ಕಡಬ: ಐತ್ತೂರು ಗ್ರಾಮದ ಬಜಕೆರೆ ಕಾಲೋನಿಯ ಬಳಿ ಮರಿಯಾನೆಯೊಂದಿಗೆ ಕಾಡಾನೆಗಳು ಕಳೆದ 8 ದಿನಗಳಿಂದ ಬೀಡು ಬಿಟ್ಟಿದ್ದು, ಜನರು ಆತಂಕದಿಂದಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಆ ಭಾಗದ ನಾಗರಿಕರು, ಪ್ರತಿಭಟನೆ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ನ.20ರಂದು ಆಗಮಿಸಿ ಕಾಲೋನಿಯಲ್ಲಿ ಸಭೆ ನಡೆಸಿದ್ದಾರೆ.

ಕಳೆದ 8 ದಿನಗಳಿಂದ ಮರಿಯಾನೆಯೊಂದಿಗೆ ಕಾಡಾನೆಗಳು ಬೀಡು ಬಿಟ್ಟಿರುವುದು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ ಮಾಧ್ಯಮಗಳಲ್ಲಿ ವರದಿ ಕೂಡ ಆಗಿತ್ತು. ಆದರೂ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿ ನ.21ರಂದು ಅರಣ್ಯ ಇಲಾಖೆಯ ವಿರುದ್ದ ಪ್ರತಿಭಟನೆ ಮಾಡುವುದಾಗಿ ಈ ಬಗ್ಗೆ ಸ್ಥಳೀಯ ಮುಖಂಡರು ಪತ್ರ ವ್ಯವಹಾರ ಮಾಡಿದ್ದರು. ಪ್ರತಿಭಟನೆಯ ಎಚ್ಚರಿಕೆಯ ಬೆನ್ನಲ್ಲೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ನ.20ರಂದು ಕಾಲೋನಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸುಳ್ಯ ವಲಯ ಸಹಾಯಕ ಅರಣ್ಯಾಧಿಕಾರಿ, ಸುಬ್ರಹ್ಮಣ್ಯ,ಅರಣ್ಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಕಾಲೋನಿಯ ನಿವಾಸಿಗಳೊಂದಿಗೆ ಕಾಡಾನೆಗಳಿಂದ ತೊಂದರೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಇನ್ನೂ 2 ದಿನದಲ್ಲಿ ಈ ಭಾಗದಿಂದ ಕಾಡಾನೆಗಳನ್ನು ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಿದ್ದು, ಅವರ ಮನವಿಗೆ ಮೇರೆಗೆ 2 ದಿನದಲ್ಲಿ ಅರಣ್ಯ ಇಲಾಖೆ ಸ್ಪಂದಿಸದಿದ್ದಲ್ಲಿ ಸೋಮವಾರ ಮತ್ತೆ ಪ್ರತಿಭಟನೆ ಮಾಡುವುದಾಗಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವತ್ಸಲಾ, ಮಾಜಿ ಅಧ್ಯಕ್ಷ ಸತೀಶ್ ಕೆ, ಅಂಗನವಾಡಿ ಕಾರ್ಯಕರ್ತೆ ಲಿಂಗಮ್ಮ ಹಾಗೂ ಆಜನ, ಕಲ್ಲಾಜೆ ನಿವಾಸಿಗಳು ಉಪಸ್ಥಿತರಿದ್ದರು.