ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ಹೆಗ್ಗಡೆಯವರು ಸಾಕಾರಗೊಳಿಸುತ್ತಿದ್ದಾರೆ: ನಳಿನ್ ಕುಮಾರ್ ಕಟೀಲ್
ರಾಮಕುಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ತಾಲೂಕು ಇವುಗಳ ಆಶ್ರಯದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚಾರಣೆಯ ಉದ್ಘಾಟನಾ ಕಾರ್ಯಕ್ರಮ ಆ.18ರಂದು ಬೆಳಿಗ್ಗೆ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ನಡೆಯಿತು.
ಉದ್ಘಾಟಿಸಿದ ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಈ ದೇಶ ರಾಮ ರಾಜ್ಯ ಆಗಬೇಕೆಂದು ಕನಸು ಕಂಡಿದ್ದರು, ಅದರಲ್ಲಿ ವ್ಯಸನಮುಕ್ತ ಜೀವನ ಕೂಡಾ ಒಂದಾಗಿತ್ತು, ಇದನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಜನಜಾಗೃತಿ ವೇದಿಕೆಯ ಮೂಲಕ ಸಾಕಾರಗೊಳಿಸುತ್ತಿದ್ದಾರೆ ಎಂದು ಹೇಳಿದರು. ಹಿಂದೆ ಪಟ್ಟಣಗಳಲ್ಲಿನ ದೊಡ್ಡ ದೊಡ್ಡ ಕಾಲೇಜುಗಳಿಗೆ ಸೀಮಿತವಾಗಿದ್ದ ಡ್ರಗ್ಸ್ ಮಾಫಿಯಾ ಈಗ ಹಳ್ಳಿಯ ಸರಕಾರಿ ಶಾಲೆಯ ತನಕವೂ ಮುಟ್ಟಿದೆ. ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಿಸ್ತರಣೆಗೊಂಡಿರುವ ಡ್ರಗ್ಸ್ ಜಾಲಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುವ ಜನಜಾಗೃತಿ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ನಳಿನ್‌ಕುಮಾರ್ ಹೇಳಿದರು.
ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್.ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಬದುಕಿನಲ್ಲಿ ಕೆಟ್ಟ ಚಟಗಳಿಗೆ ಬಲಿಯಾಗದೆ ಧನಾತ್ಮಕ ಚಿಂತನೆಯೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತಲಿನ ಮಾದಕ ವ್ಯಸನಿಗಳನ್ನು ಮುಕ್ತಗೊಳಿಸಿದರೆ ಅದುವೇ ಸಮಾಜದ ಪರಿವರ್ತನೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ ಮಾತನಾಡಿ, ಜೀವನಕ್ಕೆ ಶಾಕ್ ಕೊಡುವ ದುಶ್ಚಟಗಳಿಂದ ದೂರವಿದ್ದು ಸದ್ಭಾವನೆಯಿಂದ ಹಾಗೂ ಸಕಾರಾತ್ಮಕ ಯೋಚನೆಯಿಂದ ವಿದ್ಯಾರ್ಥಿಗಳು ಬದುಕುವ ಬಗ್ಗೆ ಚಿಂತಿಸಬೇಕು ಎಂದರು.
ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಸುಚೇತಾ ಬಿ , ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಅಜಿತ್‌ಕುಮಾರ್ ಪಾಲೇರಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ವಸಂತ ಕುಮಾರ್, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್ ಶುಭಹಾರೈಸಿದರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗೋಳಿತೊಟ್ಟು ಮೇಲ್ವಿಚಾರಕಿ ಜಯಶ್ರೀ ವಂದಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ನಿರೂಪಿಸಿದರು. ಪಿಯುಸಿ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಸೆ.೨೦ರ ತನಕ ತಾಲೂಕಿನ ವಿವಿಧ ಶಾಲೆ,ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ.
ಸಜ್ಜನ ಬಂಧುಗಳು ಎದ್ದು ನಿಲ್ಲಬೇಕಾಗಿದೆ;
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವಿರೇಂದ್ರ ಹಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಾವಿರಾರು ಉತ್ತಮ ಕಾರ್ಯ, ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರೂ ಇದೀಗ ಅವರ ವಿರುದ್ಧ ಕೆಟ್ಟದಾಗಿ ಮಾತನಾಡುತ್ತಿರುವವರ ವಿರುದ್ಧ ಸಜ್ಜನ ಬಂಧುಗಳು ಎದ್ದು ನಿಲ್ಲಬೇಕಾಗಿದೆ ಎಂದು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು