ಪುತ್ತೂರು:ಸಂಪ್ಯ ಶ್ರೀರಾಮ ನಗರದ ನವಚೇತನಾ ಯುವಕ ಮಂಡಲದ ವತಿಯಿಂದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ೪೩ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸಂಭ್ರಮ ಮನೆ ಮಾಡಿತು.

ವೇ.ಮೂ ಸಂದೀಪ ಕಾರಂತ ಕಾರ್ಪಾಡಿಯವರ ನೇತೃತ್ವದಲ್ಲಿ ನಡೆದ ಗಣೇಶೋತ್ಸವದಲ್ಲಿ ಬೆಳಿಗ್ಗೆ ಗಣಪತಿ ವಿಗ್ರಹ ಪ್ರತಿಷ್ಠೆ, ಗಣಹೋಮ, ಮಕ್ಕಳಿಗೆ ವಿಗ್ರಹ ರಚನೆ ಸ್ಪರ್ಧೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.
ಧಾರ್ಮಿಕ ಸಭೆ:
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಇಸ್ಲಾಂ, ಕ್ರೈಸ್ತ ಧರ್ಮಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುತ್ತಿದ್ದು ಧರ್ಮ, ಮತದ ಬಗ್ಗೆ ಅವರಲ್ಲಿ ಸಾಕಷ್ಟು ಜ್ಞಾನವಿದೆ. ಹಿಂದು ಧರ್ಮದಲ್ಲಿ ಮಕ್ಕಳಿಗೆ ಧರ್ಮ, ಆದ್ಯಾತ್ಮದ ಬಗ್ಗೆ ಅರಿವು ಮೂಡಿಸುವಂತಹ ಯಾವುದೇ ಪಠ್ಯ ಕ್ರಮಗಳಿಲ್ಲ. ಈ ಹಿಂದೆ ಶಾಲೆಗಳಲ್ಲಿ ನಡೆಯುತ್ತಿದ್ದ ಸರಸ್ವತಿ ವಂದನೆ, ಶಾರದಾ ಪೂಜೆಗಳು ಜಾತ್ಯಾತೀತ ಮತ್ತು ಕೋಮುವಾದದ ಭಾವನೆಯಲ್ಲಿ ಕೈಬಿಡಲಾಗಿದೆ. ಈಶ ಎನ್ನುವ ಪದವನ್ನೇ ಪಠ್ಯ ಪುಸ್ತಕದಿಂದ ತೆಗೆದುಹಾಕಲಾಗಿದೆ. ಜಾತ್ಯಾತೀತದ ಭಾವನೆಯಲ್ಲಿ ಶಿಕ್ಷಣ ಕ್ರಮ ಬಿಟ್ಟು ಹೋಗಿದೆ. ಶ್ರದ್ಧಾ ಕೇಂದ್ರಗಳಲ್ಲಿ ಧರ್ಮದ ಅರಿವು ಮೂಡಿಸುವುದು, ಮನೆಗಳಲ್ಲಿದ್ದ ಸಂಜೆಯ ಭಜನೆ ನಿಂತು ಹೋಗಿದೆ. ಹೀಗಾಗಿ ಮಕ್ಕಳಲ್ಲಿ ಧರ್ಮದ ಬಗ್ಗೆ ಪ್ರಶ್ನೆ ಸಹಜ. ಅದಕ್ಕೆ ಉತ್ತರಿಸಲು ಪೋಷಕರು ಸಾಧುವಲ್ಲ. ಎಂದ ಅವರು ಧರ್ಮದ ಬಗ್ಗೆ ಅಲ್ಲಲ್ಲಿ ವೈಚಾರಿಕ ದಾಳಿಗಳಾದಾಗ ನಾವೇ ಅತೀ ಹೆಚ್ಚು ವೈರಲ್ ಮಾಡದೇ, ಅಂತಹ ದಾಳಿಗೆ ಅವಕಾಶ ನೀಡದೇ ಹಿಂದುಗಳೆಲ್ಲರೂ ವಿರೋಧಿಸಬೇಕು ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಮಾತನಾಡಿ, ಧರ್ಮವೆಂದರೆ ಅದು ಜೀವನ ಪದ್ದತಿ. ನಮ್ಮ ಜೀವನದಲ್ಲಿ ಆಡುವ ಮಾತು, ಆಲೋಚನೆ, ಭಾವನೆ, ವರ್ತನೆಗಳ ಮೂಲಕ ನಮ್ಮನ್ನು ಬೆಳೆಸಿಕೊಂಡು ಸಮುದಾಯಕ್ಕೆ ಕೊಂಡಿಯಾಗುವಂತೆ ಬದುಕುವುದೇ ಧರ್ಮ. ವೇದ ಉಪನಿಷತ್ತುಗಳನ್ನು ಎಲ್ಲರೂ ಓದಿ ಅರಿತುಕೊಂಡು ಸ್ವ ವಿಶ್ಲೇಷಣೆ ಮಾಡಿಕೊಳ್ಳಬೇಕು. ಆ ಮೂಲಕ ಜ್ಞಾನವಂತರಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದುದೇ ಭಾರತೀಯ ಹಬ್ಬಗಳ ಹಬ್ಬಗಳ ಸಂಕೇತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ನವಚೇತನ ಯುವಕ ಮಂಡಲದ ಗೌರವಾಧ್ಯಕ್ಷರಾಗಿರುವ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಹಿಂದೂ ಧರ್ಮದ ಆಚಾರ, ನಂಬಿಕೆ, ಸಂಸ್ಕಾರಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿದಾಗ ಧರ್ಮಕ್ಕೆ ಚ್ಯುತಿ ಬರಲು ಸಾಧ್ಯವಿಲ್ಲ. ಭಾರತ ಅನ್ಯೋನ್ಯತೆಯಿಂದ ಇರುವ ದೇಶ ಬೆಳೆಯಲಿದೆ. ಧರ್ಮದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸದಾಗ ದೇಶ ಬಲೀಷ್ಠವಾಗಲಿದೆ.
ನಿವೃತ್ತ ಗಣಿ ಅಧಿಕಾರಿ ವಿಶ್ವನಾಥ ಶೆಟ್ಟಿ ಪಡ್ಯೊಟ್ಟು, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ರೈ, ಕುರಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ದರ್ಬೆ ಶುಭ ಸ್ಟೋರ‍್ಸ್ ಮ್ಹಾಲಕ ಶ್ರೀಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ, ಪ್ರತಿಭಾ ಪುರಸ್ಕಾರ:
ಆಶಾ ಕಾರ್ಯಕರ್ತೆಯರಾದ ಗೀತಾ, ಲೀಲಾವತಿ, ಸುಶೀಲ, ಮಾಲತಿ, ರೇಣುಕಾ ಹಾಗೂ ದಮಯಂತಿಯವರನ್ನು ಸನ್ಮಾನಿಸಲಾಯಿತು. ಯುವಕ ಮಂಡಲದ ಮಾಜಿ ಅಧ್ಯಕ್ಷ ದಿ.ಸೀತಾರಾಮ ಶೆಟ್ಟಿಯವರ ಸ್ಮರಣಾರ್ಥ ನೀಡುವ ಸೀತಾರಾಮ ಪ್ರತಿಭಾ ಪುರಸ್ಕಾರವನ್ನು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಗಗನ್ ಬೈಲಾಡಿ, ಚೈತನ್ಯ ಕೆ., ಶಿವಾನಿ ಶೆಟ್ಟಿ, ವೈಷ್ಣವೀ,ಅಂಕಿತ್ ಪಿ., ಇಶಾನಿ ಆರ್.ರೈ ಶ್ರೀರಾಜ್ ಬಾರಿಕೆ,ಡಿಂಪಲ್ ಶೆಟ್ಟಿ, ಜ್ಞಾನ ರೈ ಕುರಿಯ ಇವರಿಗೆ ನೀಡಿ ಗೌರವಿಸಲಾಯಿತು.
ಮೈಥಿಲಿ ಪ್ರಾರ್ಥಿಸಿದರು. ನವಚೇತನಾ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ವಿಜಯ ಬಿ.ಎಸ್ ಸ್ವಾಗತಿಸಿದರು. ಅಧ್ಯಕ್ಷ ಜಯಂತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಶ್ವಿನಿ ರವೀಂದ್ರ, ಲಕ್ಷ್ಮಣ್ ಬೈಲಾಡಿ, ಸುರೇಶ್ ಪೂಜಾರಿ ಸಂಪ್ಯ, ನಾಗೇಶ್ ಕೆ. ರವಿನಾಥ ಗೌಡ ಬೈಲಾಡಿ, ಕುಂಞಣ್ಣ ಗೌಡ, ಜಯಕುಮಾರ್ ನಾಯರ್, ಶೀನಪ್ಪ ಗೌಡ ಬೈಲಾಡಿ, ರವಿ ಗೌಡ ಬೈಲಾಡಿ, ಸುರೇಶ್ ಬೈಲಾಡಿ, ಅತಿಥಿಗಳಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಸ್ವಾಗತಿಸಿದರು. ಯುವಕ ಮಂಡಲದ ನಿಕಟಪೂರ್ವ ಕಾರ್ಯದರ್ಶಿ ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪ್ರವೀಣ ಗೌಡ ಉದಯಗಿರಿ ವಂದಿಸಿದರು. ಬಳಿಕ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ವೈಷ್ಣವೀ ನಾಟ್ಯಾಲಯ ಪುತ್ತೂರು ಇವರಿಂದ ನೃತ್ಯಾರ್ಪಣಂ, ರಾತ್ರಿ ಭಾವನ ಕಲಾ ಆರ್ಟ್ಸ್ ಇವರಿಂದ ಸಾಂಸ್ಕೃತಿಕ ವೈಭವ, ಅನ್ನಸಂತರ್ಪಣೆ ನಡೆಯಿತು.
ಆ.28 ಶೋಭಾಯಾತ್ರೆ
ಗಣೇಶೋತ್ಸವದಲ್ಲಿ ಆ.28ರಂದು ಬೆಳಿಗ್ಗೆ ಗಣಪತಿಹೋಮ, ಸತ್ಯನಾರಾಯಣ ಪೂಜೆ, ಕುಣಿತ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಶ್ರೀ ದೇವರ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ದೇವಸ್ಥಾನದ ಬಳಿಯಿಂದ ಹೊರಟು ಮುಖ್ಯರಸ್ತೆಯಾಗಿ ಮುಕ್ರಂಪಾಡಿ, ಮೊಟ್ಟೆತ್ತಡ್ಕ ತನಕ ತೆರಳಿ ನಂತರ ಸಂಪ್ಯ ದೇವಸ್ಥಾನಕ್ಕೆ ಹಿಂತಿರುಗಿ ದೇವಸ್ಥಾನದ ಬಳಿಯ ಕೆರೆಯಲ್ಲಿ ವಿಗ್ರಹ ಜಲಸ್ತಂಬನದೊಂದಿಗೆ ಗಣೇಶೋತ್ಸವವು ಸಂಪನ್ನಗೊಳ್ಳಲಿದೆ ಎಂದು ನವಚೇತನ ಯುವಕ ಮಂಡಲದ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಹಲವು ಕಡೆ ಯುವಕ ಮಂಡಲಗಳಿವೆ. ಅವುಗಳಲ್ಲಿ ಕೆಲವೊಂದು ಕಾರ್ಯಕ್ರಮಗಳಿಗೆ ಸೀಮಿತವಾಗುತ್ತದೆ. ಆದರೆ ಸಂಪ್ಯದ ನವಚೇತನ ಯುವಕ ಮಂಡಲ ಭಿನ್ನವಾಗಿದ್ದು ಸಾಮಾಜಿಕ ಜವಾಬ್ದಾರಿಯೊಂದಿಗೆ ಸಾಂಸ್ಕೃತಿಕ ಪರಂಪರೆಗಳನ್ನು ಬೆಳೆಸುವ ಜೊತೆಗೆ ಧಾರ್ಮಿಕ ನಂಬಿಕೆಗಳನ್ನು ಬೆಳೆಸುವ ಅದ್ಬುತ ಕಾರ್ಯಗಳನ್ನು 43 ವರ್ಷಗಳಿಂದ ಮಾಡುತ್ತಿದೆ. ಯುವಕ ಮಂಡಲ ಗಣೇಶೋತ್ಸವದ ಮೂಲಕ ಸಾಂಸ್ಕೃತಿಕ ಧಾರ್ಮಿಕ ನಂಬಿಕೆಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ಶ್ರದ್ಧಾಕೇಂದ್ರಗಳು ಮಾಡಬೇಕಾದ ಕಾರ್ಯ ನವಚೇತನ ಯುವಕ ಮಂಡಲ ಮಾಡುತ್ತಿರುವುದು ಅಭಿನಂದನಿಯ.
-ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದರು.