ಪುತ್ತೂರು: ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಹಿನ್ನೆಲೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆ ನವನವೀನ ಶಿಕ್ಷಣ ವ್ಯವಸ್ಥೆಗಳ ಕಡೆಗೆ ಗಮನ ಹರಿಸುತ್ತಿದೆ. ಈಗಾಗಲೇ ಸಂಸ್ಥೆ ಸ್ಮಾರ್ಟ್ ಬೋರ್ಡ್ನಂತಹ ದುಬಾರಿ ವ್ಯವಸ್ಥೆಯನ್ನೂ ತರಗತಿಯೊಳಗೆ ಅಳವಡಿಸಿ ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆಗೆ ಅನುವು ಮಾಡಿಕೊಟ್ಟಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಒಂದು ವಿನೂತನ ಕಾಂಪೋಸಿಟ್ ಲ್ಯಾಬ್ ಅನ್ನು ತನ್ನ ವಿದ್ಯಾಸಂಸ್ಥೆಯಲ್ಲಿ ಅಂಬಿಕಾ ಅಳವಡಿಸಿಕೊಂಡಿದೆ.
ಏನಿದು ಕಾಂಪೋಸಿಟ್ ಲ್ಯಾಬ್? :
ಹೆಸರೇ ಸೂಚಿಸುವಂತೆ ಇದೊಂದು ಸಂಯುಕ್ತ ಪ್ರಯೋಗಾಲಯ. ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ನಡೆಸುವುದಕ್ಕಾಗಿ ನಿರ್ಮಾಣಗೊಂಡಿರುವ ಆಕರ್ಷಕ ಲ್ಯಾಬ್. ವಿಜ್ಞಾನ ಸಂಬಂಧಿ ನಾನಾ ಪ್ರಯೋಗವನ್ನು ನಡೆಸುವುದಕ್ಕೆ ಇದು ಆಶ್ರಯ ತಾಣ. ದಿನ ನಿತ್ಯ ನಾನಾ ತರಗತಿಯ ವಿದ್ಯಾರ್ಥಿ ಗಳು ಇಲ್ಲಿ ಬಂದು ವೈವಿಧ್ಯಮಯ ವಿಜ್ಞಾನ ವಿಶೇಷಗಳನ್ನು ಪ್ರಯೋಗದ ಮೂಲಕ ಅರಿತುಕೊಳ್ಳುತ್ತಾರೆ. ಶಿಕ್ಷಕರು ಮಾಡಿ ತೋರಿಸುವಾಗ ತನ್ಮಯರಾಗಿ ಎವೆಯಿಕ್ಕದೆ ನೋಡುತ್ತಾರೆ.

ಬಳಕೆಯ ವಿಧಾನ:
ಒಂದನೆಯ ತರಗತಿಯಿಂದ ತೊಡಗಿ ಹತ್ತನೆಯ ತರಗತಿಯವರೆಗೆ ಪ್ರತಿಯೊಂದು ತರಗತಿಯ ವಿದ್ಯಾರ್ಥಿಗಳಿಗೂ ಈ ಕಾಂಪೋಸಿಟ್ ಲ್ಯಾಬ್ ಅನ್ನು ಒದಗಿಸಿಕೊಡಲಾಗುತ್ತದೆ. ವಾರದಲ್ಲಿ ಕನಿಷ್ಟ ಒಂದು ಬಾರಿಯಾದರೂ ಎಲ್ಲಾ ತರಗತಿಯ ಮಕ್ಕಳು ಈ ಲ್ಯಾಬ್ ಒಳಗೆ ಬರುವಂತೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಈ ಲ್ಯಾಬ್ಗೆ ಬಂದ ನಂತರ ವಿದ್ಯಾರ್ಥಿಗಳು ಶಿಕ್ಷಕರು ಮಾಡಿತೋರಿಸುವ ವೈವಿಧ್ಯಮಯ ಪ್ರಯೋಗಗಳಿಗೆ ಸಾಕ್ಷಿಯಾಗಿ ವಿಜ್ಞಾನದ ಬಗೆಗಿನ ಕೌತುಕವನ್ನು ಹೆಚ್ಚಿಸಿಕೊಳ್ಳುವಂತೆ ಮಾಡಲಾಗುತ್ತದೆ. ಜತೆಗೆ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಸಂಬಂಧಿ ನೂತನ ಆವಿಷ್ಕಾರಗಳನ್ನು ಕಂಡುಹಿಡಿಯುವ ಆಸಕ್ತಿ ಮೂಡಿಸಿ, ಈ ಲ್ಯಾಬ್ ಅನ್ನು ಬಳಸಿಕೊಂಡು ವೈಜ್ಞಾನಿಕ ಸಾಧನೆ ನಡೆಸುವುದಕ್ಕೆ ಅವಕಾಶ ಒದಗಿಸಿಕೊಡಲಾಗುತ್ತದೆ.
ಕೇವಲ ಸಿಲೆಬಸ್ನಲ್ಲಿ ಹೇಳಿರುವ ವಿಜ್ಞಾನ ಪ್ರಯೋಗವನ್ನಷ್ಟೇ ಇಲ್ಲಿ ನಡೆಸುವುದಲ್ಲ. ಮಕ್ಕಳಿಗೆ ಆಸಕ್ತಿ ಮೂಡಿಸುವ ಬೇರೆ ಬೇರೆ ಪ್ರಯೋಗಗಳನ್ನೂ ಶಿಕ್ಷಕರು ಇಲ್ಲಿ ಕೈಗೆತ್ತಿಕೊಳ್ಳುತ್ತಾರೆ. ಅತ್ಯಂತ ವಿಶಾಲ ಹಾಗೂ ಸುವ್ಯವಸ್ಥಿತವಾಗಿ ಮೂಡಿಬಂದಿರುವ ಈ ಲ್ಯಾಬ್ ಮುಂದಿನ ದಿನಗಳಲ್ಲಿ ಬಾಲವಿಜ್ಞಾನಿಗಳನ್ನು ರೂಪಿಸುವ ತಾಣವಾಗಲಿದೆ ಎಂಬುದು ಸಂಸ್ಥೆಯ ಪ್ರಾಂಶುಪಾಲರಾದ ಮಾಲತಿ ಡಿ. ಅವರ ಅಭಿಪ್ರಾಯ.
ಈ ಕಾಂಪೋಸಿಟ್ ಲ್ಯಾಬ್ ಅತ್ಯಂತ ಸುಸಜ್ಜಿತವಾಗಿ ಮೂಡಿಬಂದಿದ್ದು ವಿವಿಧ ವಿಜ್ಞಾನ ವಿಷಯಗಳಿಗೆ, ಪ್ರಯೋಗಗಳಿಗೆ ಅಗತ್ಯವಿರುವ ಎಲ್ಲಾ ಪರಿಕರಗಳನ್ನೂ ಒಳಗೊಂಡಿದೆ. ಮಾತ್ರವಲ್ಲದೆ, ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಹೆಮ್ಮೆಯ ವ್ಯವಸ್ಥೆಯಾಗಿಯೂ ರೂಪುಗೊಂಡಿದೆ. ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿ ಪರಿವರ್ತನೆಗೊಂಡಿದೆ. ಎಳೆಯ ವಿದ್ಯಾರ್ಥಿಗಳ ವಿನೂತನ ವೈಜ್ಞಾನಿಕ ಯೋಚನೆಗಳ ಸಾಕಾರಕ್ಕೆ ಈ ಲ್ಯಾಬ್ ಉಪಯೋಗವಾಗುತ್ತಿದೆ.
ತನ್ಮಧ್ಯೆ, ಸಂಸ್ಥೆಯ ವಿಸ್ತರಣೆಯ ಕಾರ್ಯವೂ ನಡೆದಿದೆ. ನೆಲಮಹಡಿಯಲ್ಲದೆ ಮತ್ತೆರಡು ಮಹಡಿಗಳನ್ನು ಹೊಂದಿದ್ದ ಅಂಬಿಕಾ ವಿದ್ಯಾಲಯ ಇದೀಗ ಮತ್ತೊಂದು ನೂತನ ಮಹಡಿಯನ್ನು ಜೋಡಣೆ ಮಾಡಿಕೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ತರಗತಿಗಳನ್ನು ಈ ಮಹಡಿಯಲ್ಲಿ ಒದಗಿಸಿಕೊಡಲಾಗಿದೆ. ಹೀಗೆ ವಿಸ್ತೃತಗೊಂಡ ಮಹಡಿಯಲ್ಲಿ ಈ ಕಾಂಪೋಸಿಟ್ ಲ್ಯಾಬ್ ತಲೆಯೆತ್ತಿ ನಿಂತಿದೆ.
ಮೂಲವಿಜ್ಞಾನ ಕ್ಷೇತ್ರದಲ್ಲಿ ನಮ್ಮ ವಿದ್ಯಾರ್ಥಿಗಳು ದೊಡ್ಡ ಸಾಧನೆಯನ್ನು ಮಾಡುವಂತಾಗಬೇಕು. ದೇಶಕ್ಕೆ ಅತ್ಯುತ್ತಮ ವಿಜ್ಞಾನಿಗಳನ್ನು ಸಮರ್ಪಿಸುವ ಕಾರ್ಯ ನಮ್ಮ ವಿದ್ಯಾಸಂಸ್ಥೆಯಿಂದ ಆಗಬೇಕು ಎಂಬ ಬಹುದೊಡ್ಡ ಕನಸು ನಮ್ಮಲ್ಲಿದೆ. ಆ ಕನಸಿನ ಸಾಕಾರಕ್ಕೆ ಇಂತಹದ್ದೊಂದು ಉತ್ಕೃಷ್ಟ ಲ್ಯಾಬ್ನ ಅವಶ್ಯಕತೆ ಇದೆ. ಇದರ ಮೂಲಕ ವೈಜ್ಞಾನಿಕ ಆಸಕ್ತಿ, ಕುತೂಹಲಗಳನ್ನು ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ.
– ಸುಬ್ರಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು