ಪುತ್ತೂರು:ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆಗಳಲ್ಲಿ ಕಡ್ಡಾಯವಾಗಿ ಡಿಜೆ ಬಳಕೆಯನ್ನು ನಿಷೇಧ ಮಾಡಬೇಕು.ಜೊತೆಗೆ ರಾತ್ರಿ 10 ಗಂಟೆಯೊಳಗೆ ಧ್ವನಿವರ್ಧಕವನ್ನು ಸ್ಥಗಿತಗೊಳಿಸಬೇಕು.ಅನುಮತಿ ಪಡೆಯುವಾಗ ಈ ಸೂಚನೆಯನ್ನು ಕಟ್ಟಾನಿಟ್ಟಾಗಿ ಪಾಲಿಸಬೇಕು ಎಂದು ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ಅವರು ಆಯೋಜಕರಿಗೆ ಸೂಚನೆ ನೀಡಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ಕಡೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆ.20ರಂದು ಠಾಣೆಯಲ್ಲಿ ಗಣೇಶೋತ್ಸವದ ಕುರಿತು ಸಂಘಟಕರಿಗೆ ಮತ್ತು ಶಾಮಿಯಾನ, ಸೌಂಡ್ಸ್ ಲೈಟಿಂಗ್ಸ್,ಫ್ಲೆಕ್ಸ್ ಬ್ಯಾನರ್ ಪ್ರಿಂಟಿಂಗ್‌ಗಳ ಮಾಲಕರ ಸಭೆಯಲ್ಲಿ ಅವರು ಮೇಲಿನ ಸೂಚನೆ ನೀಡಿದ್ದಾರೆ.
ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ನಗರಸಭೆ, ಅಗ್ನಿಶಾಮಕದಳ, ಪೊಲೀಸ್ ಇಲಾಖೆಗಳ ಅನುಮತಿ ಪಡೆಯುವುದು ಅವಶ್ಯಕವಾಗಿದೆ.ಡಿಜೆಯನ್ನು ಬಳಕೆ ಮಾಡದಂತೆ ಸೂಚನೆ ನೀಡಲಾಗಿದ್ದು,ಇದನ್ನು ಆಯೋಜಕರು ಕಡ್ಡಾಯವಾಗಿ ಪಾಲಿಸಬೇಕು.ಡಿಜೆ ಬಳಕೆ ಮಾಡಿ ಹೆಚ್ಚು ಶಬ್ಧ ಮಾಡಿದರೆ, ವೃದ್ದರು, ಬಾಣಂತಿಯರು, ಮಕ್ಕಳು ಹಾಗೂ ಹೃದಯ ತೊಂದರೆಯುಳ್ಳವರಿಗೆ ತೊಂದರೆಯಾಗುತ್ತದೆ.ಡಿಜೆ ಬಳಕೆಯಿಂದ ಈ ಹಿಂದೆ ಅನೇಕ ಅವಘಡಗಳು ನಡೆದಿವೆ ಎಂದ ಅವರು,ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಡಿಜೆಯನ್ನು ಸಹ ಬಾಡಿಗೆಗೆ ನೀಡದಂತೆ ಸೌಂಡ್ಸ್ ಮತ್ತು ಲೈಟಿಂಗ್ಸ್‌ನ ಮಾಲಕರಿಗೂ ಸೂಚನೆ ನೀಡಿದರು.ಒಂದು ವೇಳೆ ಡಿಜೆ ಹಾಕಿದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ರಾತ್ರಿ ಗಂಟೆ 10ರ ಬಳಿಕ ಧ್ವನಿವರ್ಧಕ ನಿಷೇಧ:
ಗಣೇಶೋತ್ಸವಕ್ಕೆ ಎಷ್ಟು ಪ್ರಮಾಣದಲ್ಲಿ ಜನರು ಬರುತ್ತಾರೆ ಮತ್ತು ಇತರೇ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು.ವೇದಿಕೆಯ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಿರಬೇಕು.ರಾತ್ರಿ 10ರ ಬಳಿಕ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ.ಮೆರವಣಿಗೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಪಡೆದುಕೊಳ್ಳಬೇಕು.ಯಾವುದೇ ಆಹಿತಕರ ಘಟನೆಗಳು ನಡೆದಂತೆ ಎಚ್ಚರಿಕೆ ವಹಿಸಿ, ಶಾಂತಿ ಸೌರ್ಹಾದತೆಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕು ಎಂದು ಇನ್‌ಸ್ಪೆಕ್ಟರ್ ತಿಳಿಸಿದರು.
ನಾಸಿಕ್ ಬ್ಯಾಂಡ್ ಬಳಸುವಂತಿಲ್ಲ:
ಡಿಜೆಯಷ್ಟೆ ಶಬ್ದ ಭರಿತ ನಾಸಿಕ್ ಬ್ಯಾಂಡ್ ಕೂಡಾ ಬಳಸುವಂತಿಲ್ಲ.ಈ ಕುರಿತು ಕಾರ್ಯಕ್ರಮದ ಆಯೋಜಕರು ಎಚ್ಚರವಹಿಸಬೇಕು ಎಂದು ಇನ್‌ಸ್ಪೆಕ್ಟರ್ ತಿಳಿಸಿದರು.
ಸ್ವಯಂಸೇವಕರನ್ನು ಜೋಡಿಸಿ:
ಗಣೇಶೋತ್ಸವ ಪೆಂಡಾಲ್ ಮತ್ತು ವೇದಿಕೆಯ ಬಳಿ ವಿದ್ಯುತ್ ಅಲಂಕಾರಗಳು ಇರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಮಾಡಿಕೊಳ್ಳಿ.ಅಗ್ನಿ ಅವಘಡ ಆಗದಂತೆ ಎಚ್ಚರ ವಹಿಸಿ. ಪೆಂಡಾಲ್‌ಗಳಲ್ಲಿ ಸುತ್ತಲು ಸ್ವಯಂ ಸೇವಕರನ್ನು ಜೋಡಣೆ ಮಾಡಿಕೊಳ್ಳಿ.ಯಾವುದೇ ಘಟನೆ ನಡೆದಾಗ ಪೊಲೀಸರಿಗೆ ಮಾಹಿತಿ ನೀಡಿ ಎಂದು ಇನ್‌ಸ್ಪೆಕ್ಟರ್ ತಿಳಿಸಿದರು. ಸಭೆಯಲ್ಲಿ ವಿವಿಧ ಕಡೆಗಳ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳ ಸಂಘಟಕರು ಸಲಹೆ, ಸೂಚನೆ ನೀಡಿದರು. ಗಣೇಶೋತ್ಸವ ಸಮಿತ ಪದಾಽಕಾರಿಗಳು, ಧ್ವನಿವರ್ಧಕ ಸಂಸ್ಥೆಯ ಮಾಲಕರು, ಫ್ಲೆಕ್ಸ್ ಪ್ರಿಂಟಿಂಗ್‌ನ ಸಂಸ್ಥೆಯ ಮಾಲಕರು ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧಕ್ಷ ರಾಧಾಕೃಷ್ಣ ನಂದಿಲ, ಉಪಾಧ್ಯಕ್ಷ ಸತೀಶ್ ನಾಯ್ಕ್ ಪರ್ಲಡ್ಕ, ಕಿಲ್ಲೆ ಮೈದಾನ ಶ್ರೀ ದೇವತಾ ಸಮಿತಿಯ ಪದಾಧಿಕಾರಿಗಳಾದ ದಿನೇಶ್ ಪಿ.ವಿ, ಸುದೇಶ್ ಕುಮಾರ್, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ ಯು.ಪೂವಪ್ಪ, ಲೋಕೇಶ್ ಹೆಗ್ಡೆ, ದರ್ಬೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ದರ್ಬೆ, ಕಾವೇರಿಕಟ್ಟೆಯ ಗೋವರ್ಧನ್ ಶೆಟ್ಟಿ, ಕೋಡಿಂಬಾಡಿಯ ಗಣೇಶೋತ್ಸವ ಸಮಿತಿಯ ದೇವಾನಂದ, ಕುಮಾರನಾಥ ಎಸ್, ವಿವಿಧ ಕಡೆಯ ಗಣೇಶೋತ್ಸವ ಸಮಿತಿಯ ಸಂಘಟಕರಾದ ರಂಜನ್ ಪಡ್ನೂರು, ಪೂವಪ್ಪ ದೇಂತಡ್ಕ, ಅನೀಶ್ ರೈ, ಪ್ರಜ್ವಲ್, ವಸಂತ ರೈ, ವೀರಸೇನ ಜೈನ್, ಭೀಮ ಭಾರದ್ವಾಜ್, ಸಂತೋಷ್ ಕುಮಾರ್ ಎಮ್, ಮನೋಹರ್ ಎಮ್, ಮೋಹನ್ ಕುಮಾರ್, ಸ್ವೀಕೃತ್ ಆನಂದ್, ಎಲ್.ಆರ್ ಡಿಜಿಟಲ್ಸ್‌ನ ಲಾನ್ಸಿ ಡಿಸೋಜ, ವಿಪ್ರಿಂಟ್‌ನ ರಾಜೇಶ್, ರವಿ, ಶ್ರೀಧರ್ ಪಿ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.
ಆಯೋಜಕರಿಗೆ ಗೊಂದಲ
ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವಾಗ ಪ್ರತಿ ದಿನ ದೇವತಾ ಕಾರ್ಯಗಳು ನಡೆಯುತ್ತವೆ.ಬಹುತೇಕ ರಾತ್ರಿ ಸಮಯ ವೈದಿಕ ಕಾರ್ಯಕ್ರಮಗಳು ನಡೆದು ಮಂಗಳಾರತಿ ಆಗುವಾಗ ರಾತ್ರಿ ಗಂಟೆ 8 ಆಗುವುದು ಸಾಮಾನ್ಯ.ಆ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಾಟಕ, ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ.ಈ ಕಾರ್ಯಕ್ರಮಗಳನ್ನು ರಾತ್ರಿ ಗಂಟೆ 10ರ ಒಳಗೆ ಮುಗಿಸುವುದು ಕಷ್ಟ ಸಾಧ್ಯ.ಇದೀಗ ಸರಕಾರದ ಸೂಚನೆಯಂತೆ, ಧ್ವನಿವರ್ಧಕ ರಾತ್ರಿ ಗಂಟೆ 10ರ ಒಳಗೆ ಸ್ಥಗಿತಗೊಳಿಸಬೇಕೆಂದು ಸೂಚನೆ ನೀಡಿರುವುದರಿಂದ ಕಾರ್ಯಕ್ರಮಗಳಿಗೆ ತೊಂದರೆ ಉಂಟಾಗುತ್ತಿದೆ.ಎಷ್ಟೋ ಖರ್ಚು ಮಾಡಿ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಂದರ್ಭ ಇಲಾಖೆಯ ಸೂಚನೆಗಳು ಕಾರ್ಯಕ್ರಮಗಳಿಗೆ ತೊಂದರೆ ಆಗುತ್ತಿದೆ. ಇಷ್ಟೆಲ್ಲ ಕಾಯ್ದೆ ಕಾನೂನುಗಳನ್ನು ಸಡಿಲೀಕರಣಗೊಳಿಸಬೇಕು.ಇಲ್ಲವಾದಲ್ಲಿ ಹಬ್ಬ ಹರಿದಿನಗಳನ್ನು ಮಾಡುವ ಅಗತ್ಯವೇ ಇಲ್ಲ ಎಂದು ಸಭೆಗೆ ಆಗಮಿಸಿದ್ದ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.ಧ್ವನಿವರ್ಧಕ ಬಳಕೆಗೆ ಸಮಯ ಮಿತಿ ಸಹಿತ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳ ಕುರಿತು ಆ.20ರಂದು ವಿಧಾನಸಭಾ ಅಧಿವೇಶನದಲ್ಲೂ ಬಿರುಸಿನ ಚರ್ಚೆ ನಡೆದಿದೆ.