ಕನ್ಯಾನ: ಬಂಡಿತ್ತಡ್ಕದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಆಟಿಡ್ ಒಂಜಿ ದಿನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪಂಚಾಯತ್ ಸದಸ್ಯರಾದ ಬುಶ್ರಿಯಾ ಅವರು ಧ್ವಜಾರೋಹಣಗೈದರು. ಕನ್ಯಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ರಹೆಮಾನ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ತ್ಯಾಗ ಬಲಿದಾನಗಳಿಂದ ದೊರಕಿದ ಸ್ವಾತಂತ್ರ್ಯವನ್ನು ಸ್ಮರಿಸಿದರು.
ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಕೃಷ್ಣ ಕುಮಾರ್ ಕಮ್ಮಜೆ ಅಹಿಂಸೆ, ಸರ್ವಧರ್ಮ ಸಮನ್ವಯತೆಯಿಂದ ಶಾಲಾಭಿವೃದ್ದಿ ಕಾರ್ಯಗಳನ್ನು ನಡೆಸಬೇಕು ಎಂದು ಕಿವಿಮಾತು ಹೇಳಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕುಕ್ಕಾಜೆ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಮಾತನಾಡಿ ಶಾಲಾಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ತುಳುನಾಡ ಆಟಿ ಆಚರಣೆಯ ಕುರಿತಾಗಿ ಶಾಲಾ ಅತಿಥಿ ಶಿಕ್ಷಕಿ ವನಿತಾ ಕನ್ಯಾನ ಮಾಹಿತಿಯನ್ನು ನೀಡಿದರು.
ತದನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ಛದ್ಮವೇಷ, ಭಾಷಣ ನೆರವೇರಿತು. ಈ ಸಂದರ್ಭದಲ್ಲಿ ಶೂ ವಿತರಣೆ,1ನೇ ತರಗತಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಹೆಸರಲ್ಲಿ ತಲಾ 1000 ರೂಪಾಯಿ ಇಟ್ಟಿರುವ ಬಾಂಡ್ ವಿತರಣೆ ಹಾಗೂ ಕ್ರೀಡಾ ಸಮವಸ್ತ್ರವನ್ನು ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳಾದ ಅಶ್ರಫ್ ಮತ್ತು ಹೈದರ್ ಕುಕ್ಕಾಜೆ ಗ್ರಂಥಾಲಯಕ್ಕೆ ನೀಡಿರುವ ಕಪಾಟನ್ನು ಶಾಲಾ ಮುಖ್ಯ ಶಿಕ್ಷಕಿ ಸೆಕೀನಾ ಅವರಿಗೆ ಹಸ್ತಾಂತರಿಸಲಾಯಿತು. ಮುಸ್ಲಿಂ ಚಾರಿಟಿ ಟ್ರಸ್ಟ್ ಕನ್ಯಾನ ಇದರ ವತಿಯಿಂದ ಅಂಗನವಾಡಿ ಕಾರ್ಯಕರ್ತೆ ಶಾರದ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಕಮರುನ್ನೀಸಾ, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಸದಸ್ಯ ಮೊಯಿದಿನ್, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಉಮ್ಮರ್ ಕೊಣಲೆ, ಪದಾಧಿಕಾರಿಗಳು, ಪೋಷಕರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಆಟಿ ತಿಂಗಳ ವಿಶೇಷ ಆಹಾರ ತಿನಿಸುಗಳನ್ನು ವಿತರಿಸಲಾಯಿತು.