ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಅಡಿಕೆ ಬೆಳೆಯನ್ನೇ ಅವಲಂಬಿಸಿರುವ ಲಕ್ಷಾಂತರ ರೈತರು ಕೊಳೆರೋಗದಿಂದ ಅಡಿಕೆ ಬೆಳೆ ಕಳೆದುಕೊಂಡು ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಈ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಿದ ಶಾಸಕ ಅಶೋಕ್ ಕುಮಾರ್ ರೈ, ಹಾನಿಗೊಳಗಾದ ಪ್ರದೇಶಗಳ ಅಂಕಿಅಂಶಗಳನ್ನು ಬಿಚ್ಚಿಟ್ಟರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಳಿಗೆ ತಗುಲಿದ ಕೊಳೆ ರೋಗದಿಂದಾಗಿ ಅಡಿಕೆ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ್ದು, ರೈತರಿಗೆ ಪರಿಹಾರ ನೀಡುವಂತೆ ತೋಟಗಾರಿಕಾ ಸಚಿವರ ಗಮನ ಸೆಳೆದಿದ್ದೇನೆ ಎಂದರು.
2024ರಲ್ಲಿ ಇಡೀ ವರ್ಷ 804.6 ಮಿ.ಮೀ. ಕನಿಷ್ಠ ಮಳೆಯಾಗಿದ್ದು, 2025 ರಲ್ಲಿ ಕನಿಷ್ಠ ಮಳೆ 804.6 ಮಿ.ಮೀ ಇದೆ. ಆದರೆ ಅಡಿಕೆಯನ್ನೇ ಅವಲಂಬಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 1002.9 ಮಿ.ಮೀ. ಮಳೆಯಾಗಿದೆ ಎಂದು ಅಶೋಕ್ ರೈ ಅವರು ಹೇಳುತ್ತಿದ್ದಾಗ, ಮಾತು ಬೇಗ ಮುಕ್ತಾಯಗೊಳಿಸುವಂತೆ ಸ್ಪೀಕರ್ ಯುಟಿ ಖಾದರ್ ತಿಳಿಸಿದರು. ಇದಕ್ಕೆ, ನಿಮ್ಮ ಭಾಗದಲ್ಲಿ (ಉಳ್ಳಾಲ) ಅಡಿಕೆ ಬೆಳೆ ಕಡಿಮೆಯಿದೆ. ನಮ್ಮ ಭಾಗದಲ್ಲಿ ಹೆಚ್ಚಿನವರು ಅಡಿಕೆ ಕೃಷಿಗೇ ಅವಲಂಬಿತರಾಗಿದ್ದಾರೆ ಎಂದು ಹೇಳಿ ಶಾಸಕರು ಮಾತು ಮುಂದುವರಿಸಿದರು.
ಅಡಿಕೆ ಕೃಷಿಗೆ ಕೊಳೆ ರೋಗ ಬಂದಿದ್ದು, ಸುಳ್ಯದಲ್ಲಿ 1100 ಹೆಕ್ಟೇರ್, ಪುತ್ತೂರಿನಲ್ಲಿ 2100 ಹೆಕ್ಟೇರ್, ಬೆಳ್ತಂಗಡಿಯಲ್ಲಿ 1980 ಹೆಕ್ಟೇರ್, ಬಂಟ್ವಾಳದಲ್ಲಿ 1715 ಹೆಕ್ಟೇರ್, ಕಡಬದಲ್ಲಿ 2150 ಹೆಕ್ಟೇರ್ ಪ್ರದೇಶ ಕೊಳೆ ರೋಗಕ್ಕೆ ತುತ್ತಾಗಿದೆ. ಒಟ್ಟಾರೆಯಾಗಿ 11,139 ಹೆಕ್ಟೇರ್ ಪ್ರದೇಶದಲ್ಲಿ ರೋಗಬಾಧೆಯ ಬಿಸಿ ತಟ್ಟಿದೆ ಎಂದರು.
ಒಂದು ಅಡಿಕೆ ಗಿಡ ಮರವಾಗಿ ಫಸಲು ನೀಡಬೇಕಾದರೆ 5-6 ವರ್ಷಗಳು ಬೇಕಾಗುತ್ತದೆ. ಹೀಗಿದ್ದಾಗ ಗಾಳಿ ಮಳೆಗೆ ಅನೇಕ ಕಡೆಗಳಲ್ಲಿ ಸಾವಿರಾರು ಅಡಿಕೆ ಮರಗಳು ಧರಾಶಾಹಿಗಳಾಗಿವೆ. ಒಂದು ಹೆಕ್ಟೇರ್ನಲ್ಲಿ 1370 ಅಡಿಕೆ ಮರಗಳಿರುತ್ತವೆ. ಆದರೆ ಕೊಳೆ ರೋಗಕ್ಕೆ ಸರಕಾರ ಒಂದು ಹೆಕ್ಟೇರ್ಗೆ 22500 ರೂಪಾಯಿ ಪರಿಹಾರ ನೀಡುತ್ತದೆ. ಅಂದರೆ, ತಲಾ ಒಂದೊಂದು ಮರಕ್ಕೆ 16 ರೂಪಾಯಿಯಂತೆ ನೀಡಲಾಗುತ್ತಿದೆ. ಕೇರಳದಲ್ಲಿ 2500 ರೂ. ನೀಡಲಾಗುತ್ತಿದೆ. ಪುತ್ತೂರಿಗೆ 4.2 ಕೋಟಿ ರೂಪಾಯಿ, ಇಡೀ ಜಿಲ್ಲೆಗೆ 24 ಕೋಟಿ ಅನುದಾನ ಬೇಕು ಎಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯವರು ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಶಾಸಕ ರೈ ಗಮನ ಸೆಳೆದರು.
ಹವಾಮಾನ ಆಧಾರಿತ ವಿಮೆ ನೀಡಲಾಗುತ್ತಿದೆ. ಆದರೆ, ಹಿಂದೆ ನೀಡಲಾಗುತ್ತಿದ್ದ 20% ವಿಮೆಯನ್ನು ಶೇ.16ಕ್ಕೆ ಇಳಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಶಾಸಕರು ಕೊಳೆ ರೋಗದ ನಡುವೆ ಹಳದಿ ರೋಗ ಕೂಡ ಕಂಡುಬಂದಿದೆ. ಸುಳ್ಯದಲ್ಲಿ ಈ ರೋಗದಿಂದಾಗಿ 37317 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿವೆ. ಹೀಗಾಗಿ ಕೇರಳದಂತೆ ನಮ್ಮಲ್ಲಿಯೂ ಒಂದೊಂದು ಅಡಿಕೆ ಮರಕ್ಕೆ 2500 ರೂ.ನಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು
ರೋಗಕ್ಕೆ ತುತ್ತಾದ ಪ್ರದೇಶಗಳು
ದ.ಕ. ಜಿಲ್ಲೆ: 11,139 ಹೆಕ್ಟೆರ್ ,ಪುತ್ತೂರು: 2100 ಹೆಕ್ಟೇರ್
ಸುಳ್ಯ: 1100 ಹೆಕ್ಟೇರ್ ಬೆಳ್ತಂಗಡಿ: 1980 ಹೆಕ್ಟೇರ್
ಕಡಬ: 2150 ಹೆಕ್ಟೇರ್ ಬಂಟ್ವಾಳ: 1715 ಹೆಕ್ಟೇರ್