ಜಮೀನು-ಜಾಮೀನೂ ಬೇಡ, ಲಕ್ಷದಿಂದ 10 ಕೋಟಿ ವರೆಗೆ ಸಬ್ಸಿಡಿಯೊಂದಿಗೆ ಸಾಲ: ಎಸ್ಎಸ್ ನಾಯಕ್
ಪುತ್ತೂರು: ಉದ್ಯಮಿಯಾಗಲು ಬಯಸುತ್ತಿರುವವರ ಕನಸ್ಸನ್ನು ನನಸಾಗಿಸುವ ಸದುದ್ದೇಶದಿಂದ ಸುದ್ದಿ ಅರಿವು ಸಂಸ್ಥೆ ಪುತ್ತೂರು, ಸುದ್ದಿ ಮಾಧ್ಯಮ, ಸುದ್ದಿ ಮಾಹಿತಿ ಟ್ರಸ್ಟ್, ಅಟಲ್ ಇನ್ಕ್ಯುಬೇಶನ್ ಸೆಂಟರ್ ನಿಟ್ಟೆ ಮತ್ತು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜುಕೇಶನ್ ಸಂಯುಕ್ತಾಶ್ರಯದಲ್ಲಿ ನ.18 ರಂದು ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಕಾಲೇಜಿನಲ್ಲಿ ಪೂರ್ವಭಾವಿ ಮಾಹಿತಿ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಂಎಸ್ಎಂಇ ಸ್ಟಾರ್ಟ್ಅಪ್ ಮೆಂಟರ್ ಮತ್ತು ಬಿಸಿನೆಸ್ ಕೋಚ್ ಸಿಎ ಎಸ್ಎಸ್ ನಾಯಕ್, ಉದ್ಯಮಿಗಳು ಯಾವಾಗಲೂ ಜಾಗೃತರಾಗಿರಬೇಕು. ನವೋದ್ಯಮಿಗಳಿಗಾಗಿ ಅಟಲ್ ಇನ್ಕ್ಯುಬೇಶನ್ ಸೆಂಟರ್ಗಳನ್ನು ನೀತಿ ಆಯೋಗದ ಮೂಲಕ ಕೇಂದ್ರ ಸರ್ಕಾರ ಜಾರಿ ಮಾಡಿದೆ. ಕರಾವಳಿಯಲ್ಲಿ ಪ್ರಥಮ ಸೆಂಟರ್ ನಿಟ್ಟೆಯಲ್ಲಿ ಪ್ರಾರಂಭಿಸಲಾಗಿದೆ. ಕೇಂದ್ರ ಸರಕಾರದ ಸಾಲ ಸೌಲಭ್ಯ ಇತ್ಯಾದಿಗಳ ಬಗ್ಗೆ ಅನೇಕ ಮಾಹಿತಿ ಕಾರ್ಯಾಗಾರಗಳನ್ನು ನಡೆಸಿ ಮಾಹಿತಿಗಳನ್ನು ನೀಡುತ್ತಾ ಬರುತ್ತಿದೆ ಎಂದರು.
ಹೊಸ ಆಲೋಚನೆ ಹೊಂದಿದ ಯುವ ಉದ್ಯಮಿಗಳಿಗೆ ಹಾಗೂ ಈಗಾಗಲೇ ಉದ್ಯಮಿಗಳಾಗಿದ್ದರೆ ಅಂತಹವರ ಉದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಯೋಚಿಸುತ್ತಿದ್ದವರಿಗೆ ಈ ಯೋಜನೆ ಪ್ರಯೋಜನಕಾರಿಯಾಗಿದೆ. ಯಾವುದೇ ಜಮೀನು ಅಡಾಮಾನ ಅಥವಾ ಜಾಮೀನು ಇಲ್ಲದೇ ಎಂಎಸ್ಎಂಇ ಯೋಜನೆಯಡಿ ಲಕ್ಷದಿಂದ 10 ಕೋಟಿ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಆದರೆ ಸಾಲದ ಮೇಲೆ ನೀಡುವ ಇನ್ಶುರೆನ್ಸ್ ಅನ್ನು ಉದ್ಯಮಿಗಳೇ ಪಾವತಿಸಬೇಕಾಗುತ್ತದೆ ಎಂದರು.
ಅಟಲ್ ಇನ್ಕ್ಯುಬೇಶನ್ ಸೆಂಟರ್ ನಿಟ್ಟೆ ಇದರ ಸಿಇಒ ಡಾ.ಎ.ಪಿ.ಆಚಾರ್ ಮಾತನಾಡಿ, ಯುವಕರನ್ನು ಉದ್ಯಮಿಗಳನ್ನಾಗಿ ನಿರ್ಮಿಸಲು ಅಟಲ್ ಇನ್ಕ್ಯುಬೇಶನ್ ಸೆಂಟರ್ಗಳನ್ನು ಪ್ರಾರಂಭಿಸಲಾಯಿತು. ಸ್ಟಾರ್ಟ್ಅಪ್ ಬ್ಯುಸಿನಿಸ್ ನೋಂದಣಿ ಮಾಡಲು ಇಂದು ಆನ್ಲೈನ್ ಮೂಲಕ ಕೆಲವೇ ಸಮಯಗಳು ಸಾಕಾಗುತ್ತದೆ. ಸಮಸ್ಯೆಗೆ ಸಿಲುಕಿಕೊಂಡಾಗ ಅದರ ಪರಿಹಾರಕ್ಕಾಗಿ ಹೊಸ ಐಡಿಯಾಗಳು ಮನುಷ್ಯನ ತಲೆಯಲ್ಲಿ ಹೊಳೆಯುತ್ತವೆ ಎಂದರಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಟಾರ್ಟಪ್ಗಳು ಪ್ರಾರಂಭವಾಗಬೇಕಿದೆ ಎಂದರು.

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜುಕೇಶನ್ನ ಪ್ರಾಂಶುಪಾಲ ಡಾ.ಜ್ಞಾನೇಶ್ವರ ಪೈ ಮಾರೂರು ಮಾತನಾಡಿ, ಬ್ಯುಸಿನೆಸ್ ಮಾಡಬೇಕಾಗದರೆ ಬ್ರ್ಯಾಂಡ್ ಅತಿ ಮುಖ್ಯವಾಗಿದೆ. ಉದ್ಯಮಿಗಳಿಗೆ ತಾಳ್ಮೆ ಅತ್ಯವಶ್ಯಕವಾಗಿದೆ. ಒಂದೊಮ್ಮೆ ನಿಮ್ಮ ಕಂಪನಿ ಬ್ರ್ಯಾಂಡ್ ಆದರೆ ಅದನ್ನು ಸಂಭಾಲಿಸುವ ಧೈರ್ಯ ನಿಮ್ಮಲ್ಲಿರಬೇಕು. ಯಾವುದೇ ಕಾರಣಕ್ಕೂ ಉದ್ಯಮದಲ್ಲಿ ನಂಬಿಕೆ ಕಳೆದುಕೊಳ್ಳಬಾರದು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ್, ಬೆಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಿಂದ ಉದ್ಯಮದಲ್ಲಿ ಆಸಕ್ತಿಯುಳ್ಳವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ಮಾಹಿತಿ ಕಾರ್ಯಾಗಾರ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಮೂರು ತಿಂಗಳ ಕಾಲ ನಿರಂತರವಾಗಿ ಮಾಹಿತಿ ನೀಡುವ ಜವಾಬ್ದಾರಿಯನ್ನು ಸುದ್ದಿ ಅರಿವು ಸಂಸ್ಥೆ ವಹಿಸಿದೆ ಎಂದರು.
ವೇದಿಕೆಯಲ್ಲಿ ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಶ್ರೀ ಮಹಾಲಿಂಗೇಶ್ವರ ಐಟಿಐ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಪೈ ಬಿ., ಸುದ್ದಿ ಬಿಡುಗಡೆ ಪತ್ರಿಕೆಯ ಮಂಗಳೂರು ವರದಿಗಾರ ಭಾಸ್ಕರ್ ರೈ ಕಟ್ಟಾ , ಸುದ್ದಿ ಅರಿವು ಕೇಂದ್ರದ ಆಶಿಶ್ ಉಪಸ್ಥಿತರಿದ್ದರು.
ಸುದ್ದಿ ಬಿಡುಗಡೆ ಪುತ್ತೂರು ಪತ್ರಿಕೆಯ ಸಿಇಒ ಸೃಜನ್ ಊರುಬೈಲು, ಸುದ್ದಿ ಬಿಡುಗಡೆ ಬೆಳ್ತಂಗಡಿ ಪತ್ರಿಕೆಯ ಸಿಇಒ ಸಿಂಚನ ಊರುಬೈಲು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸುದ್ದಿ ಅರಿವು ಕೇಂದ್ರದ ಭರತ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು. ನಮಿತ ಮತ್ತು ಚೈತ್ರಾ ಸಹಕರಿಸಿದರು. ಮಹಾಲಿಂಗೇಶ್ವರ ಐಟಿಐ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.
ದ್ವಿತೀಯ ಹಂತದ ಕಾರ್ಯಾಗಾರ
ಉದ್ಯಮಿಗಳಾಗುವ ಕನುಸು ಕಾಣುತ್ತಿರುವ ಯುವ ಜನತೆಗೆ ಸರಿಯಾದ ಮಾಹಿತಿ, ಆರ್ಥಿಕ ಸೌಲಭ್ಯ, ಮಾರುಕಟ್ಟೆಯ ಮಾರ್ಗದರ್ಶನ ನೀಡುವ ಸಲುವಾಗಿ ಹಮ್ಮಿಕೊಂಡ ಪ್ರಥಮ ಹಂತದ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಆಸಕ್ತರಿಗೆ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜುಕೇಶನ್ ಕ್ಯಾಂಪಸ್ನಲ್ಲಿ ನಡೆಯುವ ಎರಡು ದಿನಗಳ ಉಚಿತ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಇಲ್ಲಿ ಆಯ್ದ ಕೆಲವು ಉದ್ಯಮಿಗಳಿಗೆ ಉಚಿತವಾಗಿ ಅಟಲ್ ಇನ್ಕ್ಯುಬೇಶನ್ ಸೆಂಟರ್ ನಿಟ್ಟೆ ಆಶ್ರಯದಲ್ಲಿ 2 ದಿನಗಳ ಉಚಿತ ತರಬೇತಿ ನೀಡಲಾಗುವುದು. ಆಯ್ಕೆಯಾದವರಿಗೆ ಇನ್ಕ್ಯುಬೇಶನ್ 1 ವರ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಡಾ.ಯು.ಪಿ.ಶಿವಾನಂದ್ ಹೇಳಿದರು.
ಕಾರ್ಯಾಗಾರದ ಕೊನೆಯಲ್ಲಿ ಉದ್ಯಮಿಗಳು ಹಾಗೂ ಆಸಕ್ತರು ಉದ್ಯಮಗಳಲ್ಲಿನ ಸಮಸ್ಯೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಪರಿಹಾರಗಳನ್ನು ಪಡೆದುಕೊಂಡರು. ಇದೇ ವೇಳೆ ಉದ್ಯಮಗಳ ಕುರಿತ ತಮ್ಮ ಯೋಜನಾ ಪತ್ರಗಳನ್ನು ಸ್ವೀಕರಿಸಿದ ಸಂಪನ್ಮೂಲ ವ್ಯಕ್ತಿ ಎಸ್ಎಸ್ ನಾಯಕ್, ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.