ಧರ್ಮಕ್ಕಿಂತ ದೇಶ ಶ್ರೇಷ್ಠ: ಒಡಿಯೂರು ಶ್ರೀ
ವಿಟ್ಲ: ಧರ್ಮಕ್ಕಿಂತ ದೇಶ ಶ್ರೇಷ್ಠ. ಭಾರತೀಯತೆಯ ಮೌಲ್ಯ, ಆದರ್ಶಗಳನ್ನು ಜೀವನದ ಪ್ರತೀ ಕ್ಷಣಗಳಲ್ಲಿ ಎತ್ತಿ ಹಿಡಿಯುವುದೇ ರಾಷ್ಟ್ರಪ್ರೇಮವೆನಿಸಿದೆ. ರಾಮ ಭಕ್ತಿ ಅಂದರೆ ರಾಷ್ಟ್ರ ಭಕ್ತಿ. ದೇಶದ ಬಾಹ್ಯ ಸಂಪತ್ತುಗಳನ್ನು ದಾಳಿಕೋರರು ಲೂಟಿ ಮಾಡಿದರೂ, ಅಧ್ಯಾತ್ಮವೆಂಬ ದೇಶದ ಆಂತರ್ಯ ಶಕ್ತಿಯನ್ನು ಲೂಟಿ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇಶ, ಧರ್ಮವನ್ನು ಅಳಿಸಲು ಬಿಡದಿದ್ದರೆ ಮಾತ್ರ ನಾವು ಶಾಂತಿ ನೆಮ್ಮದಿಯಿಂದ ಬಾಳಬಹುದು.ಭವ್ಯ ಭಾರತದ ನಿಜ ಅರ್ಥದ ಪ್ರಜೆಗಳಾಗಬೇಕು. ಉತ್ತಮ ಭಾರತ ನಿರ್ಮಾಣದ ರೂವಾರಿಗಳಾಗಬೇಕೆಂದು ಕರೆ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನಿಧ್ಯ ಕರುಣಿಸಿದ್ದರು. ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ರೈ , ಒಡಿಯೂರು ಜೈ ಗುರುದೇವ ಕಲಾ ಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಒಡಿಯೂರು, ಒಡಿಯೂರು ಶ್ರೀ ವಿವಿಧೋದ್ದೇಶ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಯಶವಂತ ವಿಟ್ಲ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶಾರ್ವರಿ ಸ್ವಾಗತಿಸಿದರು. ಮನ್ವಿತ್ ವಂದಿಸಿದರು. ಮೈತ್ರಿ ಕಾರ್ಯಕ್ರಮ ನಿರೂಪಿಸಿದರು.