ಪುತ್ತೂರು:ವೀರಮಂಗಲದ ಶ್ರೀಕೃಷ್ಣ ಕಲಾ ಕೇಂದ್ರದ 22ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆಯುವ 5ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವವು ಆ.24ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೆಳಿಗ್ಗೆ ಶ್ರೀವಿಷ್ಣು ಸಹಸ್ರನಾಮಾರ್ಚನೆ, ವೀರಮಂಗಲ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ, ಮನರಂಜನಾ ಸ್ಪರ್ಧೆಗಳು ನಡೆಯಲಿದೆ. ಕಾರ್ಯಕ್ರಮವನ್ನು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿ. ಬೆಳಿಯಪ್ಪ ಗೌಡ ಪೆಲತ್ತಡಿ ಉದ್ಘಾಟಿಸಲಿದ್ದಾರೆ. ನಂತರ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಅಪರಾಹ್ನ ಗೋಪೂಜೆ, ಮುದ್ದುಕೃಷ್ಣ ಮೆರವಣಿಗೆ, ಸಂಜೆ ನೃತ್ಯಾರ್ಚನೆ ನಡೆದ ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ ಜಿಲ್ಲಾ ಸಂಸ್ಕಾರ ಭಾರತಿಯ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಪರಂಗಿಪೇಟೆ, ವೀರಮಂಗಲ ಪಿಎಂಶ್ರೀ ಶಾಲಾ ಸಹಶಿಕ್ಷಕಿ ಶ್ರೀಲತಾ ಸುಹಾಸ್ ಹೆಬ್ಬಾರ್ ಶಾಂತಿಗೋಡು, ಭಕ್ತಕೋಡಿ ಎಸ್.ಜಿ.ಎಂ ಪ್ರೌಢಶಾಲಾ ಸಹಶಿಕ್ಷಕ ಮೋಹನ ಕುಮಾರ್ ಎನ್ ಹಾಗೂ ಕಾಣಿಯೂರು ರಾಶಿ ಕಾಂಪ್ಲೆಕ್ಸ್‌ನ ಮ್ಹಾಲಕ ಚಂದ್ರಶೇಖರ ಗೌಡ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾನ್ ಗೋಪಾಲಕೃಷ್ಣ ವೀರಮಂಗಲ ರಚಿಸಿ, ನಿರ್ದೇಶಿಸಿದ ‘ಶ್ರೀರಾಮಾವತಾರ’ ಎಂಬ ನೃತ್ಯ ರೂಪಕ ನಡೆದ ಬಳಿಕ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ಶ್ರೀಕೃಷ್ಣ ಕಲಾಕೇಂದ್ರದ ಅಧ್ಯಕ್ಷ ವಿದ್ವಾನ ಗೋಪಾಲಕೃಷ್ಣ ತಿಳಿಸಿದ್ದಾರೆ.