ಪುತ್ತೂರು: ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪು ಕಲ್ಲು ಗಣಿಗಾರಿಕೆಯ ಸಮಸ್ಯೆಯನ್ನು ಕ್ಯಾಬಿನೆಟ್ ಸಭೆಯಲ್ಲಿ ಇತ್ಯರ್ಥ ಮಾಡುವ ಕುರಿತು ಗಣಿ ಮತ್ತು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಭರವಸೆ ನೀಡಿದ್ದಾರೆ.
ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಕೆಂಪು ಕಲ್ಲು ಸಮಸ್ಯೆ ಪರಿಹರಿಸುವ ಕುರಿತು ಮನವಿ ಮಾಡಿದರು. ಉಭಯ ಜಿಲ್ಲೆಗಳಲ್ಲಿ ಕಳೆದ ಕೆಲವು ತಿಂಗಳಿಂದ ಕೆಂಪು ಕಲ್ಲು ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ.ಪರವಾನಿಗೆ ಹೊಂದಿರುವವರು ಗಣಿಗಾರಿಕೆ ನಡೆಸುತ್ತಿದ್ದರೂ ಈ ಹಿಂದೆ ಟನ್‌ಗೆ ಇದ್ದ ರೋಯಲ್ಟಿಯನ್ನು ರೂ.256ಗೆ ಏರಿಕೆ ಮಾಡಲಾಗಿದೆ. ಕೆಂಪು ಕಲ್ಲು ಗಣಿಗಾರಿಕೆಗೆ ನಿರ್ಬಂಧ ವಿಧಿಸಿರುವ ಕಾರಣ ಉಭಯ ಜಿಲ್ಲೆಗಳಲ್ಲಿ ತೀವ್ರತರದ ಸಮಸ್ಯೆ ಸೃಷ್ಟಿಯಾಗಿದೆ. ಮನೆ ಕಟ್ಟುವಲ್ಲಿ ಕೆಂಪು ಕಲ್ಲು ಅಗತ್ಯವಾಗಿ ಬೇಕಾಗಿದ್ದು ಗಣಿಗಾರಿಕೆ ನಿಂತಿರುವ ಕಾರಣ ಜಿಲ್ಲೆಯ ನೂರಾರು ಕಾರ್ಮಿಕರು, ಗಾರೆ ಕಾರ್ಮಿಕರಿಗೆ ಸಂಕಷ್ಟ ಉಂಟಾಗಿದೆ. ಸರಕಾರ ಈ ಬಗ್ಗೆ ಸ್ಪಷ್ಟ ತೀರ್ಮಾನವನ್ನು ಕೈಗೊಂಡು ಉಂಟಾಗಿರುವ ತೊಂದರೆಯನ್ನು ಪರಿಹರಿಸಬೇಕು ಎಂದು ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗಿದೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.
ರೋಯಲ್ಟಿ ರೂ.100, ಪರವಾ ನಿಗೆ ಅವಧಿ ಎರಡು ವರ್ಷ..:
ಈಗಾಗಲೇ ಒಂದು ಟನ್ ಕೆಂಪು ಕಲ್ಲಿಗೆ ರೋಯಲ್ಟಿಯನ್ನು ರೂ.256ಕ್ಕೆ ಏರಿಸಲಾಗಿದೆ.ಈ ಹಿಂದೆ ಇದ್ದ 74 ರೂ.ರಾಯಲ್ಟಿ ಬದಲಾಗಿದೆ.ಅದನ್ನು ರೂ.100ಕ್ಕೆ ಸೀಮಿತಗೊಳಿಸಬೇಕು ಮತ್ತು ಪರವಾನಿಗೆ ಅವಧಿಯನ್ನು ಒಂದು ವರ್ಷದ ಬದಲಾಗಿ ಎರಡು ವರ್ಷಕ್ಕೆ ಏರಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಸಚಿವರ ಸ್ಪಂದನೆ: ಬೇಡಿಕೆಗೆ ಸ್ಪಂದಿಸಿದ ಸಚಿವರು ಕ್ಯಾಬಿನೆಟ್ ಸಭೆಯಲ್ಲಿ ಬೇಡಿಕೆಯನ್ನು ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ ಎಂದು ಶಾಸಕ ರೈ ತಿಳಿಸಿದ್ದಾರೆ.
ಕೆಂಪು ಕಲ್ಲು ಸಮಸ್ಯೆ ಕೆಂಪು ಕಲ್ಲು ಸಮಸ್ಯೆಯ ಬಗ್ಗೆ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದೆ.ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಜಿಲ್ಲೆಯ ಜನತೆ,ಕಾರ್ಮಿಕರು,ಗಾರೆ ಕೆಲಸದವರಿಗೆ ತೀವ್ರ ಸಂಕಷ್ಟ ಎದುರಾಗಲಿದೆ.ಎಲ್ಲಾ ವಿಚಾರಗಳನ್ನು ಸರಕಾರದ ಗಮನಕ್ಕೆ ತಂದಿದ್ದೇನೆ.ಖಂಡಿತವಾಗಿಯೂ ಸಮಸ್ಯೆ ಪರಿಹಾರ ಆಗಲಿದೆ ಎಂಬ ಪೂರ್ಣ ವಿಶ್ವಾಸ ಇದೆ
-ಅಶೋಕ್ ಕುಮಾರ್ ರೈ ಶಾಸಕರು,ಪುತ್ತೂರು