215 ಸ್ಪರ್ಧಿಗಳು | 12 ರಸಪ್ರಶ್ನೆಗಳು | ಪ್ರಥಮ, ದ್ವಿತೀಯ, ತೃತೀಯ ಅಲ್ಲದೆ ಎಲ್ಲಾ ಸ್ಪರ್ಧಿಗಳಿಗೆ ಬಹುಮಾನಗಳು
ಪುತ್ತೂರು: ದರ್ಬೆ ಬುಶ್ರಾ ಟವರ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರಿನ ಪ್ರತಿಷ್ಠಿತ ನಯಾ ಚಪ್ಪಲ್ ಬಜಾರ್ ಮಳಿಗೆಯು ದ್ವಿತೀಯ ಬಾರಿಗೆ ಸ್ವಾತಂತ್ರೋತ್ಸವದ ಅಂಗವಾಗಿ ವಿನೂತನ ರಸಪ್ರಶ್ನೆ ಸ್ಪರ್ಧೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಆ.15 ರಂದು ನಯಾ ಚಪ್ಪಲ್ ಬಜಾರ್ ಮಳಿಗೆಯಲ್ಲಿ ಜರಗಿತು.
ಗಣ್ಯ ವ್ಯಕ್ತಿಗಳ ಅನಿಸಿಕೆಗಳು:
ಬೊಳ್ವಾರು ಪ್ರಗತಿ ಪ್ಯಾರಾಮೆಡಿಕಲ್ ಇದರ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ ಮಾತನಾಡಿ, ರಫೀಕ್ ಎಂ.ಜಿರವರು ರಾಷ್ಟ್ರೀಯ ಹಬ್ಬಗಳನ್ನು ವಿಶೇಷವಾಗಿ ಆಚರಣೆ ಮಾಡುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಇದೀಗ ವಿದ್ಯಾರ್ಥಿಗಳಿಗೆ ಸ್ವಾತಂತ್ರೋತ್ಸವದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿ ಸ್ವಾತಂತ್ರ್ಯದ ಹಿರಿಮೆಯನ್ನು ಹೆಚ್ಚಿಸಿದ್ದು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಲು ಪ್ರೇರಣೆಯಾಗಿದೆ. ನಾವು ಭಾರತೀಯರು ಒಂದಾಗಿ ಸೌಹಾರ್ದತೆಯೊಂದಿಗೆ ಬಾಳೋಣ ಎಂದರು.
ರೋಟರಿ ಕ್ಲಬ್ ಪುತ್ತೂರು ಪೂರ್ವಾಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ರಫೀಕ್ರವರು ತನ್ನ ಮಳಿಗೆಯಲ್ಲಿ ವಿಭಿನ್ನತೆಯಿಂದ ಕೂಡಿದ ಚಟುವಟಿಕೆಗಳನ್ನು ಮಾಡುತ್ತಿದ್ದು ನಾವೆಲ್ಲ ಅವನ್ನು ಅನುಕರಣೆ ಮಾಡಬೇಕಾದ ವ್ಯಕ್ತಿತ್ವವಾಗಿದೆ. ಮಾರುಕಟ್ಟೆ ತಂತ್ರದೊಂದಿಗೆ ಮಾನವೀಯ ಮೌಲ್ಯಗಳನ್ನು ಆಧರಿಸಿ ಸಮಾಜದಲ್ಲಿ ಸೇವಾ ಮನೋಭಾವ ತೋರ್ಪಡಿಸುತ್ತಿರುವುದು ಶ್ಲಾಘನೀಯ. ವಿದ್ಯಾಸಂಸ್ಥೆಗಳು ಕೂಡ ಇವನ್ನು ಅನುಕರಣೆ ಮಾಡಬೇಕು ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳನ್ನು ಭಾಗವಹಿಸುವಂತೆ ಮಾಡುವ ಮೂಲಕ ಅವರು ವಯಸ್ಕರು ಆಗುವವರೆಗೆ ಅವರು ಗ್ರಾಹಕರಾಗಿರುತ್ತಾರೆ ಎಂದರು.

ಸಿಂಚನ ಚಿಟ್ಸ್ ಪ್ರೈವೇಟ್ ಲಿಮಿಟೆಡ್ನ ಪರಮೇಶ್ವರ ಗೌಡ ಮಾತನಾಡಿ, ರಾಷ್ಟ್ರೀಯ ಹಬ್ಬಗಳನ್ನು ವಿಶೇಷವಾಗಿ ಆಚರಿಸುವ ಮೂಲಕ ಮಳಿಗೆಗೆ ಗ್ರಾಹಕರನ್ನು ಸೆಳೆಯುವಂತಹ ರೀತಿ ಆಕರ್ಷಣೀಯ. ನಮ್ಮ ರಾಷ್ಟ್ರದ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸದಾ ಗೌರವ ಹೊಂದುವವರಾಗಬೇಕು ಎಂದರು.
ದರ್ಬೆ ಪ್ರಿಸಿಷನ್ ಕಾರ್ ಸೆಂಟರ್ನ ಸುಜಿತ್ ಡಿ.ರೈ ಮಾತನಾಡಿ, ನಯಾ ಚಪ್ಪಲ್ ಬಜಾರ್ ಮಳಿಗೆಯು ಶಿಕ್ಷಕರ, ಮಕ್ಕಳ, ಕಾರ್ಮಿಕರ ಹೀಗೆ ಹಲವಾರು ದಿನಾಚರಣೆಗಳನ್ನು ಆಚರಿಸುವ ಮೂಲಕ ಸಮಾಜವನ್ನು ಹುರಿದುಂಬಿಸುವ ಕಾರ್ಯವನ್ನು ಮಾಡಿ ಪುತ್ತೂರಿಗೆ ಹಾಗೂ ಮಳಿಗೆಗೆ ಹೆಸರು ತಂದಿದೆ ಎಂದರು.
ರಾಜ್ಯ ಅಬಕಾರಿ ಇಲಾಖೆಯ ಪುತ್ತೂರು ಶಾಖೆಯ ಪ್ರೇಮಾನಂದ ಬಿ. ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯನ್ನು ನಾವು ಸಂಭ್ರಮದಿಂದ ಆಚರಿಸುತ್ತೇವೆ ಹೌದು. ಆದರೆ ಅದರ ಹಿಂದೆ ಆದ ಸಾವು-ನೋವುಗಳನ್ನು ವಿದ್ಯಾರ್ಥಿಗಳು ಅರಿಯಬೇಕು. ವೀರ, ಧೀರ, ಶೂರ ಸೈನಿಕರು ದೇಶಕ್ಕಾಗಿ ತನ್ನ ಜೀವ ಸವೆಸಿದ್ದಾರೆ. ನಯಾ ಚಪ್ಪಲ್ ಬಜಾರ್ ಮಳಿಗೆಯು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲಾ ವರ್ಗದವರನ್ನು ಗೌರವಿಸುವ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ದೇಶಭಕ್ತಿಯನ್ನು ಹೊಂದುವಂತಾಗಲಿ ಎಂದರು.
ಅಕೌಂಟೆಂಟ್ ನಟರಾಜ್ ಮಾತನಾಡಿ, ರಫೀಕ್ ಎಂ.ಜಿರವರು ಮಾಡುವ ಸಮಾಜಮುಖಿ ಕಾರ್ಯಗಳು ರೋಟರಿ ಸಂಸ್ಥೆಗೆ ಮಾದರಿಯಾಗಿದೆ. ರಫೀಕ್ರವರು ಮಾಡುವ ಈ ಸಮಾಜಮುಖಿ ಕಾರ್ಯಗಳು ಇತರರು ಅನುಷ್ಠಾನಕ್ಕೆ ತಂದರೆ ಸಮಾಜದಲ್ಲಿ ಬಾಂಧವ್ಯ ವೃದ್ಧಿಯಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬೊಳ್ವಾರು ಸ್ಮಾರ್ಟ್ ಸಾಪ್ಟ್ವೇರ್ ಟೆಕ್ನೋಲಜೀಸ್ನ ಸಾಪ್ಟ್ವೇರ್ ಇಂಜಿನಿಯರ್ ಸತೀಶ್ ನಾಯಕ್, ರೋಟರಿ ಪುತ್ತೂರು ಸದಸ್ಯರಾದ ಕೃಷ್ಣಪ್ರಸಾದ್, ಬಿ.ವಿ ಕಿಶನ್, ರೋಟರಿ ಯುವ ಪೂರ್ವಾಧ್ಯಕ್ಷ ನರಸಿಂಹ ಪೈ, ಸುದರ್ಶನ್ ಎಂಟರ್ಪ್ರೈಸಸ್ನ ಮನೋಜ್ ಟಿ.ವಿ, ರೋಟರಿ ಪುತ್ತೂರು ಸದಸ್ಯ ಪಿ.ಡಿ ಕೃಷ್ಣಕುಮಾರ್ ರೈ, ನಯಾ ಚಪ್ಪಲ್ ಬಜಾರ್ ಪಾಲುದಾರ ಸಿದ್ಧೀಕ್ರವರು ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಮಳಿಗೆಯ ಪಾಲುದಾರ ರಫೀಕ್ ಎಂ.ಜಿ ಸ್ವಾಗತಿಸಿ, ವಂದಿಸಿದರು. ಮಳಿಗೆಯ ಮ್ಯಾನೇಜರ್ ಪ್ರಶಾಂತ್ ಸಹಿತ ಸಿಬ್ಬಂದಿಗಳು ಸಹಕರಿಸಿದರು.
ಚೀಟಿ ಎತ್ತುವಿಕೆ ಮೂಲಕ ಆಯ್ಕೆ..
ಮಳಿಗೆಯು ಹಮ್ಮಿಕೊಂಡ ಈ ಸ್ಪರ್ಧೆಯಲ್ಲಿ 215 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ 35 ಮಂದಿ ಗರಿಷ್ಟ ಸಮಾನ ಅಂಕಗಳನ್ನು ಪಡೆದವರಾಗಿದ್ದರು. ಸಮಾನ ಅಂಕಗಳು ಬಂದರೆ ವಿಜೇತರನ್ನು ಡ್ರಾ ಮೂಲಕ ಆರಿಸಲಾಗುವುದು ಎಂದು ಆಯೋಜಕರ ತೀರ್ಮಾನವಾಗಿದ್ದು ಅದರಂತೆ ಆ.14 ರಂದು ಪುತ್ತೂರು ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ, ಪುತ್ತೂರು ವರ್ತಕ ಸಂಘದ ಅಧ್ಯಕ್ಷ ವಾಮನ ಪೈ, ಏಷ್ಯನ್ ವುಡ್ ಮಾಲಕ ಇಸ್ಮಾಯಿಲ್ರವರು ವಿಜೇತರನ್ನು ಚೀಟಿ ಎತ್ತುವಿಕೆ ಮೂಲಕ ಆರಿಸಿ ಶುಭ ಹಾರೈಸಿದರು.
215ಮಂದಿ..
ಕಳೆದ ಬಾರಿ 106 ಮಂದಿ ರಸಪ್ರಶ್ನೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆದರೆ ಈ ಬಾರಿ ಕಳೆದ ಬಾರಿಗಿಂತ ದ್ವಿಗುಣ ಅಂದರೆ 215 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ 35 ಮಂದಿ ಸಮಾನ ಅಂಕಗಳನ್ನು ಗಳಿಸಿದ್ದರು. ಈ 35 ಮಂದಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಜೊತೆಗೆ ಏಳು ಮಂದಿಗೆ ಆಕರ್ಷಕ ಬಹುಮಾನವನ್ನು ನೀಡಲಾಗಿದ್ದು, ಉಳಿದಂತೆ ರಸಪ್ರಶ್ನೆಯಲ್ಲಿ ಭಾಗವಹಿಸಿದವರಿಗೆ ಆಯೋಜಕರು ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಬಹುಮಾನ ವಿಜೇತರು..
ಈ ರಸಪ್ರಶ್ನೆಯಲ್ಲಿ ಪುಷ್ಪಕ್, ಸರಕಾರಿ ಪ್ರಾಥಮಿಕ ಶಾಲೆ ಕಾಣಿಯೂರು(ಪ್ರ), ಪ್ರಥ್ವಿ ಎನ್, ಸಂತ ವಿಕ್ಟರ್ ಶಾಲೆ(ದ್ವಿ), ಫಾತಿಮತ್ ಬಾರಿರ, ಸರಕಾರಿ ಶಾಲೆ ಸವಣೂರು(ತೃ), ಹಾಗೂ ಆಕರ್ಷಕ ಬಹುಮಾನಕ್ಕೆ ಅಭಿಷೇಕ್(ಸರಸ್ವತಿ ಕಡಬ), ಜನ್ಯಾ ಡಿ(ಲಿಟ್ಲ್ ಫ್ಲವರ್ ದರ್ಬೆ), ಹೈಜಾ ಫಾತಿಮಾ ಎಂ(ಸೈಂಟ್ ವಿಕ್ಟರ್ ಪುತ್ತೂರು), ಫಾತಿಮತ್ ಮನ್ಸೂರಾ(ಸರಕಾರಿ ಶಾಲೆ ಕಬಕ), ಮುಹಮ್ಮದ್ ಹಮೀಜ್ ಎಂ(ಬೆಥನಿ ಪುತ್ತೂರು), ರಶ್ಮಿ ಆರ್(ಸರಕಾರಿ ಶಾಲೆ ಸವಣೂರು), ಮೊಹಮದ್ ಮಾಶೂಕ್(ಸರಕಾರಿ ಶಾಲೆ ಕಬಕ)ರವರು ಪಾತ್ರರಾದರು.