ರಾಜ್ಯ ಸರಕಾರದ ಮಂತ್ರಿಮಂಡಲದಲ್ಲಿ ಎಂಎಲ್‌ಸಿ ಐವನ್ ಡಿಸೋಜರವರಿಗೆ ಸ್ಥಾನ : ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಹಕ್ಕೊತ್ತಾಯ

0

ಪುತ್ತೂರು: ಕರ್ನಾಟಕ ರಾಜ್ಯ ಸರಕಾರದ ಮಂತ್ರಿಮಂಡಲದಲ್ಲಿ ಮುಂಬರುವ ಮಂತ್ರಿಮಂಡಲದ ವಿಸ್ತರಣೆ ಹಾಗೂ ಪುನಾರಚನೆ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಐವನ್ ಡಿಸೋಜರವರಿಗೆ ಮಂತ್ರಿ ಸ್ಥಾನ ನೀಡುವಂತೆ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಒತ್ತಾಯಿಸಿದ್ದಾರೆ ಎಂದು ಡಿ.12 ರಂದು ಪುತ್ತೂರಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಹಕ್ಕೊತ್ತಾಯ ಮಂಡಿಸಿ ಹೇಳಿದರು.


ಯಾವುದೇ ಸ್ಥಾನವಿಲ್ಲದೆ 31 ವರ್ಷ:
ಮುಂದುವರೆದು ಮಾತನಾಡಿದ ಮೌರಿಸ್ ಮಸ್ಕರೇನ್ಹಸ್‌ರವರು, ಕ್ರೈಸ್ತರು ಬೆಂಗಳೂರು, ಕರಾವಳಿ ಕರ್ನಾಟಕ, ಕೊಡಗು, ಮೈಸೂರು, ಬೀದರ್, ಕೋಲಾರ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಕಡೆ ಸುಮಾರು 35 ಲಕ್ಷ ಜನಸಂಖ್ಯೆ ಇರುವ ಕ್ರೈಸ್ತರಿಗೆ ಕರ್ನಾಟಕದಲ್ಲಿ ರಾಜಕೀಯ ಪಾಲು ತೀರಾ ಕಡಿಮೆ ಎಂದೇ ಹೇಳಬಹುದು. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಮಂಗಳೂರು ಕ್ರೈಸ್ತರಿಗೆ ಮಂತ್ರಿಮಂಡಲದಲ್ಲಿ ಸ್ಥಾನವಿಲ್ಲದೆ 31 ವರ್ಷಗಳಾದವು. 1979ರಲ್ಲಿ ಮಂಗಳೂರಿನ ಕೊಂಕಣಿ ಕ್ರೈಸ್ತ ಸಮಾಜಕ್ಕೆ ಸೇರಿದ ಪಿ.ಎಫ್ ರೊಡ್ರಿಗಸ್‌ರವರು ಮೀನುಗಾರಿಕಾ ಸಚಿವರಾಗಿದ್ದರು. 1989-94ರ ಅವಧಿಯಲ್ಲಿ ಬ್ಲೇಸಿಯಸ್ ಡಿ’ಸೋಜ(ವೀರಪ್ಪ ಮೊಯ್ಲಿ ಸರಕಾರದಲ್ಲಿ) ಕಾನೂನು ಕಾರ್ಮಿಕ ಸಚಿವರಾಗಿದ್ದರು. ಅವರ ಅವಧಿಯಲ್ಲಿ 25 ಸಾವಿರದಷ್ಟು ಬಾಕಿ ಇದ್ದ ಕಡತಗಳ ವಿಲೇವಾರಿ ಮಾಡಿ ದಾಖಲೆ ನಿರ್ಮಿಸಿದ್ದರು. ಕೇಂದ್ರ ಮಂತ್ರಿಮಂಡಲದಲ್ಲಿ ಸಂಸದ ಸದಸ್ಯರಾಗಿದ್ದ ಆಸ್ಕರ್ ಫೆರ್ನಾಂಡೀಸ್, ಮಾರ್ಗರೇಟ್ ಆಳ್ವ, ರಾಜ್ಯದ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡೀಸ್, ಎ.ಕೆ ಆಂಟನಿರವರು ತಮ್ಮ ಅವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸಿಕ್ಕ ಅವಕಾಶವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆ ಎಂದರು.


ಕ್ರೈಸ್ತ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಲಿ
ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಸರಕಾರದಲ್ಲಿ ಪಾಲುದಾರಿಕೆ, ರಾಜಕೀಯ ಅವಕಾಶಗಳು ಕಡಿಮೆ ಆಗಿದೆ. ನಮ್ಮದೇ ಗಾತ್ರದ ಜನಸಂಖ್ಯೆ ಇರುವ ಇತರ ವರ್ಗಗಳಿಗೆ ಹೋಲಿಸಿದರೆ ನಮಗೆ ಸಿಕ್ಕಿರುವ ಅವಕಾಶಗಳು ತೀರಾ ಕಡಿಮೆ. ಪ್ರಸ್ತುತ ವಿಧಾನಸಭೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಒಂದು ಮತ್ತು ವಿಧಾನಪರಿಷತ್‌ನಲ್ಲಿ ಒಂದು ಮಾತ್ರ ಪ್ರತಿನಿಧಿ ಇರುವುದು. ಕ್ರೈಸ್ತ ಸಮುದಾಯ ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು ಕಾಂಗ್ರೆಸ್ ಅಧಿಕಾರದಲ್ಲಿ ಇರುವಾಗ ಅವಕಾಶ ಕೇಳುವುದು ನಮ್ಮ ಹಕ್ಕಾಗಿದೆ. ಕರಾವಳಿ ಕರ್ನಾಟಕ ಪ್ರದೇಶದ ಪ್ರತಿನಿಧಿಯಾಗಿ ಸರಕಾರದಲ್ಲಿ ಮಂತ್ರಿಯಾಗಲು ಎಲ್ಲಾ ಅರ್ಹತೆಗಳು ಅವರಿಗಿದೆ. ಅವರು ಕರಾವಳಿ ಪ್ರದೇಶವನ್ನು, ಕ್ರೈಸ್ತರನ್ನು, ಕೊಂಕಣಿ ಭಾಷಿಕರನ್ನು ಸಮರ್ಥವಾಗಿ ಪ್ರತಿನಿಧಿದ ಬಲ್ಲವರಾಗಿದ್ದಾರೆ. ಮುಂದಿನ ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನಾವು ಬಲವಾಗಿ ಮುಖ್ಯಮಂತ್ರಿಗಳನ್ನು, ಪಕ್ಷವನ್ನು, ಕೆಪಿಸಿಸಿ ಅಧ್ಯಕ್ಷರನ್ನು ಮತ್ತು ಹೈಕಮಾಂಡನ್ನು ಒತ್ತಾಯಿಸುತ್ತಿದ್ದೇವೆ ಎಂದು ಮೌರಿಸ್ ಮಸ್ಕರೇನ್ಹಸ್‌ರವರು ಹೇಳಿದರು.


ನಿಷ್ಟಾವಂತ ಆಭ್ಯರ್ಥಿ ಐವನ್ ಡಿ’ಸೋಜ
ಪ್ರಸ್ತುತ ವಿಧಾನಪರಿಷತ್‌ನಲ್ಲಿ ಸದಸ್ಯರಾಗಿರುವ ಐವನ್ ಡಿ’ಸೋಜ ಇವರು ಎರಡನೇ ಬಾರಿ ಸದಸ್ಯರಾಗಿದ್ದು ಮಂತ್ರಿಮಂಡಲದ ಪುನಾರಚನೆ ಸಂದರ್ಭದಲ್ಲಿ ಅವರು ಅರ್ಹವಾದ ಅಭ್ಯರ್ಥಿ ಆಗಿದ್ದಾರೆ. ಅವರು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ವಿಧಾನಪರಿಷತ್‌ನಲ್ಲಿ ಸರಕಾರದ ಮುಖ್ಯ ಸಚೇತಕರಾಗಿ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ ಅನುಭವವಿದೆ. ವೃತ್ತಿಯಲ್ಲಿ ವಕೀಲರಾಗಿದ್ದು ಅಪಾರ ಕಾನೂನು ಜ್ಞಾನ ಮತ್ತು ಸಾಮಾಜಿಕ ಜ್ಞಾನ ಹೊಂದಿದ್ದಾರೆ. ಜನಪ್ರಿಯರೂ ಆಗಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು ಯಾವುದೇ ಗುಂಪುಗಾರಿಕೆಯಲ್ಲಿ ತೊಡಗಿಕೊಳ್ಳದೆ ಪಕ್ಷದ ನಿಷ್ಟಾವಂತ ಅನುಯಾಯಿಯಾಗಿದ್ದಾರೆ ಎಂದು ಮೌರಿಸ್ ಮಸ್ಕರೇನ್ಹಸ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇದರ ಗೌರವ ಸಲಹೆಗಾರ ವಲೇರಿಯನ್ ಡಾಯಸ್, ನಿವೃತ್ತ ಆರೋಗ್ಯ ನಿರೀಕ್ಷಕ ಇಗ್ನೇಶಿಯಸ್ ಡಿ’ಕುನ್ಹಾ ಮರೀಲು, ಪ್ರಗತಿಪರ ಕೃಷಿಕ ವಾಲ್ಟರ್ ಡಿ’ಸೋಜ ಬನ್ನೂರು, ಮಾಜಿ ಸೈನಿಕ ಜೆರೋಮ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಉದ್ಯಮಿ ಮೆಲ್ವಿನ್ ಫೆರ್ನಾಂಡೀಸ್ ದರ್ಬೆ ಉಪಸ್ಥಿತರಿದ್ದರು.



ಯವುದೇ ಪಕ್ಷದಲ್ಲಿದ್ದರೂ ಬೆಂಬಲ
ಕ್ರೈಸ್ತ ಸಮುದಾಯದ ಯಾರೇ ಆಭ್ಯರ್ಥಿಗಳು ಅದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರೂ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಬೆಂಬಲಿಸುತ್ತದೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಆಯಾ ಸರಕಾರದಿಂದ ಸಿಗುವ ಯಾವುದೇ ಅನುದಾನಗಳು, ಸವಲತ್ತುಗಳಿಗೆ ಆಯಾ ಪಕ್ಷದ ಕ್ರಿಶ್ಚಿಯನ್ ಆಭ್ಯರ್ಥಿಗಳು ಕೈಜೋಡಿಸಬೇಕು ಎಂದು ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಎಂಎಲ್‌ಸಿ 1 ಸ್ಥಾನ ಕ್ರೈಸ್ತ ಸಮುದಾಯಕ್ಕೆ..
ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಕನಿಷ್ಠ 5 ಸ್ಥಾನವಾದರೂ ಸಿಗಬೇಕು. ಅವಿಭಜಿತ ದ.ಕ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಮೀಸಲಿರುವ ಎರಡು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಕ್ರೈಸ್ತ ಸಮುದಾಯಕ್ಕೆ ಮೀಸಲಿಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಮೌರಿಸ್ ಮಸ್ಕರೇನ್ಹಸ್‌ರವರು ಹೇಳಿದರು.

LEAVE A REPLY

Please enter your comment!
Please enter your name here