ಕಡಬ ಕಾಂಗ್ರೆಸ್ ಭದ್ರಕೋಟೆ ಎನ್ನುವುದು ಸಾಬೀತಾಗಿದೆ-ಎಂ.ಎಸ್ ಮುಹಮ್ಮದ್
ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೇರುವ ಮೂಲಕ ಕಡಬ ಮತ್ತೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆ ಎನ್ನವುದು ಸಾಬೀತಾಗಿದೆ ಎಂದು ಕೆಪಿಸಿಸಿ ಪ್ರ.ಕಾರ್ಯದರ್ಶಿ, ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಉಸ್ತುವಾರಿ ಎಂ.ಎಸ್ ಮುಹಮ್ಮದ್ ತಿಳಿಸಿದ್ದಾರೆ.
ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ನಾವು ನಿದ್ದೆ ಬಿಟ್ಟು ರಾತ್ರಿ ಹಗಲು ಕೆಲಸ ಮಾಡಿದ್ದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಶ್ರಮಕ್ಕೆ ಫಲ ಸಿಕ್ಕಿದೆ. ಕಡಬದ ಪ್ರಬುದ್ಧ ಮತದಾರರು ಕಾಂಗ್ರೆಸ್ ಕೈ ಹಿಡಿಯುವ ಮೂಲಕ ರಾಜ್ಯಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ ಎಂದು ಅವರು ತಿಳಿಸಿದರು. ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆ ಮತ್ತು ಬಡವರ ಪರವಾಗಿ ಕಾಂಗ್ರೆಸ್ ಹಾಕಿಕೊಂಡಿರುವ ಬೇರೆ ಬೇರೆ ಯೋಜನೆಗಳು ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಮತದಾರರು ಕಾಂಗ್ರೆಸ್ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ, ಬಿಜೆಪಿಗೆ ವಾರ್ಡ್‌ವೊಂದರಲ್ಲಿ ಶೂನ್ಯ ಮತ ಸಿಕ್ಕಿರುವುದನ್ನು ನೋಡಿದಾಗ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿರುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅವರು ತಿಳಿಸಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕಿಯಿದ್ದರೂ ಕೂಡಾ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸಿದ್ದು ಸುಳ್ಯದ ಹಿಂದಿನ ಶಾಸಕರು ಕೂಡಾ ಕಡಬವನ್ನು ಅಭಿವೃದ್ಧಿ ಮಾಡದೇ ನಿರ್ಲಕ್ಷಿಸುತ್ತಾ ಬಂದಿದ್ದಾರೆ ಎಂದು ಎಂ.ಎಸ್ ಮುಹಮ್ಮದ್ ಹೇಳಿದರು. ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಇನ್ನೋರ್ವ ಉಸ್ತುವಾರಿ ಸುಭಾಶ್ಚಂದ್ರ ಶೆಟ್ಟಿ ಕೂಡಾ ಕಾಂಗ್ರೆಸ್ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.