ಸಹಿ ಪೋರ್ಜರಿ ಪ್ರಕರಣ – ಪುಡಾ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಗೊಳಪಡಿಸುವಂತೆ ಮಹಮ್ಮದ್ ಆಲಿ ಒತ್ತಾಯ

0

ಪುತ್ತೂರು: ಏಕ ವಿನ್ಯಾಸ ನಕ್ಷೆ ಅನುಮೋದನೆ ಆದೇಶದಲ್ಲಿ ತನ್ನ ಸಹಿ ಪೋರ್ಜರಿ ಆಗಿದೆ. ಹಾಗಾಗಿ ಗ್ರಾಮ ಪಂಚಾಯತ್ ನಿಂದ ನೀಡಿರುವ 9/11ನ್ನು ರದ್ದು ಪಡಿಸಬೇಕೆಂದು ಪಂಚಾಯತ್‌ಗೆ ಬರೆದ ಪತ್ರಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸದೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ನಗರಸಭೆಯ ಮಾಜಿ ವಿಪಕ್ಷ ನಾಯಕ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿಯವರು ಪುಡಾ ಅಧಿಕಾರಿ ಗುರುಪ್ರಸಾದ್ ರನ್ನು ಸೇವೆಯಿಂದ ಅಮಾನತು ಗೊಳಿಸಿ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ನೆಕ್ಕಿಲಾಡಿ ಗ್ರಾಮದ ಸರ್ವೆ ನಂ 54/1 ರಲ್ಲಿ 6 ಮತ್ತು 10 ಸೆಂಟ್ಸ್ ಸ್ಥಳದ ಏಕ ನಿವೇಶನ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿದ ಆದೇಶ ಪತ್ರ ದಿನಾಂಕ 24/4/2025 ರಂದು ಪುತ್ತೂರು ಪುಡಾ ಕಚೇರಿಯಿಂದ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಗೆ ರವಾನೆಯಾಗಿತ್ತು.. ಇದರಂತೆ ಸದರಿ ನಿವೇಶನಗಳಿಗೆ ಗ್ರಾಮ ಪಂಚಾಯತ್ ನಿಂದ 9/11 ನೀಡಲಾಗಿತ್ತು. ಈ 9/11 ನಂತೆ ಮಾಲಿಕರು ಈ ನಿವೇಶನವನ್ನು ಬೇರೆ ಯವರಿಗೆ ಮಾರಾಟ ಮಾಡಿರುತ್ತಾರೆ. ಇದಾದ 4 ತಿಂಗಳು ಕಳೆದ ಬಳಿಕ 6/8/2025 ರಂದು ಪೂಡಾ ಸದಸ್ಯ ಕಾರ್ಯದರ್ಶಿಗಳು ನೆಕ್ಕಿಲಾಡಿ ಗ್ರಾಮ ಪಂಚಾಯತ್ ಗೆ, 24/4/2025 ರಂದು ಕಳುಹಿಸಿರುವ ಪತ್ರದಲ್ಲಿ ನೆಕ್ಕಿಲಾಡಿ ಗ್ರಾಮದ ಸರ್ವೆ ನಂ 54/1ರ ಏಕ ವಿನ್ಯಾಸ ನಕ್ಷೆ ಅನುಮೋದನೆ ನೀಡಿರುವ ಆದೇಶದಲ್ಲಿ ನನ್ನ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಮತ್ತು ತಪ್ಪು ಮಾಹಿತಿ ನೀಡಿ ಏಕ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯಲಾಗಿದೆ. ಆದುದರಿಂದ ಪಂಚಾಯತ್ ನಿಂದ ನೀಡಲಾಗಿರುವ 9/11 ರದ್ದು ಪಡಿಸಬೇಕೆಂದು ಕೇಳಿಕೊಂಡಿರುವ ಘಟನೆ ನಡೆದಿದೆ. ಈ ಕುರಿತು ನೆಕ್ಕಿಲಾಡಿ ಗ್ರಾ.ಪಂ ಸಭೆಯಲ್ಲೂ ಪ್ರಸ್ತಾಪ ಆಗಿತ್ತು. ಆದರೆ ಈ ಕುರಿತು ಎಲ್ಲಾ ದಾಖಲೆ ನೋಡಿದಾಗ ಕೇವಲ ಪೋರ್ಜರಿ ಸಹಿ ಮಾತ್ರವಲ್ಲ. ಪುಡಾ ಕಚೇರಿಯ ಮೊಹರು,(ಸೀಲ್), ಲೆಟರ್ ಹೆಡ್ ಕೂಡಾ ದುರುಪಯೋಗ ಆಗಿದೆ. ಪೋರ್ಜರಿ ಸಹಿ ಇರುವ ಪತ್ರದಲ್ಲಿ ಸರಕಾರದ ಲಾಂಛನ ವನ್ನು ಪ್ರಿಂಟ್ ಮಾಡಿ ದುರುಪಯೋಗ ಪಡಿಸಲಾಗಿದೆ. ಇದೊಂದು ಗಂಭೀರ ಪ್ರಕರಣ. ಈ ಘಟನೆ ನಡೆದು ಇಷ್ಟು ದಿನವಾದರೂ ಪುಡಾ ಅಧಿಕಾರಿ ಪೊಲೀಸ್ ಠಾಣೆಯಲ್ಲಿ ಯಾಕೆ ದೂರು ದಾಖಲಿಸಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕಚೇರಿಯ ಲೆಟರ್ ಹೆಡ್, ಸೀಲ್ ದುರುಪಯೋಗ ಆಗಿರುವುದರಲ್ಲಿ ಕಚೇರಿ ಸಿಬ್ಬಂದಿಗಳು ಭಾಗಿಯಾಗಿದ್ದರೆಯೇ ಅಥವಾ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಪತ್ತೆ ಹಚ್ಚಲು ತನ್ನ ಕಚೇರಿಯಲ್ಲಿ ತನಿಖೆ ಮಾಡಬೇಕಿತ್ತು. ಅದನ್ನು ಯಾಕೆ ಮಾಡಿಲ್ಲ..? ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ರವರು ಪೋರ್ಜರಿ ಎಂದು ಪಂಚಾಯತ್ ಗೆ ಬರೆದ ಪತ್ರದ ಉಲ್ಲೇಖದಲ್ಲಿ ಸದರಿ ಏಕ ವಿನ್ಯಾಸ ನಕ್ಷೆಯ ಅನುಮೋದನೆಗಾಗಿ ಪಡೆದ ಶುಲ್ಕದ ಚಲನ್ ನಂಬ್ರ ಹಾಗೂ ಪಾವತಿ ಮೊತ್ತ ವನ್ನು ನಮೂದಿಸಿರುತ್ತಾರೆ ಇವೆಲ್ಲ ನೋಡಿದಾಗ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕೆಂದರು.


ಹಣದ ಆಮೀಷವೋ ?
ನನಗೆ ತಿಳಿದಿರುವ ಮಾಹಿತಿ ಪ್ರಕಾರ ಸದರಿ ಪ್ರಕರಣ ದಲ್ಲಿ ಏಕ ನಿವೇಶನ ವಿನ್ಯಾಸ ನಕ್ಷೆಗಾಗಿ ಬಂದ ನಿವೇಶನವು ನೇತ್ರಾವತಿ ನದಿಯ ದಡದಲ್ಲಿದ್ದು. ನದಿಗೆ ಸಂಬಂದಿಸಿದ ಬಫ್ಫರ್ ಝೋನ್‌ನ ಒಳಗೆ ಬರುತ್ತದೆ. ಹಾಗಾದರೆ ಅಧಿಕಾರಿಗಳು ಸ್ಥಳ ತನಿಖೆ ನಡೆಸಿಲ್ಲವೇ…? ತನಿಖೆ ನಡೆಸಿದ್ದರೆ ಸದರಿ ನಿವೇಶನ ಬಫ್ಫರ್ ಝೋನ್‌ನ ಒಳಗೆ ಬರುತ್ತದೆ ಎಂಬುದು ಗೊತ್ತಿರ ಬೇಕಲ್ಲವೇ..? ಹಾಗಿದ್ದರೆ ಹಣದ ಆಮಿಷಕ್ಕೊಳಗಾಗಿ ಕಾನೂನು ಬಾಹಿರವಾಗಿ ಸದರಿ ಏಕ ನಿವೇಶನ ನಕ್ಷೆ ಗೆ ಅನುಮೋದನೆ ನೀಡಲಾಗಿದೆಯೇ..? ಎಂದು ನನ್ನ ಪ್ರಶ್ನೆ ಎಂದು ಮಹಮ್ಮದ್ ಆಲಿ ಹೇಳಿದರು.


ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆಂದಾಗ ಸಹಿ ಪೋರ್ಜರಿಯ ಕಾರಣ:
ಸದರಿ ಪ್ರಕರಣದ ನಿವೇಶನದ ಸಮೀಪದಲ್ಲಿರುವ ನಿವೇಶನದಾರರೊಬ್ಬರು ತನ್ನ ನಿವೇಶನಕ್ಕೆ ಏಕ ವಿನ್ಯಾಸ ಅನುಮೋದನೆ ನೀಡಬೇಕೆಂದು ಪಂಚಾಯತ್ ಮೂಲಕ ಪುಡಾಕ್ಕೆ ಅರ್ಜಿ ನೀಡಿದ್ದರು. ಅರ್ಜಿ ನೀಡಿದ ವ್ಯಕ್ತಿ ಪುಡಾ ಅಧಿಕಾರಿಗೆ ಅವರು ಕೇಳಿದಷ್ಟು ಹಣ ನೀಡಿಲ್ಲ ಎಂಬ ಕಾರಣಕ್ಕೆ ಪೂಡಾ ಅಧಿಕಾರಿ ನಿಮ್ಮ ನಿವೇಶನ ನದಿಯ ಬಫ್ಫರ್ ಝೋನ್ ಒಳಗೆ ಬರುತ್ತದೆ ನಿಮಗೆ ವಿನ್ಯಾಸ ನಕ್ಷೆ ಅನುಮೋದನೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆ ವ್ಯಕ್ತಿ ನನ್ನ ಪಕ್ಕದ ನಿವೇಶನ ಕೂಡ ಬಫ್ಫರ್ ಝೋನ್ ಗೆ ಬರುತ್ತದೆ.. ಅದಕ್ಕೆ ನೀವು ಹೇಗೆ ಅನುಮೋದನೆ ನೀಡಿದ್ದೀರಿ ಎಂದು ಪ್ರಶ್ನಿಸಿದರಲ್ಲದೆ ನಾನು ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರ ಇನ್ನು ಇದು ದೊಡ್ಡ ರಾದ್ದಾಂತ ಆಗಿ ತನ್ನ ಬುಡಕ್ಕೆ ಬರುತ್ತದೆ ಎಂದು ಹೆದರಿ ಸಹಿ ಪೋರ್ಜರಿ ಎಂಬ ಕಾರಣ ನೀಡಿ ತನ್ನ ಕಚೇರಿಯಿಂದ ನೀಡಲಾಗಿರುವ ಏಕ ವಿನ್ಯಾಸ ನಕ್ಷೆಯ ಅನುಮೋದನೆ ಯನ್ನು ರದ್ದು ಪಡಿಸಿ. 9/11 ರದ್ದು ಪಡಿಸಲು ಪಂಚಾಯತ್ ಗೆ ಪತ್ರ ಬರೆಯಲು ಕಾರಣ ಆಗಿರುತ್ತದೆ.. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಇವರ ಸಹಿ ಪೋರ್ಜರಿ ಮಾತ್ರ ಅಗಿದ್ದರೆ ಡೀಲ್ ಮಾಡಿ ಮುಗಿಸುತ್ತಿದ್ದರೊ ಎಂಬ ಅನುಮಾನವೂ ಹುಟ್ಟಿದೆ ಎಂದು ಮಹಮ್ಮದ್ ಆಲಿ ಹೇಳಿದರು.


ಪ್ರಕರಣ ಹಿಂದೆ ದೊಡ್ಡ ಜಾಲ:
ಪೋರ್ಜರಿ ಎಂದು ಈಗ 9/11 ರದ್ದಾಗಿರುವುದರಿಂದ ಅವರಿಗೆ ಈ ನಿವೇಶನ ದಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ಈ ನಿವೇಶನವು ನೇತ್ರಾವತಿ ನದಿಯ ಬಫ್ಫರ್ ಝೋನ್ ಒಳಗೆ ಬರುವುದರಿಂದ ಮುಂದಕ್ಕೆ ಅವರಿಗೆ 9/11 ಸಿಗುವುದು ಕಷ್ಟ ಇದರಿಂದ ಆ ವ್ಯಕ್ತಿಗೆ ಕಷ್ಟ ಮತ್ತು ನಷ್ಟ ಆಗಿದೆ ಮತ್ತು ಮೋಸವೂ ಆಗಿದೆ. ಈ ಮೋಸದಿಂದ ಕ್ರಯಕ್ಕೆ ಪಡಕೊಂಡ ವ್ಯಕ್ತಿಗೆ ಅನ್ಯಾಯ ಆಗಿದೆ. ಇನ್ನು ಮುಂದೆ ಈ ರೀತಿ ಯಾರಿಗೂ ಅನ್ಯಾಯ ಆಗಬಾರದು. ಈ ಪೋರ್ಜರಿ ಪ್ರಕರಣದ. ಹಿಂದೆ ದೊಡ್ಡ ಜಾಲವೇ ಇದೆ ಎಂಬ ಗುಮಾನಿ ಇದೆ, ನೆಕ್ಕಿಲಾಡಿ ಪಂಚಾಯತ್‌ನ ಮಾಜಿ ಅಧ್ಯಕ್ಷ, ಹಾಗೂ ಹಾಲಿ ಸದಸ್ಯ ಈ ಪೋರ್ಜರಿ ಪ್ರಕರಣದ ಹಿಂದೆ ಇದ್ದಾರೆ ಎಂದು ಜನರು ಮಾತಾಡುತ್ತಿದ್ದಾರೆ. ಯಾರೇ ಇರಲಿ ಈ ರೀತಿ ಪೋರ್ಜರಿ ಮತ್ತು, ಮೋಸ ಮಾಡುವ ಜಾಲವನ್ನು ಪತ್ತೆ ಹಚ್ಚಿ ಅವರನ್ನು ಸದೆ ಬಡಿಯಲೇಬೇಕು. ಆದುದರಿಂದ ಈ ಪೋರ್ಜರಿ ಮೋಸ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸದೆ ಮುಚ್ಚಿ ಹಾಕಲು ಪ್ರಯತ್ನಿಸಿರುವ ಪೂಡಾ ಅಧಿಕಾರಿ ಗುರುಪ್ರಸಾದ್ ಗೆ ಮೊದಲು ಶಿಕ್ಷೆ ಆಗಬೇಕು ಎಂದು ಮಹಮ್ಮದ್ ಆಲಿ ಆಗ್ರಹಿಸಿದರು.


ದುಡ್ಡು ಕೊಟ್ಟವರ ಫೈಲ್ ಮಾತ್ರ ಕ್ಲೀಯರ್:
ಪುಡಾ ಅಧಿಕಾರಿ ಗುರುಪ್ರಸಾದ್ ಪುತ್ತೂರಿಗೆ ಬಂದ ಬಳಿಕ ಪೂಡಾ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಬ್ರೋಕರ್ ಗಳ ಹಾವಳಿ ಮಿತಿ ಮೀರಿದೆ. ನಗರ ಸಭಾ ವ್ಯಾಪ್ತಿಯಿಂದ ಹಾಗೂ ಗ್ರಾಮ ಪಂಚಾಯತ್ ಗಳಿಂದ ವಿನ್ಯಾಸ ನಕ್ಷೆ ಅನುಮೋದನೆಗಾಗಿ ಬಂದ ನೂರಾರು ಅರ್ಜಿಗಳು ತಿಂಗಳಾನು ತಿಂಗಳಿಂದ ವಿಲೇವಾರಿ ಆಗದೆ ಪೆಂಡಿಂಗ್ ಇದೆ. ಕಚೇರಿ ಯಲ್ಲಿ ಹಣ ಕೊಡದೆ ಯಾವ ಕಡತವೂ ಮೂವ್ ಆಗುವುದಿಲ್ಲ. ಈ ಸದಸ್ಯ ಕಾರ್ಯ ದರ್ಶಿಗಳು ವಾರಕ್ಕೆ ಒಂದು ದಿನ ಮಾತ್ರ ಪುತ್ತೂರು ಪೂಡಾ ಕಚೇರಿಗೆ ಬರುತ್ತಿದ್ದಾರೆ. ಇದರಿಂದಾಗಿ ಸಕಾಲಕ್ಕೆ ವಿನ್ಯಾಸ ನಕ್ಷೆ ಸಿಗದೆ ಮನೆ ಕಟ್ಟುವವರ ಮತ್ತು ಸಾಲ ಪಡೆಯುವ ಜನರಿಗೆ ತುಂಬಾ ತೊಂದರೆ ಆಗಿದೆ. ವಾರಕ್ಕೆ ಒಂದು ದಿನ ಬರುವ ಈ ಅಧಿಕಾರಿ ದುಡ್ಡು ಕೊಟ್ಟವರ ಫೈಲ್ ಮಾತ್ರ ಕ್ಲಿಯರ್ ಮಾಡುತ್ತಾರೆ ಎಂಬ ದೂರುಗಳಿವೆ. ಇವರು ರಿಯಲ್ ಎಸ್ಟೇಟ್ ಮಾಲಿಕರ ಬಡಾವಣೆಗಳ ಕಡತಗಳು ಅದು ಸರಿ ಇರಲಿ ಇಲ್ಲದೆ ಇರಲಿ ಅವುಗಳಿಗೆ ಮಂಜೂರು ಮಾಡಲು ಮಂಗಳೂರಿನಿಂದ ಪುತ್ತೂರಿಗೆ ರಾತ್ರಿ ಹೊತ್ತು ಬೇಕಾದರೆ ಬರುತ್ತಾರೆಂದು ತಿಳಿದು ಬಂದಿದೆ. ಜೊತೆಗೆ ಪುಡಾ ಆಡಳಿತ ಮಂಡಳಿಯ ತೀರ್ಮಾನವನ್ನೆ ಹೈ ಜಾಕ್ ಮಾಡುವಷ್ಟು ಕಚೇರಿಯಲ್ಲಿ ಮಾಡಿರುವ ಕಾನೂನು ಬಾಹಿರ ಕೃತ್ಯಗಳು ಏನಿದೆ ಅದರ ಎಲ್ಲಾ ಮಾಹಿತಿ ನನ್ನಲ್ಲಿದೆ ಮುಂದಿನ ದಿನದಲ್ಲಿ ಅದನ್ನು ಹೊರತರುತ್ತೇನೆ ಎಂದು ಮಹಮ್ಮದ್ ಆಲಿಯವರು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ನಗರ ಕಾಂಗ್ರೆಸ್‌ನ ಹಿರಿಯ ಮುಖಂಡ ಮೌರಿಸ್ ಮಸ್ಕರೇನಸ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ್ ಭಂಡಾರ್‌ಕರ್, ಚಿಕ್ಕಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮೌರಿಸ್ ಕುಟ್ಹೀನಾ, ಬನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮಹಾಬಲ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here