ಬೆಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹೊರತುಪಡಿಸಿ ರಾಜ್ಯದ ಬೇರೆ ಯಾವುದೇ ಸ್ಥಳಗಳಲ್ಲಿ ಕಂಬಳ ಆಯೋಜಿಸದಂತೆ ರಾಜ್ಯ ಸರಕಾರವನ್ನು ನಿರ್ಬಂಧಿಸಲು ಹೈಕೋರ್ಟ್ ನಿರಾಕರಿಸಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಬೇರೆ ಜಿಲ್ಲೆ ಅಥವಾ ಭಾಗಗಳಲ್ಲಿ ಕಂಬಳ ಕ್ರೀಡೆ ಆಯೋಜನೆ ನಿರ್ಬಂಧಿಸಲು ಸರಕಾರಕ್ಕೆ ನಿರ್ದೇಶಿಸಬೇಕು.ಪಿಲಿಕುಳ ಜೈವಿಕ ಉದ್ಯಾನವನ(ನಿಸರ್ಗಧಾಮ)ದ ಬಳಿ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್’ (ಪೆಟಾ)2024ರಲ್ಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಸಾಂಪ್ರದಾಯಿಕ ಕ್ರೀಡೆಗಳು ವಹಿಸುವ ಮಹತ್ವದ ಪಾತ್ರವನ್ನು ಪರಿಗಣಿಸಿ ರಾಜ್ಯದಲ್ಲಿ ಕಂಬಳ ಅಥವಾ ಎತ್ತಿನಗಾಡಿ ಓಟದ ಸ್ಪರ್ಧೆಗೆ ವಿನಾಯಿತಿ ನೀಡುವುದು ಸೂಕ್ತವೆಂದು ಪರಿಗಣಿಸಿ ಶಾಸಕಾಂಗವು ‘ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆ’ಗೆ ಎರಡನೇ ತಿದ್ದುಪಡಿ ತಂದಿದೆ ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕ ರಾಜ್ಯದಲ್ಲಿ ಜನರ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಕ್ರೀಡೆಯಾದ ‘ಕಂಬಳ’ ಅಥವಾ ‘ಎತ್ತುಗಳ ಓಟ’ ಯಾ ‘ಎತ್ತಿನ ಬಂಡಿ ಓಟ’ ವಹಿಸಿದ ಮಹತ್ವದ ಪಾತ್ರವನ್ನು ಪರಿಗಣಿಸಿ ಹಾಗೂ ಸ್ಥಳೀಯ ತಳಿಗಳ ಜಾನುವಾರುಗಳ ಉಳಿವು ಮತ್ತು ಸಂರಕ್ಷಣೆ ಖಚಿತಪಡಿಸಿಕೊಳ್ಳುವಲ್ಲಿ ಕರ್ನಾಟಕ ಸರಕಾರವು ರಾಜ್ಯದಲ್ಲಿ ಕಂಬಳ ಅಥವಾ ಎತ್ತುಗಳ ಓಟ ಅಥವಾ ಎತ್ತಿನ ಬಂಡಿ ಓಟ ಆಯೋಜನೆಗೆ ಕಾಯ್ದೆಯಿಂದ ವಿನಾಯಿತಿ ನೀಡಲು ನಿರ್ಧರಿಸಿದೆ.ಈ ಕಾರಣದಿಂದ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೊರಗಿನ ಯಾವುದೇ ಸ್ಥಳದಲ್ಲಿ ಕಂಬಳ ಕ್ರೀಡೆ ಆಯೋಜಿಸದಂತೆ ಸರಕಾರವನ್ನು ನಿರ್ಬಂಽಸಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ನೋಟಿಸ್:
ಇದಲ್ಲದೆ, ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಂಬಳ ಆಯೋಜಿಸಲು ಅನುಮತಿಸಬಹುದೇ ಎನ್ನುವುದು ಅರ್ಜಿಯಲ್ಲಿನ ಎರಡನೇ ಪ್ರಶ್ನೆಯಾಗಿದೆ.ದಕ್ಷಿಣ ಕನ್ನಡ ಪ್ರದೇಶಕ್ಕೆ ಸೇರಿದ ಪಿಲಿಕುಳದಲ್ಲಿ ಕಂಬಳವು ಜನರ ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವಾಗಿದೆ ಎಂಬ ಬಗ್ಗೆ ಯಾವುದೇ ಸಂದೇಹವಿಲ್ಲ.ಕಂಬಳವು ಗದ್ದಲದಿಂದ ಕೂಡಿದ ಕಾರ್ಯಕ್ರಮವಾಗಿದ್ದು, ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಂಬಳ ಆಯೋಜಿಸುವುದರಿಂದ ಅಲ್ಲಿನ ಪ್ರಾಣಿಗಳಿಗೆ ತೊಂದರೆಯಾಗುತ್ತದೆ.ಅಲ್ಲಿ ಕಂಬಳ ನಡೆಸುವುದು ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಉಲ್ಲಂಘನೆಯಾಗುತ್ತದೆ ಎನ್ನುವುದು ಅರ್ಜಿದಾರರ ವಾದವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಪಿಲಿಕುಳ ನಿಸರ್ಗಧಾಮವು 80 ಹೆಕ್ಟೇರ್ ವ್ಯಾಪ್ತಿಯಲ್ಲಿದೆ ಎಂದು ಹೇಳಲಾಗಿದ್ದು, ಕಂಬಳ ಕಾರ್ಯಕ್ರಮ ನಡೆಯಬೇಕಿರುವ ಸ್ಥಳವು 80 ಹೆಕ್ಟೇರ್ಗಳ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬುದು ಸದ್ಯದ ವಿವಾದವಾಗಿದೆ.ಮೃಗಾಲಯ ಮಾನ್ಯತೆ ನಿಯಮಗಳು-2009ರ ಪ್ರಕಾರ, ಪ್ರತಿ ಮೃಗಾಲಯವು ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮೋದನೆ ಪಡೆದ ಮಾಸ್ಟರ್ ಪ್ಲ್ಯಾನ್ ಹೊಂದಿರಬೇಕು.ಈ ಹಿನ್ನೆಲೆಯಲ್ಲಿ ಪಿಲಿಕುಳ ಉದ್ಯಾನದ ಮಾಸ್ಟರ್ ಪ್ಲ್ಯಾನ್ ಕೇಂದ್ರ ಮೃಗಾಲಯ ಪ್ರಾಧಿಕಾರದಲ್ಲಿ ಲಭ್ಯವಿರುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಕೇಂದ್ರ ಮೃಗಾಲಯ ಪ್ರಾಽಕಾರವನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಿ ನೋಟಿಸ್ ಜಾರಿಗೊಳಿಸಿತಲ್ಲದೆ, ಪಿಲಿಕುಳ ಉದ್ಯಾನದ ಮಾಸ್ಟರ್ ಪ್ಲ್ಯಾನ್ ಅನುಮೋದಿಸಿರುವ ಕುರಿತ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮೃಗಾಲಯ ಪ್ರಾಧಿಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಿದೆ.
