ವಿಟ್ಲ: ಲಂಚದ ಬೇಡಿಕೆ ಇಟ್ಟು ಮಂಗಳೂರು ಲೋಕಾಯುಕ್ತ ಪೊಲೀಸರಿಂದ ಬಂಧನವಾಗಿ ಬಿಡುಗಡೆಗೊಂಡು ಅಧ್ಯಕ್ಷ ಸ್ಥಾನದಲ್ಲಿ ಮತ್ತೆ ಮುಂದುವರಿದಿರುವ ಒಂದನೇ ಆರೋಪಿ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಇಲ್ಲದಿದ್ದರೆ ಪೆರುವಾಯಿ ಗ್ರಾ.ಪಂ ವಠಾರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥ ಯತೀಶ್ ಪೆರುವಾಯಿ ಅವರು ವಿಟ್ಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಫೀಸಾ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡು ಅಧ್ಯಕ್ಷಿಯ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ. 48 ಗಂಟೆಗಳಿಂದ ಹೆಚ್ಚು ಕಾಲ ಜೈಲಲ್ಲಿದ್ದರೆ ಅಧ್ಯಕ್ಷೀಯ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ಇಲ್ಲದಿದ್ದರೂ ಕಾನೂನಿಗೆ ವಿರುದ್ಧವಾಗಿ ಅಽಕಾರದ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಯತೀಶ್, ಅಧ್ಯಕ್ಷರನ್ನು ವಜಾಗೊಳಿಸುವಂತೆ ವಿವಿಧ ಇಲಾಖೆಗಳಿಗೆ ಈಗಾಗಲೇ ಗ್ರಾಮಸ್ಥರು ಮನವಿ ಸಲ್ಲಿಸಿದ್ದೇವೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥ ಆಗುವವರೆಗೆ ಅಧ್ಯಕ್ಷರು ಹುದ್ದೆಯಲ್ಲಿ ಮುಂದುವರಿಯುವುದು ಕಾನೂನಿಗೆ ವಿರೋಧವಾಗಿದ್ದು, ಇವರ ಹಿಂದೆ ದೊಡ್ಡ ರಾಜಕೀಯ ವ್ಯಕ್ತಿಗಳ ಬೆಂಬಲವಿದ್ದಂತೆ ಕಾಣುತ್ತಿದೆ ಎಂದು ಹೇಳಿದರು.
ನಮ್ಮ ಸತತ ಪ್ರಯತ್ನದ ಪರಿಣಾಮ, 40 ದಿನಗಳ ನಂತರ ಒಂದನೇ ಆರೋಪಿಯ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ನೇರವಾಗಿ ಎರಡನೇ ಆರೋಪಿಯಾದ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ವಿಲಿಯಮ್ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಈ ಹಿಂದೆಯೇ ನಾನು ಅಧ್ಯಕ್ಷೆ ನಫೀಸಾ ಅವರ ವಿರುದ್ಧ ಹಾಗೂ ಅಭಿವೃದ್ಧಿ ಅಽಕಾರಿ ವಿರುದ್ಧ, ಸ್ವಂತ ಅನುದಾನ , ನೀರು ನಿರ್ವಹಣೆ ಹಾಗೂ 15ನೇ ಹಣಕಾಸಿನಲ್ಲಿ ನಡೆದಿರುವ ಅವ್ಯವಹಾರ, ಹಣ ದುರುಪಯೋಗ ಹಾಗೂ ಗ್ರಾಮ ಸಭೆ ವರದಿಯಲ್ಲಿ ಸುಳ್ಳು ಮಾಹಿತಿ ನೀಡಿ ಗ್ರಾಮ ಸಭೆ ನಡೆಸಿ ಗ್ರಾಮಸ್ಥರನ್ನು ವಂಚಿಸಿರುವ ಬಗ್ಗೆ ದೂರು ನೀಡಿದ್ದೆ. ನಫೀಸಾ ಅವರು ದೆಹಲಿ ಪ್ರವಾಸದ ಬಗ್ಗೆ ರೈಲಿನಲ್ಲಿ ಪ್ರಯಾಣಿಸುವ ಸುತ್ತೋಲೆ ಇದ್ದರೂ ಕಾನೂನು ಉಲ್ಲಂಘಿಸಿ ವಿಮಾನದಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸಿ ಗ್ರಾಮಸ್ಥರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡಿದ್ದರು ಇದೇ ರೀತಿ ಇನ್ನೂ ಅನೇಕ ಆರೋಪಗಳಿವೆ. ಈ ನಿಟ್ಟಿನಲ್ಲಿ ತಕ್ಷಣವೇ ನಫೀಸಾ ಅವರನ್ನು ವಜಾಗೊಳಿಸಲು ಒತ್ತಾಯಿಸುತ್ತಿದ್ದು, ಅವರಿಗೆ ಬೆಂಬಲವಾಗಿ ನಿಂತು ಸ್ವಯಂ ವರ್ಗಾವಣೆ ಪಡೆದು ತೆರಳಿರುವ ಅಭಿವೃದ್ಧಿ ಅಽಕಾರಿ , ಬಂಟ್ವಾಳ ಕಾರ್ಯನಿರ್ವಾಹಕಾಽಕಾರಿ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅ. 21ರಂದು ಗ್ರಾಮಸ್ಥರನ್ನು ಒಟ್ಟು ಸೇರಿಸಿ ಗ್ರಾ.ಪಂ.ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಯತೀಶ್ ಪೆರುವಾಯಿ ತಿಳಿಸಿದರು.
ಪತ್ರಿಕಾಗೋಷ್ಠಿ ಯಲ್ಲಿ ಗೋಪಾಲಕೃಷ್ಣ ಶೆಟ್ಟಿ, ವಿನೀತ್ ಶೆಟ್ಟಿ, ಗಣೇಶ್ ರೈ, ಗಿರೀಶ್ ಪಾಟಾಳಿ ಉಪಸ್ಥಿತರಿದ್ದರು.