ಕಾಡಾನೆ ದಾಳಿಯಿಂದ ರೈತರ ಸಮಸ್ಯೆ ಪರಿಹರಿಸಲು ಎಲಿಫೆಂಟ್ ಟಾಸ್ಕ್ ಫೋರ್ಸ್ (ಇಟಿಎಫ್ ) ರಚನೆ ಅಗತ್ಯ :ಕಿಶೋರ್ ಕುಮಾರ್ ಪುತ್ತೂರು

0

ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ

ಪುತ್ತೂರು: ಸುಳ್ಯ, ಕಡಬ ಹಾಗು ಬೆಳ್ತಂಗಡಿ ಪ್ರದೇಶಗಳಲ್ಲಿ ಕಾಡಾನೆ ದಾಳಿಗಳು ದಿನೇ ದಿನೇ ಹೆಚ್ಚುತ್ತಿದ್ದು, ಸ್ಥಳೀಯ ಕೃಷಿಕರು ಆತಂಕದ ಜೀವನ ನಡೆಸುತ್ತಿದ್ದಾರೆ. ಈ ಸಮಸ್ಯೆ ಕುರಿತು ಆ.20ರಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಭಾರತೀಯ ಕಿಸಾನ್ ಮಜ್ದೂರ್ ಸಂಘದ ನಿಯೋಗದೊಂದಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.


“ಕಾಡಾನೆ ದಾಳಿಯಿಂದ ಕೃಷಿಕರ ಬೆಳೆಗಳಿಗೆ ಭಾರಿ ಹಾನಿ ಉಂಟಾಗುತ್ತಿದ್ದು, ಹಲವು ಸಂದರ್ಭಗಳಲ್ಲಿ ಮಾನವ ಜೀವಹಾನಿಯೂ ಸಂಭವಿಸಿದೆ. ರೈತರು ತಮ್ಮ ತೋಟಗಳಿಗೆ ತೆರಳಲು ಸಹ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮೇಲ್ಕಾಣಿಸಿದ ಪ್ರದೇಶದ ಕೇಂದ್ರೀಕೃತದಲ್ಲಿ ವಿಶೇಷ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ ಅಗತ್ಯ ಎಂದು ಸಚಿವರಿಗೆ ಕಿಶೋರ್ ಕುಮಾರ್ ಮನವಿ ಮಾಡಿದರು.


ಇತ್ತೀಚಿನ ಉದಾಹರಣೆಯಾಗಿ ಸುಳ್ಯದ ಜಾಲ್ಸೂರ್ ನಲ್ಲಿ ಕೃಷಿಕರೊಬ್ಬರ ಮೇಲೆ ಕಾಡೆಮ್ಮೆ ದಾಳಿ ನಡೆಸಿದ ಘಟನೆಯನ್ನು ಅವರು ಉಲ್ಲೇಖಿಸಿ, ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ತೀವ್ರಗೊಂಡಿರುವುದನ್ನು ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ರೈತರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಒಂದು ವಿಶೇಷ ಸಭೆಯನ್ನು ಆಯೋಜಿಸಿ ಸಮಸ್ಯೆ ಪರಿಹಾರಕ್ಕೆ ಕಾರ್ಯಯೋಜನೆ ರೂಪಿಸಬೇಕು ಎಂದು ಸಚಿವರನ್ನು ವಿನಂತಿಸಿದರು.


ಇದಲ್ಲದೆ, ಕಾಡು ಪ್ರಾಣಿಗಳ ದಾಳಿಯಿಂದಾಗುವ ಮಾನವ ಜೀವಹಾನಿ ಹಾಗೂ ಬೆಳೆ ಹಾನಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಶಾಸಕರು ಅಭಿಪ್ರಾಯಪಟ್ಟರು. “ಪ್ರಸ್ತುತ ನೀಡಲಾಗುತ್ತಿರುವ ಪರಿಹಾರ ಮೊತ್ತ ರೈತರ ನಷ್ಟಕ್ಕೆ ತಕ್ಕಷ್ಟು ಸಮರ್ಪಕವಾಗಿಲ್ಲ” ಎಂದು ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಕೃಷಿಕರಿಗೆ ಕೋವಿ ಪರವಾನಿಗೆ ಸರಳೀಕೃತಗೊಳಿಸಲು ನಿಯಮವನ್ನು ಸಡಿಲೀಕರಿಸಲು ಕೂಡ ವಿನಂತಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು ಆದಷ್ಟು ಬೇಗ ಜಿಲ್ಲೆಗೆ ಭೇಟಿ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್, ಭಾ. ಕಿಸಾನ್ ಸಂಘದ ಪ್ರಾಂತ್ಯ ಪ್ರಮುಖ ಸುಬ್ರಾಯ, ಕಾರ್ಯದರ್ಶಿ ರಾಮಪ್ರಸಾದ್, ಪ್ರಚಾರ ಕಾರ್ಯದರ್ಶಿ ಮಹಾಬಲ ರೈ, ಸುನಿಲ್ ಬೋರ್ಕರ್, ಪುನೀತ್ ರೈ, ಚೈತನ್ಯ ದೀಕ್ಷಿತ್, ಜಯರಾಮ್ ಭಟ್ ಉಪಸ್ಥಿತರಿದ್ದರು. ಜೊತೆಗೆ ಪುತ್ತೂರು ಬಿಜೆಪಿ ಪ್ರಮುಖರಾದ ಶಶಿಧರ್ ನಾಯಕ್, ನಾಗೇಂದ್ರ ಬಾಳಿಗಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here