ಕೆದಂಬಾಡಿ-ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶಶಿಧರ ರಾವ್ ಅವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಕೆದಂಬಾಡಿ-ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸುದೀರ್ಘ 39 ವರ್ಷಗಳ ಕಾಲ ಸೇವೆ ಸಲ್ಲಿಸಿ, ಇತ್ತೀಚೆಗೆ ನಿಧನರಾದ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ ಅವರಿಗೆ ಶ್ರದ್ಧಾಂಜಲಿ ಸಭೆಯು ಅ.21ರಂದು ತಿಂಗಳಾಡಿಯಲ್ಲಿರುವ ಸಂಘ ಪ್ರಧಾನ ಕಚೇರಿ ಆವರಣದಲ್ಲಿ ನೆರವೇರಿತು.


ಸಂಘದ ನೂತನ ಕಟ್ಟಡಕ್ಕೆ ಶಶಿಧರ್ ರಾವ್‌ರವರ ಹೆಸರಿಡುವ ಮೂಲಕ ಅವರ ಹೆಸರು ಚಿರಸ್ಥಾಯಿಗೊಳಿಸಬೇಕು-ಶಶಿಕುಮಾರ್ ರೈ ಬಾಲ್ಯೊಟ್ಟು:

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು, ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಹಕಾರಿ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಂಪದನೆಯನ್ನು ಸಮಾಜಕ್ಕೆ ಅರ್ಪನೆ ಮಾಡಿ ಸಹೋದರರಂತೆ ಬಾಳಿದವರು. ಕೆಯ್ಯೂರು ಭಾಗದಲ್ಲಿ ಸಮೃದ್ಧಿಯುತ ಜಾಗದ ಮಾಲಿಕರಾಗಿ ಎಲ್ಲರ ಕಷ್ಟಸುಖಗಳಲ್ಲಿ ಭಾಗಿಗಳಾಗಿದ್ದರು. ಸುದೀರ್ಘ 21 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ನಷ್ಟದಲ್ಲಿದ್ದ ಸಂಘವನ್ನು ಲಾಭದತ್ತ ಕೊಂಡೊಯ್ಯುವ ಮೂಲಕ ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಜೀವಿ. ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಈ ಭಾಗದ ಸಹಕಾರಿಗಳಾಗಿ ನಿರ್ಮಾಣವಾಗಲಿರುವ ಹೊಸ ಕಟ್ಟಡ, ಅಥವಾ ಸಭಾಭವನಕ್ಕೆ ಅವರ ಹೆಸರಿಡುವಲ್ಲಿ ಕೈಜೋಡಿಸಬೇಕು ಎಂದರು.


ಶಶಿಧರ್ ರಾವ್ ಅವರು ಸಾಧನೆ ಎಲ್ಲರಿಗೂ ಪ್ರೇರಣಾ ಶಕ್ತಿ-ನನ್ಯ ಅಚ್ಚುತ್ತ ಮೂಡೆತ್ತಾಯ:
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ್ತ ಮೂಡೆತ್ತಾಯ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಸಿಕೊಂಡು ಬಂದಿದ್ದ ಶಶಿಧರ ರಾವ್ 2005ರ ನಂತರ ಸಂಘದ ಅಧ್ಯಕ್ಷರಾಗಿ ತನ್ನ ಕೊನೆಯುಸಿರು ಇರುವ ತನಕ ಸಂಘವನ್ನು ಮುನ್ನಡೆಸಿದವರು. ಎಲ್ಲಾ ರೀತಿಯಲ್ಲಿಯೂ ಜನರೊಂದಿಗೆ ಬೆರೆತವರು. ಧಾರ್ಮಿಕ, ಶೈಕ್ಷಣಿಕ, ಸಹಕಾರಿ, ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಕೊಡುಗೆಯಿದೆ. ಹಲವು ಮಂದಿಗೆ ಜಮೀನು ನೀಡಿ ಮನೆ ಕಟ್ಟಲು ನೆರವು ನೀಡಿದವರು. ಸಮಾಜದ ಪ್ರತಿಯೊಬ್ಬರಿಗೂ ಪ್ರೇರಣಾ ಶಕ್ತಿಯಾಗುವ ರೀತಿಯಲ್ಲಿ ಸಾಧನೆ ಮಾಡಿದವರು ಎಂದು ಹೇಳಿದರು.


ಮುಂದೆ ಭ್ರಷ್ಠಾಚಾರ ರಹಿತ ಆಡಳಿತ ನಡೆಸಿ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಬೇಕು-ಶಿವರಾಮ ಗೌಡ ಇದ್ಯಪೆ:

ಸಂಘದ ಮಾಜಿ ಉಪಾಧ್ಯಕ್ಷ ಶಿವರಾಮ ಗೌಡ ಇದ್ಯಪೆ ಮಾತನಾಡಿ, ಸಹಕಾರಿ ಸಂಘದಲ್ಲಿ ಕಳೆದ ನಾಲ್ಕು ಶಶಿಧರ್ ರಾವ್ ಅಧ್ಯಕ್ಷರಾಗಿ ನಾನು ಉಪಾಧ್ಯಕ್ಷನಾಗಿ ಅಣ್ಣ ತಮ್ಮಂದಿರಂತೆ ಇದ್ದವರು. ಈಗ ಅವರ ಅಗಲುವಿಕೆಯು ಸಹೋದರನನ್ನು ಕಳೆದುಕೊಂಡಂತೆ ನೋವು ಬಾಧಿಸುತ್ತಿದೆ. ಮುಳುಗುವ ಹಂತದಲ್ಲಿದ್ದ ಸಂಘವನ್ನು ಮುನ್ನಡೆಸಿ ಲಾಭಗಳಿಸುವಂತೆ ಮಾಡಿದವರು. ಕೊರೋನಾ ಸಮಯದಲ್ಲಿ ಸಹಕಾರಿ ಮಾರ್ಟ್ ಪ್ರಾರಂಭಿಸಿ ಲಾಭ ಗಳಿಸಿದೆ. ಸಂಘಕ್ಕೆ ಹಣ ಹಾಕಿರುವುದೇ ಹೊರತು ಅವರು ಸಂಘದಿಂದ ಒಂದು ರೂಪಾಯಿ ಪಡೆದವರಲ್ಲ. ಸಂಘಕ್ಕೆ ನೂತನ ಕಟ್ಟಡ ನಿರ್ಮಾಣವಾಗುವ ಸಮಯದಲ್ಲಿ ನಾವು ಅವರನ್ನು ಕಳೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿಯೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಂಘವನ್ನು ಮುನ್ನಡೆಸಿ ಭ್ರಷ್ಠಾಚಾರಕ್ಕೆ ಅವಕಾಶ ನೀಡದೇ ಆಡಳಿತ ನಡೆಸುವ ಮೂಲಕ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಬೇಕು ಎಂದರು.


ಎಲ್ಲಾ ಕ್ಷೇತ್ರಗಳಲ್ಲಿ ಶಶಿಧರ್ ರಾವ್ ಅವರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದವರು-ಎಸ್.ಬಿ ಜಯರಾಮ ರೈ:
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು, ಸಂಘದ ನಿರ್ದೇಶಕರಾಗಿರುವ ಎಸ್.ಬಿ ಜಯರಾಮ ರೈ ಬಳೆಜ್ಜ ಮಾತನಾಡಿ, ಸಂಘದಲ್ಲಿ 18 ವರ್ಷ ನಿರ್ದೇಶಕರಾಗಿ 21 ವರ್ಷ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದವರು. ಅವರ ಜೊತೆಗೆ ಇತರರನ್ನು ಬೆಳೆಸಿದವರು. ಅವರು ನಿರ್ದೇಶಕರಾಗಿದ್ದ ಅವಧಿಯಲ್ಲಿಯೇ ಸಂಘದ ಅಭಿವೃದ್ಧಿಗೆ ನಿರ್ದೇಶನ ನೀಡಿದವರು. ಸಹಕಾರ ಕ್ಷೇತ್ರದ ಜೊತೆಗೆ ದಾರ್ಮಿಕ ಕಾರ್ಯದಲ್ಲಿ ತೊಡಗಿ ದೇವಸ್ಥಾನದ ಅಭಿವೃದ್ಧಿ ಶ್ರಮಿಸಿದವರು. ಶೈಕ್ಷಣಿಕವಾಗಿ ಶಾಲೆ, ಕಾಲೇಜು ಅಭಿವೃದ್ಧಿ, ಸಾಮಾಜಿಕವಾಗಿ ಯುವ ಶಕ್ತಿ ಮಾರ್ಗದರ್ಶನ ನೀಡಿ ಸರಿದಾರಿಯಲ್ಲಿ ಮುನ್ನಡೆಸಿದವರು. ನಿಸ್ವಾರ್ಥವಾಗಿ ಕೆಲಸ ಮಾಡಿರುವ ಅವರ ಗುಣಗಳಲ್ಲಿ ನಮ್ಮಲ್ಲಿ ಅಳವಡಿಸಿ ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದರು.


ಶಶಿಧರ್ ರಾವ್ ಯಾವುದೇ ನಿರ್ದಾರ ಕೈಗೊಂಡರೂ ಅದು ಕ್ರಮ ಬದ್ದವಾಗಿತ್ತು-ಲಕ್ಷ್ಮೀ ನಾರಾಯಣ ರೈ:
ಲಕ್ಷ್ಮೀನಾರಾಯಣ ರೈ ಅರಿಯಡ್ಕ ಮಾತನಾಡಿ, ನಮ್ಮ ವಾಸ ಸ್ಥಳದ ಜಾಗದಲ್ಲಿದ್ದಲ್ಲಿ ಅರಿಯಡ್ಕ ಸೋಮಪ್ಪ ರೈಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿದ್ದ ಕೆದಂಬಾಡಿ, ಕೆಯ್ಯೂರು ಸಹಕಾರಿ ಸಂಘವು ಅಭಿವೃದ್ಧಿಯತ್ತ ಸಾಗಿರುವುದು ನಮಗೂ ಹೆಮ್ಮೆ ತಂದಿದೆ. ಒಂದು ಕಾಲದಲ್ಲಿ ಮುಳುಗುವ ಹಂತದಲ್ಲಿದ್ದ ಸಂಘವು ಈಗ ಲಾಭದಲ್ಲಿ ಮುನ್ನಡೆಯುತ್ತಿದೆ. ಈ ಸಂಘದ ಅಧ್ಯಕ್ಷರಾಗಿ ಶಶಿಧರ್ ರಾವ್ ಅವರು ಎಲ್ಲಾ ವರ್ಗದ ಜನರ ಸ್ಥಿತಿಗತಿ ಅರಿತವರು. ಕಾನೂನಿನ ಅರಿವು ಹೊಂದಿದ್ದ ಅವರು ಯಾವುದೇ ನಿರ್ಧಾರ ಕೈಗೊಂಡರೂ ಅದು ಕ್ರಮ ಬದ್ದವಾಗಿತ್ತು ಎಂದರು.


ಈ ಭಾಗದ ಸಹಕಾರಿ ಕ್ಷೇತ್ರದ ಭೀಷ್ಮಾ ಪಿತಾಮಹಾರೆನಿಸಿಕೊಂಡವರು-ಮೋಹನ ಆಳ್ವ:
ಮೋಹನ ಆಳ್ವ ಮುಂಡಾಲ ಮಾತನಾಡಿ, ಕೆದಂಬಾಡಿ, ಕೆಯ್ಯೂರು ಭಾಗದ ಎಲ್ಲಾ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿರುವ ಶಶಿಧರ ರಾವ್ ಅವರು, ಸಹಕಾರಿ ಸಂಘದಲ್ಲಿ ಬಹಳಷ್ಟು ಅರ್ಹತೆಯಿಂದ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುವ ಮೂಲಕ ಈ ಭಾಗದ ಸಹಕಾರಿ ಕ್ಷೇತ್ರದ ಭೀಷ್ಮಾ ಪಿತಾಮಹಾರೆನಿಸಿಕೊಂಡವರು. ಅವರಿಗೆ ಎರಡೂ ಗ್ರಾಮಗಳ ಜನರ ಸಹಕಾರವಿತ್ತು. ಮುಂದಿನ ಆಡಳಿತ ಮಂಡಳಿಯವರೂ ಸಂಘವನ್ನು ನಿಸ್ವಾರ್ಥವಾಗಿ ಮುನ್ನಡೆಸುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಬೇಕು ಎಂದರು.


ಶಶಿಧರ್ ರಾವ್ ಅವರು ಮಾರ್ಗದರ್ಶನದಲ್ಲಿ ಸಂಘ ಮುನ್ನಡೆಯಲಿ-ಜಯರಾಮ ರೈ ಮಿತ್ರಂಪಾಡಿ:
ಅಬುದಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿ ಮಾತನಾಡಿ, ಊರಿನ ಬೆಳವಣಿಗೆಯಲ್ಲಿ ಸಹಕಾರಿ ಸಂಘದ ಪಾತ್ರವಿದೆ. ಅದರಲ್ಲಿ ಶಶಿಧರ್ ರಾವ್ ಅವರ ಕೊಡುಗೆಯಿದೆ. ಊರಿಗೆ ಹಾಗೂ ಸಹಕಾರಿ ಸಂಘಕ್ಕೆ ಅವರು ನೀಡಿದ ಕೊಡುಗೆ ವಿದೇಶದಲ್ಲಿರುವ ನಮಗೆ ಬಹಳಷ್ಟು ತೃಪ್ತಿ ನೀಡಿದೆ. ಸಮಾಜಕ್ಕೆ ಎಲ್ಲಾ ರೀತಿಯಲ್ಲಿಯೂ ಸೇವೆ ನೀಡಿದ ಅವರು ನಮಗೆಲ್ಲಾ ಪ್ರೇರಣಾ ಶಕ್ತಿ. ಅವರ ನಿಸ್ವಾರ್ಥ ಸೇವೆ ಎರಡು ಗ್ರಾಮಕ್ಕೆ ಮಾತ್ರವಲ್ಲ ಎಲ್ಲಾ ಕಡೆಗೂ ಮಾದರಿಯಾಗಿದೆ. ಅವರು ಹಾಕಿರುವ ಮಾರ್ಗದರ್ಶನದಲ್ಲಿ ಸಂಘವು ಮುಂದುವರಿದು ಇನ್ನಷ್ಟು ಬೆಳೆಯಲಿ ಎಂದರು.


ಶಶಿಧರ್ ರಾವ್ ಅವರ ಜೀವನವೇ ಒಂದು ಗ್ರಂಥ-ರವೀಂದ್ರ ಪಿ.:
ಸಹಕಾರಿ ಸಂಘದ ಪ್ಯಾನಲ್ ಇಂಜಿನಿಯರ್ ಆಗಿರುವ ದಕ್ಷ ಕನ್‌ಸ್ಟ್ರಕ್ಷನ್ ರವೀಂದ್ರ ಪಿ. ಮಾತನಾಡಿ, ಸಹಕಾರ ಕ್ಷೇತ್ರಕ್ಕೆ ಉತ್ತಮ ಸಂದೇಶ ನೀಡಿರುವ ಶಶಿಧರ್ ರಾವ್ ಅವರಲ್ಲಿ ಸಹಕಾರಿ ಸಂಘದ ಬೆಳವಣಿಗೆ ಬಗ್ಗೆ ವಿಶೇಷ ಕಾಳಜಿ ಅವರಲ್ಲಿತ್ತು. ಅವರು ತನ್ನಲ್ಲಿರುವುದನ್ನು ಕಳೆದುಕೊಂಡು ಸಮಾಜಕ್ಕಾಗಿ ಬಹಳಷ್ಟು ಕೊಡುಗೆ ನೀಡಿ ಸಮಾಜದ ಪುಣ್ಯ ಸಂಪಾದಿಸಿದವರು. ಅವರ ಜೀವನವೇ ನಮಗೆಲ್ಲಾ ಹಾದಿ. ಅವರ ಜೀವನದ ಸಂದೇಶವೇ ಗ್ರಂಥ. ಅದಕ್ಕಾಗಿ ಬೇರೆ ಓದಬೇಕಾಗಿಲ್ಲ. ಸಹಕಾರಿ ಕ್ಷೇತ್ರಕ್ಕೆ ಉತ್ತಮ ಮೇಲ್ಪಂಕ್ತಿ ಹಾಕಿದ್ದು ಅದರ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.


ಅಗಲುವಿಕೆ ಕೆದಂಬಾಡಿ ಕೆಯ್ಯೂರು ಗ್ರಾಮಗಳ ಸಹಕಾರಿ ಕ್ಷೇತ್ರಕ್ಕೆ ಭಾರಿ ನಷ್ಟ-ಬೋಳೋಡಿ ಚಂದ್ರಹಾಸ ರೈ:
ಬೋಳೋಡಿ ಚಂದ್ರಹಾಸ ರೈಮಾತನಾಡಿ, ನನ್ನ ಮಾರ್ಗದರ್ಶಕರಾಗಿದ್ದ ಶಶಿಧರ್ ರಾವ್ ಅವರ ಜೊತೆ ನಿರ್ದೇಶಕರಾಗಿ ನಾವು ಜೊತೆಯಾಗಿ ಕೆಲಸ ಮಾಡಿದವರು. ಸೈಂದಾಂತಿಕವಾಗಿ ಬೇರೆ ಬೇರೆ ಆಗಿದ್ದರೂ ಸಂಘಕ್ಕಾಗಿ ಒಟ್ಟಗೆ ಪಕ್ಷ ಬೇಧವಿಲ್ಲದೆ ಕೆಲಸ ಮಾಡಿದವರು. ಸಾಲ ಪಡೆದವರು ಮರುಪಾವತಿಸದೇ ನಷ್ಟದಲ್ಲಿದ್ದ ಸಂಘವು ಲಾಭಕ್ಕೆ ಬಂದ ಬಳಿಕ ಸಂಘವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದವರು. ಅವರು ಇನ್ನಷ್ಟು ಕಾಲ ಅವರು ಇರಬೇಕಿತ್ತು. ಅವರನ್ನು ಕಳೆದುಕೊಂಡಿರುವುದು ಕೆದಂಬಾಡಿ ಕೆಯ್ಯೂರು ಗ್ರಾಮಗಳ ಸಹಕಾರಿ ಕ್ಷೇತ್ರಕ್ಕೆ ಭಾರಿ ನಷ್ಟವಾಗಿದೆ ಎಂದರು.
ಶಶಿಧರ್ ರಾವ್ ಅವರ ಸಹೋದರನ ಪುತ್ರ ನಿತಿನ್ ರಾವ್ ಮಾತನಾಡಿ, ತನ್ನ ಮನೆಯಂತೆ ಸಹಕಾರಿ ಸಂಘವನ್ನು ಬೆಳೆಸಿದವರು. ಸಂಘವನ್ನು ಕಷ್ಟ ಪಟ್ಟು, ವಿಶೇಷ ಆಸಕ್ತಿಯಿಂದ ಬೆಳೆಸಿದವರು. ಮೃತರ ಉತ್ತರ ಕ್ರಿಯೆ ಸದ್ಗತಿ ಕಾರ್ಯಗಳು ಅ.25ರಂದು ಮೃತರ ಸ್ವಗೃಹ ಬೊಳಿಕ್ಕಲದಲ್ಲಿ ನಡೆಯಲಿದ್ದು ಎಲ್ಲರೂ ಭಾಗವಹಿಸುವಂತೆ ವಿನಂತಿಸಿದರು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ರೈ ದೇರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಸ್ವಾಗತಿಸಿದರು. ನಿರ್ದೇಶಕ ಸಂತೋಷ್ ಕುಮಾರ್ ವಂದಿಸಿದರು. ಸಿಬ್ಬಂದಿ ಪ್ರೀತಂ ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here