ಬಂಟ್ವಾಳ ತಾಲೂಕು ಕಚೇರಿಯ ಉಪತಹಶೀಲ್ದಾರ್ ಸಹಿತ ಮೂವರು ಲೋಕಾಯುಕ್ತ ಬಲೆಗೆ

0

ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದಾಗ ಅಧಿಕಾರಿಗಳ ದಾಳಿ


ವಿಟ್ಲ:
ಪೌತಿ ಖಾತೆ ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ, ಬಂಟ್ವಾಳ ತಾಲೂಕು ಕಚೇರಿಯ ಉಪತಹಶೀಲ್ದಾರ್ ಸಹಿತ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ತಹಶೀಲ್ದಾರ್ ಪಾತ್ರ ಇದೆಯೇ ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


ಬಂಟ್ವಾಳ ತಾಲೂಕು ಕಚೇರಿಯ ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಹಾಗೂ ಮಧ್ಯವರ್ತಿ ವಾಮದಪದವು ಗಣೇಶ್ ಎಂಬವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.


ಸಜೀಪಮುನ್ನೂರಿನ ಪುಷ್ಪರಾಜ್ ಎಂಬವರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಬಿ.ಸಿ.ರೋಡಿನ ದೇವಸ್ಥಾನವೊಂದರ ಬಳಿ ಮಧ್ಯವರ್ತಿಯ ಮೂಲಕ ಹಣ ವ್ಯವಹಾರ ನಡೆಯುವ ಸಂದರ್ಭದಲ್ಲಿ ಈ ಕಾರ್ಯಾಚರಣೆ ನಡೆದಿದೆ.


ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ರವರು ಬ್ರೋಕರ್ ಗಣೇಶ್ ವಾಮದಪದವು ರವರ ಮುಖಾಂತರ ರೂ 20,೦೦೦ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್, ಕೇಸ್ ವರ್ಕರ್ ಸಂತೋಷ್, ಬ್ರೋಕರ್ ಗಣೇಶ್ ವಾಮದಪದವು ರವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ದೂರುದಾರರು ನೀಡಿದ ದೂರಿನಲ್ಲಿ ಏನಿದೆ..? :
ಸಜೀಪಮುನ್ನೂರಿನ ಪುಷ್ಪರಾಜ್‌ರವರು ದೂರುದಾರರಾಗಿದ್ದು, ‘ನನ್ನ ತಾಯಿಯ ಪೌತಿ ಖಾತೆಯ ವಿಚಾರವಾಗಿ 2021 ನೇ ಇಸವಿಯಲ್ಲಿ ಬಂಟ್ವಾಳ ತಾಲೂಕು ಕಛೇರಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದು ಜಿಲ್ಲಾಧಿಕಾರಿಯವರ ನ್ಯಾಯಾಲಯವು ಜಮೀನು ಮಂಜೂರಾತಿ ಆದೇಶವನ್ನು ಪುರಸ್ಕರಿಸಿದೆ. ಜಿಲ್ಲಾಧಿಕಾರಿಯವರ ನ್ಯಾಯಾಲಯದ ಆದೇಶದಂತೆ ಸಹಾಯಕ ಆಯುಕ್ತರ ನ್ಯಾಯಾಲಯ, ಸಜೀಪ ಮುನ್ನೂರು ಗ್ರಾಮದ ಸರ್ವೆ ನಂಬ್ರ 102/1 ರಲ್ಲಿ ನಮ್ಮ ಪೌತಿ ಖಾತೆ ಮಾಡಿ ಕೊಡಲು ತಹಶೀಲ್ದಾರ್ ಬಂಟ್ವಾಳರವರಿಗೆ ಆದೇಶ ನೀಡಿದ್ದು, ಸದರಿ ಫೈಲನ್ನು ಎಪ್ರಿಲ್ 2025 ರಿಂದ ಬಂಟ್ವಾಳ ತಹಶೀಲ್ದಾರ್ ಕಛೇರಿಯಲ್ಲಿ ಬಾಕಿ ಇಟ್ಟುಕೊಂಡಿದ್ದರು. ಈ ಬಗ್ಗೆ ಬಂಟ್ವಾಳ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ಮತ್ತು ಕೇಸ್ ವರ್ಕರ್ ಸಂತೋಷ್ ರವರಲ್ಲಿ ವಿಚಾರಿಸಿದಾಗ ಪೌತಿ ಖಾತೆ ಕೆಲಸದ ಕೇಸ್ ವರ್ಕರ್ ಸಂತೋಷ್‌ರವರು, ಪೌತಿ ಖಾತೆ ಮಾಡಲೂ ರೂ 1500 ಹಾಗೂ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ರವರು ಖಾತೆ ಮಾಡಿಕೊಡಲು ತಹಶೀಲ್ದಾರರಿಗೆ ರೂಪಾಯಿ 20000 ನೀಡಬೇಕು ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಿ ಸಜೀಪಮುನ್ನೂರಿನ ಪುಷ್ಪರಾಜ್‌ರವರು ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಂಟ್ವಾಳ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ರವರು ಮತ್ತು ಕೇಸ್ ವರ್ಕರ್ ಸಂತೋಷ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ರವರ ಮಾರ್ಗದರ್ಶನದಲ್ಲಿ, ಡಿವೈಎಸ್ ಪಿ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಇನ್ಸ್ ಪೆಕ್ಟರ್ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.ತಹಶೀಲ್ದಾರ್ ಪಾತ್ರದ ಕುರಿತು ತನಿಖೆ ಪ್ರಕರಣದ ವಿಚಾರಣೆ ವೇಳೆ ತಹಶಿಲ್ದಾರ್ ಅರ್ಚನಾ ಭಟ್ ರವರ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಉಪತಹಶೀಲ್ದಾರ್ ಸಹಿತ ಮೂವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತಹಸೀಲ್ದಾರರ ಪಾತ್ರದ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here