ ತೆರಿಗೆ ವಿಚಾರದಲ್ಲಿ ಗ್ರಾಮಸ್ಥರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು. ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ, ಗ್ರಾಮ ಸಭೆಯಲ್ಲಿ ಆದ ವಿಚಾರಗಳನ್ನು ಸಾಮಾನ್ಯ ಸಭೆಯಲ್ಲಿದ್ದು ಆಯಾ ಇಲಾಖೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ, ಕರುಣಾಕರ ಗೌಡ ಎಲಿಯ, ಅಶೋಕ್ ಕುಮಾರ್ ಪುತ್ತಿಲ, ಬಾಬು ಕಲ್ಲಗುಡ್ಡೆ, ಉಮೇಶ್ ಗೌಡ ಅಂಬಟ, ಮಹಮ್ಮದ್ ಆಲಿ, ಬಾಲಕೃಷ್ಣ ಪೂಜಾರಿ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ದುಗ್ಗಪ್ಪ ಕಡ್ಯ, ರಸಿಕಾ ರೈ ಮೇಗಿನಗುತ್ತು, ಅರುಣಾ ಕಣ್ಣಾರ್ನೂಜಿ, ಪುಷ್ಪಾ ಎನ್, ಕಾವ್ಯ ಕಡ್ಯ, ದೀಪಿಕಾ ಕಲ್ಲಗುಡ್ಡೆ, ಸುನಂದ ಬೊಳ್ಳಗುಡ್ಡೆ, ವಿಜಯ ಕರ್ಮಿನಡ್ಕ ಉಪಸ್ಥಿತರಿದ್ದರು. ಕಾರ್ಯದರ್ಶಿ ಸೂರಪ್ಪ ವರದಿ ವಾಚಿಸಿದರು. ಪಿಡಿಓ ಮನ್ಮಥ ಅಜಿರಂಗಳ ಸ್ವಾಗತಿಸಿದರು. ಸಿಬ್ಬಂದಿ ಶಶಿಧರ ಕೆ ಮಾವಿನಕಟ್ಟೆ ಸಭೆ ನಿರ್ವಹಿಸಿದರು. ಸಿಬ್ಬಂದಿಗಳಾದ ಸತೀಶ ಹಿಂದಾರು, ಸತೀಶ ಕೆ, ಕವಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here