ಪುತ್ತೂರು: ಪಂಜಳ-ಪರ್ಪುಂಜ ರಸ್ತೆಯ ಅಜ್ಜಿಕಟ್ಟೆ ಎಂಬಲ್ಲಿ ರಸ್ತೆ ಅಪಾಯಕಾರಿ ತಿರುವು ಹೊಂದಿದ್ದು ಅನೇಕ ಅಪಘಾತಗಳಿಗೆ ಕಾಣವಾಗಿದೆ, ಹಾಗಾಗಿ ತಿರುವು ರಸ್ತೆ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕೆಂದು ಸ್ಥಳಿಯರು ಮತ್ತು ವಾಹನ ಸವಾರರು ಆಗ್ರಹಿಸಿದ್ದಾರೆ.
ಅಜ್ಜಿಕಟ್ಟೆ ಮಸೀದಿಯ ಬಳಿ ರಸ್ತೆ ತೀರಾ ಅಪಾಯಕಾರಿ ಸ್ಥಿತಿಯಲ್ಲಿ ತಿರುವನ್ನು ಹೊಂದಿದ್ದು ಇಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್‌ನ್ನು ಅಳವಡಿಸಲಾಗಿದೆ, ಆದರೂ ಇಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದೆ, ಪಂಜಳ ಕಡೆಯಿಂದ ಕುರಿಯ, ಪರ್ಪುಂಜ ಕಡೆಗೆ ಹೋಗುವ ವಾಹನಗಳಿಗೆ ಇಲ್ಲಿನ ಅಪಾಯಕಾರಿ ಇಳಿಜಾರು ತಿರುವು ತಕ್ಷಣಕ್ಕೆ ಗೋಚರಿಸದೇ ಇರುವ ಪರಿಣಾಮ ಅನೇಕ ವಾಹನಗಳು ಇಲ್ಲಿ ಪಲ್ಟಿಯಾಗಿದೆ, ರಾತ್ರಿ ವೇಳೆಯಂತೂ ಇದು ಇನ್ನಷ್ಟು ಅಪಾಯಕಾರಿಯಾಗಿದೆ. ಇತ್ತೀಚೆಗೆ ಇಲ್ಲಿ ದ್ವಿಚಕ್ರ ವಾಹನಗಳು, ಆಟೋ ರಿಕ್ಷಾ, ಆಪೆ ರಿಕ್ಷಾ ಸೇರಿದಂತೆ ಅನೇಕ ವಾಹನಗಳು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿನ ರಸ್ತೆಯ ತಿರುವನ್ನು ಬದಲಾಯಿಸಿ ರಸ್ತೆಯನ್ನು ನೇರವಾಗಿ ಮಾಡಬೇಕು ಇಲ್ಲವೇ ತಾತ್ಕಾಲಿಕವಾಗಿ ಇಲ್ಲಿ ಹಂಪ್ಸ್ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಇಲ್ಲಿನ ಅಪಾಯಕಾರಿ ತಿರುವಿನ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನಹರಿಸುವ ಮೂಲಕ ಭವಿಷ್ಯದಲ್ಲಿ ಸಂಭವಿಸಬಹುದಾದ ಸಂಭಾವ್ಯ ಅಪಘಾತಗಳನ್ನು ತಪ್ಪಿಸಬೇಕಾಗಿದೆ ಎನ್ನುವ ಆಗ್ರಹ ಕೇಳಿ ಬಂದಿದೆ.
ಅಜ್ಜಿಕಟ್ಟೆ ಮಸೀದಿ ಬಳಿಯ ತಿರುವ ರಸ್ತೆಯಲ್ಲಿ ಅನೇಕ ಅಪಘಾತಗಳು ನಡೆಯುತ್ತಿದ್ದು ಹಲವು ವಾಹನಗಳು ಇಲ್ಲಿ ಪಲ್ಟಿಯಾಗಿದೆ ಹಾಗಾಗಿ ಇದಕ್ಕೊಂದು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸ್ಥಳೀಯರಾದ ಮುಸ್ತಫಾ ಅಜ್ಜಿಕಟ್ಟೆ ತಿಳಿಸಿದ್ದಾರೆ.
ಅಜ್ಜಿಕಟ್ಟೆ ತಿರುವು ತೀರಾ ಅಪಾಯಕಾರಿಯಾಗಿದ್ದು ಪ್ರತಿನಿತ್ಯ ಇದೇ ರಸ್ತೆಯಾಗಿ ಬಾಡಿಗೆ ಮಾಡುವ ಆಟೋ ಚಾಲಕರಿಗೂ ಇದು ಸಮಸ್ಯೆಯಾಗಿದೆ, ಇಲ್ಲಿ ಅನೇಕ ಅಪಘಾತ ಪ್ರಕರಣಗಳನ್ನು ನಾವು ನೋಡಿದ್ದೇವೆ, ತೀರಾ ಅಪಾಯಕಾರಿಯೆನಿಸಿದ ಇಲ್ಲಿನ ರಸ್ತೆ ತಿರುವಿನ ಬಗ್ಗೆ ಸಂಬಂಧಪಟ್ಟವರು ಗಮನಹರಿಸದೇ ಹೋದರೆ ಇಲ್ಲಿ ಇನ್ನಷ್ಟು ವಾಹನ ಅಪಘಾತ ಸಂಭವಿಸುವುದರಲ್ಲಿ ಸಂಶಯವಿಲ್ಲ, ಹಾಗಾಗಿ ಇದಕ್ಕೊಂದು ಪರಿಹಾರ ಕಲ್ಪಿಸಿ ಎಂದು ಕುರಿಯ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ರಮೇಶ್ ಅಂಚನ್ ಹಾಗೂ ಆಟೋ ಚಾಲಕ ನಿಝಾರ್ ಅಜ್ಜಿಕಟ್ಟೆ ಮನವಿ ಮಾಡಿದ್ದಾರೆ.