ಪುತ್ತೂರು: ಪುತ್ತೂರಿನ ತುಳು ಅಪ್ಪೆ ಕೂಟ ಮತ್ತು ಸುದಾನ ಲಹರಿ ಸಾಹಿತ್ಯ ಸಂಘಗಳು ಜೊತೆಗೂಡಿ ವಿದ್ಯಾರ್ಥಿಗಳಿಗಾಗಿ ತುಳುಲಿಪಿ ಕಲಿಕಾ ಕಾರ್ಯಗಾರವನ್ನು ಸುದಾನ ವಸತಿ ಶಾಲೆಯಲ್ಲಿ ಆಯೋಜಿಸಿತ್ತು. ಕಾರ್ಯಾಗಾರವನ್ನು ದೀಪೋಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ವಿದೇಶಿಯರು ಸ್ವಯಂ ಆಸಕ್ತಿಯಿಂದ ತುಳು ಭಾಷೆಯನ್ನು ಕಲಿತು ಹಲವಾರು ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹೀಗಿರುತ್ತಾ ತುಳುನಾಡಿನ ಮಕ್ಕಳಾದ ನಾವು ನಮ್ಮ ಭಾಷೆಯನ್ನು ಉಳಿಸಿ ಬೆಳೆಸಲು ಸದಾ ಸನ್ನದ್ಧರಾಗಿರಬೇಕು. ಭಾಷೆಯು ಸಂಸ್ಕೃತಿಗೆ ಆಧಾರ. ಅದನ್ನು ಕಡೆಗಣಿಸಿದರೆ ಸಂಸ್ಕೃತಿಯೇ ನಾಶವಾದಂತೆ ಎಂದು ನುಡಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ತುಳು ಅಪ್ಪೆ ಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಅವರು ಮಾತನಾಡುತ್ತಾ ಯುವಜನತೆಯು ಅಳಿದು ಹೋಗುತ್ತಿರುವ ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಸಕ್ರಿಯರಾಗಬೇಕು. ನಮ್ಮ ಭಾಷೆ ಎಂಬ ಅಭಿಮಾನವು ಬೆಳೆಯ ಬೇಕಾದರೆ ಎಳವೆಯಿಂದಲೇ ಭಾಷೆಯ ಬಗೆಗೆ ಪ್ರೀತಿ ಮೂಡುವಂತೆ ಮಾಡಬೇಕು. ಇದಕ್ಕೆ ತುಳುಲಿಪಿ ಕಲಿಕಾ ಕಾರ್ಯಾಗಾರವು ಉಪಯುಕ್ತ” ಎಂದು ನುಡಿದರು. ಶಾಲಾ ಉಪಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್, ತುಳು ಅಪ್ಪೆ ಕೂಟದ ಗೌರವಾಧ್ಯಕ್ಷೆ ಪ್ರೇಮಲತಾ ರಾವ್, ಕಾರ್ಯದರ್ಶಿ ಭಾರತಿ ರೈ, ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಅನಿತಾ ಕೆ, ಸಹಶಿಕ್ಷಕಿ ಕವಿತಾ ಅಡೂರು ಉಪಸ್ಥಿತರಿದ್ದರು.
ತುಳು ಅಪ್ಪೆ ಕೂಟದ ಸದಸ್ಯೆ ಶ್ರಿಶಾ ವಾಸವಿ ತುಳುನಾಡು ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಮತ್ತು ತುಳು ಸಾಹಿತಿಯಾಗಿರುವ ಶ್ರೀಶಾ ವಾಸವಿ ತುಳುನಾಡು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ತುಳು ಲಿಪಿಯನ್ನು ಕಲಿಸಿದರು.
ಲಹರಿ ಸಾಹಿತ್ಯ ಸಂಘದ ಸದಸ್ಯರಾದ ಚೇತನಾಪಿ ಕೆ ಮತ್ತು ಪವಿತ್ರಾ ಸಹಕರಿಸಿದರು.