ತನಿಖೆಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಆಗ್ರಹ : 34 ನೆಕ್ಕಿಲಾಡಿ ಗ್ರಾಮ ಸಭೆ
ಉಪ್ಪಿನಂಗಡಿ: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಸಹಿಯನ್ನು ಪೋರ್ಜರಿ ನಡೆಸಿ 34 ನೆಕ್ಕಿಲಾಡಿ ಗ್ರಾಮದಲ್ಲಿ ಎರಡು ಏಕ ನಿವೇಶನಗಳ ವಾಣಿಜ್ಯ ವಿನ್ಯಾಸ ನಕ್ಷೆಗಳನ್ನು ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿಯಿದೆ. ಈ ರೀತಿ ಪೋರ್ಜರಿ ನಡೆದ್ದಲ್ಲಿ ಇದು ನಮ್ಮ ಗ್ರಾಮಕ್ಕೆ ಕಳಂಕ. ಆದ್ದರಿಂದ ಈ ಬಗ್ಗೆ ಮಾಹಿತಿ ನೀಡಬೇಕೆಂಬ ಆಗ್ರಹ 34 ನೆಕ್ಕಿಲಾಡಿ ಗ್ರಾಮ ಸಭೆಯಲ್ಲಿ ಕೇಳಿ ಬಂತು.
ಇಲ್ಲಿನ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಯವರ ಅಧ್ಯಕ್ಷತೆಯಲ್ಲಿ ಆ.18ರಂದು ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥೆ ಅನಿ ಮಿನೇಜಸ್, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಸಹಿಯನ್ನು ಪೋರ್ಜರಿ ನಡೆಸಿ 34 ನೆಕ್ಕಿಲಾಡಿ ಗ್ರಾಮದಲ್ಲಿ ಎರಡು ಏಕ ನಿವೇಶನಗಳ ವಾಣಿಜ್ಯ ವಿನ್ಯಾಸ ನಕ್ಷೆಗಳನ್ನು ಮಾಡಿಕೊಡಲಾಗಿದೆ ಎಂಬ ಬಗ್ಗೆ ಮಾಹಿತಿಯಿದೆ. ಅಲ್ಲದೇ, ಇದು ಗೊತ್ತಾಗಿ ಎರಡು ಏಕ ನಿವೇಶನಗಳ ವಾಣಿಜ್ಯ ವಿನ್ಯಾಸ ನಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರೇ 34 ನೆಕ್ಕಿಲಾಡಿ ಗ್ರಾ.ಪಂ.ಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿಯೂ ಇದೆ. ಇದೆಷ್ಟು ನಿಜಾ ಈ ಬಗ್ಗೆ ಗ್ರಾಮಸ್ಥರಿಗೆ ವಿವರ ನೀಡುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ. ಪಿಡಿಒ ಪ್ರವೀಣ್ ಕುಮಾರ್, 34 ನೆಕ್ಕಿಲಾಡಿ ಗ್ರಾಮದ ಸರ್ವೇ ನಂ. 54/1ರಲ್ಲಿ ಕಲ್ಪನಾ ಎಚ್.ಪಿ. ಅವರಿಗೆ ಸೇರಿದ 0.10 ಎಕ್ರೆ ಜಾಗ ಮತ್ತು ನಾಗೇಶ್ ಕೆ. ಅವರಿಗೆ ಸೇರಿದ 0.06 ಎಕ್ರೆ ವಿಸ್ತೀರ್ಣದ ಜಮೀನುಗಳ ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆಗಳಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಮತ್ತು ತಪ್ಪು ಮಾಹಿತಿ ನೀಡಿ ವಿನ್ಯಾಸ ಅನುಮೋದನೆ ಪಡೆದಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಇವುಗಳ ವಿನ್ಯಾಸ ನಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಆದ್ದರಿಂದ ಈ ವಿನ್ಯಾಸಕ್ಕೆ ತಮ್ಮ ಕಚೇರಿಯಿಂದ ನೀಡಲಾದ 9/11ಅನ್ನು ರದ್ದುಪಡಿಸಬೇಕು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಗ್ರಾ.ಪಂ.ಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಾಮಸ್ಥ ಮುಹಮ್ಮದ್ ರಫೀಕ್ ಮಾತನಾಡಿ, 9/11 ರದ್ದುಗೊಂಡಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಅವರು ಅದನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. ಆಗ ಮುಹಮ್ಮದ್ ರಫೀಕ್ ಮಾತನಾಡಿ, ಸಾಮಾನ್ಯ ಸಭೆಯ ಮುಂದಿಟ್ಟು ಅದನ್ನು ರದ್ದುಗೊಳಿಸಿ ಎಂದರು. ಅನಿ ಮಿನೇಜಸ್ ಮಾತನಾಡಿ, ಈ ಪೋರ್ಜರಿಯ ಹಿಂದೆ ಯಾರಿದ್ದಾರೆ. ಇದು ನಮ್ಮ ಗ್ರಾ.ಪಂ.ಗೆ ಕೆಟ್ಟ ಹೆಸರು ತರುವಂತದ್ದು. ನಮ್ಮ ಗ್ರಾ.ಪಂ.ನಲ್ಲಿ ಇಂತಹ ಪೋರ್ಜರಿ ಫೈಲ್ಗಳು ಇದ್ದರೆ ಅದಕ್ಕೆ ಯಾರು ಹೊಣೆ? ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯುವಂತೆ ನಿರ್ಣಯ ಕೈಗೊಳ್ಳಲು ತಿಳಿಸಿದರು. ಗ್ರಾಮಸ್ಥ ರೂಪೇಶ್ ರೈ ಕೂಡಾ ಇದಕ್ಕೆ ಧ್ವನಿಗೂಡಿಸಿ ಹೌದು ಇಂತಹ ಕಳ್ಳರು ಯಾರೆಂದು ಗೊತ್ತಾಗಬೇಕು ಎಂದು ಆಗ್ರಹಿಸಿದರು.
ಟೆಂಡರ್ ಯಾಕಿಲ್ಲ:
ಕಲಿಕಾ ಕೇಂದ್ರದ ಸಭಾಂಗಣದ ಖರ್ಚು ಎಂದು ವರದಿಯಲ್ಲಿ 5,46,936 ರೂ. ತೋರಿಸಲಾಗಿದೆ. ಆದರೆ ಇದಕ್ಕೆ ಟೆಂಡರ್ ಕರೆಯಲಾಗಿದೆಯಾ ಎಂದು ಗ್ರಾಮಸ್ಥ ಅಬ್ದುರ್ರಹ್ಮಾನ್ ಯುನಿಕ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಹಾಯಕ ಲೆಕ್ಕಾಧಿಕಾರಿ ದೇವಪ್ಪ ನಾಯ್ಕ, ಇದಕ್ಕೆ ಟೆಂಡರ್ ಕರೆದಿಲ್ಲಾ ಇಲ್ಲಿ ಕೆಲಸಗಳನ್ನು ಪಾಲು ಮಾಡಿ ಕೊಡಲಾಗಿದೆ ಎಂದರು. ಆದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಬ್ದುರ್ರಹ್ಮಾನ್ ಯುನಿಕ್, ಕೆಲಸವನ್ನು ಪಾಲು ಮಾಡಿ ಕೊಟ್ಟಿದ್ದು ಯಾಕೆ ಇದರಲ್ಲಿ ನಿಮಗೇನಾದರೂ ಲಾಭವಿದೆಯಾ ಎಂದು ಪ್ರಶ್ನಿಸಿದರಲ್ಲದೆ, ನಿಮಗೆ ಇಷ್ಟ ಬಂದವರಿಗೆ ಕೊಡೋದು ನಿಯಮಬಾಹಿರವಲ್ಲವೇ? ನೀವು ಅವರಿಂದ ಕೊಟೇಷನ್ ಪಡೆದುಕೊಂಡಿದ್ದೀರಾ? ನನಗೆ ಈ ಬಗ್ಗೆ ಮಾಹಿತಿ ಕೊಡುತ್ತಿದ್ದರೆ ನಾನು ಕೂಡಾ ಕೊಟೇಷನ್ ಕೊಡುತ್ತಿದ್ದೆ ಎಂದರು. ಇಲ್ಲಿ ನಿಯಮಬಾಹಿರವಾಗಿ ನಾವು ಮಾಡಿಲ್ಲ. ನೊಟೀಸ್ ಬೋರ್ಡ್ನಲ್ಲಿ ಹಾಕಿದ್ದೇವೆ ಎಂಬ ಉತ್ತರ ಗ್ರಾ.ಪಂ.ನಿಂದ ಬಂದಾಗ ಈ ಬಗ್ಗೆಗಿನ ಚರ್ಚೆಗೆ ತೆರೆ ಬಿತ್ತು.
ತಿನ್ನಲು ಒಂದೂವರೆ ಲಕ್ಷ!:
ಸಾಮಾನ್ಯ ಸಭೆ, ಗ್ರಾಮ ಸಭೆ ಹಾಗೂ ಇತರ ಸಭೆಗಳ ಉಪಹಾರ ವೆಚ್ಚಕ್ಕೆ 86,235 ರೂಪಾಯಿ ಖರ್ಚು ಮಾಡಲಾಗಿದೆ. ಕಳೆದ ಸಲದ ಗ್ರಾಮ ಸಭೆಯಲ್ಲಿ ಸಭೆ, ಕಾರ್ಯಕ್ರಮಗಳ ಉಪಹಾರ ವೆಚ್ಚಕ್ಕೆ 63,125ಖರ್ಚಾಗಿದೆ ಎಂದು ತೋರಿಸಲಾಗಿದೆ. ಒಂದು ವರ್ಷಕ್ಕೆ ಕೇವಲ ಉಪಹಾರ ವೆಚ್ಚಗಳೇ ಸಮಾರು ಒಂದೂವರೆ ಲಕ್ಷದಷ್ಟಾಯಿತು. ಈ ರೀತಿ ಜನರ ತೆರಿಗೆ ಹಣವನ್ನು ಪೋಲು ಮಾಡುವುದು ಎಷ್ಟು ಸರಿ ಎಂದು ಗ್ರಾಮಸ್ಥೆ ಅನಿ ಮಿನೇಜಸ್ ಪ್ರಶ್ನಿಸಿದರು.
ಕೈಮುಗಿಯಲಾದರೂ ಜನರೇಟರ್ ಇರಲಿ:
ನಾನು ಗ್ರಾ.ಪಂ. ಉಪಾಧ್ಯಕ್ಷನಾಗಿದ್ದಾಗ ಇಲ್ಲಿರುವ ಜನರೇಟರ್ ಕಾಣೆಯಾಗಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಮತ್ತೆ ದುರಸ್ತಿಗೆ ಕೊಟ್ಟಿದ್ದ ಜನರೇಟರ್ ಹೇಗಾದರೂ ಪಂಚಾಯತ್ ಕಚೇರಿ ತಲುಪಿತು. ನನಗೆ ಆಗ ಕೈ ಮುಗಿಯಲಾದರೂ ಅದೊಂದು ಪಂಚಾಯತ್ನಲ್ಲಿ ಬೇಕು ಅನ್ನೋ ಭಾವನೆ ಬಂದಿತ್ತು. ಈಗ ಮತ್ತೆ ಅದು ಇಲ್ಲಿ ಕಾಣುತ್ತಿಲ್ಲ. ನೀವು ಮಾರಿಲ್ಲ ತಾನೇ ಎಂದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಹರೀಶ ಡಿ. ಮಾತನಾಡಿ, ಹಾಗೆ ಮಾರಲು ಅದು ಗ್ರಾ.ಪಂ. ಸೊತ್ತು. ಅದು ಹಾಳಾಗಿದ್ದು, ಅದನ್ನು ದುರಸ್ತಿಗೆ ಕಳುಹಿಸಲಾಗಿದೆ ಎಂದರು. ಅದಕ್ಕೆ ಅಸ್ಕರ್ ಅಲಿ ಉತ್ತರಿಸಿ, ಅದು ಇಲ್ಲದಾಗಿ ವರ್ಷದ ಮೇಲೆ ಆಯಿತು ಅಂತ ಮಾಹಿತಿಯಿದೆ. ಆದ್ದರಿಂದ ಅದನ್ನು ದುರಸ್ತಿ ಮಾಡಿ ಪಂಚಾಯತ್ನಲ್ಲೇ ತಂದು ಇಡಿ. ಕೈ ಮುಗಿಯಲಾದರೂ ಅದು ಇಲ್ಲಿ ಇರಬೇಕು ಎಂದರು.
ಸಿಸಿ ಕ್ಯಾಮರಾಕ್ಕೇನು ಅಷ್ಟೊಂದು ದುಡ್ಡು:
ಕಸ ಹಾಕುವ ಮೂರು ಕಡೆ ಸಿಸಿ ಕ್ಯಾಮರಾ ಅಳವಡಿಸಿದ್ದಕ್ಕೆ 99,839ರೂ. ಖರ್ಚು ಮಾಡಲಾಗಿದೆ. ಸಿಸಿ ಕ್ಯಾಮರಾಕ್ಕೆ ಅಷ್ಟೊಂದು ದುಡ್ಡು ಇದೆಯಾ ಎಂದು ಅಬ್ದುರ್ರಹ್ಮಾನ್ ಯುನಿಕ್ ಪ್ರಶ್ನಿಸಿದರು. ಆಗ ಸಹಾಯಕ ಲೆಕ್ಕಾಧಿಕಾರಿ ದೇವಪ್ಪ ನಾಯ್ಕ ಉತ್ತರಿಸಿ, ಒಂದು ಕ್ಯಾಮರಾಕ್ಕೆ 33 ಸಾವಿರ ಆಗಿದೆ ಎಂದರು. ಈ ಸಂದರ್ಭ ಸದಸ್ಯ ಪ್ರಶಾಂತ್ ಕುಮಾರ್ ಮಾತನಾಡಿ, ಮೂರಲ್ಲ ನಾಲ್ಕು ಕ್ಯಾಮರಾ ಎಂದರು. ಬಳಿಕ ದೇವಪ್ಪ ನಾಯ್ಕ ಕೂಡಾ ಅದೇ ಮಾತನ್ನು ಪುನರುಚ್ಚರಿಸಿದರು.
ಶಿಷ್ಟಾಚಾರ ಪ್ರಕಾರ ಉದ್ಘಾಟಿಸಿ:
ಬೊಳಂತಿಲ ಹಿಂದೂ ರುದ್ರಭೂಮಿಯ ಕಾಮಗಾರಿ ಮುಗಿದಿಲ್ಲವೇ? ಆದರೂ ಅದನ್ನು ಉದ್ಘಾಟಿಸಲಿಲ್ಲ ಯಾಕೆ ಎಂದು ಅನಿ ಮಿನೇಜಸ್ ಪ್ರಶ್ನಿಸಿದರಲ್ಲದೆ, ಅದನ್ನು ತಕ್ಷಣವೇ ಸರಕಾರಿ ಶಿಷ್ಟಾಚಾರದ ಪ್ರಕಾರ ಉದ್ಘಾಟಿಸಿ ಎಂದರು. ಈ ಸಂದರ್ಭ ಶಬೀರ್ ಅಹಮ್ಮದ್ ಮಾತನಾಡಿ, ಇಲ್ಲಿಗೆ ಇಂಟರ್ಲಾಕ್ ಅಳವಡಿಕೆಗೆ ೭೭,೭೧೧ ರೂ. ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗ್ರಾ.ಪಂ.ನ ಅನುದಾನಗಳನ್ನು ಖರ್ಚು ಮಾಡಲಾಗಿದೆ. ಇದಕ್ಕೆ ಸಂಸದರ ೫ ಲಕ್ಷ ರೂ. ಅನುದಾನ ಬಂದಿಲ್ಲವೇ ಎಂದು ಪ್ರಶ್ನಿಸಿದರು. ಆಗ ಉತ್ತರಿಸಿದ ಸದಸ್ಯ ಪ್ರಶಾಂತ್ ಕುಮಾರ್, ಇದಕ್ಕೆ ಸಂಸದರ ಐದು ಲಕ್ಷ ರೂ. ಅನುದಾನ ಬಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆನೂ ಸಿಕ್ಕಿದೆ. ಗ್ರಾ.ಪಂ.ನ ಅನುದಾನಗಳನ್ನೂ ಬಳಸಿಕೊಂಡು ಕಾಮಗಾರಿ ನಡೆಸಲಾಗಿದೆ. ಇನ್ನು ಅಂತಿಮ ಹಂತದ ಕಾಮಗಾರಿ ಬಾಕಿಯಿದ್ದು, ಸದ್ಯದಲ್ಲೇ ಅದನ್ನು ಉದ್ಘಾಟಿಸಲಾಗುವುದು ಎಂದರು. ಇದಕ್ಕೆ ಧ್ವನಿಗೂಡಿಸಿದ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ, ಕಲಿಕಾ ಕೇಂದ್ರ ಮತ್ತು ಸ್ಮಶಾನವನ್ನು ಎರಡನ್ನೂ ಒಟ್ಟಿಗೆ ನಮ್ಮ ಅವಧಿ ಮುಗಿಯುವ ಮೊದಲೇ ಸರಕಾರಿ ಶಿಷ್ಟಾಚಾರದ ಪ್ರಕಾರ ಉದ್ಘಾಟಿಸಲಾಗುವುದು ಎಂದರು.
ವೈಯಕ್ತಿಕ ದ್ವೇಷ ಸಾಧನೆ ಬೇಡ:
ನಿವೇಶನಕ್ಕೆ ಗ್ರಾಮದಲ್ಲಿ ಖಾಲಿಯಿರುವ ಸರಕಾರಿ ಜಾಗವನ್ನು ಹುಡುಕಿ. ಅದು ಬಿಟ್ಟು ನೀವು ಐದು ವರ್ಷದಲ್ಲಿ ಕೃಷಿ ಇದ್ದ ಜಾಗವನ್ನೇ ನಿರ್ಣಯ ಮಾಡಿದ್ದೇ ಹೊರತು. ಬೇರೇನೂ ಮಾಡಿಲ್ಲ. ಅದನ್ನು ನಿಮಗೇನೂ ಮಾಡಲು ಆಗೋದಿಲ್ಲ. ವೈಯಕ್ತಿಕ ದ್ವೇಷ ಮಾಡುವುದು ಬಿಟ್ಟು ಗ್ರಾಮದ ಅಭಿವೃದ್ಧಿಯತ್ತ ಚಿಂತಿಸಿ ಎಂದು ಅನಿ ಮಿನೇಜಸ್ ತಿಳಿಸಿದರು.
ವಸತಿ ಗೃಹ ಯಾಕಿಲ್ಲ ದುರಸ್ತಿ:
ಗ್ರಾ.ಪಂ.ನ ವಸತಿ ಗೃಹ ಬೀಳುವ ಸ್ಥಿತಿಯಲ್ಲಿದೆ. ಅದರಲ್ಲೊಂದು ಕುಟುಂಬನೂ ವಾಸ್ತವ್ಯವಿದೆ. ನಾಳೆ ವಸತಿ ಗೃಹ ಬಿದ್ದು ಅವರಿಗೇನಾದರೂ ತೊಂದರೆಯಾದರೆ ಯಾರು ಹೊಣೆ? ಇದನ್ನು ದುರಸ್ತಿಗೊಳಿಸಿ ಬಾಡಿಗೆಗೆ ಕೊಟ್ಟರೆ ಗ್ರಾ.ಪಂ.ಗೆ ಒಂದಷ್ಟು ಅನುದಾನವಾದರೂ ಬರಬಹುದಲ್ಲವೇ? ಎಂಬ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾದಾಗ ಅಧ್ಯಕ್ಷೆ ಸುಜಾತ ರೈ ಮಾತನಾಡಿ, ಅಲ್ಲಿ ವಾಸ್ತವ್ಯವಿರುವ ಕುಟುಂಬಕ್ಕೆ ಅಲ್ಲಿಂದ ಎದ್ದು ಹೋಗಲು ನಾಲ್ಕೈದು ಬಾರಿ ನೊಟೀಸ್ ಜಾರಿಗೊಳಿಸಲಾಗಿದೆ. ಆದರೆ ಅವರು ಅಲ್ಲಿಂದ ಹೋಗುವುದಿಲ್ಲ. ಮತ್ತೆ ನಾನು ಅಧ್ಯಕ್ಷೆಯಾದ ಬಳಿಕ ಇದರ ದುರಸ್ತಿಗೆ ಅನುದಾನ ನೀಡುವಂತೆ ತಾ.ಪಂ. ಇಒ ಅವರಲ್ಲಿ ಕೇಳಿದ್ದೇನೆ. ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅದರಲ್ಲಿ ಇದರ ದುರಸ್ತಿಗೊಳಿಸಲಾಗುವುದು ಎಂದರು. ಆಗ ಅನಿ ಮಿನೇಜಸ್ ಮಾತನಾಡಿ, ಆ ಕುಟುಂಬಕ್ಕೆ ಬೇರೆ ಎಲ್ಲಿಯಾದರೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ. ಆ ಕಟ್ಟಡ ಬೀಳುವ ಸ್ಥಿತಿಯರುವ ಕಾರಣ ಅಲ್ಲಿ ವಾಸ ಮಾಡುವುದು ಯೋಗ್ಯವಲ್ಲ. ವಸತಿ ಗೃಹ ದುರಸ್ತಿಯಾದ ಮೇಲೆ ಅದೇ ಕುಟುಂಬಕ್ಕೂ ಅಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿ ಕೊಡಿ ಎಂದರು.
ಜೆಜೆಎಂನಲ್ಲಿ ಪೈಪ್ಲೈನ್ ಇಲ್ಲವೆ:
ಈ ವರದಿಯಲ್ಲಿ ಕುಡಿಯುವ ನೀರಿನ ಪೈಪ್ಗೆಂದು ಹಲವು ವೆಚ್ಚಗಳನ್ನು ಭರಿಸಲಾಗಿದೆ. ಹಾಗಾದರೆ ಜೆಜೆಎಂ ಯೋಜನೆಯಲ್ಲಿ ಪೈಪ್ಲೈನ್ ಇಲ್ಲವೇ? ಮತ್ಯಾಕೇ ಕುಡಿಯುವ ನೀರಿನ ಪೈಪ್ಲೈನ್ಗೆ ಅಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಅಸ್ಕರ್ ಅಲಿ ಪ್ರಶ್ನಿಸಿದರು. ಆಗ ಸದಸ್ಯ ಪ್ರಶಾಂತ್ ಕುಮಾರ್ ಮಾತನಾಡಿ, ಅದೆಲ್ಲಾ ಹೊಸ ಸಂಪರ್ಕದ ಪೈಪ್ಲೈನ್ಗಳು ಎಂದರು. ಗ್ರಾಮಸ್ಥ ಮುಹಮ್ಮದ್ ರಫೀಕ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಮಾರ್ಜಿನಲ್ಲೇ ಸುಮಾರು ೩೦ ಲಕ್ಷದಷ್ಟು ಖರ್ಚು ಮಾಡಿ ಪಂಚಾಯತ್ ವಾಣಿಜ್ಯ ಸಂಕೀರ್ಣ ಕಟ್ಟಲಾಗಿದೆ. ಇದಕ್ಕೆ ರಾಷ್ಟ್ರೀಯಿಂದ ಎನ್ಒಸಿನೂ ತೆಗೆದುಕೊಂಡಿಲ್ಲ. ನಾಳೆ ಆ ಜಾಗವನ್ನು ಎನ್ಎಚ್ನವರು ಸ್ವಾಧೀನ ಮಾಡಿದರೆ ಅದಕ್ಕೆ ಪರಿಹಾರ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಆಗ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಸಂದೀಪ್ ಕುಮಾರ್ ಮಾತನಾಡಿ, ಆ ಕಟ್ಟಡ ಕಟ್ಟುವಾಗ ರಾಷ್ಟ್ರೀಯ ಹೆದ್ದಾರಿಯು ಆ ಬದಿಯಲ್ಲಿತ್ತು. ಬಳಿಕ ಅವರು ಯೋಜನೆ ಬದಲಾಗಿದ್ದು, ಆದ ಕಾರಣ ಅದು ಈಗ ಕಟ್ಟಡದ ಹತ್ತಿರಕ್ಕೆ ಬರುತ್ತಿದೆ. ಅದು ಗ್ರಾ.ಪಂ.ನ ಜಾಗ ಆಗಿದ್ದರಿಂದ ಅದಕ್ಕೆ ಎನ್ಒಸಿ ಅಗತ್ಯವಿಲ್ಲವೆಂದರು. ಆಗ ಮಧ್ಯಪ್ರವೇಶಿಸಿದ ಅಸ್ಕರ್ ಅಲಿ, ನೀವೇ ಅವತ್ತು ನಮ್ಮ ಆಡಳಿತವಿರುವಾಗ ಹೇಳಿದ್ದೀರಿ. ಅಲ್ಲಿ ಕಟ್ಟಡ ಕಟ್ಟಲು ಹೆದ್ದಾರಿ ಪ್ರಾಧಿಕಾರದ ಎನ್ಒಸಿ ಬೇಕೆಂದು. ಆದರೆ ಈಗ ಯಾಕೆ ಬೇರೆ ಮಾತನಾಡುವುದು ಎಂದರು. ಆಗ ಸಂದೀಪ್ ಕುಮಾರ್ ಅವರು ನಾನು ಹಾಗೆ ಮಾತನಾಡಿಯೇ ಇಲ್ಲವೆಂದು ವಾದಿಸಿದರು.
ಮುದಿ ದನವನ್ನು ಬೀದಿಗೆ ಬಿಟ್ಟವರ್ಯಾರು?
ಮೈಂದಡ್ಕ ಪ್ರದೇಶದಲ್ಲಿ ಮುದಿ ದನವೊಂದು ಇದೆ. ಅದಕ್ಕೆ ಸರಿಯಾಗಿ ನಡೆಯಲೂ ಸಾಧ್ಯವಾಗುತ್ತಿಲ್ಲ. ಅದು ಮುದಿ ದನವೆಂದು ಯಾರೋ ಬೀದಿಗೆ ಬಿಟ್ಟಿದ್ದಾರೆ. ಅದೀಗ ಮಳೆ- ಗಾಳಿಗೆ ಮೈಯೊಡ್ಡಿಕೊಂಡು ಬೀದಿ ಬದಿಯಲ್ಲಿದೆ ಎಂದು ಅನಿ ಮಿನೇಜಸ್ ಸಭೆಯ ಗಮನಕ್ಕೆ ತಂದರು. ಆಗ ಉಪಾಧ್ಯಕ್ಷ ಹರೀಶ್ ಡಿ. ಮಾತನಾಡಿ, ಅದು ನನ್ನದೇ ದನ. ಅದು ಕಟ್ಟಿದರೆ ಹಾರುತ್ತದೆ. ಅದಕ್ಕೆ ಬಿಟ್ಟದ್ದು ಎಂದರು.
ಗ್ರಂಥಾಲಯಕ್ಕೆ ಹೋಗಲು ರಾಟೆ ಹಾಕ್ತೀರಾ?:
ಗ್ರಾ.ಪಂ. ಆವರಣದಲ್ಲಿರುವ ಅಂಚೆಕಚೇರಿ ಕಟ್ಟಡದ ಮೇಲಿನ ಮಹಡಿಯಲ್ಲಿ ಗ್ರಂಥಾಲಯ ಕಟ್ಟಡ ಇದೆ. ನನ್ನಂತವರಿಗೆ ಅಲ್ಲಿಗೆ ಹತ್ತಿಕೊಂಡು ಹೋಗಲು ಸಾಧ್ಯವಿಲ್ಲ. ಗ್ರಂಥಾಲಯ ಹತ್ತಲು ರಾಟೆ ಹಾಕ್ತೀರಾ ಎಂದು ಅಸ್ಕರ್ ಅಲಿ ಪ್ರಶ್ನಿಸಿದರು. ಆಗ ಶಬೀರ್ ಅಹಮ್ಮದ್ ಮಾತನಾಡಿ, ಅಂಚೆ ಕಚೇರಿಯ ಕಟ್ಟಡದ ಮೇಲೆ ಮತ್ತೊಂದು ಕಟ್ಟಡ ನಿರ್ಮಿಸಲು ಕೆಳಗಿನ ಕಟ್ಟಡದ ಗುಣಮಟ್ಟವನ್ನು ಎಂಜಿನಿಯರ್ ಅವರಿಂದ ಖಾತ್ರಿ ಪಡಿಸಿಕೊಂಡಿದ್ದೀರಾ ಎಂದರು. ಆಗ ಇಲ್ಲವೆಂಬ ಉತ್ತರ ಗ್ರಾ.ಪಂ. ಆಡಳಿತದಿಂದ ಬಂತು. ಗ್ರಾ.ಪಂ. ಅಧಿಕಾರಿ, ಸಿಬ್ಬಂದಿಗಾಗಿ ಇರುವ ವಾಹನಗಳ ಪಾರ್ಕಿಂಗ್ ಷೆಡ್ನಲ್ಲಿ ಹೊರಗಿನ ವ್ಯಕ್ತಿಗಳು ವಾಹನ ನಿಲ್ಲಿಸಿ ಎಲ್ಲಿಗೋ ಹೋಗುತ್ತಾರೆ. ಎರಡ್ಮೂರು ದಿನ ಅವುಗಳು ಹಾಗೇ ಇರುತ್ತವೆ. ಗ್ರಾ.ಪಂ. ಸಿಬ್ಬಂದಿಗಳ ವಾಹನಗಳು ಗ್ರಾ.ಪಂ. ಅಂಗಳದಲ್ಲಿರುತ್ತವೆ. ಸಾರ್ವಜನಿಕರಿಗೆ ಇದರೊಳಗೆ ವಾಹನ ಪಾರ್ಕಿಂಗ್ ಮಾಡಿ ಎಲ್ಲೆಲ್ಲಿಗೋ ಹೋಗಿ ಬರಲು ಅವಕಾಶವಿದ್ದರೆ ಈ ಬಗ್ಗೆ ಪತ್ರಿಕಾ ಪ್ರಕಟನೆ ಕೊಡಿ. ದೂರ ದೂರ ಹೋಗುವವರು ಇಲ್ಲಿಯೇ ಬಂದು ವಾಹನಗಳನ್ನು ನಿಲ್ಲಿಸಿ ತೆರಳಲಿ ಎಂಬ ಮಾತು ಸಭೆಯಲ್ಲಿ ಕೇಳಿ ಬಂದಾಗ, ಉತ್ತರಿಸಿದ ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಅವರು, ಇದು ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಿಟ್ಟು ಇತರರಿಗೆ ವಾಹನ ಪಾರ್ಕಿಂಗ್ಗೆ ಅವಕಾಶವಿಲ್ಲವೆಂದು ನಾಮಫಲಕ ಅಳವಡಿಸಿದ್ದೇವೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಹರೀಶ್ ಡಿ., ಸದಸ್ಯರಾದ ವಿಜಯಕುಮಾರ್, ಪ್ರಶಾಂತ್ ಎನ್., ಕೆ. ರಮೇಶ್ ನಾಕ್, ವೇದಾವತಿ, ಗೀತಾ, ತುಳಸಿ, ಸ್ವಪ್ನ, ರತ್ನಾವತಿ, ಹರೀಶ್ ಕೆ. ಉಪಸ್ಥಿತರಿದ್ದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ಗ್ರಾಮಸ್ಥರಾದ ರಶೀದಾ, ಝಕಾರಿಯಾ ಕೊಡಿಪ್ಪಾಡಿ, ಅರುಣ್ ಬಿ., ಮುಹಮ್ಮದ್ ಸಾದಿಕ್, ಶರೀಫ್ ಮತ್ತಿತರರು ಮಾತನಾಡಿ, ಸಲಹೆ ಸೂಚನೆ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿದರು. ಸಹಾಯಕ ಲೆಕ್ಕ ಸಹಾಯಕ ದೇವಪ್ಪ ನಾಯ್ಕ್ ವಂದಿಸಿದರು.
ಗ್ರಾಮಸ್ಥರ ನಿರ್ಣಯಕ್ಕೆ ಬೆಲೆಯಿಲ್ಲವೇ?
ಕಳೆದ ಗ್ರಾಮ ಸಭೆಯಲ್ಲಿ ರೈತರೆಲ್ಲಾ ಸೇರಿಕೊಂಡು ನೆಕ್ಕಿಲಾಡಿ ಸಹಕಾರಿ ಹಾಲು ಉತ್ಪಾದಕರ ಸಂಘದ ಬದಿಯಲ್ಲಿರುವ ಕೊಠಡಿಯನ್ನು ಬಾಡಿಗೆಗೆ ಸಂಘಕ್ಕೆ ನೀಡಬೇಕೆಂದು ನಿರ್ಣಯ ಮಾಡಿದ್ದೆವು. ಆದರೆ ನಿರ್ಣಯವಿದ್ದರೂ, ಆ ಬಳಿಕ ನೀವು ಅದನ್ನು ಮತ್ತೊಬ್ಬರಿಗೆ ಏಲಂ ಮಾಡಿದ್ದೀರಿ. ಸುಮಾರು 30 ವರ್ಷದಿಂದ ಗ್ರಾ.ಪಂ. ನಮಗೆ ಎರಡು ಕೊಠಡಿಗಳನ್ನು ನೀಡಿದೆ. ಅದರಲ್ಲಿ ಒಂದರಲ್ಲಿ ಹಾಲು ಶೇಖರಣಾ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದರಲ್ಲಿ ಪಶು ಆಹಾರವನ್ನು ದಾಸ್ತಾನು ಮಾಡುತ್ತಿದ್ದೆವು. ಆದರೆ ನಿಮ್ಮ ಆಡಳಿತ ಬಂದ ಬಳಿಕ ಏಕಾಏಕಿ ಅದನ್ನು ನೀವು ಏಲಂ ಮಾಡಿದ್ರಿ. ಇದರ ಕೆಲವು ಸಮಯದ ಮೊದಲು ಸಂಘದ ವತಿಯಿಂದ ಸುಮಾರು 30 ರಿಂದ 35 ಸಾವಿರ ರೂ. ಖರ್ಚು ಮಾಡಿ ರಿಪೇರಿ ಮಾಡಿಸಿದ್ದೆವು. ಆ ಬಳಿಕ ಅದನ್ನು ಏಲಂಗೆ ಪಡೆದುಕೊಂಡವರು ಆ ಕೊಠಡಿಯನ್ನು ಬಿಟ್ಟಿದ್ದು, ಬಳಿಕ ಕಳೆದ ಗ್ರಾಮ ಸಭೆಯಲ್ಲಿ ಅದನ್ನು ಸಂಘಕ್ಕೆ ಕೊಡಬೇಕು ಎಂದು ರೈತರೆಲ್ಲಾ ಸೇರಿ ನಿರ್ಣಯ ಮಾಡಿಸಿದ್ದರೂ, ನೀವು ಅದಕ್ಕೆ ಮಾನ್ಯತೇ ನೀಡದೇ ಅದನ್ನು ಬೇರೆಯವರಿಗೆ ಐದು ವರ್ಷಗಳ ಅವಧಿಗೆ ಏಲಂ ಮಾಡಿದ್ದೀರಿ. ಆದ್ದರಿಂದ ಗ್ರಾಮ ಸಭೆಯ ನಿರ್ಣಯಕ್ಕೆ ಬೆಲೆಯಿಲ್ಲವೇ? ಇದಕ್ಕೆ ಉತ್ತರ ನೀಡಿ ಗ್ರಾಮ ಸಭೆಯ ವರದಿಯನ್ನು ಮಂಡಿಸಿ ಎಂದು ಸಂಘದ ಕಾರ್ಯದರ್ಶಿ ರಾಜೇಶ್ ಅವರು ತಿಳಿಸಿದರು. ಆಗ ಅಧ್ಯಕ್ಷೆ ಸುಜಾತ ರೈ ಉತ್ತರಿಸಿ, ಗ್ರಾಮ ಸಭೆಯ ನಿರ್ಣಯವನ್ನು ಸಾಮಾನ್ಯ ಸಭೆಯಲ್ಲಿಟ್ಟು ಸದಸ್ಯರೆಲ್ಲರ ಒಪ್ಪಿಗೆ ಮೇರೆಗೆ ಏಲಂ ನಡೆಸಲಾಗಿದೆ ಎಂದರು. ಆಗ ಆಕ್ರೋಶಗೊಂಡ ಗ್ರಾಮಸ್ಥರು, ಸುಮಾರು 30 ವರ್ಷದಿಂದ ಇಲ್ಲದ ಸಮಸ್ಯೆ ನಿಮ್ಮ ಆಡಳಿತ ಬಂದಾಗ ಉದ್ಭವವಾಗಿದೆ. ಇದು ನೀವು ರೈತರ ಮೇಲೆ ಮಾಡಿದ ದಬ್ಬಾಳಿಕೆ. ನಿಮ್ಮ ಆಡಳಿತಕ್ಕೆ ರೈತರ ಮೇಲೆ ಹಗೆಯುಂಟೇ? ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು. ಆ ಸಂದರ್ಭ ಸಹಾಯಕ ಲೆಕ್ಕಾಧಿಕಾರಿ ದೇವಪ್ಪ ನಾಯ್ಕ, ಸದಸ್ಯ ಪ್ರಶಾಂತ್ ಕುಮಾರ್ ಮಾತನಾಡಿ, ನಿಮಗೆ ಬೇರೊಂದು ರೂಂ ಅನ್ನು ತೋರಿಸಿದ್ದೇವೆ. ಮತ್ತೆ ಈಗ ಏಲಂ ಆಗಿರುವ ರೂಂ ಅನ್ನು ಬೇಕೋ ಬೇಡವೋ ತಿಳಿಸಿ ಎಂದು ನಿಮಗೆ ಪತ್ರವನ್ನು ಬರೆದಿದ್ದೇವೆ. ಆದರೆ ನಿಮ್ಮ ಉತ್ತರ ಬರಲಿಲ್ಲ. ಹಾಗಾಗಿ ನಾವು ಏಲಂ ಮಾಡಿದ್ದು ಎಂದರು. ಅಗ ಸಂಘದ ಅಧ್ಯಕ್ಷ ಗೋಪಾಲ ಮಾತನಾಡಿ, ನೀವು ಬಾಡಿಗೆ ೧೮ ಸಾವಿರ ಎಂದು ಹೇಳಿ ೧೦ನೇ ನಂಬರ್ನ ರೂಂ ಅನ್ನು ತೋರಿಸಿದ್ದೀರಿ. ಆದರೆ ೧೦ ಸಾವಿರಕ್ಕಿಂತ ಜಾಸ್ತಿ ಬಾಡಿಗೆ ಕೊಡಲು ಸಂಘದಿಂದ ಸಾಧ್ಯವಿಲ್ಲ. ಇದು ಸಹಕಾರಿ ಸಂಘವಾಗಿದ್ದು, ರೈತರೆಲ್ಲರಿಗೂ ಅನುಕೂಲವಾಗುವಂತದ್ದು. ನೀವು ಮತ್ತೊಂದು ರೂಂ ಅನ್ನು ತೋರಿಸಿದ್ದೀರಿ ಹೌದು. ಅದು ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ಅದರಲ್ಲಿ ಪಶು ಆಹಾರವಿಡಲು ಸಾಧ್ಯವಿಲ್ಲ. ಮತ್ತೆ ಅದನ್ನು ಸಂಘದ ವತಿಯಿಂದಲೇ ದುರಸ್ತಿಗೊಳಿಸಲು ಹೇಳಿದ್ದೀರಿ. ನಾವು ದುರಸ್ತಿಗೊಳಿಸಿದ ಬಳಿಕ ಮೊದಲಿನ ಹಾಗೆ ಏಕಾಏಕಿ ನೀವು ಅದನ್ನು ಏಲಂ ಮಾಡಿದರೆ ನಾವೇನು ಮಾಡೋದು. ಆದ್ದರಿಂದ ನಮಗೆ ಮೊದಲು ಸಂಘದ ಕೈಯಿಂದ ಏಲಂ ಆಗಿರುವ ಕೊಠಡಿಯೇ ಬೇಕು. ಈಗ ಆಗಿರುವ ಟೆಂಡರನ್ನು ರದ್ದುಪಡಿಸಿ ಎಂದು ಆಗ್ರಹಿಸಿದರಲ್ಲದೇ, ಈ ಬಗ್ಗೆ ಈಗಲೇ ನಿರ್ಣಯ ಮಾಡಿ ಎಂದರು. ಗ್ರಾಮಸ್ಥರು ಪಟ್ಟು ಸಡಿಸದಿದ್ದರಿಂದ ಕೊನೆಗೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಈ ಬಗೆಗಿನ ಚರ್ಚೆಯಲ್ಲಿ ಗ್ರಾಮಸ್ಥರಾದ ರೂಪೇಶ್ ರೈ, ಗಣೇಶ್ ದರ್ಬೆ, ಅಸ್ಕರ್ ಅಲಿ, ಅನಿ ಮಿನೇಜಸ್, ಮುಹಮ್ಮದ್ ರಫೀಕ್, ಕಲಂದರ್ ಶಾಫಿ ಮಾತನಾಡಿದರು.
ಧರ್ಮಾಧಾರಿತ ಅಭಿವೃದ್ಧಿ
ಗ್ರಾ.ಪಂ.ನಲ್ಲಿ ಎಲ್ಲಾ ಬಿಜೆಪಿ ಬೆಂಬಲಿತ ಸದಸ್ಯರಿದ್ದು, ಇಲ್ಲಿ ಅಭಿವೃದ್ಧಿ ಕೂಡಾ ಧರ್ಮಾಧಾರಿತವಾಗಿ ನಡೆಯುತ್ತಿದೆ. ಎಲ್ಲಾ ಧರ್ಮದವರು ಗ್ರಾ.ಪಂ.ಗೆ ಟ್ಯಾಕ್ಸ್ ಕಟ್ಟುವುದಿಲ್ಲವೇ? ಆದರೆ ನಿಮಗೆ ಬೇಕಾದವರ ಮನೆ ಬಳಿ ಮಾತ್ರ ಅಭಿವೃದ್ಧಿಯನ್ನು ಮಾಡುತ್ತೀರಿ ಎಂದು ಮುಹಮ್ಮದ್ ರಫೀಕ್ ಸಭೆಯಲ್ಲಿ ಗಂಭೀರ ಆರೋಪ ಮಾಡಿದರು. ಆಗ ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಮಾತನಾಡಿ, ಆ ವಾರ್ಡ್ನ ಸದಸ್ಯರು ಹೇಳಿದ ಹಾಗೆ ಅನುದಾನ ಇಡಲಾಗಿದೆ. ನಾನು ಆ ರೀತಿ ಮಾಡಿಲ್ಲ. ಎಲ್ಲರಿಗೂ ಸ್ಪಂದನೆ ಕೊಟ್ಟಿದ್ದೇನೆ ಎಂದರು. ಸದಸ್ಯ ಪ್ರಶಾಂತ್ ಎನ್. ಮಾತನಾಡಿ, ನಿಮ್ಮ ಆರೋಪ ಸರಿಯಲ್ಲ. ಅಗತ್ಯವಿದ್ದ ಎಲ್ಲಾ ಕಡೆ ಅಭಿವೃದ್ಧಿ ಮಾಡಲಾಗಿದೆ. ಬೇಕಾದರೆ ನೀವು ಗ್ರಾಮಸ್ಥರಲ್ಲಿ ವಿಚಾರಿಸಿ ಎಂದರು. ಆಗ ಮುಹಮ್ಮದ್ ರಫೀಕ್ ಅವರು, ಈ ವರದಿಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತರು ಇರುವ ಕಡೆಗಳಲ್ಲಿ ಅಭಿವೃದ್ಧಿ ನಡೆದದ್ದೇ ಕಾಣುವುದಿಲ್ಲ ಎಂದರು. ಆಗ ಪ್ರಶಾಂತ್ ಎನ್. ಮಾತನಾಡಿ, ಈ ವರದಿಯಲ್ಲಿರುವುದು ಹಣ ಪಾವತಿಯಾಗಿರುವ ಕಾಮಗಾರಿಗಳ ವಿವರ. ಅದೆಲ್ಲಾ ಮುಂದಿನ ವರದಿಯಲ್ಲಿ ಬರಲಿದೆ ಎಂದರು. ಆದರೂ ಇದನ್ನು ಒಪ್ಪಿಕೊಳ್ಳಲು ಮುಹಮ್ಮದ್ ರಫೀಕ್ ಸಿದ್ಧರಾಗದಿದ್ದರೂ, ಈ ಬಗೆಗಿನ ಚರ್ಚೆಗೆ ಮಾತ್ರ ತೆರೆ ಬಿತ್ತು.
ಆಸಕ್ತಿಯಿದ್ದರೆ ರಾಜಕೀಯಕ್ಕೆ ಸೇರಿ
ಮಳೆ ಹಾನಿಗೊಳಗಾದ ಕುಟುಂಬಗಳಿಗೆ ಗ್ರಾ.ಪಂ. ಟರ್ಫಾಲಿನ್ ವಿತರಣೆಯಲ್ಲಿ ಅವ್ಯವಹಾರದ ಹಾಗೂ ತಾರತಮ್ಯದ ಆರೋಪಗಳು ಕೇಳಿ ಬರುತ್ತಿವೆ. ಆದ ಕಾರಣ ನಾನು ಇದನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದ್ದೇನೆ. ನಾನು ಮಾಹಿತಿ ಹಕ್ಕಿನಲ್ಲಿ ಕೇಳಿದ ಬಳಿಕ ನೀವು ಮನೆಮನೆಗಳಿಗೆ ಪೋಟೋ ತೆಗೆಯಲು ಹೋಗಿದ್ದೀರಿ. ಪೋಟೋಗಳಲ್ಲಿ ಹರಿದ ಟರ್ಫಾಲಿನ್ಗಳು ಕೂಡಾ ಕಂಡು ಬರುತ್ತಿದೆ. ಇದಕ್ಕೆ ಮುಂದಕ್ಕೆ ಹೋರಾಟ ಮಾಡುತ್ತೇನೆ. ಆದರೆ ನೀವು ಹೋದ ಕಡೆಗಳೆಲ್ಲಿ ನನ್ನಿಂದಾಗಿ ನಾನು ಬಂದಿರುವುದು. ಅಂತ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದೀರಿ ಎಂಬ ಮಾಹಿತಿಯೂ ನನಗೆ ಬಂದಿದೆ. ನೀವು ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುವುದಾದರೆ, ನಿಮಗೆ ರಾಜಕೀಯದಲ್ಲಿ ಆಸಕ್ತಿಯಿದ್ದರೆ ನೀವು ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪಕ್ಷಕ್ಕೆ ಸೇರಿ ಎಂದು ಗ್ರಾಮಸ್ಥೆ ಅನಿ ಮಿನೇಜಸ್ ಅವರು ಸಹಾಯಕ ಲೆಕ್ಕಾಧಿಕಾರಿ ದೇವಪ್ಪ ನಾಯ್ಕರನ್ನು ತರಾಟೆಗೆ ತೆಗೆದುಕೊಂಡರು. ಆಗ ದೇವಪ್ಪ ನಾಯ್ಕ ಅವರು ನಾನು ಅಪಪ್ರಚಾರ ಮಾಡಿಲ್ಲ. ಪೋಟೋ ಯಾಕೆ ಎಂದು ಮನೆಯವರು ಕೇಳಿದ್ದಕ್ಕೆ ಹೇಳಿದ್ದೇನೆ ಎಂದರು. ಆಗ ಮಾತನಾಡಿದ ಅನಿ ಮಿನೇಜಸ್, ಅದೆಲ್ಲಾ ಗೊತ್ತಿದೆ. ಟರ್ಫಾಲಿನ್ ವಿಷಯದಲ್ಲಿ ಕೂಡಾ ತಾರತಮ್ಯ ಮಾಡಲಾಗಿದೆ. ಹಲವು ಧರೆ ಕುಸಿದ ಮನೆಗಳವರಿಗೆ ಕೊಟ್ಟಿಲ್ಲ. ನಿಮಗೆ ಬೇಕಾದವರಿಗೆ ಮಾತ್ರ ಕೊಟ್ಟಿದ್ದೀರಿ. ಕೊಡುವಾಗ ಎಲ್ಲರಿಗೂ ಕೊಡಬೇಕಿತ್ತು. ಕೊಡುವಾಗ ಜಿಪಿಎಸ್ ಪೋಟೋ ತೆಗೆಯಬೇಕು. ದಾಖಲೆಗಳು ಸರಿ ಇರಬೇಕು ಎಂಬ ನಿಯಮಗಳಿಲ್ಲವೇ? ಇಲ್ಲಿ ಅವ್ಯವಹಾರ ನಡೆದಿದೆ ಎಂಬುದು ನನ್ನ ಗಮನಕ್ಕೆ ಬಂದೇ ನಾನು ಮಾಹಿತಿ ಹಕ್ಕಿನಲ್ಲಿ ಈ ಬಗ್ಗೆ ಕೇಳಿದ್ದು ಎಂದರಲ್ಲದೆ, ಮನೆಗಳಿಗೆ ಧರೆ ಕುಸಿದ ಕಡೆ ಕೂಡಾ ಮಣ್ಣು ಕೆಲವರದ್ದು ಮಾತ್ರ ಗ್ರಾ.ಪಂ. ಮಣ್ಣು ತೆರವು ಮಾಡಿಕೊಟ್ಟಿದೆ. ಉಳಿದವರು ಗ್ರಾಮಸ್ಥರಲ್ಲವೇ? ಸೌಲಭ್ಯ ನೀಡುವಾಗ ಅರ್ಹ ಎಲ್ಲರಿಗೂ ನೀಡಿ. ಪ.ಜಾತಿ ಮತ್ತು ಪ.ಪಂಗಡದ ನಿಧಿಯಲ್ಲಿ ಟ್ಯಾಂಕ್ ವಿತರಣೆಯಲ್ಲಿಯೂ ನಿಮಗೆ ಬೇಕಾದವರನ್ನು ನೀವು ಆಯ್ಕೆ ಮಾಡಿದ್ದೀರಿ. ಅದಕ್ಕಿಂತ ಮೊದಲು ಅರ್ಜಿ ಕೊಟ್ಟವರಿಗೆ ನೀವು ಟ್ಯಾಂಕ್ ವಿತರಣೆ ಮಾಡಿಲ್ಲ ಎಂದರು. ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಗ್ರಾಮಸ್ಥೆ ಅಮಿತಾ ಹರೀಶ್, ಇವರು ಸರಕಾರಿ ಅಧಿಕಾರಿಯ ಪತ್ನಿಗೂ ಟ್ಯಾಂಕ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಸವಲತ್ತುಗಳನ್ನು ವಿತರಣೆ ಮಾಡುವಾಗ ಮೊದಲು ಅರ್ಹ ಬಡವರನ್ನು ಆಯ್ಕೆ ಮಾಡಿ ಎಂಬ ಸಲಹೆ ಈ ಸಂದರ್ಭ ಗ್ರಾಮಸ್ಥರಿಂದ ಕೇಳಿ ಬಂತು.