ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸ್ಥಾಪಿಸಿದ ರೆಮೋನಾ ಎವೆಟ್ಟೆ ಪೆರೇರಾ ಭಾಗಿ

ಪುತ್ತೂರು: ಜವುಳಿ ಉದ್ಯಮದಲ್ಲೇ ಹೊಸತನವನ್ನು ಪರಿಚಯಿಸುತ್ತಾ ಹತ್ತೂರಿನಲ್ಲಿ ಮನೆ ಮಾತಾಗಿರುವ ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ ರಸ್ತೆಯ ರಾಧಾ’ಸ್ನ ವಾರ್ಷಿಕ ಸಂಭ್ರಮವು ಆ.13ರಂದು ತೆಂಕಿಲ ದರ್ಶನ್ ಹಾಲ್ನಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಸಂಸ್ಥೆಯ ಮ್ಹಾಲಕರಾದ ಗಣೇಶ್ ಕಾಮತ್ ಹಾಗೂ ಪ್ರಕಾಶ್ ಕಾಮತ್ ದಂಪತಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ 170 ಗಂಟೆಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸ್ಥಾಪಿಸಿದ ರೆಮೋನಾ ಎವೆಟ್ಟೆ ಪೆರೇರಾ ಹಾಗೂ ಅವರ ತಾಯಿಯವರನ್ನು ಚಿನ್ನದ ಶಿಲುಬೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ರೆಮೋನಾ ಎವೆಟ್ಟೆ ಪೆರೇರಾ ಮಳಿಗೆಯ ಸೇವೆ, ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು. ಅಲ್ಲದೆ ಮಳಿಗೆಯಲ್ಲಿ ಕಳೆದ 12 ವರ್ಷಗಳಿಂದ ಹಿರಿಯ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಸ್ಮಾಯಿಲ್ ಮತ್ತು ಕಾರ್ಯಕ್ರಮ ನಿರೂಪಕರಾಗಿದ್ದ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ರವರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸ್ಥಾಪಿಸಿದ ರೆಮೋನಾ ಎವೆಟ್ಟೆ ಪೆರೇರಾ ಅವರಿಂದ ನೃತ್ಯ ಪ್ರದರ್ಶನ ಹಾಗೂ ಮಳಿಗೆ ಸಿಬ್ಬಂದಿಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿತು. ರಾತ್ರಿ ಸಹಭೋಜನ ನೆರವೇರಿತು. ಸಂಸ್ಥೆಯ ಮ್ಹಾಲಕರಾದ ಗಣೇಶ್ ಕಾಮತ್ ವಿದ್ಯಾ ಕಾಮತ್, ಪ್ರಕಾಶ್ ಕಾಮತ್, ಪ್ರಿಯಾ ಕಾಮತ್, ಕೃಷ್ಣ ಕಾಮತ್, ವಸುಮತಿ ಕಾಮತ್, ಕುಟುಂಬಸ್ಥರು ಹಾಗೂ ಮಳಿಗೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಾರ್ಷಿಕೋತ್ಸವವನ್ನು ಸಂಭ್ರಮಿಸಿದರು.