ʼಪುತ್ತೂರು ಶಾಸಕರಿಂದ ಅಭಿವೃದ್ದಿ ಹೆಸರಿನಲ್ಲಿ ಸುಳ್ಳು ಭರವಸೆʼ- ʼದೇವಸ್ಥಾನದಿಂದ ನೀಡಿದ ಜಾಗ ಅಕ್ರಮ ಆಗುವುದಿಲ್ಲʼ – ಆರೋಪಗಳ ಸುರಿಮಳೆಗೈದ ರಾಜೇಶ್ ಬನ್ನೂರು

0

ಪುತ್ತೂರು: ʼಪುತ್ತೂರು ಶಾಸಕರು ಮಾತು ಎತ್ತಿದರೆ ಕೋಟಿಗಳ ಲೆಕ್ಕಾಚಾರದಲ್ಲಿ ಮಾತನಾಡುತ್ತಾರೆ. ಆದರೆ ಅವರ ಅವಧಿಯಲ್ಲಿ ತಂದ ಒಂದಾದರು ಯೋಜನೆ ಕಾರ್ಯರೂಪಕ್ಕೆ ಬಂದಿರುವುದನ್ನು ತೋರಿಸಲಿ. ಹಿಂದಿನ ಅವಧಿಯಲ್ಲಿ ಅನುದಾನದಲ್ಲಿ ಅಗಿರುವ ಅಭಿವೃಧ್ದಿಯನ್ನು ತಮ್ಮದೇ ಎಂದು ಜನರನ್ನು ವಂಚಿಸುವುದು, ಸುಳ್ಳು ಭರವಸೆ ನೀಡುವುದನ್ನು ನಿಲ್ಲಿಸಬೇಕೆಂದು ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.


ಮಹಾಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಶಾಸಕರ ಉತ್ಸಾಹ ದೇವರ ಭಕ್ತರಾದ ನಮಗೆಲ್ಲಾ ಸಂತೋಷ. ಆದರೆ ದೇವಳದ ಸುತ್ತಮುತ್ತಲಿನ ಕಟ್ಟಡಗಳು ಅನಧಿಕೃತವಾಗಿದೆ ಎಂದು ಕಟ್ಟಡ ತೆರವು ಮಾಡಿದ್ದಾರೆ. ನಮ್ಮ ಮನೆಯನ್ನು ನಾವು ಇಲ್ಲದೆ ಇದ್ದಾಗ ಬಲವಂತವಾಗಿ ಕೆಡವಿ ಹಾಕಿದ್ದಾರೆ. ಈ ನಡುವೆ ಕಟ್ಟಡವನ್ನು ಅಕ್ರಮ ಎಂದು ಹೇಳುವುದು ಸರಿಯಲ್ಲ. ಅತಿಕ್ರಮಣವಾಗಿ ಕೂತರೆ ಅಕ್ರಮ, ದೇವಸ್ಥಾನದಿಂದ ನೀಡಿದ ಜಾಗ ಅಕ್ರಮ ಆಗುವುದಿಲ್ಲ ಎಂಬ ಜ್ಞಾನ ಆರೋಪ ಮಾಡುವವರಿಗೆ ತಿಳಿದಿದರಬೇಕು. ಶಾಸಕರ ಅವಧಿಯಲ್ಲಿ ಒಂದೆ ಒಂದು ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ರಿಂಗ್ ರೋಡ್ ಪ್ರಸ್ತಾವನೆಯೂ ತಿರಸ್ಕೃತಗೊಂಡಿದೆ. ಬೊಳುವಾರು ಪಡಿಲ್ ಡಬಲ್ ರಸ್ತೆ ಕಾಮಗಾರಿ ಏನಾಗಿದೆ ಎಂದು ಪ್ರಶ್ನಿಸಿದ ಅವರು ಜನಪ್ರತಿನಿಧಿ ಆದವರು ಟೀಕೆ, ಪ್ರಶಂಸೆಗಳನ್ನು ಸ್ವೀಕರಿಸಬೇಕು. ಜನರ ಅಭಿಪ್ರಾಯ, ಸಲಹೆಗಳನ್ನು ಕೇಳುವಷ್ಟು ವ್ಯವಧಾನ ಇರಬೇಕು. ಆದರೆ ಪುತ್ತೂರು ಶಾಸಕರು ಪ್ರಶ್ನೆ ಮಾಡಿದವರನ್ನು ಸಾರ್ವಜನಿಕವಾಗಿ ನಿಂದಿಸುವ ವೈಯುಕ್ತಿಕ ವಿಚಾರಗಳನ್ನು ಎತ್ತಿ ಹಂಗಿಸುವುದು ಸ್ವಚ್ಛ ರಾಜಕಾರಣವಲ್ಲ ಎಂದರು.


ಮಹಿಳಾ ಪೊಲೀಸ್ ಠಾಣೆ ತೆರವು ಸುಲಭವಲ್ಲ:
ಪುತ್ತೂರು ಶಾಸಕರು ಮಹಿಳಾ ಪೊಲೀಸ್ ಠಾಣೆಯನ್ನು ತೆರವು ಮಾಡುತ್ತೇನೆಂದು ಪ್ರಕಟಣೆ ನೀಡಿದ್ದಾರೆ. ಈ ಕುರಿತು ಗೃಹ ಇಲಾಖೆ ಅಧಿವೇಶನದಲ್ಲಿ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸುವ ಅವಶ್ಯಕತೆ ಇಲ್ಲ ಎಂದು ಉತ್ತರ ನೀಡಿದೆ. ಹಾಗಿದ್ದಲ್ಲಿ ಶಾಸಕರು ಹೇಳಿದ ರೂ. 1 ಕೋಟಿ ಮಂಜೂರು ಏನಾಯಿತು. ಅಧಿವೇಶನದ ಉತ್ತರಕ್ಕೆ ಇನ್ನೊಮ್ಮೆ ಮನವಿ ಕೊಡುವ ಅವಶ್ಯಕತೆ ಏನಿತ್ತು. ಈ ವಿದ್ಯಾಮಾನ ನೋಡಿದಾಗ ಶಾಸಕರು ಮಹಿಳಾ ಪೊಲೀಸ್ ಠಾಣೆಯ ಸ್ಥಳಾಂತರಕ್ಕೆ ಮನವಿ ಮಾಡಲೇ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದ ರಾಜೇಶ್ ಬನ್ನೂರು ಅವರು ಮಹಿಳಾ ಪೊಲೀಸ್ ಠಾಣೆ ಅನಧಿಕೃತ ಎಂದು ಶಾಸಕರು ಹೇಳುತ್ತಾರೆ. ಆದರೆ ಠಾಣೆಗೆ ಸರಕಾರದ ಪಹಣಿ ಇದೆ. ಸ.ನಂ.78/8 ರಲ್ಲಿ 0.08 ಎಕ್ರೆ ಜಮೀನು ಪೊಲೀಸ್ ಅದೀಕ್ಷಕರು ದ.ಕ.ಜಿಲ್ಲೆ ಅವರ ಹೆಸರಿನಲ್ಲಿದೆ. ಹೀಗಿರುವಾಗ ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರ ಅಸಂಭವ. ಹಲವಾರು ವರ್ಷಗಳ ಆ ಕಟ್ಟಡ ಅಲ್ಲಿ ಇದೆ. ಅದನ್ನು ತೆರವುಗೊಳಿಸುವುದು ಅಷ್ಟು ಸುಲಭವಲ್ಲ. ಬ್ರಿಟೀಷ್ ಕಾಲದಿಂದಲೂ ಇರುವ ಪಾರಂಪರಿಕ ಕಟ್ಟಡವಾಗಿದೆ. ಅದಕ್ಕೆ ಧಾರ್ಮಿಕ ಹಿನ್ನೆಲೆ ಇದೆ. ಒಂದು ವೇಳೆ ಠಾಣೆ ಸ್ಥಳಾಂತರ ಮಾಡುವುದಾದರೆ ಕಾನೂನಿನ ಚೌಕಟ್ಟಿನಲ್ಲಿ ಮಾಡಲಿ. ಆದರೆ ಒಂದು ಔಟ್‌ಪೋಸ್ಟ್ ಅಲ್ಲಿ ಇರಬೇಕು. ಯಾಕೆಂದರೆ ಜಾತ್ರೆಯ ಸಂದರ್ಭ ದೇವಸ್ಥಾನದಿಂದ ವಿಶೇಷ ಗೌರವ ಕೊಡುವ ಸಂಪ್ರದಾಯವಿದೆ ಎಂದರು.


ವ್ಯವಸ್ಥಾಪನಾ ಸಮಿತಿಯ ಕಂಟ್ರೋಲ್ ಶಾಸಕರ ಕೈಯಲ್ಲಿ:
ಧಾರ್ಮಿಕ ಕ್ಷೇತ್ರಗಳಲ್ಲಿ ಯಾವುದೇ ರಾಜಕೀಯ ಇರಬಾರದು. ಆದರೆ ದೇವಸ್ಥಾನದ ಆಡಳಿತವನ್ನು ನೇಮಕವಾದ ವ್ಯವಸ್ಥಾಪನಾ ಮಂಡಳಿ ನಡೆಸುತ್ತಿಲ್ಲ. ಪ್ರತಿ ಕಾರ್ಯಕ್ಕೂ ಶಾಸಕರೇ ಮುಂದೆ ಬರುತ್ತಿದ್ದಾರೆ. ಅಧ್ಯಕ್ಷರು ಎಲ್ಲದಕ್ಕೂ ಶಾಸಕರ ಮಾರ್ಗದರ್ಶನದಂತೆ ಕಾರ್ಯವಹಿಸುತ್ತಿದ್ದೇವೆ ಎಂದು ಹೇಳುವುದು ಕಾಯ್ದೆಗೆ ವಿರುದ್ಧವಾದ ವಿಚಾರ. ಹಾಗಾಗಿ ಶಾಸಕರು ವ್ಯವಸ್ಥಾಪನಾ ಸಮಿತಿಯನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ರಾಜೇಶ್ ಬನ್ನೂರು ಹೇಳಿದರು.


ಮಹಾಲಿಂಗೇಶ್ವರ ದೇವಸ್ಥಾನ ಶ್ರದ್ಧಾ ಕೇಂದ್ರವಾಗಿರಲಿ:
ಮಹಾಲಿಂಗೇಶ್ವರ ದೇವಸ್ಥಾನವನ್ನು ಶಾಸಕರು ಪ್ರವಾಸಿ ತಾಣ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ ಧಾರ್ಮಿಕ ಕ್ಷೇತ್ರ ಪ್ರವಾಸಿ ತಾಣ ಆಗುವ ಬದಲು ಶ್ರದ್ಧಾಕೇಂದ್ರ ಮತ್ತು ಧರ್ಮಕ್ಷೇತ್ರವಾಗಿ ಇರಲಿ. ಕ್ಷೇತ್ರಕ್ಕೆ ರೂ. 60 ಕೋಟಿಯ ಅನುದಾನ ಬರುವುದು ಕೇಂದ್ರದ ಪ್ರಸಾದಂ ಯೋಜನೆಯಲ್ಲಿ ಎಂಬ ಅರಿವು ಇರಬೇಕೆಂದರು.

LEAVE A REPLY

Please enter your comment!
Please enter your name here