ಕಿರುಚಿತ್ರ ರಂಗದಲ್ಲೊಂದು ಸಂಚಲನ…

0

ಹಾಡಿನ ಮೂಲಕವೇ ದೇಶ ಭಕ್ತಿಯ ರೋಚಕ ಕಥೆ ಹೇಳ ಹೊರಟಿದೆ ಜನ್ಮ ಕ್ರಿಯೇಷನ್ಸ್ ಪುತ್ತೂರು ಅರ್ಪಣೆಯ ‘ ನಮಸ್ತೆ ಸಿಂಧೂರ…’
ನಾಳೆ(ಆ.15) ಬಿಡುಗಡೆ

ಪುತ್ತೂರು: ಇಂಡಿಯಾ ಬುಕ್ ಆಫ್ ರೆಕಾಡ್ಸ್ ಪ್ರೊಡಕ್ಷನ್ ಹೌಸ್ ಜನ್ಮ ಕ್ರಿಯೇಷನ್ಸ್ ಪುತ್ತೂರು ಈ ವರ್ಷದ 79 ನೇ ಸ್ವಾತಂತ್ರ್ಯೋತ್ಸವಕ್ಕೆ ಮತ್ತೊಂದು ವಿಭಿನ್ನ ಶೈಲಿಯ ಕಿರುಚಿತ್ರವನ್ನು ಅರ್ಪಣೆ ಮಾಡುತ್ತಿದೆ. ಪಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆದೇಶದಂತೆ ‘ಅಪರೇಷನ್ ಸಿಂಧೂರ’ ಎಂಬ ಹೆಸರಿನಲ್ಲಿ ನಮ್ಮ ಸೈನಿಕರು ಕಾರ್ಯಾಚರಣೆ ನಡೆಸಿ ಉಗ್ರರ ಹೆಡೆಮುರಿ ಕಟ್ಟಿದ್ದು ನಮಗೆಲ್ಲರಿಗೂ ತಿಳಿದ ವಿಚಾರವಾಗಿದೆ. ಇದೇ ವಿಷಯವನ್ನು ಇಟ್ಟುಕೊಂಡು ಮಹಿಳೆಯರ ಸಿಂಧೂರಕ್ಕೆ ಗೌರವ ಸಲ್ಲಿಸುವ ಸಲುವಾಗಿ ಒಂದು ಹಾಡಿನ ಮೂಲಕ ಕಥೆಯನ್ನು ಹೇಳುವ ಪ್ರಯತ್ನವನ್ನು ‘ನಮಸ್ತೆ ಸಿಂಧೂರ’ದಲ್ಲಿ ತೋರಿಸಲಾಗಿದೆ.

ಜನ್ಮ ಕ್ರಿಯೇಷನ್ಸ್ ಪುತ್ತೂರು ಅರ್ಪಣೆಯೊಂದಿಗೆ ಡಾ.ಹರ್ಷ ಕುಮಾರ್ ರೈ ಮಾಡಾವುರವರ ನಿರ್ಮಾಣ, ರಝಾಕ್ ಪುತ್ತೂರುರವರ ಪರಿಕಲ್ಪನೆ, ಚಿತ್ರಕಥೆ, ನಿರ್ದೇಶನವಿದೆ. ಮುಖ್ಯಪಾತ್ರದಲ್ಲಿ ಶರತ್ ಆಳ್ವ ಕೂರೇಲು, ವೆನ್ಯಾ ರೈ ಮಾಣಿ ಕಾಣಿಸಿಕೊಂಡಿದ್ದಾರೆ. ಅರುಣ್ ರೈ ಪುತ್ತೂರುರವರ ಛಾಯಾಗ್ರಹಣ, ಯತೀಶ್ ಕುಲಾಲ್, ಅಭಿಲಾಷ್‌ರವರು ಕ್ಯಾಮರ ಸಹಾಯಕರಾಗಿ ಸಹಕರಿಸಿದ್ದಾರೆ. ಜಯ ಕಾರ್ತಿಕ್‌ರವರ ಸಂಗೀತವಿದ್ದು ಗಾಯಕರುಗಳಾಗಿ ಯಶ್ವಂತ್ ಎಂ.ಜಿ, ಸುಸ್ಮಿತಾ ಎಸ್ ಪಾಟಾಳಿ ಧ್ವನಿಗೂಡಿಸಿದ್ದಾರೆ. ಶಿವಮ್ ಕ್ರಿಯೇಷನ್ಸ್ ಸಂಕಲನ, ಇನ್‌ಫಿನಿಟಿ ಪಾರ್ಲರ್ ಪುತ್ತೂರು ಮೆಕಪ್, ಪ್ರಸನ್ನ ರೈ ಮಜಲುಗದ್ದೆ ಪೋಸ್ಟರ್ ಡಿಸೈನ್‌ನಲ್ಲಿ ಸಹಕರಿಸಿದ್ದಾರೆ.


ಜನ್ಮ ಕ್ರಿಯೇಷನ್ಸ್ ಸಂಸ್ಥೆ
ಡಾ. ಹರ್ಷ ಕುಮಾರ್ ರೈ ಮಾಡಾವುರವರ ಜನ್ಮ ಕ್ರಿಯೇಷನ್ಸ್ ಸಂಸ್ಥೆ ಹೊಸ ಪ್ರತಿಭೆಗಳನ್ನು ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ವೇದಿಕೆ ಕೊಟ್ಟು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ದೇಶಾಭಿಮಾನ ಜೊತೆಗೆ ದೇಶಭಕ್ತಿ ಸಾರುವ ಮತ್ತು ಭಕ್ತಿ ಗೀತೆಗಳ ಹಲವು ಕಿರುಚಿತ್ರಗಳು, ಆಲ್ಬಮ್ ಹಾಡು ಮತ್ತು ಧ್ವನಿ ಮುದ್ರಿಕೆ ಗಳನ್ನು ನಿರ್ಮಾಣ ಮಾಡಿ ದೇಶ ವಿದೇಶಗಳಲ್ಲಿ ಬಿಡುಗಡೆಗೊಳಿಸಿದ ಕೀರ್ತಿ ಜನ್ಮ ಕ್ರಿಯೇಷನ್ಸ್ ಸಂಸ್ಥೆಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿ ಜಾಗತಿಕ ಹಿಂದೂ ಫೌಂಡೇಶನ್ ನಿಂದ ಪ್ರಶಂಸೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ತ್ರಿವರ್ಣ, ಜೈ ಭಾರತಾಂಬೆ ಹಾಗೂ ಅಷ್ಟ ಕ್ಷೇತ್ರ ಗಾನ ವೈಭವ ಇತ್ಯಾದಿ ಹಲವು ಕಿರುಚಿತ್ರಗಳು ಇದರ ಮೂಲಕ ನಿರ್ಮಾಣಗೊಂಡಿವೆ.ಪ್ರತಿ ವರ್ಷ, ಆ. 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಈ ಕೃತಿಗಳನ್ನು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ, ಸಂಸತ್ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರ ಗಣ್ಯ ಅತಿಥಿಗಳು ಬಿಡುಗಡೆ ಮಾಡಿದ್ದಾರೆ.


ನಮಸ್ತೆ ಸಿಂಧೂರ…
ಹಾಡಿನ ಮೂಲಕವೇ ರೋಚಕ ಕಥೆ ಹೇಳುತ್ತೆ…

ಡಾ.ಹರ್ಷ ಕುಮಾರ್ ರೈಯವರ ನಿರ್ಮಾಣದಲ್ಲಿ ಮೂಡಿಬಂದಿರುವ ‘ನಮಸ್ತೆ ಸಿಂಧೂರ’ ಕಿರುಚಿತ್ರವು ಒಂದು ಹಾಡಿನ ರೂಪದಲ್ಲಿ ಮೂಡಿಬಂದಿರುವ ಕಥೆಯಾಗಿದೆ. ಸುಮಾರು 5 ನಿಮಿಷಗಳ ಅವಧಿಯ ಈ ಕಿರುಚಿತ್ರವು ಅಪರೇಷನ್ ಸಿಂಧೂರದ ಹಿನ್ನೆಲೆಯನ್ನು ಇಟ್ಟುಕೊಂಡು ಮಹಿಳೆಯರ ಸಿಂಧೂರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ತಯಾರಾಗಿದ್ದು ಪ್ರಾರಂಭದಿಂದ ಕೊನೆತನಕ ಹಲವು ಸಸ್ಪೆನ್ಸ್‌ಗಳಿಂದ ಕೂಡಿದೆ. ದೇಶಭಕ್ತಿಯೊಂದಿಗೆ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ಒಂದು ವಿಭಿನ್ನ ಶೈಲಿಯ ಕಥೆಯನ್ನು ಹೊಂದಿದೆ. ಅರುಣ್ ರೈಯವರ ಅದ್ಭುತ ಛಾಯಾಗ್ರಹಣ, ಮನಮುಟ್ಟುವ ಸಂಗೀತ, ಸಾಹಿತ್ಯ, ಮೈರೋಮಾಂಚನಗೊಳ್ಳುವ ದೃಶ್ಯಗಳು ಚಿತ್ರದಲ್ಲಿದೆ. ಈ ಕಿರುಚಿತ್ರವು ಪುತ್ತೂರಿನ ನೈತಾಡಿ, ವಿವೇಕಾನಂದ ಕಾಲೇಜು ಆವರಣ, ಮಾಣಿ, ಮಂಗಳೂರು ಸರಿಪಲ್ಲ, ಪಡೀಲ್, ಸೋಮೇಶ್ವರ ಬೀಚ್ ಇತ್ಯಾದಿ ಕಡೆಗಳಲ್ಲಿ ಚಿತ್ರೀಕರಣಗೊಂಡಿದೆ.


ನಾಳೆ ಬಿಡುಗಡೆ
ಹಾಡಿನ ಮೂಲಕವೇ ದೇಶಭಕ್ತಿಯ ಕಥೆ ಹೇಳಲು ಹೊರಟಿರುವ ‘ನಮಸ್ತೆ ಸಿಂಧೂರ’ 79 ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿನೊಂದಿದೆ ಆ.15 ರಂದು ಬಿಡುಗಡೆಗೊಳ್ಳುತ್ತಿದ್ದು ಮುಂದೆ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ ಎಂದು ನಿರ್ಮಾಪಕರಾದ ಡಾ.ಹರ್ಷ ಕುಮಾರ್ ರೈಯವರು ತಿಳಿಸಿದ್ದಾರೆ.

‘ ಈ ಚಿತ್ರವು ನಮ್ಮ ದೇಶದ ಸಶಸ್ತ್ರ ಪಡೆಗಳು ಪ್ರತಿಕೂಲ ರಾಷ್ಟ್ರಕ್ಕೆ ನಿರ್ಣಾಯಕ ಹೊಡೆತ ನೀಡಿದ ಆಪರೇಷನ್ ಸಿಂಧೂರ್ ವಿಜಯೋತ್ಸವದಿಂದ ಸ್ಫೂರ್ತಿ ಪಡೆದಿದೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ಈ ವಿಜಯೋತ್ಸವ ಕಾರ್ಯಾಚರಣೆಯನ್ನು ನಮ್ಮ ದೇಶದ ಮಹಿಳೆಯರು ಮತ್ತು ತಾಯಂದಿರಿಗೆ ಅರ್ಪಿಸಿದ್ದಾರೆ. “ನಮಸ್ತೆ ಸಿಂಧೂರ್” ಎಂಬ ಶೀರ್ಷಿಕೆಯು ಮಹಿಳೆಯರ ಹಣೆಯನ್ನು ಅಲಂಕರಿಸುವ ಸಿಂಧೂರಕ್ಕೆ ಸಾಂಕೇತಿಕವಾಗಿ ವಂದಿಸುತ್ತದೆ. ಗೌರವವನ್ನು ಪ್ರತಿನಿಧಿಸುತ್ತದೆ. ನಿಮ್ಮೆಲ್ಲರ ಸಹಕಾರ ಇರಲಿ.’
ಡಾ.ಹರ್ಷ ಕುಮಾರ್ ರೈ ಮಾಡಾವು, ಅಧ್ಯಕ್ಷರು ಜನ್ಮ ಕ್ರಿಯೇಷನ್ಸ್ ಪುತ್ತೂರು

LEAVE A REPLY

Please enter your comment!
Please enter your name here