ಮನೆ ದುರಸ್ಥಿ ಮೊತ್ತವನ್ನು ರೂ. 50,000ಕ್ಕೆ ಹೆಚ್ಚಿಸಲು, ಬಡ್ಡಿ ರಹಿತ ಕೃಷಿ ಸಾಲವನ್ನು ರೂ.5ಲಕ್ಷಕ್ಕೆ ಏರಿಸಲು ಆಗ್ರಹ
ಕೊಂಡಾಡಿಕೊಪ್ಪ ಶಾಲೆಗೆ ಪೂರ್ಣಕಾಲಿಕ ಶಿಕ್ಷಕರ ನೇಮಿಸಲು ಒತ್ತಾಯ
ಆಲಂಕಾರು: ಆಲಂಕಾರು ಗ್ರಾ.ಪಂ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷೆ ಸುಶೀಲರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಉಪವಲಯ ಅರಣ್ಯಾಽಕಾರಿ ಶಿವಾನಂದ ಅಚಾರ್ಯ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದರು.
ಗ್ರಾ.ಪಂ ನಿಂದ ಮನೆ ದುರಸ್ತಿಗೆ ನೀಡುವ ಹಣವನ್ನು 50000ಕ್ಕೆ ಏರಿಸಿ
2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯ ವರದಿಯನ್ನು ಗ್ರಾ.ಪಂ ಸಿಬ್ಬಂದಿ ಹೇಮಾವತಿ ಕೆ ರವರು ವಾಚಿಸುವ ಸಂದರ್ಭದಲ್ಲಿ ಮನೆ ದುರಸ್ತಿಗೆ ಗ್ರಾ.ಪಂ.ನಿಂದ ರೂ. 15 ಸಾವಿರ ನೀಡಲಾಗುತ್ತಿದೆ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಸಾಮಾಗ್ರಿಗಳ ಮೊತ್ತ ಗಗನಕ್ಕೇರಿದ್ದು 15000 ಹಣದಲ್ಲಿ ಹೇಗೆ ಮನೆ ದುರಸ್ತಿ ಮಾಡಲು ಸಾಧ್ಯವಾಗುತ್ತದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಜಯಕರ ಪೂಜಾರಿ ಕಲ್ಲೇರಿ ಪ್ರಶ್ನಿಸಿ, ಇದನ್ನು 50000ಕ್ಕೆ ಏರಿಸುವಂತೆ ನಿರ್ಣಯಿಸಲು ಗ್ರಾಮಸಭೆಯಲ್ಲಿ ಒತ್ತಾಯಿಸಿದರು. ಇದಕ್ಕೆ ಉಳಿದ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ನಂತರ ಗ್ರಾ.ಪಂ ನಿಧಿ 25 ಶೇ ರಲ್ಲಿ ಮನೆದುರಸ್ತಿಗೆ ನೀಡುವ ರೂ. 15000ವನ್ನು 50000ಕ್ಕೆ ಏರಿಸುವಂತೆ ನಿರ್ಣಯಿಸಿ ಸಂಬಂಧಪಟ್ಟ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು.
ಬಡ್ಡಿರಹಿತ ಕೃಷಿಸಾಲವನ್ನು ರೂ. 5 ಲಕ್ಷಕ್ಕೆ ಏರಿಸಲು ಆಗ್ರಹ
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ರವಿರಾಜ್ ರವರು ಕೃಷಿ ಸಾಲ,ಹವಾನಿಯಂತ್ರಿತ ಬೆಳೆವಿಮೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಿಗುವ ಸಾಲ ಸೌಲಭ್ಯ,ರಸಗೊಬ್ಬರದ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಗ್ರಾಮಸ್ಥ ಮುತ್ತಪ್ಪ ಪೂಜಾರಿ ನೈಯ್ಯಲ್ಗ ರವರು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೂ. 3 ಲಕ್ಷ ಬಡ್ಡಿ ರಹಿತ ಸಾಲ ರೈತರಿಗೆ ದೊರೆಯುತ್ತಿದ್ದು ಇದನ್ನು ರೂ. 5 ಲಕ್ಷಕ್ಕೆ ಏರಿಸುವಂತೆ ನಿರ್ಣಯ ಮಾಡಬೇಕು ಎಂದು ಆಗ್ರಹಿಸಿದರು. 2018ರ ಸಾಲಮನ್ನಾ ಯೋಜನೆಯಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 59 ಸದಸ್ಯರಿಗೆ 53,39,000 ರೂ. ಬರಲು ಬಾಕಿ ಇದ್ದು, ಈ ಹಣವನ್ನು ಸರಕಾರ ನೀಡುವಂತೆ ಗ್ರಾಮಸಭೆಯಲ್ಲಿ ನಿರ್ಣಯಿಸಬೇಕೆಂದು ಅವರು ಆಗ್ರಹಿಸಿದರು. ಈ ಬಗ್ಗೆ ಚರ್ಚೆ ನಡೆದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 59 ಸದಸ್ಯರಿಗೆ ಬರಲು ಬಾಕಿ ಇರುವ ಬೆಳೆ ಸಾಲ ಮನ್ನಾದ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಬೆರೆಯುವುದಾಗಿ ನಿರ್ಣಯಿಸಲಾಯಿತು.
ಅರ್ಹ ಫಲಾನುಭವಿಗಳಿಗೆ ಗ್ರಾ.ಪಂ ವತಿಯಿಂದ ಸೈಟ್ ವಿತರಿಸಿ
ಆಲಂಕಾರು ಗ್ರಾ.ಪಂ ವತಿಯಿಂದ ಕಾದಿರಿಸಿದ ಗ್ರಾ.ಪಂ ಸೈಟ್ ನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವಂತೆ ಗ್ರಾಮಸ್ಥ ಹರೀಶ ಏಂತಡ್ಕ ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ ಅಭಿವೃದ್ಧಿ ಅಽಕಾರಿ ಸುಜಾತ,ಕಾರ್ಯದರ್ಶಿ ವಸಂತ ಶೆಟ್ಟಿಯವರು ಅರ್ಹ ಫಲಾನುಭವಿಗಳಿಗೆ ಸೈಟ್ ವಿತರಿಸಲು ನಾವು ನಿಗಮಕ್ಕೆ ಕಳಿಸಿದ್ದೇವೆ ಎಂದರು. ಆಲಂಕಾರು ಮೆಸ್ಕಾಂ ಶಾಖಾಧಿಕಾರಿ ಪ್ರೇಮ್ ಕುಮಾರ್ರವರು ಸರಕಾರದ ಗೃಹಜ್ಯೋತಿ ಯೋಜನೆಯ ಬಗ್ಗೆ ಮತ್ತು ವಿದ್ಯುತ್ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ಗ್ರಾಮಾಡಳಿತಾಧಿಕಾರಿ ಪ್ರೇಮಲತಾ ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ನೀಡಿ, ಕರ್ನಾಟಕ ಸರಕಾರ ಹಾಗೂ ಕಂದಾಯ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಪೌತಿ/ವಾರಸಾ ಖಾತೆ ಅಂದೋಲನ ನಡೆಯುತ್ತಿದೆ. ಕೃಷಿ ಜಮೀನಿನ ವಾರಸುದಾರರು ಮೃತ ಪಟ್ಟಿದ್ದು ಮಾಲಿಕತ್ವವು ಉತ್ತರಾಽಕಾರಿಗಳಿಗೆ ಹಸ್ತಾಂತರ ಆಗದೇ ಇದ್ದವರು ವಂಶವೃಕ್ಷ, ಪಹಣಿ ಪತ್ರ,ಮೃತರ ಮರಣ ಪತ್ರ, ವಾರಸುದಾರರ ಆಧಾರ್ ಕಾರ್ಡ್ ತಂದು ಗ್ರಾಮಾಡಳಿತಾಽಕಾರಿಯವರಿಗೆ ನೀಡುವಂತೆ ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಡಾ. ಮಂಜುನಾಥ ರವರು ಆರೋಗ್ಯ ಇಲಾಖೆಯ ಬಗ್ಗೆ ಮಾಹಿತಿ ನೀಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಣಿಕಡಿತ,ಹುಚ್ಚು ನಾಯಿ ಕಡಿತಕ್ಕೆ ಔಷಧಿಗಳು ದೊರೆಯುತ್ತದೆ. ಪ್ರಾಣಿಗಳು,ಹುಚ್ಚು ನಾಯಿಗಳು ಕಚ್ಚಿದಾಗ ನಗಣ್ಯ ಮಾಡುವುದು ಬೇಡ ಈ ಬಗ್ಗೆ ಔಷಧಿಯನ್ನು ತೆಗೆದುಕೊಳ್ಳುವಂತೆ ತಿಳಿಸಿದರು. ಪಂಚಾಯತ್ರಾಜ್ ಇಲಾಖೆಯ ಇಂಜಿನಿಯರ್ ಕುಶ ಕುಮಾರ್ರವರು ಮಾಹಿತಿ ನೀಡುತ್ತಿದ್ದ ವೇಳೆ, ಭಾರತಿ ಶಾಲೆಯ ಹತ್ತಿರ ಆಗಿರುವ ಕಾಂಕ್ರೀಟ್ ರಸ್ತೆ ಕಳಪೆ ಆಗಿದೆ ಎಂದು ಅಬೂಬಕ್ಕರ್ ನೆಕ್ಕರೆ ತಿಳಿಸಿ ಇಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಹಾಕಬೇಕು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರು ,ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿರುವಂತೆ ತಿಳಿಸಿದರು.
ಈ ಬಗ್ಗೆ ಗ್ರಾ.ಪಂ ಅಧ್ಯಕ್ಷೆ ಸುಶೀಲ ಮತ್ತು ಉಪಾಧ್ಯಕ್ಷ ರವಿ ಪೂಜಾರಿ ಯವರು ಕಾಮಗಾರಿ ನಡೆಯುವ ಸಂದರ್ಭದಲ್ಲಿ ನಾವು ಹೋಗಿದ್ದೇವೆ ಮತ್ತು ಕಾಮಗಾರಿ ಸೂಸೂತ್ರವಾಗಿ ನಡೆದಿದೆ ಎಂದರು. ಮಿತ್ತನಡ್ಕ ಎಂಬಲ್ಲಿ ಕಾಂಕ್ರಿಟೀಕರಣ ಮಾಡಬೇಕೆಂದು ಕಕ್ವೆ ಎಂಬಲ್ಲಿ ವಿಪರೀತ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಇದನ್ನು ಸರಿಪಡಿಸುವಂತೆ ಕೇಶವ ಗೌಡ ಆಲಡ್ಕ ,ದಾಮೋದರ ಗೌಡ ಕಕ್ವೆ, ಶಿವಣ್ಣ ಗೌಡ ಕಕ್ವೆ ಹಾಗು ರಸ್ತೆಯ ಫಲಾನುಭವಿಗಳು ಒತ್ತಾಯಿಸಿದರು. ಈ ಬಗ್ಗೆ ಗ್ರಾಮಸಭೆಯಲ್ಲಿ ನಿರ್ಣಯಿಸಿ ಗ್ರಾ.ಪಂ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ನಿರ್ಣಯಿಸಲಾಯಿತು.
ಕೊಂಡಾಡಿಕೊಪ್ಪ ಶಾಲೆಗೆ ಪೂರ್ಣಕಾಲಿಕ ಶಿಕ್ಷಕರನ್ನು ನೇಮಿಸಿ
ಶಿಕ್ಷಣ ಇಲಾಖೆಯಿಂದ ಸಿ.ಆರ್.ಪಿ ಪ್ರಕಾಶ್ರವರು ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ, ಕೊಂಡಾಡಿಕೊಪ್ಪ ಶಾಲೆಯಲ್ಲಿ ಎರಡು ಮಂದಿ ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು ಪೂರ್ಣಕಾಲಿಕ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಿದರು. ಅದಕ್ಕೆ ಉತ್ತರಿಸಿದ ಪ್ರಕಾಶ್ ಬಾಕಿಲರವರು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ.ಕೊಂಡಾಡಿಕೊಪ್ಪ ಶಾಲೆಗೆ ಪೂರ್ಣಕಾಲಿಕ ಶಿಕ್ಷಕರು ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕೆಲವು ಮಕ್ಕಳು ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಬರುವಂತೆ ಇಲಾಖಾ ವತಿಯಿಂದ ಪ್ರಯತ್ನ ಮಾಡುವಂತೆ ಸುರೇಶ ತೋಟಂತ್ತಿಲ ತಿಳಿಸಿದರು ನಂತರ ಚರ್ಚೆ ನಡೆದು ಕೊಂಡಾಡಿಕೊಪ್ಪ ಶಾಲೆಗೆ ಪೂರ್ಣಕಾಲಿಕ ಶಿಕ್ಷಕರು ನೇಮಕಾತಿ ಆಗಬೇಕೆಂದು ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು. ಶಿಶುಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಭವಾನಿ, ಪಶುಸಂಗೋಪನೆ ಇಲಾಖೆಯ ಅಜಿತ್,ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಣ್ಣು ಪರೀಕ್ಷಾ ಕೇಂದ್ರದ ರವಿಕಿರಣ್ ಮಾಹಿತಿ ನೀಡಿದರು.
ನಿಯಮಗಳನ್ನು ಸಡಿಲೀಕರಣಗೊಳಿಸಿ
ಪುತ್ತೂರು ತೋಟಗಾರಿಕಾ ಇಲಾಖೆಯ ಶಿವಪ್ರಕಾಶ್ರವರು ಎಲೆಚುಕ್ಕಿರೋಗ,ಹಳದಿರೋಗ, ಇನ್ನಿತರ ಕೃಷಿಗೆ ಬಾದಿಸುವ ರೋಗಗಳ ಬಗ್ಗೆ ಮಾಹಿತಿ ನೀಡಿ, ಇದರ ಹತೋಟಿಯ ಬಗ್ಗೆ ತಿಳಿಸಿ ಇಲಾಖಾ ವತಿಯಿಂದ ಯಂತ್ರೋಪಕರಣಕ್ಕೆ ಸಿಗುವ ಸಹಾಯಧನದ ಕುರಿತು ತಿಳಿಸಿದರು. ಅಬುಬೂಕ್ಕರ್ ನೆಕ್ಕರೆಯವರು ಗ್ರಾಮಸಭೆಯಲ್ಲಿ ಬಹಳ ಸುಲಭವಾಗಿ ಹೇಳುತ್ತೀರಿ ಇಲಾಖೆಗೆ ಬಂದಾಗ ದಾಖಲೆಗಾಗಿ ಸತಾಯಿಸುತ್ತೀರಿ ಎಂದರಲ್ಲದೆ ತೋಟಗಾರಿಕಾ ಇಲಾಖೆಯಲ್ಲಿ ಸಿಗುವ ಯಂತ್ರೋಪಕರಣಗಳ ದರಕ್ಕಿಂತ ಕಡಿಮೆ ದರದಲ್ಲಿ ಅಂಗಡಿಗಳಲ್ಲಿ ಸಿಗುತ್ತದೆ ಎಂದರಲ್ಲದೆ ಕೆಲ ಇಲಾಖೆಗಳು ಸೇವೆ ನೀಡುವ ಬದಲು ಬ್ಯುಸಿನೆಸ್ ನಲ್ಲಿ ತೊಡಗಿದೆ ಎಂದರು. ಇದಕ್ಕೆ ಧ್ವನಿ ಗೂಡಿಸಿದ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇಂದುಶೇಖರ ಶೆಟ್ಟಿ ಇಲಾಖೆಗಳು ನಿಯಮಗಳನ್ನು ಸಡಿಲಗೊಳಿಸಬೇಕೆಂದು ತಿಳಿಸಿದರು.
ಮಾರ್ಗದರ್ಶಿ ಅಧಿಕಾರಿ ಉಪವಲಯಾರಣ್ಯಾಧಿಕಾರಿ ಶಿವನಂದಾ ಆಚಾರ್ಯ ರವರು ಅರಣ್ಯ ಪ್ರೋತ್ಸಾಹಧನ, ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿಗೆ ಆದ ಹಾನಿಗೆ ಪರಿಹಾರ ಕುರಿತು ತಿಳಿಸುವ ಸಂಧರ್ಭದಲ್ಲಿ ಶಿವಣ್ಣ ಗೌಡ ಕಕ್ವೆಯವರು ಕೃಷಿಗೆ ಮಂಗನ ಹಾವಳಿ ವಿಪರೀತ ಇದ್ದು, ತೆಂಗಿನಮರ ಇದ್ದರೂ ಅಂಗಡಿಯಿಂದ ತೆಂಗಿನ ಕಾಯಿ ತೆಗೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ಕೋವಿ ಪರವಾನಿಗೆ ನೀಡಬೇಕೆಂದರು ಕೋವಿ ಪರವಾನಿಗೆಯ ನಿಯಮಗಳನ್ನು ಸಡಿಲಗೊಳಿಸಬೇಕೆಂದರು. ಸಭಾಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ಸುಶೀಲ ಕೊಂಡಾಡಿ ಗ್ರಾಮಸಭೆಗೆ ಎಲ್ಲಾ ಗ್ರಾಮಸ್ಥರು ಭಾಗವಹಿಸಿ ಇಲಾಖೆಗಳಿಂದ ಸವಲತ್ತುಗಳನ್ನು ಪಡೆದು ಗ್ರಾಮದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ತಿಳಿಸಿ ನಮ್ಮ ಅವಽಯ ಕೊನೆಯ ಗ್ರಾಮಸಭೆ ಇದಾಗಿದ್ದು ಸಹಕರಿಸಿದ ಎಲ್ಲಾ ಗ್ರಾಮಸ್ಥರಿಗೆ, ಇಲಾಖಾಽಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಽಕಾರಿ ಸುಜಾತ ಸ್ವಾಗತಿಸಿ, ಕಾರ್ಯದರ್ಶಿ ವಸಂತ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ರವಿ ಪೂಜಾರಿ ಕೆ, ಪಂಚಾಯತ್ ಸದಸ್ಯರಾದ ಸದಾನಂದ ಆಚಾರ್ಯ, ಚಂದ್ರಶೇಖರ, ಶ್ವೇತಾ ಕುಮಾರ್, ಕೃಷ್ಣ ಗಾಣಂತಿ, ರೂಪಾಶ್ರೀ, ವಾರಿಜ, ಸುಮತಿ, ಸುನಂದ ಬಾರ್ಕುಳಿ, ಶಾರದಾ, ಕಡಬ ಠಾಣೆಯ ಆಲಂಕಾರು ಬೀಟ್ ಪೊಲೀಸ್ ಉಪಸ್ಥಿತರಿದ್ದರು.